ಅಶ್ವಾಕ್ ಶಾಹ್ ಅವರು ತಾಯಿಗಾಗಿ ಬರೆದ ಒಂದು ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….
ಹಿಂಡುವ ಹುಳಿಯಂತಿಹ ಕಾರ್ಪಣ್ಯ
ಮನೆಯ ಒಡಲೊಳಿರಲು
ತಲೆಮೇಲಿನ ಕಲ್ಲು ಭಾರವಾಗಿಲ್ಲ..!
ಆ ಪುಟ್ಟಕಂದನ ನವಿರುಕೆನ್ನೆಗೆ
ತಾಕಿದ ಬಿಸಿಲಧೂಳು ನೋವತಂದಿರಲು
ನನ ಮುಗಿಯದ ಕಷ್ಟ ದೊಡ್ಡದೆನಿಸಲಿಲ್ಲ..!
ಕಲ್ಲಕೆತ್ತಿ ರೂಪ ಕೊಟ್ಟ ಶಿಲ್ಪಿ
ಕುಟ್ಟಾಣಿಗೆಯಾಗಿ ಬದಲಾಯಿತಲ್ಲ
ನನ ಬದುಕೂ ಹಾಗೆಯೇ ಸಾಗುತಲಿಹುದು..!
ಯಾರಿದ್ದರೇನು ಜೊತೆಯ ಮುಡಿಯಾಗಿ
ಒಪ್ಪೊತ್ತಿನ ಊಟಕ್ಕೆ ದುಡಿದೆವು ಜೊತೆಯಾಗಿ
ನನ ಕಂದ ಬಳಲದಿರಲಿ ತುತ್ತು ಅನ್ನಕ್ಕಾಗಿ..!
ತಾಯಿಯಾಗಿ ನಾ ಅಸರೆಯ ಮರ
ಟೊಂಗೆಯ ಸಂದಿಯಲ್ಲೂ ಬಿಸಿಲಿರಲು
ನಾ ತೊಗಟೆಯಾಗಿ ನಿನ್ನ ಕಾಯುತಲಿರುವೆನು..!
ಹಚ್ಚಹಸಿರಿನ ಬದುಕ ಕಟ್ಟಿಕೊಡಲು
ಒಣಗಿ ಉದುರಿ ಮತ್ತೆ ಚಿಗುರುವೆನು
ನನ ನೋವು ನನಗೆ ಹೆಚ್ಚಲ್ಲಾ ಮಗುವೆ..!
- ಅಶ್ವಾಕ್ ಶಾಹ್ ಕನ್ನಡಿಗ
