‘ಅಅಅಅಮೆರಿಕಾ ಭಾರತಿ ಕಂಡಂತೆ’ ಪುಸ್ತಕ ಪರಿಚಯ

ತೆಳು ಹಾಸ್ಯ ಲೇಪದ ಆಕರ್ಷಕ ನಿರೂಪಣೆ ಭಾರತಿ ಬಿ ವಿ ಅವರ ಅಅಅಅಮೆರಿಕಾ ಭಾರತಿ ಕಂಡಂತೆ  ಪುಸ್ತಕದಲ್ಲಿ ಕಾಣಬಹುದು. ರವೀಂದ್ರ ಕೆ. ಆರ್. ಅವರು ಈ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಅಅಅಅಮೆರಿಕಾ ಭಾರತಿ ಕಂಡಂತೆ 
ಲೇಖಕಿ : ಭಾರತಿ ಬಿ ವಿ
ಪ್ರಕಾಶನ : ಸೀಮಾ ಬುಕ್ಸ್
ಬೆಲೆ : ೩೦೦.೦೦
ಪ್ರಕಾರ : ಪ್ರವಾಸ ಕಥನ
ಪುಟ : ೨೫೨

ಭಾರತಿ ಮೇಡಂ ಕಂಡಂತೆ….

ಫೇಸ್ಬುಕ್ ಮೂಲಕವಷ್ಟೇ ಪರಿಚಿತರಾದ ಹಾಗೂ ಸ್ನೇಹಿತರಾದ ಭಾರತಿ ಮೇಡಂ ಅವರ ಫೇಸ್ಬುಕ್ ಪೋಸ್ಟ್ ಗಳು ತುಂಬಾ ಇಂಟೆರೆಸ್ಟಿಂಗ್ ಆಗಿರುತ್ತವೆ. ಕಾರಣ, ಅವರ ಹಾಗೂ ಅವರ ಬರವಣಿಗೆಯಲ್ಲಿರುವ ಒಂದು ವಿಶಿಷ್ಠ ಸಕಾರಾತ್ಮಕ ಶಕ್ತಿ (power of positivity).

ನನ್ನ ಗ್ರಹಿಕೆಯಂತೆ ಈ power of positivity ಬಹುಶಃ ಎರಡು ಬಗೆಯದ್ದಾಗಿರುತ್ತೆ. ಮೊದಲನೆಯದು, ಕೆಲವರಿಗೆ ಬದುಕಿನ ಎಲ್ಲವೂ ಅವರoದುಕೊಂಡಂತೆಯೇ ಸರಿ ಸುಗಮವಾಗಿ ನಡೆದು, ಅವರೂ ತುಂಬಾ ಪಾಸಿಟಿವ್ ಆಗಿಯೇ ಇದ್ದು, ‘All is well’ ಆಗಿ ಬೆಳೆದವರದ್ದು. ಇಂಥಹವರ ಸಂಖ್ಯೆ ವಿರಳ. ಎರಡನೆಯದು, ಬದುಕಿನ ಸಂಗತಿಗಳು ಅವರoದುಕೊಂಡಂತೆ ನಡೆಯದೇ, ಕೆಲವೊಮ್ಮೆ ಅತೀ ಪ್ರತಿಕೂಲತೆಗಳೂ ಎದುರಾದರೂ ಹಿಮ್ಮೆಟ್ಟದೆ, ಎಲ್ಲವನ್ನೂ ದಿಟ್ಟತನ ಹಾಗೂ ಛಲದಿಂದ ಎದುರಿಸಿ ಗಟ್ಟಿಯಾಗಿ ಬೆಳೆದು ಎದ್ದು ನಿಂತವರದ್ದು. ಭಾರತಿ ಮೇಡಂ ಈ ಎರಡನೇ ಗುಂಪಿಗೆ ಸೇರಿದವರು. ಅದರಲ್ಲೂ ಇವರು ನಿಜವಾಗಿ ‘ಸಾಸಿವೆ ತಂದವರೇ’.

ಸುಮಾರು ಎರಡು ವರ್ಷಗಳ ಹಿಂದೆ, ಅವರ ಪ್ರೊಫೈಲ್ ನಲ್ಲಿ, ನಾನು ಈ ವರೆಗೂ ಓದಿರದ, ಅವರ ‘ಸಾಸಿವೆ ತಂದವಳು’ ಕೃತಿಯ ಉಲ್ಲೇಖ ಕಂಡೇ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ಈ ಕೃತಿಯ ಶೀರ್ಷಿಕೆಯಲ್ಲೇ ಒಂದು ಆಶಾವಾದವಿದೆ.

ಈ ಹಿಂದೆ ಅವರು ಅಮೇರಿಕಾದಲ್ಲಿರುವ ತಮ್ಮ ಮಗನ ಮನೆಯ ವಾಸ್ತವ್ಯದಲ್ಲಿದ್ದಾಗ ಬರೆಯುತ್ತಿದ್ದ ‘ಅಅಅಅಮೆರಿಕಾ’ ಬರೆಹಗಳನ್ನು ಆಗ ಇಂಗ್ಲೆಂಡ್ ನ ನನ್ನ ಮಗಳ ಮನೆಯಲ್ಲಿದ್ದ ನಾನು ಕುತೂಹಲದಿಂದ ಓದುತ್ತಿದ್ದೆ. ಹಾಗಾಗಿ ಅದು ಈಗ ಪುಸ್ತಕವಾಗಿ ಹೊರಬಂದಿರುವುದು ತಿಳಿದಾಗ, ಕೊಳ್ಳಲು ಬಯಸಿ ಅವರು ತಿಳಿಸಿದ್ದ ಮೊಬೈಲ್ ನಂಬರ್ ಗೆ ಫೋನ್ ಮಾಡಿದರೆ, ಆ ಕಡೆಯಿಂದ ಅವರೇ ಮಾತನಾಡುತ್ತಿದ್ದರು. ಅಚ್ಛರಿಯೆಂದರೇ, ನಾವು ಮೊದಲ ಬಾರಿಗೆ ಮಾತನಾಡುತ್ತಿದ್ದೇವೆ ಎಂದು ಅನಿಸಲೇ ಇಲ್ಲ…! Instant ಅಕ್ಕರೆ. ಕೆಲವರು ಹೀಗೆಯೇ, ಮೊದಲ ಮಾತು ಅಥವಾ ಭೇಟಿಯಲ್ಲಿಯೇ, ಬಹು ದಿನಗಳಿಂದ ಗೊತ್ತಿದ್ದವರೆoಬಂತೆ, ಆತ್ಮೀಯರೆನಿಸಿಬಿಡುತ್ತಾರೆ.

ನಂತರ ಎರಡೇ ದಿನಗಳಲ್ಲಿ, ನಿನ್ನೆ ಪುಸ್ತಕ ಬಂದು ತಲುಪಿತು. ಪುಸ್ತಕ ನನಗೆ ತಲುಪುವವರೆಗೂ ಮೇಡಂ ವಾಟ್ಸಪ್ಪ್ ನಲ್ಲಿ ‘ಬಂತಾ….’ ಎಂದು follow – up ಮಾಡುತ್ತಲೇ ಇದ್ದರು.
ಇವರ ಈ ‘ಅಅಅಅಮೆರಿಕಾ…’ ಅಲ್ಲಿನ ಸ್ಥಳ ವೈಶಿಷ್ಟ್ಯ, ಅನುಭವಗಳ ಡಾಕ್ಯುಮೆಂಟರಿ ವರದಿ – ದಾಖಲೆಗಳoತಾಗದೇ, ಇವರ ಸಿಗ್ನೇಚರ್ ಮಾದರಿಯ ಒಳನೋಟಗಳು, ಗ್ರಹಿಕೆಗಳು ಹಾಗೂ ತೆಳು ಹಾಸ್ಯ ಲೇಪದ ಆಕರ್ಷಕ ನಿರೂಪಣೆಯಾಗಿದೆ. ಅದರಲ್ಲೂ ಅಲ್ಲಿನ ಬದುಕಿನ ಅನುದಿನದ ಸಣ್ಣ ಸಣ್ಣ ಆಗು ಹೋಗುಗಳನ್ನೂ, ಅವು ಮೂಡಿಸುವ ಕಷ್ಟ ಸುಖ, ತರಲೆ ತಾಪತ್ರಯ, ಮುಜುಗರ ಅಚ್ಛರಿಗಳನ್ನೂ ಅವರು ಕಟ್ಟಿ ಕೊಡುವ ಪರಿ ಬಲು ಚೆಂದ. ಮೇಲಾಗಿ ತುಂಬಾ ಪ್ರೀತಿ ತುಂಬಿದ ಬರೆಹ. ಅವರ ಫೇಸ್ಬುಕ್ ಪೋಸ್ಟ್ ಗಳಲ್ಲಿ ಹಾಕಿರದ ಹಾಗೂ ನಾನು ಓದಿರದ ಬರೆಹಗಳೂ ಇಲ್ಲಿ ದಕ್ಕಿದವು. ಹಿಡಿದವನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.

ನಾನು ಸಾಹಿತ್ಯದ ಓದುಗ ಎಂಬುದನ್ನು ಬಿಟ್ಟರೆ, ಯಾವುದೇ ಅಕ್ಯಾಡೆಮಿಕ್ ಆದ ಅಥವಾ ಅಲ್ಲದ ಸಾಹಿತ್ಯದ ಕೃಷಿಕನಲ್ಲ. ಆದ್ದರಿಂದ, ಇದು ಭಾರತಿ ಮೇಡಂ ಹಾಗೂ ಈ ಪುಸ್ತಕದ ಬಗೆಗಿನ ಒಂದೆರಡು ಮಾತುಗಳಷ್ಟೇ ಹೊರತು, ವಿಮರ್ಶೆಯಲ್ಲ.

ಪುಸ್ತಕದ ಕೊನೆಯಲ್ಲಿ ‘ ತನ್ನಿಂದಾಚೆ ನೋಡುವುದನ್ನು ಕಲಿಸುತ್ತದೆ ಪ್ರೀತಿ’ ಎಂಬ ಅರ್ಥಪೂರ್ಣ ಮಾತು ಈ ಪುಸ್ತಕಕ್ಕೂ ಅನ್ವಯವಾಗುತ್ತದೆ – ಇದೂ ಒಂದಷ್ಟು ಆಚೆ ನೋಡುವುದನ್ನು ಕಾಣಿಸುತ್ತದೆ.

ಈ ಪುಸ್ತಕದ ಅನೇಕ ಸುಂದರ quote ಗಳoತಹಾ ಶೀರ್ಷಿಕೆಗಳಲ್ಲಿ ನನಗೆ ತುಂಬಾ ಮೆಚ್ಚುಗೆಯಾದದ್ದು, ನನಗೂ ತುಂಬಾ ಇಷ್ಟವಾದ ‘ ಕಲ್ ಹೊ ನ ಹೋ….’ ಸಿನೆಮಾ ಹಾಡಿನ ಸಾಲು –
ಹರ್ ಘಡೀ ಬದಲ್ ರಹೀ ಹೇ ರೂಪ್ ಜಿಂದಗೀ….

ಓದಿನ ಮುದ ನೀಡಿದ ಈ ಪುಸ್ತಕಕ್ಕಾಗಿ ಭಾರತಿ ಮೇಡಂ ಗೆ ಅಭಿನಂದನೆಗಳು.


  • ರವೀಂದ್ರ ಕೆ. ಆರ್.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading