‘ಉತ್ತರ ಕಾಂಡ’ದ ಸೀತೆ – ಗೌರಿ ಚಂದ್ರಕೇಸರಿ

ನನ್ನ ಅಚ್ಚುಮೆಚ್ಚಿನ ಲೇಖಕರಲ್ಲಿ ಒಬ್ಬರಾದ ಡಾ. ಎಸ್.ಎಲ್.ಭೈರಪ್ಪ ಅವರ ಉತ್ತರ ಕಾಂಡವನ್ನು ಕೈಗೆತ್ತಿಕೊಂಡಾಗ ಕಾದಂಬರಿ ಕುರಿತಾಗಿ ಅಷ್ಟಾಗಿ ನಿರೀಕ್ಷೆಗಳು ಇರಲಿಲ್ಲ. ಅದೇ ರಾಮಾಯಣದ ಕಥೆ ಎಂದುಕೊಂಡಿದ್ದೆ. ಆದರೆ ನನ್ನ ಊಹೆ ತಪ್ಪಾಯಿತು. ಲೇಖಕಿ ಗೌರಿ ಚಂದ್ರಕೇಸರಿ ಅವರ ದೃಷ್ಠಿಕೋನದಲ್ಲಿ ಉತ್ತರ ಕಾಂಡ, ತಪ್ಪದೆ ಮುಂದೆ ಓದಿ…

ಉತ್ತರ ಕಾಂಡ ಕಾದಂಬರಿಯಲ್ಲಿ ವನವಾಸ ಪೂರ್ವ, ವನವಾಸದ ಅವಧಿ ಹಾಗೂ ವನವಾಸೋತ್ತರದ ಘಟನೆಗಳನ್ನು ಸೀತೆಯ ಸ್ವಗತದ ಮೂಲಕ ಹೇಳಿಸುತ್ತಾ ಹೋಗುತ್ತಾರೆ ಲೇಖಕರು. ಸೀತೆಯ ಬಾಲ್ಯ, ಅವಳ ದು:ಖ-ದುಮ್ಮಾನ, ದುಗುಡಗಳು, ಆಸೆ, ಕನಸುಗಳು, ರಾಮನ ಪ್ರತಿ ಅವಳಿಗಿದ್ದ ನಿರೀಕ್ಷೆಗಳನ್ನು ಒಂದೊಂದಾಗಿ ಬಿಚ್ಚಿಡುತ್ತ ಹೋಗುತ್ತಾರೆ. ಇಲ್ಲಿ ಸೀತೆಯೇ ಲೇಖಕರ ಲೇಖನಿ ಎಂಬಂತೆ ಓದುಗರಿಗೆ ಭಾಸವಾಗುತ್ತದೆ.

ಸೀತೆ ಒಬ್ಬ ದೈವ ಸ್ವರೂಪಿ, ಪತಿವೃತೆ, ಕಷ್ಟ ಸಹಿಷ್ಣು, ಹೆಣ್ಣು ಕುಲಕ್ಕೇ ಮಾದರಿ ಎಂಬ ಭಾವನೆಗಳನ್ನು ಹೊಂದಿದ ನಾವು ಸೀತೆಯೂ ಒಬ್ಬ ಹೆಣ್ಣು ಎಂಬುದನ್ನು ಯೋಚಿಸುವುದೇ ಇಲ್ಲ. ಸಾಮಾನ್ಯ ಹೆಣ್ಣೊಬ್ಬಳು ಹೊಂದಿರಬಹುದಾದ ಆಸೆ, ಬಯಕೆಗಳು, ಪತಿಯ ಒಂದು ಮೆಚ್ಚುಗೆಯ ನೋಟ, ತಾಯ್ತನದ ತುಡಿತ ಹೀಗೆ ಪ್ರತಿಯೊಂದು ಹೆಣ್ಣಿಗೆ ಇರುವಂತೆ ಲೇಖಕರು ಸೀತೆಯನ್ನು ಚಿತ್ರಿಸಿದ್ದಾರೆ. ಅವಳೂ ಕೂಡ ನಮ್ಮಂತೆ ಒಂದು ಹೆಣ್ಣು ಎಂಬ ಭಾವವನ್ನು ಬಿತ್ತುತ್ತ ಹೋಗುತ್ತಾರೆ.

ವನವಾಸದುದ್ದಕ್ಕೂ ಸದಾ ಧ್ಯಾನಸ್ಥನಂತೆ ಮೌನಿಯಾಗಿರುವ, ಹೆಜ್ಜೆ ಹೆಜ್ಜೆಗೂ ಕಟ್ಟು ನಿಟ್ಟಿನ ಪಾಲನೆಯನ್ನು ನೆನಪಿಸುವ ರಾಮನ ಬಗ್ಗೆ ಕೆಲವೊಮ್ಮೆ ಅಸಮಧಾನಗೊಳ್ಳುವ ಸೀತೆ ಸದಾ ಕ್ರಿಯಾಶೀಲ, ಸೇವಾ ಮನೋಭಾವವನ್ನು ಹೊಂದಿದ ಲಕ್ಷ್ಮಣನ ಬಗ್ಗೆ ಒಂದು ಮೆಚ್ಚುಗೆಯನ್ನು ಹೊಂದಿದ್ದಾಳೆ. ವನವಾಸದಲ್ಲಿದ್ದಾಗ ಕಾರಣಾಂತರ-ಗಳಿಂದ ಬದುಕಿನುದ್ದಕ್ಕೂ ಲಕ್ಷ್ಮಣನ ಮುನಿಸು, ತಿರಸ್ಕಾರಕ್ಕೊಳಗಾಗಿ ಹಳಹಳಿಸುವ ಅವಳ ತುಡಿತ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡುತ್ತದೆ.

ಸಾಮಾನ್ಯ ಪುರುಷ ಸ್ವಭಾವದಿಂದೆಂಬಂತೆ ರಾವಣನ ವಧೆಯ ನಂತರ ರಾಮ ಸೀತೆಯ ಪಾವಿತ್ರ್ಯವನ್ನು ಶಂಕಿಸಿ ಅವಳನ್ನು ಉಪೇಕ್ಷಿಸಿವುದು, ತಾನು ಮಾಡಿದ ಯುದ್ಧ ತನ್ನ ವಂಶದ ಕೀರ್ತಿಗಾಗಿಯೇ ಹೊರತು ನಿನಗಾಗಿ ಅಲ್ಲ ಎಂದು ದಾಷ್ರ್ಠತೆ ತೋರುವ ರಾಮನ ಬಗ್ಗೆ ಯಾವುದೇ ಹೆಣ್ಣಿಗೂ ಒಂದು ತಿರಸ್ಕಾರ ಮೂಡುವುದು ಸ್ವಾಭಾವಿಕ.

ಉತ್ತರ ಕಾಂಡದ ಸೀತೆಯು ನಿವ್ರ್ಯಾಜ್ಯ ಪ್ರೇಮ, ಪಾತಿವ್ರತ್ಯ, ಹಿರಿಯರ ಪ್ರತಿ ತೋರುವ ಗೌರವದ ಜೊತೆ ಜೊತೆಗೆ ಅನ್ಯಾಯದ ವಿರುದ್ಧ ಆಧುನಿಕ ನಾರಿಯಂತೆ ಮೌನವಾಗಿ ಸಿಡಿದೇಳುತ್ತಾಳೆ. ಹಠವಾದಿಯಾಗಿ ಸ್ವಾವಲಂಬಿ ಬದುಕಿನೊಂದಿಗೆ ಬದುಕುವ ಛಲಗಾತಿಯಾಗಿದ್ದಾಳೆ. ಬಯಸಿ ಕೈ ಹಿಡಿದವನಿಂದ ನೊಂದು ಬೆಂದರೂ ಅವನಿಲ್ಲದ ಬದುಕು ಅಪೂರ್ಣ ಎಂದುಕೊಳ್ಳುತ್ತಾಳೆ. ಅವಳದು ಸಾತ್ವಿಕವಾದ ಕೋಪ. ಸೀತೆಯಂತೆಯೇ ಈಗಲೂ ಹೆಣ್ಣು ಅಗ್ನಿಕುಂಡದಲ್ಲಿ ಬೇಯುತ್ತಲೇ ಇದ್ದಾಳೆ ಎನ್ನಿಸುತ್ತದೆ.

ಲೇಖಕರು ವಿದೇಶ ಪ್ರವಾಸದಲ್ಲಿದ್ದಾಗ ಬ್ರೆಡ್ ಆಂಡ್ ಬಟರ್ ಎಂದು ಕರೆಯಲ್ಪಡುವ ಅಲ್ಲಿನ ವಸತಿ ಮತ್ತು ಆಹಾರ ವ್ಯವಸ್ಥೆ ಇರುವ ಕೋಣೆಯೊಂದರಲ್ಲಿ ತಂಗಿರುತ್ತಾರೆ. ಆ ಪುಟ್ಟ ಕೋಣೆಯ ಗೋಡೆಯ ಮೇಲೆ ನೇತು ಹಾಕಿದ್ದ ಜಿಂಕೆಯ ಮನ ಮೋಹಕ ಚಿತ್ರವೊಂದು ಭೈರಪ್ಪನವರನ್ನು

ಸೆಳೆಯುತ್ತದೆ. ಆ ಚಿತ್ರದ ಬಗ್ಗೆ ಆ ಕೋಣೆಯ ಮಾಲೀಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ ಆಕೆ ಅದನ್ನು ಬಹುಮಾನ ರೂಪವಾಗಿ ಲೇಖಕರಿಗೆ ಕೊಡುತ್ತಾಳೆ. ಆ ಜಿಂಕೆಯ ಚಿತ್ರ ಲೇಖಕರಿಗೆ ನೂರಾರು ಹೊಳಹುಗಳನ್ನು ನೀಡುತ್ತದೆ. ಉತ್ತರಕಾಂಡದ ರಚನೆಗೆ ಆ ಜಿಂಕೆಯ ಚಿತ್ರವೇ ತನಗೆ ಸ್ಪೂರ್ತಿ ನೀಡಿದ್ದು ಎಂಬ ವಿಷಯವನ್ನು ಲೇಖಕರು ಒಂದೆಡೆ ಹೇಳಿಕೊಂಡಿದ್ದಾರೆ.

ಆರಂಭದಿಂದ ಅಂತ್ಯದವರೆಗೂ ಓದಿಸಿಕೊಂಡು ಹೋಗುವ ಉತ್ತರ ಕಾಂಡ ಕೃತಿಯಲ್ಲಿ ಸೀತೆಯ ವ್ಯಕ್ತಿತ್ವವನ್ನು ಉತ್ತುಂಗಕ್ಕೇರಿಸಿದ್ದಾರೆ ಡಾ.ಎಸ್.ಎಲ್. ಭೈರಪ್ಪನವರು. ಅವರ ಅತ್ಯತ್ತಮ ಕೃತಿಗಳಲ್ಲಿ ಇದೂ ಒಂದು ಎಂದು ಹೇಳಬಹುದು.


  • ಗೌರಿ ಚಂದ್ರಕೇಸರಿ (ಲೇಖಕಿ, ಪುಸ್ತಕ ವಿಮರ್ಶಕಿ, ಕತೆಗಾರ್ತಿ)ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW