ವಿಶೇಷ ದಿನಗಳಲ್ಲಿ ಹಳ್ಳಿಯ ಮನೆ ಮನೆಗಳಲ್ಲಿ ಅಹೋರಾತ್ರಿ ಮಂಟೇಸ್ವಾಮಿಯ ಕಥೆ ಹೇಳುವ ದಲಿತ ಗಾಯಕ ಮಾದಪ್ಪನ ಕಥೆಯೇ ಲಿಂಡಿಯಾ ರೇಡಿಯೋ. ರಂಗಸ್ವಾಮಿ ಎಸ್ ನಿರ್ದೇಶನದ ಈ ಸಿನಿಮಾದ ಕುರಿತು ರಂಗಭೂಮಿ ನಿರ್ದೇಶಕ ಕಿರಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಿನಿಮಾ : ಆಲಿಂಡಿಯಾ ರೇಡಿಯೋ
ನಿರ್ಮಾಣ : ದೇವಗಂಗೆ ಫ್ರೇಮ್ಸ್.
ನಿರ್ದೇಶನ : ರಂಗಸ್ವಾಮಿ ಎಸ್
ನಿರ್ಮಾಪಕರು : ಯೋಗಿ ದೇವಗಂಗೆ ಮತ್ತು ರಾಧಿಕಾ ವಾದಿರಾಜ್
ಕಲಾವಿದರು : ಸುಭಾಷಿಣಿ ಹಾಸನ್ (ತಿಮ್ಮಕ್ಕ), ವಿಶಾಲ್, ಚೈತ್ರಾ ( ಮಾದಪ್ಪನ ಮಗ, ಸೊಸೆ) , ಅಶ್ವಿತಾ ( ಮಗಳು), ಈಶ್ವರ್ ದಲಾಲ್ ( ಗೌಡರು), ಚೈತನ್ಯ ( ಅಳಿಯ), ಕೆ.ಬಿ.ರವಿ, ಕನಕರಾಜು
’ಅಪ್ಪಾ ಪರಂಜ್ಯೋತಿ
ಮಂಟೇದ ಲಿಂಗಯ್ಯಾ
ಧರೆಗೆ ದೊಡ್ಡಯ್ಯಾ
ತುಂಬಿದಾ ಸೋಮಾರ ದಿವ್ಸ
ಸತ್ಯವಂತರಾ ಮನೆಯೊಳಗೆ
ಎತ್ತುವೆ ನಿನ್ನ ಶಿವನುಡಿಯಾʼ
ಹೀಗೆ ವಿಶೇಷ ದಿನಗಳಲ್ಲಿ ಹಳ್ಳಿಯ ಮನೆ ಮನೆಗಳಲ್ಲಿ ಅಹೋರಾತ್ರಿ ಮಂಟೇಸ್ವಾಮಿಯ ಕಥೆ ಹೇಳುವ ದಲಿತ ಗಾಯಕ ಮಾದಪ್ಪನ ಕಥೆಯಿದು. ಊರ ಮನೆ ಬಾಗಿಲಲ್ಲಿ ನಿಂತು ಹಾಡು ಹಾಡ್ತಾ, ವಿಶೇಷದ ಮನೆಗಳಲ್ಲಿ ಕಥೆ ಹೇಳ್ತಾ, ಸಿಗುವ ಭಿಕ್ಷೆ, ಕಾಳು ಕಡಿಗಳಿಂದ ಬದುಕು ಸಾಗಿಸ್ತಿದ್ದ ಮಾದಪ್ಪನ ಬದುಕು ಅಚಾನಕ್ಕಾಗಿ ಒಂದು ತಿರುವು ಪಡೆದುಬಿಡ್ತದೆ. ಮೈಸೂರಲ್ಲಿ ಕಲೀತಿದ್ದ ಊರ ಹುಡುಗನೊಬ್ಬ ಇಂಥ ಅದ್ಭುತ ಗಾಯಕನನ್ನು ಯೂನಿವರ್ಸಿಟಿಗೆ ಪರಿಚಯಿಸೋ ಸದುದ್ದೇಶದಿಂದ ಮಾಡಿಕೊಂಡ ರೆಕಾರ್ಡ್ ಇದಕ್ಕೆಲ್ಲ ಕಾರಣವಾಗ್ತದೆ.
ವಿಶ್ವವಿದ್ಯಾಲಯದಲ್ಲಿ ಮಾದಪ್ಪನ ಹಾಡು ಜನಪ್ರಿಯವಾಗ್ತದೆ. ಇಂಥ ಅದ್ಭುತ ಕಲಾವಿದನನ್ನ ಉಪಯೋಗಿಸ್ಕೊಂಡು ಹಣ ಮಾಡೋ ಉದ್ದೇಶದಿಂದ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ರು, ರೇಡಿಯೋ ದ ಒಬ್ಬ ಅಧಿಕಾರಿಯ ಜೊತೆ ಸೇರಿ ಮಸಲತ್ತು ಮಾಡ್ತಾರೆ, ಈ ಮಧ್ಯೆ ಸಿಗೋ ಕಾರ್ಯಕ್ರಮಗಳಿಂದ ಸಿಕ್ಕ ಹಣ, ಸಮ್ಮಾನಗಳಿಂದ ಅಹಂ ತಲೆಗೇರಿಸ್ಕೊಂಡ ಮಾದಪ್ಪ ಊರವರನ್ನೆಲ್ಲ ಕಡೆಗಣಿಸ್ತಾನೆ. ವೈನು, ಸಿಗರೇಟು ಅವನ ಜೀವನವನ್ನೇ ಬರ್ಬಾದ್ ಮಾಡ್ತವೆ. ತನ್ನೆಲ್ಲ ಸಾಹಿತ್ಯ ಪುಸ್ತಕದ ರೂಪ್ದಲ್ಲಿ, ಹಾಡುಗಳು ಕ್ಯಾಸೆಟ್ ಆಗಿ ಬಂದಿದ್ದನ್ನ ಕಂಡ ಆತ ವಿಚಲಿತನಾಗ್ತಾನೆ. ಮಗ ಸೊಸೆ ಯರಿಂದ ದೂರವಾದ ಆತ ಊರ ಜಾತ್ರೆಗೆ ಕೆಲವೇ ದಿನಗಳಿರುವಾಗ, ಊರ ಪಧ್ಧತಿಗೂ ಕ್ಯಾರೇ ಮಾಡ್ದೆ, ಹೆಂಡತಿಯ ಮಾತೂ ಕೇಳದೇ ನದಿ ದಾಟಿ ದೂರದೂರಿಗೆ ಕಾರ್ಯಕ್ರಮ ಕೊಡೋಕೆ ಹೊರಟುಬಿಡ್ತಾನೆ. ಹಿಂದಿರುಗಿ ಬರೋ ದಾರೀಲಿ ನದಿಯನ್ನ ದಾಟೋಕಾಗದೇ ಆಚೆಯೇ ಉಳಿದುಬಿಡ್ತಾನೆ, ಕತ್ತಲಾವರಿಸ್ತಿದ್ದ ಹಾಗೆ ನದಿಯಾಚೆಯ ಊರಿಂದ ಮಂಟೇಸ್ವಾಮಿಯ ಹಾಡು ಕೇಳಿ ಬರ್ತದೆ. ಇದೇ ಮಾದಪ್ಪನಿಂದ ಪರಿತ್ಯಕ್ತನಾದ ಆತನ ಅಳಿಯ, ಮಗಳು ಊರ ಕಟ್ಟೆಯ ಮೇಲಿಂದ ಈತನ ಹಾಡು ಮುಂದುವರಿಸ್ತಾರೆ.

ಜಾನಪದದ ಸೊಗಡು ತುಂಬಿಕೊಂಡ ಅಮರೇಶ್ ನುಗುಡೋಣಿಯವರ ಇಂಥದೊಂದು ಗಟ್ಟಿ ಕಥೆಯನ್ನು ಅಷ್ಟೇ ಬಿಗಿಯಾದ ನಿರೂಪಣೆಯೊಂದಿಗೆ ನಿರ್ದೇಶಕ ಎಸ್, ರಂಗಸ್ವಾಮಿ ಸಿನಿಮಾ ಆಗಿಸಿದ್ದಾರೆ. ಇಂಥದೊಂದು ಕಟ್ಟುವಿಕೆಗೆ ಮಂಟೇಸ್ವಾಮಿಯ ಹಲವಾರು ಹಾಡುಗಳನ್ನ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಂಥ ಹಾಡುಗಳ ಆಯ್ಕೆಯಲ್ಲೂ ಜಾಣತನವಿದೆ. ಹಲವು ಬಾರಿ ನಿರ್ದೇಶಕರು ಮಾದಪ್ಪನ ಬದುಕಿನ ಘಟನೆಗಳ ಒಟ್ಟೊಟ್ಟಿಗೆ ಹಾಡುಗಳನ್ನ ಸಮೀಕರಿಸುತ್ತ ಹೋಗ್ತಾರೆ. ಮತ್ತೆ ಮತ್ತೆ ಬರುವ ಹಾಡುಗಳು ಇನ್ನೇನು ಮುನ್ನೆಲೆಗೆ ಬಂದು ಕಥೆ ಹಿಂದುಬಿದ್ದುಬಿಡುತ್ತದೇನೋ ಎಂದುಕೊಳ್ಳುವಷ್ಟರಲ್ಲೇ ಘಟನೆಯೊಂದನ್ನು ಅಷ್ಟೇ ಬಿಗಿಯಾಗಿ ನಿರೂಪಿಸುವದರೊಂದಿಗೆ ಬ್ಯಾಲೆನ್ಸ್ ಮಾಡಿಬಿಡ್ತಾರೆ. ಹೀಗೆ ಹಾಡುಗಳೂ ನಿರೂಪಣೆಯೂ ಜೊತೆ ಜೊತೆಯಾಗೇ ಸಾಗುತ್ತ ದುರಂತ ಕಥೆಯೊಂದನ್ನ ಸಶಕ್ತವಾಗಿ ಕಟ್ಟುತ್ತವೆ. ಆದರೂ ಹಾಡುಗಳು ಒಂದು ಕೈ ಮೇಲೇ. ಹಾಡುಗಾರನದೇ ಕಥೆಯಾದ್ದರಿಂದ ಅದು ಸಹಜವೇ. ಸಂಗೀತ ನಿರ್ದೇಶಕ ಪಿಚ್ಚಳ್ಳಿ ಶೀನಿವಾಸ್ ಕೆಲವು ಹಾಡುಗಳನ್ನ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕರೂ ಅವರೇ. ತೀರ ಮಿತವಾದ ತಂಬೂರಿ, ದಮ್ಮಡಿ ಯಂಥ ಸರಳ ವಾದ್ಯಗಳನ್ನಿಟ್ಟುಕೊಂಡೇ ದಟ್ಟ ದೇಸೀ ವಾತಾವರಣ ಸೃಷ್ಟಿಸಿಬಿಡುತ್ತಾರೆ.

ಅಪ್ಪಟ ಹಳ್ಳಿಯ ವಾತಾವರಣದಲ್ಲಿ ಚಿತ್ರದ ನಿರ್ಮಾಣವಿದೆ.ಅದರಲ್ಲೂ ಮಾದಪ್ಪನ ಬದುಕಿನ ನಿರ್ಣಾಯಕ ಹಂತಗಳಿಗೆಲ್ಲ ಸಾಕ್ಷಿಯಾಗುವ ಆ ʼಹೊಳೆʼ ಒಂದು ಪಾತ್ರವೇ ಎನಿಸಿಬಿಡುವಷ್ಟು ಗಾಢವಾಗಿ ವ್ಯಾಪಿಸಿಬಿಡುತ್ತದೆ. ಆಗಾಗ್ಗೆ ಕಾಣುವ ಹೊಳೆಯ ವಿವಿಧ ಭಾವಗಳು, ಜೊತೆಗೆ ಸಂಗೀತ ಸೇರಿ ಅದ್ಭುತವಾದ ಸನ್ನಿವೇಶಗಳನ್ನೇ ಹುಟ್ಟಿಸಿಬಿಡುತ್ತವೆ. ಇಂಥದೊಂದು ನಿರ್ಮಾಣಕ್ಕೆ ಅಚ್ಚು ಸುರೇಶ್ ರ ಕೊಡುಗೆ ಕಡಿಮೆಯೇನಿಲ್ಲ. ಆವರ ಕ್ಯಾಮರಾ ಕಥೆಯ ಭಾವಗಳನ್ನ ತುಂಬ ಪ್ರಭಾವಶಾಲಿಯಾಗಿ ತೋರುತ್ತ ಹೋಗುತ್ತದೆ. ಕೆಲವು ಶಾಟ್ ಗಳಂತೂ ದೃಶ್ಯ ಕಾವ್ಯವೇ. ಚಿತ್ರದಲ್ಲಿ ಮಾತಿನ ಪಾತ್ರ ತುಂಬಾ ಕಡಿಮೆ. ಆದರೂ ದೇಸೀ ಭಾಷೆಯ ಸೊಗಡಿನ ಸಂಭಾಷಣೆಗಳಿಗೆ ಫುಲ್ ಮಾರ್ಕ್ಸ್.
ಈ ಮಧ್ಯೆಯೇ ಬಹುಕಾಲ ನೆನಪಿನಲ್ಲುಳಿಯುವ, ರೂಪಕದಂಥ ಕೆಲವು ದೃಶ್ಯಗಳೂ ಬಂದು ಹೋಗುತ್ತವೆ.
ಅಂಥದೊಂದು ದೃಶ್ಯ ಹೀಗಿದೆ.
ಆಗಲೇ ʼಮಾದಪ್ಪʼ ನಿಂದ ʼರೇಡಿಯೋ ಮಾದಪ್ಪʼನಾದವನ ಬದುಕು ದುರಂತದತ್ತ ವಾಲಿದೆ. ಆತನ ದನಿಯೂ ಕ್ಷೀಣಿಸತೊಡಗಿದೆ. ತನ್ನನ್ನು ಈ ಸ್ಥಿತಿಗೆ ತಂದ ರೇಡಿಯೋ ಬಗ್ಗೆ ಆತನಿಗೀಗ ಕೆಟ್ಟ ಕೋಪ. ಒಂದಿನ, ಆತ ಥಟ್ಟನೆ ಒಂದು ಹೊಂಡ ತೋಡಿ,ರೇಡಿಯೋ ವನ್ನು ಅದರಲ್ಲಿ ಹುಗಿದುಬಿಡುತ್ತಾನೆ. ಮುಂದಿನ ಶಾಟ್ ನಲ್ಲಿ ಮಾದಪ್ಪನೇ ಆ ಹೊಂಡದಲ್ಲಿ ಮುಳುಗಿ ಹೋಗಿದ್ದಾನೆ. ತಲೆ ಮಾತ್ರ ಕಾಣುತ್ತಿದೆ.ಆತನ ದನಿ ಈಗ ಪೂರ್ತಿ ಉಡುಗಿಹೋಗಿದೆ.
ಸಿನಿಮಾಕ್ಕೆ ದೊಡ್ಡ ಕಾಣ್ಕೆ ಪಾತ್ರಧಾರಿಗಳದ್ದು. ಮಾದಪ್ಪನಾಗಿ ಗೌತಮ್ ಮೈಸೂರು, ಪಾತವ್ವ ಳಾಗಿ ಪ್ರಜ್ಞಾ ಬ್ರಹ್ಮಾವರ ರ ಅಭಿನಯಕ್ಕೆ ಮೆಚ್ಚುಗೆಗಳು ಸಲ್ಲುತ್ತವೆ. ಸುಭಾಷಿಣಿ ಹಾಸನ್ (ತಿಮ್ಮಕ್ಕ), ವಿಶಾಲ್, ಚೈತ್ರಾ ( ಮಾದಪ್ಪನ ಮಗ, ಸೊಸೆ) , ಅಶ್ವಿತಾ ( ಮಗಳು), ಈಶ್ವರ್ ದಲಾಲ್ ( ಗೌಡರು), ಚೈತನ್ಯ ( ಅಳಿಯ), ಕೆ.ಬಿ.ರವಿ, ಕನಕರಾಜು ( ಪ್ರೊಫೆಸರ್ ಗಳು) ತಮ್ಮಸಮರ್ಥ ಅಭಿನಯದ ಮೂಲಕ ಇಂಥ ಕಥಾನಕವೊಂದನ್ನು ಕಟ್ಟಿಕೊಡುತ್ತಾರೆ.
ಅಪರೂಪದ ಸಿನಿಮಾ ಇದು. ನೋಡಿ ಹರಸಬೇಕಾದದ್ದು.
- ಕಿರಣ ಭಟ್, ಹೊನ್ನಾವರ
