ಅ…ಅ…ಅಮೆರಿಕಾ ನೋಡಾ (ಭಾಗ-೨)

ಮಗ ಹೆಚ್ಚಿನ ವ್ಯಾಸಂಗಕ್ಕಾಗಿ ಶಿಕಾಗೋಗೆ ಹೊರಟ ಅಲ್ಲೇ ಉದ್ಯೋಗವನ್ನು ಹುಡುಕಿಕೊಂಡಾಗ ತಂದೆ ತಾಯಿಗೆ ಅಮೆರಿಕಾಕ್ಕೆ ಮಗನ ಬಳಿ ಹೋಗಲು ಅವಕಾಶ ಸಿಕ್ಕಿತು. ಅದರಲ್ಲಿಯೂ ಶಿಕಾಗೋ ಎಂದರೆ ವಿಶೇಷ. ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ‘ಅ…ಅ…ಅಮೆರಿಕಾ ನೋಡಾ’ ಸಂಚಿಕೆಯಲ್ಲಿ ತಪ್ಪದೆ ಮುಂದೆ ಓದಿ…

ವೀಸಾದಿಂದ ಪ್ರಾರಂಭವಾದ ಮೊದಲ ಬರಹ ಇಮೇಗ್ರೇಷನ್ ಹಾಗೂ ಸೆಕ್ಯೂರಿಟಿ ಚೆಕ್ ಆಗುವವರೆಗೆ ಸಾಗಿತ್ತು. ಊಟಮುಗಿಸಿ, ಫೋಟೋ ತೆಗೆದುಕೊಳ್ಳುತ್ತಿದ್ದ ನಮಗೆ AIR FRANCE ವಿಮಾನವೇರಲು ಸಂದೇಶ ಕೇಳಿಸಿದಾಗ, ನಾವು ಸಾಗಬೇಕಿದ್ದ ಗೇಟಿನ ಕಡೆ ಸಾಗತೊಡಗಿದೆವು. ಅದೇ ಸಮಯಕ್ಕೆ ಇಂದ್ರಜಿತ್ ಲಂಕೇಶ್ ಹಾಗೂ ಗ್ಲೋಬಲ್ ಕನ್ನಡಿಗ ಎದುರು ಸಿಕ್ಕರು. ಅವರನ್ನು ಗುರುತಿಸಿ, ಮಾತನಾಡಿಸಿ ಮುಂದೆ ಸಾಗಿದೆವು.

ನಮ್ಮ AIR TICKET SCAN ಮಾಡಿ ವಿಮಾನವೇರಿದೆವು. ಮೊದಲ ಬಾರಿ ವಿದೇಶಯಾನ ಸ್ವಲ್ಪ ದುಗುಡವಿತ್ತು. ಏಪ್ರಿಲ್ 17 ಆಗಿನ್ನೂ ಪ್ರಾರಂಭವಾಗಿತ್ತು. ರಾತ್ರಿ 1.10 ಕ್ಕೆ ವಿಮಾನ ಹೊರಡುವ ಸಮಯ. ವಿಮಾನದ ಮಧ್ಯ ಭಾಗದಲ್ಲಿ ಕಿಟಕಿ ಪಕ್ಕ ನನಗೆ, ನನ್ನ ಪಕ್ಕ ನಮ್ಮವರಿಗೆ ಆಸನ ನಿಗದಿಯಾಗಿತ್ತು. ನಮ್ಮವರ ಪಕ್ಕ ವಿದೇಶೀ ಮಹಿಳೆ ಬಂದು ಕುಳಿತರು. ವಿಮಾನದಲ್ಲಿ ಕೆಲವು ಆಸನಗಳು ಖಾಲಿ ಇದ್ದವು. ನಮ್ಮ ಸಾಲಿನಲ್ಲಿ ಕುಳಿತ ಮಹಿಳೆ ನಮ್ಮ ಹಿಂದಿನ ಸಾಲಿನಲ್ಲಿ ಖಾಲಿಯಿದ್ದ ಒಂದು ಆಸನ ಕೇಳಿ ಪಡೆದು ಅಲ್ಲಿಗೆ ಸ್ಥಳಾಂತರಗೊಂಡರು. ಹಾಗಾಗಿ ಮೂರು ಆಸನಗಳಲ್ಲಿ ಇಬ್ಬರು ಆರಾಮವಾಗಿ ಕುಳಿತೆವು.

ವಿಮಾನದ ಪ್ರತಿಯೊಂದು ಆಸನಕ್ಕೂ ಪ್ರತ್ಯೇಕ ಟಿವಿ ಅಳವಡಿಸಲಾಗಿತ್ತು. ಒಂದು ತೆಳುವಾದ ಹೊದಿಕೆ, ಪುಟ್ಟ ದಿಂಬು ಹಾಗೂ ear phone ಪ್ರತ್ಯೇಕ ಕವರ್ ಮಾಡಿ ಇಡಲಾಗಿತ್ತು. ಅದರಲ್ಲಿ ಮಕ್ಕಳಿಗೆ ಹಾಗೂ ಹಿರಿಯರಿಗೆ ಬೇಕಾದ ಸಿನಿಮಾಗಳು, ಆಟಗಳನ್ನು ಅಳವಡಿಸಲಾಗಿತ್ತು. ನಮ್ಮ ವಿಮಾನ ಎಲ್ಲಿ ಪ್ರಯಾಣ ಮಾಡುತ್ತಿದೆ? ಇನ್ನೆಷ್ಟು ಸಮಯವಿದೆ ಎಂಬ ಎಲ್ಲ ವಿವರಗಳೂ ನಕ್ಷೆಯ ಮೂಲಕ ಸಿಗುವಂತಿದ್ದವು. ಪ್ಯಾರಿಸ್‌ಗೆ ಒಂಭತ್ತೂವರೆ ಗಂಟೆಗಳ ಪ್ರಯಾಣ ಬಳಿಕ ಮತ್ತೊಂದು ವಿಮಾನದಲ್ಲಿ ಶಿಕಾಗೋಗೆ ಏಳೂವರೆ ಗಂಟೆಗಳ ಪ್ರಯಾಣ. ನಡುವೆ ಪ್ಯಾರಿಸ್ ‌ನಲ್ಲಿ ನಾಲ್ಕು ಗಂಟೆಗಳ ವಿರಾಮವಿತ್ತು. ಮಕ್ಕಳಿಗೆ ವಿಮಾನದೊಳಗೆ ಕುಳಿತ ಬಗ್ಗೆ, ಆಸನಗಳ ಬಗ್ಗೆ ಮಾತನಾಡಿದೆ.

ವಿಮಾನ ಅರ್ಧ ಗಂಟೆ ತಡವಾಗಿ ಅಂದರೆ 1.40 ಕ್ಕೆ Take off ಆಯಿತು. ಟಿವಿಯಲ್ಲಿರುವ ಸಿನಿಮಾಗಳು ಯಾವುವು ಎಂದು ಹುಡುಕಿದೆ. ಮಕ್ಕಳನ್ನು ಕಾಣುವ ತವಕದಲ್ಲಿ ನಿದ್ದೆಯ ಸುಳಿವೇ ಇಲ್ಲದಂತಾಯಿತು. ವಿಮಾನಯಾನ ಪ್ರಾರಂಭವಾದ ಒಂದು ಗಂಟೆಯ ಬಳಿಕ ಗಗನ ಸಖಿ food cartನೊಡನೆ ಪ್ರತ್ಯಕ್ಷಳಾದಳು. ಅವರ ಬತ್ತದ ನಗು, ಸಹನೆಗೆ ಬೆಲೆ ಕಟ್ಟಲಾಗದು ಎನಿಸಿತ್ತು ಆ ದಿನ. ಮೊದಲಿಗೆ ಸಸ್ಯಾಹಾರಿಗಳಿಗೆ ಆಹಾರದ ಪೊಟ್ಟಣವನ್ನು ಕೈಗಿತ್ತು ಹೋದಳು. ವೆಜ್ ಬಿರಿಯಾನಿ, ರಾಯಿತಾ, ಹಪ್ಪಳದಂತಹ ಎರಡು ಚಪಾತಿ, ತರಕಾರಿ ಪಲ್ಯ, ಹಣ್ಣಿನ ರಸ, ಮೊಸರು, ಉಪ್ಪಿನಕಾಯಿ, ಮರದ ಚಮಚದ ಜೊತೆಗೆ ನೀರಿನ ಪುಟ್ಟ ಬಾಟಲ್. ರೆಡ್ ವೈನ್ ಪ್ರಿಯರಾದರೆ ಅದೂ ಕೂಡ ಲಭ್ಯವಿತ್ತು. ಊಟ ಬಿಸಿಯಾಗಿರುವಾಗಲೇ ಸೇರಿದಷ್ಟನ್ನು ತಿಂದು ನೀರು ಕುಡಿದೆ.

ಟಿವಿಯಲ್ಲಿ ಸುಡುಕು ಆಟ ತೆಗೆದೆ.. ಸರ್ಕಸ್ ಮಾಡುತ್ತ ಅರ್ಧ ಪೂರ್ಣಗೊಳಿಸೋ ಹೊತ್ತಿಗೆ ಕಣ್ಣು ಎಳೆಯತೊಡಗಿತ್ತು. ಪ್ರಯಾಣದ ಸಮಯ ಇನ್ನೂ ಐದು ಗಂಟೆ ಬಾಕಿಯಿತ್ತು. ಟಿವಿ ನಿಲ್ಲಿಸಿ ಕಣ್ಣು ಮುಚ್ಚಿದೆ. ಎದ್ದಾಗ ಸೂರ್ಯನ ಬೆಳಕು ಅಕ್ಕ ಪಕ್ಕದ ಕಿಟಕಿಗಳಲ್ಲಿ ಇಣುಕುತ್ತಿತ್ತು. ಎರಡೂವರೆ ಗಂಟೆಗೂ ಹೆಚ್ಚಿನ ಅವಧಿ ನಿದ್ರಿಸಿದ್ದೆ ಎಂದು ನನ್ನ ಸ್ಮಾರ್ಟ್ ವಾಚ್ ತೋರಿಸಿತು. ನಾನು ಕಿಟಕಿ ತೆರೆದು ಮೋಡಗಳ ಚಿತ್ತಾರವನ್ನು, ಸೂರ್ಯನ ಬೆಳಕನ್ನು ಆಸ್ವಾದಿಸತೊಡಗಿದೆ. ನೀಲಿಯ ಬಾನಂಗಳ, ಜೊತೆಗೆ ಚಲಿಸುತ್ತಿರುವ ಮೋಡಗಳ ಮೇಲೆ ವಿಮಾನಯಾನ ಕಣ್ತುಂಬಿಕೊಳ್ಳುವ ಅನುಭವ ಅನಿರ್ವಚನೀಯ. ಸಮಯ ಉರುಳಿದ್ದು ಅರಿವಿಗೆ ಬರಲಿಲ್ಲ.

ಬೆಳಗಿನ ಸ್ವಂತ ಕೆಲಸಗಳನ್ನು ಮುಗಿಸಿ ಬಂದು ಕುಳಿತಾಗ, ಗಗನ ಸಖಿಯರು ಬೆಳಗಿನ ತಿಂಡಿಯೊಡನೆ ಹಾಜರಾದರು. ಒಂದು ಇಡ್ಲಿ, ಒಂದು ಉದ್ದಿನ ವಡೆ, ಉಪ್ಪಿಟ್ಟು, ಸಾಂಬಾರು, ಚಟ್ನಿ
ಒಂದು ಪೊಟ್ಟಣದಲ್ಲಿ ಜೊತೆಗೆ ಬ್ರೆಡ್, ಬಿಸ್ಕೆಟ್ ಪ್ರತ್ಯೇಕ ಪೊಟ್ಟಣಗಳನ್ನು ಕೈಗಿತ್ತರು. ಕಾಫಿ, ಟೀ, ಜ್ಯೂಸ್‌ಗಳನ್ನು ಪಡೆಯಬಹುದಿತ್ತು. ತಿಂಡಿ ಚೆನ್ನಾಗಿಯೇ ಇತ್ತು, ತಿಂಡಿ ನಂತರ ಕಾಫಿಯನ್ನು ಹೀರಿದೆ. ಪ್ಯಾರಿಸ್ ತಲುಪಲು ಇನ್ನು ಒಂದೂವರೆ ಗಂಟೆಯಿತ್ತು. ಮತ್ತೆ ಕಿಟಕಿಯ ಹೊರಗೆ ನೋಡತೊಡಗಿದೆ. ಪ್ಯಾರಿಸ್ ಹತ್ತಿರ ಬರುತ್ತಿದ್ದಂತೆ ಎತ್ತರದ ಕಟ್ಟಡಗಳು ಕಾಣಿಸತೊಡಗಿದವು. ಮಗ, ಬಲ ಭಾಗದಲ್ಲಿ ಕುಳಿತವರಿಗೆ Eiffel tower ಕಾಣಿಸುವುದು ಎಂದಿದ್ದು ನೆನಪಾಯಿತು. ನೋಟ ಕದಲಿಸದೆ ದೃಷ್ಟಿ ನೆಟ್ಟೆ. ವಾತಾವರಣ ತಿಳಿಯಾಗಿದ್ದರಿಂದ
Eiffel towerನ ಪಕ್ಷಿ ನೋಟ ಕಾಣಿಸಿತು. ಸಾಧ್ಯವಾದ ಮಟ್ಟಿಗೆ ಮೊಬೈಲಿನಲ್ಲಿ ಸೆರೆ ಹಿಡಿದೆ ಕೂಡ. ಪ್ಯಾರಿಸ್ ನಗರ ದಾಟಿದ ಅರ್ಧ ಗಂಟೆಯೊಳಗೆ ವಿಮಾನ ನಿಲ್ದಾಣವನ್ನು ತಲುಪಿತು.

ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಗೆ ಬರುವಾಗ ನಮ್ಮ ನಾಡಿನ ಹೆಮ್ಮೆಯ ಗಾಯಕ ಶ್ರೀ ವಿಜಯ ಪ್ರಕಾಶ್ ಹಾಗೂ ಅವರ ಶ್ರೀಮತಿ ಸಿಕ್ಕಿದರು. ನಮ್ಮನ್ನು ಪರಿಚಯಿಸಿಕೊಂಡು ಮುಂದೆ ಸಾಗಿದೆವು. ಮಗ ಸೂಚನೆ ನೀಡಿದಂತೆ display board ನಲ್ಲಿ ನಾವು ತಲುಪಬೇಕಿದ್ದ ಗೇಟ್ ನಂಬರ್ ನೋಡಿಕೊಂಡು ಅಲ್ಲಿನ ಮೆಟ್ರೋ ಏರಿದೆವು.

ಎರಡೇ ನಿಮಿಷದಲ್ಲಿ ನಾವು ತಲುಪಬೇಕಿದ್ದ ಗೇಟಿಗೆ ಮೆಟ್ರೋ ತಲುಪಿತು. ಅಲ್ಲಿಯೂ ಸೆಕ್ಯೂರಿಟ್ ಚೆಕ್ ಆದ ಬಳಿಕ ನಾವು ವಿಮಾನವೇರಬೇಕಿದ್ದ ತಾಣಕ್ಕೆ ಹೋಗಿ ಕುಳಿತೆವು.
ಒಂಬತ್ತೂವರೆ ಗಂಟೆ ಕಾಲಾಡಿಸದೆ ಕುಳಿತದ್ದು, ಕಾಲು ಜಡವಾದಂತೆ ಭಾಸವಾಗಿದ್ದವು. ಒಂದೇ ಕಡೆ ಕುಳಿತುಕೊಳ್ಳದೆ ಒಬ್ಬರಾದ ಬಳಿಕ ಒಬ್ಬರು ಎದ್ದು ಓಡಾಡಿದೆವು. ವಾಶ್ ರೂಮಿನಲ್ಲಿ ಮುಖ ತೊಳೆಯುತ್ತಿದ್ದಾಗ, ಚೂಡಿದಾರ್ ಹಾಕಿದ್ದ ದಕ್ಷಿಣ ಭಾರತೀಯ ಮಹಿಳೆ ಒಬ್ಬರು ಅಲ್ಲಿ ಕೆಲಸ ಮಾಡುವುದನ್ನು ನೋಡಿದೆ. ಆಕೆಯತ್ತ ನೋಡಿ ಮುಗುಳ್ನಕ್ಕೆ, ಆಕೆಯೂ ನಕ್ಕಳು.
“ಕನ್ನಡದವರಾ?” ಎಂದೆ.

” ನಾನು ತಮಿಳುನಾಡಿನವರು. ಕನ್ನಡವೂ ಗೊತ್ತು” ಎಂದರು. ಅಷ್ಟರಲ್ಲಿ ಹೆಚ್ಚು ಜನ ಬಂದಿದ್ರಿಂದ ಮಾತು ಮುಂದುವರೆಸದೆ ಸಿದ್ಧಳಾಗಿ ಹಿಂದಿರುಗಿದೆ. ಓಡಾಡಿಯೂ ಸಾಕಾಯ್ತು, ನೀರು ಕುಡಿಯಬೇಕೆನಿಸಿತು. ನಮ್ಮವರಿಗೆ ನೀರು ಬೇಕು ಎಂದದ್ದಕ್ಕೆ ಅಲ್ಲಿನ ಸ್ಟಾಲ್ ಒಂದಕ್ಕೆ ಹೋಗಿ ಒಂದು ಲೀಟರ್ ನೀರು ಹಾಗೂ ಒಂದು titbit ತಗೊಂಡ್ರು. ಭಾರತೀಯ ಕರೆನ್ಸಿಯಲ್ಲಿ ರೂ.1170 ಆಯ್ತು.. ನೀರು ಕುಡಿದು ಸುತ್ತ ಕಣ್ಣಾಡಿಸಿದರೆ ಅಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಕಣ್ಣಿಗೆ ಬಿದ್ದು ನಗು ಬಂತು.

ಶಿಕಾಗೋ ವಿಮಾನದ ಸಮಯ, ಬೋರ್ಡಿಂಗ್ ಸಮಯದ ಕುರಿತು ಧ್ವನಿ ಪ್ರಕಟಣೆ ಶುರುವಾಯಿತು. ಓಡಾಟ ನಿಲ್ಲಿಸಿ ಶಿಕಾಗೋನತ್ತ ವಿಮಾನವೇರಲು ಸಿದ್ಧಳಾದೆ. ಶಿಕಾಗೋ ಎಂದರೆ ಭಾರತೀಯರಿಗೆ ಭಾವನಾತ್ಮಕ ತಾಣ. ದೇಶ ಕಂಡ ಅಪ್ರತಿಮ ದೇಶಭಕ್ತ, ಸನಾತನ ಸಂಸ್ಕೃತಿಯ ಹರಿಕಾರ ಶ್ರೀ ವಿವೇಕಾನಂದರು ವಿಶ್ವ ಭ್ರಾತೃತ್ವವನ್ನು ಪ್ರತಿಪಾದಿಸಿ ಹೆಸರಾದದ್ದು ಶಿಕಾಗೋದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಎಂಬ ಅಭಿಮಾನ.

ಶಿಕಾಗೋ ಕುರಿತ ವಿಶೇಷ ಸಂವೇದನೆ ನನ್ನ ದೊಡ್ಡ ಮಗ ವರುಷ ತುಂಬುವ ಮುನ್ನ ನಡೆದ ಘಟನೆ. ಅವನಿಗೆ ಹತ್ತು ತಿಂಗಳಿರಬಹುದು (1996) , ನಾವಾಗ ಮಂಡ್ಯದಲ್ಲಿ ವಾಸವಿದ್ದೆವು. ನಮ್ಮ ಮನೆಯ ಸಮೀಪ ಒಂದು ಪ್ರಾವಿಷನ್ ಅಂಗಡಿಯವರು ಮಗನನ್ನು ಬಹಳ ಹಚ್ಚಿಕೊಂಡಿದ್ದರು. ಒಂದು ಸಂಜೆ ಅವರ ಅಂಗಡಿಯಲ್ಲಿ ಮಗನನ್ನು ಕೂರಿಸಿಕೊಂಡಿದ್ದಾಗ ಸನ್ಯಾಸಿಯಂತಿದ್ದ ವೃದ್ಧರೊಬ್ಬರು ನನ್ನ ಮಗನನ್ನು ನೋಡಿ ಅಂಗಡಿಗೆ ಹೋದರಂತೆ. ” ಈ ಮಗು ಶುಕ್ರವಾರ ಲಕ್ಷ್ಮಿ ಬರೋ ವೇಳೆಯಲ್ಲಿ ಜನಿಸಿದೆ. ತುಂಬಾ ವಿವೇಕವಂತನಾಗ್ತಾನೆ, ವಿನಯವಂತನಾಗ್ತಾನೆ. ವಿವೇಕಾನಂದರಂತೆ ಇವನು” ಎಂದಿದ್ದರಂತೆ. ಬಳಿಕ ಪ್ರಾವಿಷನ್ ಅಂಗಡಿಯವರು ಇವನು ಹುಟ್ಟಿದ ದಿನ,ಸಮಯ ಎಲ್ಲದರ ಬಗ್ಗೆ ವಿಚಾರಿಸಿ ಆ ವೃದ್ಧ ಹೇಳಿದ್ದನ್ನು ನಮಗೆ ಹೇಳಿದ್ದರು. ನಮ್ಮವರು “ನಿನ್ನ ಮಗ ವಿವೇಕಾನಂದ ಆಗ್ತಾನಂತೆ, ಇವನು ಶಿಕಾಗೋಗೆ ಹೋಗ್ತಾನೆ ನೋಡು” ಎಂದಿದ್ರು.

ವಿದೇಶದಲ್ಲಿ ಅಧ್ಯಯನಕ್ಕೆ ಕಳಿಸಲು ಒಲವಿಲ್ಲದ ನಾನು ಇಲ್ಲೆಯೇ ಮಾಸ್ಟರ್ಸ್ ಮಾಡು ಎಂದರೆ ಅವನು ಒಪ್ಪದೆ ಬಿ ಇ ಬಳಿಕ ಕೆಲಸ ಮಾಡತೊಡಗಿದ್ದ. ‘ತೇನವಿನಾ ತೇನವಿನಾ
ತೃಣಮಪಿ ನ ಚಲತಿ ತೇನವಿನಾ…’ ಎನ್ನುವಂತೆ ಆ ದೈವ ಪ್ರೇರಣೆಯೋ ಕಾಕತಾಳೀಯವೋ ಅವನು ಅಧ್ಯನಕ್ಕೆಂದು ಹೊರಟು ನಿಂತದ್ದು ಶಿಕಾಗೋಗೆ. ಶಿಕಾಗೋದಲ್ಲಿ ಓದು ಮುಗಿಸಿ Nashvilleನಲ್ಲಿ ಕೆಲಸ ಮಾಡುತ್ತಿದ್ದರೂ ಶಿಕಾಗೋ ಮೇಲಿನ ಮಮಕಾರದಿಂದ ಮೊದಲು ಶಿಕಾಗೋನಿಂದಲೇ ಪ್ರವಾಸ ಮಾಡುವ ಎಂದು ಅಲ್ಲಿಗೆ ಟಿಕೆಟ್ ಮಾಡಿಸಿದ್ದ. ನಮಗೂ ಅಮೆರಿಕಾಗೆ ಪಾದಾರ್ಪಣೆ ಮಾಡಲು ಮಗನಿಗೆ ಅವಕಾಶ ನೀಡಿದ ಶಿಕಾಗೋ ಎಂದರೆ ವಿಶೇಷ.

ಶಿಕಾಗೋಗೆ ಪ್ರಯಾಣಿಸಲು ವಿಮಾನವೇರಿದೆವು. ಈ ಬಾರಿ ನಮ್ಮ ಸಾಲಿನಲ್ಲಿ ಇಬ್ಬರೇ ನಾನು ನಮ್ಮವರು ಪ್ರಯಾಣಿಕರು. ಮೂವರಿರುವ ಆಸನದಲ್ಲಿ ಇಬ್ಬರೇ ಆರಾಮವಾಗಿ ಕುಳಿತೆವು. ಕಿಟಕಿ ಬಳಿ ಕುಳಿತವಳಿಗೆ ವಿಸ್ಮಯವೊಂದು ಎದುರಾಯಿತು. ಬಿಳಿ ಗಾಜು ಇದ್ದಕ್ಕಿದ್ದಂತೆ ಕಪ್ಪಾಗಿ ತುಸು ಭಯವಾಯಿತು. ನಮ್ಮವರಿಗೆ ಅದನ್ನು ತೋರಿಸಿದೆ. “ಇದಕ್ಕೆ ಶಟರ್ ಇಲ್ಲ, ಬಿಳಿ ಬಣ್ಣ ಅದರಷ್ಟಕ್ಕೆ ಕಪ್ಪಾಯಿತು..” ಎನ್ನುತ್ತ ಕಿಟಕಿಯ ಕೆಳಗೆ ಕೈ ಯಾಡಿಸಿದೆ.

‘ಓ ಇವು touch sensors ಇರೋ ಕಿಟಕಿ. Touch ನಿಂದ ಎಷ್ಟು ಬೇಕೋ ಅಷ್ಟು ಬೆಳಕನ್ನು ಬಿಡ್ತಾವೆ..’ಎಂದೆ. ಅಬ್ಬಾ.‌. ಸೈನ್ಸ್ ಓದಿಸ್ತೀರೋದಕ್ಕೂ ಸಾರ್ಥವಾಯ್ತು ಬಿಡು ಎಂದು ಛೇಡಿಸಿದರು. ಹೊಟ್ಟೆ ಚುರುಗುಡುತ್ತಿತ್ತು, ಪ್ರಯಾಣ ಶುರುವಾದ ಅರ್ಧ ಗಂಟೆಯಲ್ಲಿ ಮಧ್ಯಾಹ್ನದ ಊಟ ನಮ್ಮ ಕೈ ಸೇರಿತು. ಚಪಾತಿ, ಕಡ್ಲೇ ಕಾಳು ಉಸುಲಿ ಸಲಾಡ್, ಘೀ ರೈಸ್ ಚನ್ನಾ ದಾಲ್, ಮೊಸರು, ಶ್ಯಾವಿಗೆ ಪಾಯಸ, ನೀರಿನ ಬಾಟಲ್ ನಮ್ಮ ಕೈ ಸೇರಿತು. ಹೊಟ್ಟೆ ತುಂಬಿ ಸಂತೃಪ್ತಿಯಾದರೂ ನಿದ್ದೆ ಸುಳಿಯಲಿಲ್ಲ. ನಮ್ಮ ಪಕ್ಕದ ಸಾಲಿನಲ್ಲಿ ವಿದೇಶಿ ವಯೋವೃದ್ಧ ದಂಪತಿಗಳಿದ್ದರು. ತಾತನಂತೂ ತಮಾಷೆ ಮಾಡುವ ಸ್ವಭಾವ ಜೊತೆಗೆ ಮಡದಿ ಬಗ್ಗೆ ಕಾಳಜಿ ಇದ್ದವರು. ಗಗನ ಸಖಿಯರೊಡನೆ ಹರಟುತ್ತ, ಮಡದಿಯನ್ನು ಮಾತಿಗೆಳೆಯುವುದನ್ನು ನೋಡುತ್ತ ಸ್ವಲ್ಪ ಸಮಯ ಸರಿಯಿತು.

ಟಿವಿಯಲ್ಲಿರುವ ಯಾವ ಸಿನಿಮಾಗಳು ಇವೆ ಎಂದು ಹುಡುಕಿದೆ. ಕನ್ನಡ ಸಿನಿಮಾ ಯಾವುವೂ ಇರಲಿಲ್ಲ. ಟೈಟಾನಿಕ್ ಸಿನಿಮಾ ಕಣ್ಣಿಗೆ ಬಿತ್ತು. ಹಲವು ಬಾರಿ ನೋಡಿದ್ದರೂ ಬೇಸರ ಕಳೆಯಲು ಮತ್ತೊಮ್ಮೆ ನೋಡುವಾ ಎಂದು ಅತ್ತ ದೃಷ್ಟಿ ನೆಟ್ಟೆ. ಟೈಟಾನಿಕ್ ಸಿನಿಮಾ ಮುಗಿಯುವ ಸಮಯಕ್ಕೆ ಶಿಕಾಗೋ ಸಮೀಪಿಸಿತ್ತು. ಮಗನಾಗಲೇ ಶಿಕಾಗೋ ವಿಮಾನ ನಿಲ್ದಾಣದತ್ತ ಮುಖ ಮಾಡಿದ್ದ. ಶಿಕಾಗೋ ತಲುಪಿದ ಮೇಲೆ ಏನು ಮಾಡಬೇಕೆಂದು ಸಂದೇಶ ಕಳುಹಿಸಿದ್ದ. ಅಂತೂ ಯಾವ ಅಡೆತಡೆಯೂ ಇಲ್ಲದೆ ಶಿಕಾಗೋ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಯಿತು.

ಚಿಕಾಗೋ ವಿಮಾನ ನಿಲ್ದಾಣ ಸ್ವಲ್ಪ ಜನ ನಿಬಿಡವಾದದ್ದು. ಹಾಗಾಗಿ ಇಮಿಗ್ರೇಷನ್‌ಗೆ ಬಹಳ ಉದ್ದದ ಸಾಲಿನಲ್ಲಿ ನಿಲ್ಲಬೇಕಾಯಿತು. ಇಮಿಗ್ರೇಷನ್ ಮಾಡಿದ ಅಧಿಕಾರಿ ನಮ್ಮ ಪಾಸ್‌ಪೋರ್ಟ್‌ ಪರಿಶೀಲಿಸಿ, ” Why are you here?” ( ” ನೀವಿಲ್ಲಿಗೆ ಏಕೆ ಬಂದಿದ್ದೀರಿ?”) ಎಂಬ ಮೊದಲ ಪ್ರಶ್ನೆ ಹಾಕಿದ್ರು. ಮಗನ ಗ್ರಾಜ್ಯುಯೇಷನ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಂದೆವು.

” Do you have any proof?” ಪ್ರೂಫ್ ಇವೆ, ಮಗ ಕಳುಹಿಸಿರುವ ಟಿಕೆಟ್ ಹಾಗೂ ಅವರನ ಕಾಲೇಜಿನ ಐಡಿ, ಐ ಟ್ವೆಂಟೆ.. ನನ್ನ ಮಾತು ಮುಂದುವರೆದೇ ಇತ್ತು. ನನ್ನ ಉತ್ತರ ಅವರು ಕೇಳಿದ ಪ್ರಶ್ನೆಗೆ ಸರಿಯಾಗಿಲ್ಲ ಎಂದು ಮತ್ತೆ ಕೇಳಿದರು.

” I said any fruit?” ಎಂದರು.‌ ನನಗೆ ಅದು fruit ಎಂದು ಅರ್ಥವಾಗದೆ ” I didn’t get you what you are saying ” ಎಂದೆ. ಆ ಅಧಿಕಾರಿ ತುಸು ನಕ್ಕು, ಕೈ ಸನ್ನೆ ಮಾಡಿ ತೋರಿಸುತ್ತ ” Do you have any food or fruit in your baggages?” ಎಂದರು.

ಅಗ ನಮಗೂ ನಗು ಉಕ್ಕಿ ಬಂದರೂ ತಡೆದು, ” No sir.. We didn’t carry any food with us” ಎಂದೆ. ಇಮಿಗ್ರೇಷನ್ ಪಾಸ್ ಕೈಗಿತ್ತು ಚೆಕ್ ಇನ್ ಅಧಿಕಾರಿಗಳಿಗೆ ಕೊಟ್ಟು ಲಗೇಜ್ ತೆಗೆದುಕೊಳ್ಳಲು ತಿಳಿಸಿದರು. ದೊಡ್ಡ ಮಗ ಎದುರಿಗೆ ಕಾಣುವಂತೆ ನಿಂತಿದ್ದ. ಲಗೇಜುಗಳನ್ನು ಮುಖ್ಯ ದ್ವಾರಕ್ಕೆ ಸಾಗಿಸಿಕೊಂಡು ನಿಂತೊಡನೆ ಹಾರಿ ಬಂದು ಅಪ್ಪಿಕೊಂಡ. ಎರಡೂಕಾಲು ವರ್ಷ ದೂರವಿದ್ದ ಮಗನನ್ನು ಕಂಡು ಆ ಕ್ಷಣದಲ್ಲಿ ಪ್ರಯಾಣದ ಪ್ರಯಾಸ ಕರಗಿ ಹೋಗಿ, ಆನಂದ ಭಾಷ್ಪ ಕಣ್ತುಂಬಿಕೊಂಡಿತು. ನಮ್ಮನ್ನು ಹೊತ್ತ ಕ್ಯಾಬ್ ಸೊನೆಸ್ಟಾ ಹೋಟೆಲಿನತ್ತ ಹೊರಟಿತು.

ಮುಂದುವರೆಯುವುದು…


  • ಕಮಲಾಕ್ಷಿ ಸಿ ಆರ್ 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW