ಅಮೇರಿಕನ್ ಸೂಪರ್ ಬಜಾರಿನಲ್ಲಿ ಸಿಹಿಕುಂಬಳ ಜಾತ್ರೆ..

ಲೇಖಕಿ ಗಿರಿಜಾ ಶಾಸ್ತ್ರೀ ಅವರು ಅಮೇರಿಕದಲ್ಲಿ ತಮಗಾದ ಅನುಭವಗಳನ್ನು ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತಾ ಅಮೇರಿಕಾದ ಸ್ವಾರಸ್ಯಕರ ಘಟನೆಗಳನ್ನು ಹೇಳುವ ಪರಿ ಓದುಗರ ಗಮನ ಸೆಳೆಯುತ್ತದೆ, ತಪ್ಪದೆ ಮುಂದೆ ಓದಿ…

ಅಮೇರಿಕನ್ ಸೂಪರ್ ಬಜಾರಿನಲ್ಲಿ “ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು” ಮಾತ್ರವಲ್ಲ ಸಿಹಿಕುಂಬಳಕಾಯಿ ಬೀಜವೂ ಸಿಗುತ್ತದೆ. ಇಲ್ಲಿ ಅದಕ್ಕೆ ಬಾದಾಮಿ, ಗೋಡಂಬಿ ಹಾಗೂ ಪಿಸ್ತಾಗಳ‌ ಸ್ಥಾನ ಮತ್ತು‌ ಬೆಲೆ.

ಇಲ್ಲಿರುವ ಸೇಫ್ ವೇ ಎಂಬ ಮಾಲ್ ನ ಹೊರಗೆ ಸುಮಾರು ಎರಡು ಲಾರಿಗಳಷ್ಟು ಸಿಹಿಕುಂಬಳಕಾಯಿಗಳನ್ನು ಒಟ್ಟಿದ್ದಾರೆ. ಅವು ಎರಡು ವಾರಗಳಿಂದಲೂ ಅಲ್ಲಿಯೇ, ಹಾಗೆಯೇ ಬಿದ್ದಿವೆ. ಹೋಮ್ ಲೆಸ್ ಗಳು ಅಲ್ಲಲ್ಲೇ ಕುಳಿತಿರುತ್ತಾರೆ! ಆದರೂ ಅವು ಕಳುವಾಗುವುದಿಲ್ಲ. ಮನೆಯೇ ಇಲ್ಲದವರು ಕುಂಬಳಕಾಯಿ ಇಟ್ಟುಕೊಂಡು ಏನು ಮಾಡಿಯಾರು? ಮೂಸಂಬಿ ಗಾತ್ರದ ಕಾಯಿಗಳಿಂದ ಹಿಡಿದು ಪುಟ್ಬಾಲ್ ಗಿಂತಲೂ ದೊಡ್ಡದಾದ ಹಸಿರು, ಕೇಸರಿ, ಹಳದಿ ಬಿಳಿ ಹೀಗೆ ನಾನಾ ಬಣ್ಣದ ಕಾಯಿಗಳು.

This slideshow requires JavaScript.

 

ನಲವತ್ತು ವರುಷಗಳ ಹಿಂದಿನ ಅಜ್ಜಿ ಮನೆಯ ಕತ್ತಲ ಉಗ್ರಾಣ ಚಕ್ಕನೆ ಕಣ್ಣ ಮುಂದೆ ಹಾಯಿತು. ಕುಂಬಳ ಕಾಯಿ ಕುರುಕುರು ಬೀಜದ ರುಚಿಯ ಜೊತೆಗೆ ಅಜ್ಜಿ‌ಮನೆಯ ಹಳೆ ವಾಸನೆಯೂ ಮೂಗಿಗೆ ಹತ್ತಿತು. ಅಲ್ಲೂ ಹೀಗೆ ಹಲವಾರು ಕುಂಬಳಕಾಯಿಗಳು, ಮೊಟ್ಟೆ ತೆಂಗಿನಕಾಯಿಗಳು ಒಟ್ಟಿಕೊಂಡು ಇರುತ್ತಿದ್ದವು. ವಾರಕ್ಕೆ ಎರಡು ಸಲವಾದರೂ ಕುಂಬಳ ಕಾಯಿ ತೊವ್ವೆ, ಗೊಜ್ಜು, ಪಲ್ಯ ಇದ್ದೇ ಇರುತ್ತಿತ್ತು. ಅವುಗಳ ಬೀಜಗಳನ್ನು ತೆಗೆದು ಬೂದಿ ಪೂಸಿ ಒಂದೆರಡು ದಿನಗಳ ಕಾಲ ಒಣಹಾಕುತ್ತಿದ್ದರು.

ನಾವು ಅಜ್ಜಿಯ ಮನೆಗೆ ಹೋದಾಗೆಲ್ಲಾ ತೊಟ್ಟಿಯ ಬದಿಗೆ ಇದ್ದ ಕಂಭಕ್ಕೆ ಒರಗಿಕೊಂಡು ಅಮ್ಮನ ಅಕ್ಕತಂಗಿಯರೋ, ಅತ್ತೆಯೋ ಕಂಬಳ ಕಾಯಿ ಬೀಜಗಳನ್ನು ಬಿಡಿಸುತ್ತಾ ಇರುವ ಚಿತ್ರ ಕಣ್ಣಿನಿಂದ ಹೋಗುವುದೇ ಇಲ್ಲ. ಅವುಗಳನ್ನು‌ ಬಿಡಿಸುವುದು ಸುಲಭವೇನಲ್ಲ, ಉಗುರುಗಳೇ ಕಿತ್ತು‌ ಬರುತ್ತಿದ್ದವು. ಅಜ್ಜಿ ಮಾಡಿದ ಅವರೇಕಾಳು ಹುರಿಗಾಳು ತಿನ್ನುವಾಗ ಅವು ಬಾಯಿಗೆ ಗರಿ ಗರಿಯಾಗಿ ಸಿಕ್ಕುತ್ತಿದ್ದರೆ ಆಹಾ ಎಂಥ. ಸುಖ! ಎರಡು ವರುಷಗಳ ಹಿಂದೆ ಗಂಡನ ಸಂಧಿವಾತದ ಕಾಯಿಲೆಗೆ ಔಷಧಿಯೆಂದು ಮೈಸೂರು ದೇವರಾಜ ಮಾರ್ಕೆಟ್ಟಿನಲ್ಲಿ ಕುಂಬಳದ ಬೀಜಕ್ಕಾಗಿ ಅಲೆದಿದ್ದೆ. ಇದ್ದುದು ಒಂದೇ ಅಂಗಡಿಯಲ್ಲಿ ! ಕಾಲು ಕೇಜಿಗೆ ಇನ್ನೂರು ರೂಪಾಯಿ.

ಇಲ್ಲಿ ಅಮೇರಿಕಾದ ಪ್ರತಿ ಮಾರುಕಟ್ಟೆಯಲ್ಲೂ ಹೇರಳವಾದ ಕುಂಬಳದ ಬೀಜಗಳು ಗಾಳಿಯಾಡದ ( airtight) ಆಕರ್ಷಕ ಡಬ್ಬಿಗಳಲ್ಲಿ !! ಬಾದಾಮಿ ಗೋಡಂಬಿಗಳ ಮಧ್ಯೆ!
ಅಮ್ಮನೋಡಿದ್ದರೆ ಕುಂಬಳದ ಬೀಜವೇ? ಅದಕ್ಕೆ ದುಡ್ಡೇ? ಎಂದು ಖಂಡಿತಾ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಳು. ಹಿಂದಿನ ಕಾಲದ ಮಹಿಳೆಯರಿಗೆ ಒಮೆಗಾ3 ಗೊತ್ತಿರಲಿಲ್ಲ ಆದರೆ ಕುಂಬಳದ ಬೀಜ ಗೊತ್ತಿತ್ತು….


  • ಗಿರಿಜಾ ಶಾಸ್ತ್ರೀ (ಇಂಗ್ಲಿಷ್ ಉಪನ್ಯಾಸಕರು,ಲೇಖಕರು), ಮುಂಬೈ

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW