ಅಂದು ಮೊದಲು ಹೋಗಿದ್ದು ಶಿಕಾಗೋ ಆರ್ಟ್ ಗ್ಯಾಲರಿಗೆ ಅಲ್ಲಿ ಪ್ರಾಚೀನ ಈಜಿಪ್ಟಿನ ಕಲಾಕೃತಿಗಳಿಂದ ಹಿಡಿದು ಯುರೋಪಿಯನ್ ಅಲಂಕಾರಿಕ ಕಲೆಗಳವರೆಗಿನ ಕಲಾಕೃತಿಗಳಿವೆ. ಮುಂದೇನಾಯಿತು ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ‘ಅ…ಅ…ಅಮೆರಿಕಾ ನೋಡಾ’ ಸಂಚಿಕೆಯಲ್ಲಿ ತಪ್ಪದೆ ಮುಂದೆ ಓದಿ…
ಆಯಾಸದಿಂದ ನಿದ್ರೆಗೆ ಜಾರಿದ್ದಷ್ಟೇ. ಬೆಳಗ್ಗೆ ಗುಬ್ಬಚ್ಚಿಗಳ ಕಲರವದಿಂದ ಎಚ್ಚರವಾಯಿತು. ಸಮಯ ನೋಡಿದರೆ ಅದಾಗಲೇ 6.00 ಗಂಟೆಯಾಗಿತ್ತು. ಹಿಂದಿನ ದಿನ ಇಷ್ಟು ಹೊತ್ತಿಗಾಗಲೇ ಕಿಟಕಿಯ ಪರದೆಯೊಳಗಿನಿಂದ ಸೂರ್ಯ ಇಣುಕಿದ್ದ, ಇಂದೇಕೆ ಮಬ್ಬಾಗಿದೆಯಲ್ಲ ಎಂದುಕೊಳ್ಳುತ್ತ ಪರದೆಯನ್ನು ಸರಿಸಿದೆ. ಅಯ್ಯೋ..ಅಂದು ಸೂರ್ಯ ರಜೆ ಹಾಕಿಬಿಟ್ಟಿದ್ದ. ರಸ್ತೆಯತ್ತ ಕಣ್ಣು ಹಾಯಿಸಿದೆ. ತುಸು ಹಿಮ ಕವಿದಿತ್ತು, ದೀಪ ಹಾಕಿಕೊಂಡು ವಾಹನಗಳನ್ನು ಚಲಾಯಿಸುತ್ತಿದ್ದರು. ಲಘುವಾಗಿ ಮಳೆ ಕೂಡ ಬರುತ್ತಿತ್ತು.
ಮಗ ಅಂದಿನ ವಾತಾವರಣ ಹೇಗಿದೆ ಎಂದು ನೋಡಿ, ” ಅಮ್ಮಾ ಇಂದು ವಾತಾವರಣ ಹೀಗೆಯೇ. ಸ್ವಲ್ಪ ಗಾಳಿ, ಚಳಿ ಇರುತ್ತೆ, ಮಳೆ ಕೂಡ ಬರಬಹುದು” ಎಂದ. ಬೇಗನೆ ಮೂವರೂ ಸಿದ್ಧವಾಗಿ ಬೆಳಗಿನ ಉಪಹಾರ ಮುಗಿಸಿ ಬಂದೆವು.

ಅಂದು ಕೂಡ ಹಿಂದಿನ ದಿನವಿದ್ದ ಭಕ್ಷ್ಯಗಳೇ ಇದ್ದವು. ಅಂದು ಓಹಾಯೋನಲ್ಲಿರುವ ನುಸ್ರತ್ ನನ್ನ ವಿದ್ಯಾರ್ಥಿನಿಯ ಕರೆ ಬಂದದ್ದು ಸಂಭ್ರಮಾಶ್ಚರ್ಯ ತಂದಿತ್ತು. ನನ್ನ ಮಗನೊಡನೆ ಸಂಪರ್ಕದಲ್ಲಿರುವ ಆಕೆ ನನ್ನ ಬರುವನ್ನು ಖಾತ್ರಿ ಪಡಿಸಿಕೊಂಡು ಮಾತನಾಡಿದ್ದಳು. ಸಾಧ್ಯವಾದರೆ ಬರುವೆ ಎಂದಳು. ಏನಿಲ್ಲವೆಂದರೂ 20-21 ವರ್ಷ ಹಿಂದಿನ ವಿದ್ಯಾರ್ಥಿನಿ ಆಕೆ. ನನಗೂ ಅಚ್ಚುಮೆಚ್ಚು, ಆಕೆಗೂ ನಾನೆಂದರೆ ಅಭಿಮಾನ. ಅವಳೊಡನೆ ಮಾತನಾಡಿ ಸಂಸತವಾಯಿತು. “ಎಲ್ಲಿಂದ ಎಲ್ಲೇ ಹೋದರೂ ಇವಳ ಸ್ಟೂಡೆಂಟ್ಸ್ ಮಾತ್ರ ಜೊತೆಗೆ ಇದ್ದೇ ಇರ‌್ತಾರೆ” ಎಂದು ನಮ್ಮವರು ರೇಗಿಸೋದು ಬಿಡಲಿಲ್ಲ.
ಹತ್ತೂವರೆಗೆ ರೂಮಿನಿಂದ ಹೊರಟೆವು. ಹೊರಡುವಾಗ ದಪ್ಪ ಜರ್ಕೀನ್, ಟೋಪಿ ಹಾಕಿಸಲು ಮರೆಯಲಿಲ್ಲ. ಅಂದು ಮೊದಲು ಹೋಗಿದ್ದು ಶಿಕಾಗೋ ಆರ್ಟ್ ಗ್ಯಾಲರಿಗೆ. ಶುಲ್ಕ ಪಾವತಿಸಿ ನೋಡಬೇಕಾದ ತಾಣವಿದು. ಪ್ರಾರಂಭದಲ್ಲಿಯೇ ಬುದ್ಧನ ವಿಗ್ರಹಗಳನ್ನು ನೋಡಿ ಖುಷಿಯಾಯಿತು. ಚಿತ್ರಕಲೆ, ಪುರಾತನ ಕಲಾಕೃತಿಗಳ ಸಂಗ್ರಹ, ರಾಜ ವಂಶಸ್ಥರು ಬಳಸುತ್ತಿದ್ದ ಪೀಠೋಪಕರಣಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ ಇಡಲಾಗಿದೆ. ಇದರಲ್ಲಿ 3,00,000 ಕ್ಕೂ ಹೆಚ್ಚಿನ ಕಲಾಕೃತಿಗಳ ಬೃಹತ್ ಸಂಗ್ರಹಾಲಯವಿದೆ.
ಪ್ರಾಚೀನ ಈಜಿಪ್ಟಿನ ಕಲಾಕೃತಿಗಳಿಂದ ಹಿಡಿದು ಯುರೋಪಿಯನ್ ಅಲಂಕಾರಿಕ ಕಲೆಗಳವರೆಗಿನ ಕಲಾಕೃತಿಗಳಿವೆ. ಎಡ್ವರ್ಡ್ ಹಾಪರ್ಸ್ ನೈಟ್‌ಹಾಕ್ಸ್, ಗ್ರಾಂಟ್ ವುಡ್ ಅವರ ಅಮೇರಿಕನ್ ಗೋಥಿಕ್, ಮೇರಿ ಕ್ಯಾಸಟ್ ಅವರ ದಿ ಚೈಲ್ಡ್ಸ್ ಬಾತ್ ಮತ್ತು ಜಾರ್ಜಸ್ ಸ್ಯೂರಾಟ್, ಪ್ಯಾಬ್ಲೊ ಪಿಕಾಸೊ, ಎಡ್ವರ್ಡ್ ಹಾಪರ್ ಮತ್ತು ಗ್ರಾಂಟ್ ವುಡ್‌ನಂತಹ ಪ್ರಸಿದ್ಧ ಕಲಾವಿದರ ಕೃತಿಗಳು ಮನಸೂರೆಗೊಳ್ಳುತ್ತವೆ. ಮೊದಲ ಮಹಡಿಯ ಒಂದು ದೊಡ್ಡ ಸಭಾಂಗಣದಲ್ಲಿ ನಮ್ಮ ಭಾರತೀಯ ದೇವಾನುದೇವತೆಗಳ ಮನಮೋಹಕ ವಿಗ್ರಹಗಳನ್ನು ವೀಕ್ಷಿಸಿದ್ದು ಅನಿರ್ವಚನೀಯ ಅನುಭವ ನೀಡಿತು. ಈ ಕಲಾ ಸಂಗ್ರಹಾಲಯವು 1879ರಲ್ಲಿ ಸ್ಥಾಪಿತವಾಗಿದ್ದಾಗಿದೆ.
ಸಮಯದ ಮಿತಿಯಿಂದ ಸಾಧ್ಯವಾದಷ್ಟು ನೋಡಿಕೊಂಡು, ಆರ್ಟ್ ಗ್ಯಾಲರಿಯಿಂದ ಕಾಲು ನಡಿಗೆ ದೂರದಲ್ಲಿದ್ದ ಮಿಲೇನಿಯಂ ಉದ್ಯಾನವನದ ಕಡೆ ನಡೆದೆವು. ಹಸಿರುಡುಗೆ ಧರಿಸಿದಂತೆ ಅಲ್ಲಿನ ಮರ ಗಿಡಗಳು ಕಂಡುಬಂದವು. ಅಂದು ಶನಿವಾರವಾಗಿತ್ತಾದ್ದರಿಂದ ಹೆಚ್ಚು ವೀಕ್ಷಕರಿದ್ದರು. 25 ಎಕರೆ ವಿಸ್ತೀರ್ಣದ ಆ ಉದ್ಯಾನವು 2004ರಲ್ಲಿ ಪ್ರಾರಂಭವಾಯಿತಂತೆ. ಅಲ್ಲಿ ಬಹಳಷ್ಟು ಭಾರತೀಯರನ್ನು ನೋಡಿ ಆಪ್ತ ಭಾವ ಮೂಡಿತು. ನನ್ನನ್ನು ನೋಡಿದ ಅವರು ಕೂಡ ಪರಿಚಿತ ಭಾವ ವ್ಯಕ್ತಪಡಿಸಿ, ನನ್ನತ್ತ ನೋಡಿ ಮುಗುಳ್ನಕ್ಕಿದ್ದು ಖುಷಿ ನೀಡಿತ್ತು.
ಈ ಉದ್ಯಾನದ ಪ್ರಮುಖ ಆಕರ್ಷಣೆ ‘ದಿ ಬೀನ್’ ಎಂದು ಕರೆಯಲಾಗುವ ಕ್ಲೌಡ್ ಗೇಟ್. ನಗರದ ಸ್ಕೈಲೈನ್ ಅನ್ನು ಅದರ ಮೇಲ್ಮೈಯಲ್ಲಿ ಪ್ರತಿಬಿಂಬಿಸುವ ಸಂಪೂರ್ಣವಾಗಿ ಸ್ಟೇನ್‌ಲೆಸ್-ಸ್ಟೀಲ್ ಪ್ಲೇಟ್‌ಗಳಿಂದ ಮಾಡಿದ ದೀರ್ಘವೃತ್ತಾಕಾರದ ಶಿಲ್ಪವಾಗಿದ್ದು, ಜನರ ಗಮನವನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಇದರ ವಿನ್ಯಾಸಗಾರ ಅನೀಶ್ ಕಪೂರ್ ಎನ್ನುವ ಭಾರತೀಯ ಎಂದು ತಿಳಿದು ಹೆಮ್ಮೆಯ ಭಾವ ಮೂಡಿತು. ಪಾದರಸದ ಹನಿಯನ್ನು ಹೋಲುವ ಹೊಳೆಯುವಂತೆ ವಿನ್ಯಾಸಗೊಳಿಸಲಾಗಿದೆ. ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಪ್ರತಿಬಿಂಬವನ್ನೂ, ಕಟ್ಟಡಗಳ ಪ್ರತಿಬಿಂಬವನ್ನೂ ನೋಡುತ್ತ ಸಮಯ ಉರುಳುವುದೇ ಅರಿವಿಗೆ ಬಾರದು. ನಾವೂ ಹಲವಾರು ಬೀನ್ ಸುತ್ತ, ಮಿಲೇನಿಯಂ ಹೊರಗಿನ ಲೂರಿ ಉದ್ಯಾನವನದಲ್ಲಿ ಫೋಟೋ ತೆಗೆದುಕೊಂಡೆವು. ಮಿಲೇನಿಯಂ ಪಾರ್ಕ್ ಫೋಟೋ ಪ್ರಿಯರ ಫೇವರಿಟ್ ತಾಣವೂ ಹೌದು. ಫೇವರಿಟ್ ತಾಣದಲ್ಲಿ ಫೋಟೋ ತೆಗೆದುಕೊಳ್ಳಲು ಸಾಲಿನಲ್ಲಿ ನಿಂತದ್ದೂ ಆಯಿತು. ಇಲ್ಲಿ ಪಾರ್ಕ್ ಸಂಗೀತ ಉತ್ಸವ ಸೇರಿದಂತೆ ಹಲವಾರು ಪ್ರಮುಖ ಕಾರ್ಯಕ್ರಮಗಳು ಕೂಡ ನಡೆಯುತ್ತವಂತೆ.
ಮಿಲೇನಿಯಂ ಪಾರ್ಕ್ ವೀಕ್ಷಣೆ ಬಳಿಕ ಮಧ್ಯಾಹ್ನದ ಊಟಕ್ಕೆ ಹೊರಟೆವು. ” ರಾತ್ರಿ ನೋಡಿದ್ರೆ ತಿಂಡಿ, ಬೆಳಗ್ಗೆ ಅರ್ಧಂಬರ್ಧ ತಿಂದಿದ್ದೀರಿ. ಈಗಲಾದರೂ ಹೊಟ್ಟೆ ತುಂಬಾ ಊಟ ಮಾಡಿ, ಇಂಡಿಯನ್ ರೆಸ್ಟೋರೆಂಟ್‌ಗೆ ಹೋಗೋಣ” ಎಂದು ಕ್ಯಾಬ್ ಹತ್ತಿಸಿ, ಮಹಾರಾಜ ಇಂಡಿಯನ್ ರೆಸ್ಟೋರೆಂಟಿನತ್ತ ನಮ್ಮನ್ನು ಕರೆದೊಯ್ದ. ಮ್ಯಾನೇಜರ್ ತೋರಿದ ಟೇಬಲ್ ಕಡೆ ಹೋಗಿ ಕುಳಿತೆವು. ಅಲ್ಲಿ ಆರ್ಡರ್ ತೆಗೆದುಕೊಳ್ಳುವವರು, ಭಕ್ಷ್ಯಗಳನ್ನು ತಂದುಕೊಡುವುದು ಹುಡುಗಿಯರಾಗಿದ್ದರು. ನಮ್ಮತ್ತ ಸುಮಾರು ಇಪ್ಪತ್ತೈದು ವರ್ಷದ ಒಂದು ಮುದ್ದಾದ ಹುಡುಗಿ ಬಂದಳು. ಬೊಟ್ಟು ಇಟ್ಟದ್ದು ನೋಡಿ, ಹಿಂದಿ ಇಂಗ್ಲೀಷಿನಲ್ಲಿ ಮಾತಿಗೆ ಮುಂದಾದೆ.
” ಮೇಡಂ ಕನ್ನಡದಲ್ಲೇ ಮಾತಾಡಿ. ಅಪರೂಪಕ್ಕೆ ಕನ್ನಡದವರು ಸಿಗ್ತಾರೆ,ಅದನ್ನು ಕಳೆದುಕೊಳ್ಳಲಾರೆ” ಎಂದಳು. ತಾಯ ಸ್ವರದಂತೆ ಮಾತೃ ಭಾಷೆ ಕಿವಿಗೆಷ್ಟು ಇಂಪು, ಅಮ್ಮನ ಬೆಚ್ಚನೆಯ ಅಪ್ಪುಗೆಯಂತೆ ಆಪ್ತತೆಯನ್ನು ನೀಡುತ್ತದೆ ಅಲ್ಲವೆ?. ಆರ್ಡರ್ ಕೊಡುತ್ತಿರುವಾಗ ಅವಳೊಡನೆ ಮಾತಿಗಿಳಿದೆ. ಆಕೆ ಮೂಲತಃ ಮೈಸೂರಿನವಳು, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮಾಡಿದ್ದು, ಶಿಕಾಗೋದಲ್ಲಿ ಎಂಎಸ್ ಮಾಡುತ್ತಿರುವ ವಿದ್ಯಾರ್ಥಿ. ವಾರದಲ್ಲಿ ಮೂರರಿಂದ ನಾಲ್ಕು ದಿನ ಗಂಟೆ ಕೆಲಸ ಮಾಡುವೆ. ತಿಂಗಳ ಬಹುತೇಕ ಖರ್ಚಿಗೆ ನೆರವಾಗುತ್ತೆ ಎಂದಳು.
” ಅಮ್ಮಾ.. ಬಹಳಷ್ಟು ವಿದ್ಯಾರ್ಥಿಗಳು ಮನೆಯಿಂದ ಕಳಿಸುವ ಹಣ ಸಾಕಾಗದೆ, ಹೀಗೆ ಯೂನಿವರ್ಸಿಟಿಯ ಗಮನಕ್ಕೆ ಬಾರದಂತೆ ಕೆಲಸ ಮಾಡ್ತಾರೆ. ಕಾಲೇಜು ಕ್ಯಾಂಪಸ್‌ನಲ್ಲಿ ಕೆಲಸ ಮಾಡಬಹುದು. ಹೊರಗೆ ಮಾಡುವಂತಿಲ್ಲ. ಅನಧಿಕೃತವಾಗಿ ಕೆಲಸ ಮಾಡ್ತಾರೆ” ಎಂದ ಮಗ. ತಮ್ಮ ಮನೆಗಳಲ್ಲಿ ಒಂದು ಲೋಟವನ್ನು ತೊಳೆಯದವರು, ರೆಸ್ಟೋರೆಂಟುಗಳಲ್ಲಿ ಮುಖದ ಮೇಲೆ ನಗು ಧರಿಸಿ, ಟೇಬಲ್ ಒರೆಸುವ ಆ ಮಕ್ಕಳು ತಮ್ಮ ಅಸ್ಥಿತ್ವ ಕಂಡುಕೊಳ್ಳಲು ಕೆಲಸ ಮಾಡುತ್ತಿದ್ದು ಕಂಡು ಖೇದವಾದರೂ ಹೆಮ್ಮೆಯೂ ಆಯಿತು. ಆಕೆ ಹೇಳಿದ ಮ್ಯಾಂಚೋ ಸೂಪು, ವೆಜ್ ಬಾಲ್, ಗಾರ್ಲಿಕ್ ರೋಟಿ-ಕರಿ, ಫ್ರೈಡ್ ರೈಸ್ ಊಟ ಮಾಡಿದೆವು. ಎಲ್ಲವೂ ಸ್ವಾದಿಷ್ಟವಾಗಿದ್ದವು.

ವಿಸ್ಮಯವೊಂದು ಘಟಿಸಿತು
ಊಟದ ಬಳಿಕ ವಿನೀತ್ ಓದಿದ್ದ ಇಲಿನೋಯ್ ವಿಶ್ವವಿದ್ಯಾಲಯದ, ಸ್ಟುವರ್ಟ್ ಸ್ಕೂಲ್ ಆಫ್ ಬಿಸಿನೆಸ್ ಕಾಲೇಜಿಗೆ ಕರೆದೊಯ್ದ. ಕಾಲೇಜಿನ ಬಾಗಿಲು ಹಾಕಲು ಐದಾರು ನಿಮಿಷ ಮಾತ್ರ ಉಳಿದಿತ್ತು. ಮಗ ಸೆಕ್ಯೂರಿಟಿ ಅಧಿಕಾರಿಗಳ ಬಳಿ “ಅವನ ಐಡಿ ಕಾರ್ಡ್ ತೋರಿಸಿ, ನನ್ನ ಪೇರೆಂಟ್ಸ್‌ಗೆ ಕಾಲೇಜು ತೋರಿಸಲು ಅನುಮತಿ ಕೊಡಿ ” ಎಂದು ವಿವರಿಸಿದಾಗ, ಅವರು ಕಾಲೇಜಿನ ಒಳಗೆ ಹೋಗಲು ಅನುಮತಿಸಿದರು. ಅವನು ಸಂಭ್ರಮದಿಂದ ಅವನ ಸೆಮಿನಾರ್ ಕೊಠಡಿಗಳನ್ನು, ಲೈಬ್ರರಿಯನ್ನು ತೋರಿಸಿದ. ನಮ್ಮವರು ವಾಶ್ ರೂಮಿಗೆ ಹೋದಾಗ, ಮಗನೂ ಅವರ ಹಿಂದೆಯೂ ಹೋಗಿದ್ದ. ನಾನೊಬ್ಬಳೆ ಅಲ್ಲಿದ್ದ ಸೋಫಾ ಮೇಲೆ ಕುಳಿತು, ಅಲ್ಲಿದ್ದ ಡಿಸ್‌ಪ್ಲೇ ಬೋರ್ಡ್ ನೋಡ್ತಾ ಇದ್ದೆ. ಆಗ ಘಟಿಸಿತೊಂದು ಚಮತ್ಕಾರ! ನನ್ನ ಮಗನಿಗೆ ಪುರಸ್ಕಾರ ಮಾಡಿದ್ದ ಫೋಟೋ ಡಿಸ್‌ಪ್ಲೇ ಬೋರ್ಡಿನಲ್ಲಿ ಕಾಣಿಸಿತು. ಸಂತಸದಿಂದ ಅಕ್ಷರಶಃ ಕುಣಿದಾಡುವಂತಾಯಿತು. ಅವನ ಗ್ಯಾಜ್ಯೂಯೇಷನ್ನಿಗೆ ಹೋಗಿಲ್ಲ ಎಂಬ ನೋವು ಆ ಕ್ಷಣದಲ್ಲಿ ಮಾಯವಾಯಿತು. ಒಡನೆಯೇ ಬ್ಯಾಗಿನಲ್ಲಿದ್ದ ಫೋನ್ ತೆಗೆದು ಆ ಫೋಟೋ ಕ್ಲಿಕ್ಕಿಸಿದೆ. ೨೦-೩೦ ಸೆಕೆಂಡುಗಳಲ್ಲಿ ಇಷ್ಟು ನಡೆದುಹೋಯಿತು. ಮಗನೊಡನೆ ನಮ್ಮವರು ಬರೋಹೊತ್ತಿಗೆ ಬೇರೊಂದು ಫೋಟೋ ಬಂದಿತ್ತು. ಖುಷಿಯಿಂದ ಕಂಪಿಸುತ್ತ, ಭಾಷ್ಪ ತುಂಬಿದ್ದ ನನ್ನನ್ನು ಕಂಡು ” ಯಾಕೆ ಹೀಗಿದ್ದೀಯ? ಅಂತಹದ್ದು ಏನಾಯ್ತು” ಎಂದ್ರು.
” ವಿನೀತ್ ಫೋಟೋ ಬಂದಿತ್ತು. ಕಾಲೇಜು ಮುಗಿಸಿ ಎರಡು ವರ್ಷ ಆದ್ರೂ ಅವನ ಫೋಟೋ ಡಿಸ್ ಪ್ಲೇ ಆಯ್ತು. ಅದೇನೋ ಖುಷಿ” ಎಂದು ಫೋಟೋ ತೋರಿಸಿದೆ. ಎಂತಹ ಕಾಕತಾಳೀಯ, ಕಾಲೇಜು ಮುಚ್ಚುವ ವೇಳೆಗೆ ಹೋದರೂ ಅದಮ್ಯ ಆನಂದದ ಕ್ಷಣ ಸಿಕ್ಕಿತಲ್ಲ” ಎನಿಸಿತು.
ನಮ್ಮತ್ತ ಬಂದ ದಢೂತಿ ಸೆಕ್ಯೂರಿಟಿ ಅಧಿಕಾರಿಗಳು ಜೊತೆಗೆ ಕಾಣುವಂತೆ ಗನ್ ಇಟ್ಟುಕೊಂಡಿದ್ದ ಅವರುಗಳನ್ನು ಕಂಡು ಸ್ವಲ್ಪ ದಿಗಿಲಾಯಿತು. ” ಸಮಯ ನಾಲ್ಕು ಗಂಟೆಯಿತು, ಬೇಗನೆ ನೋಡಿ. ನಾಲ್ಕು ಗಂಟೆಗೆ ಲಾಕ್ ಟೈಮ್ ನೋಟ್ ಆಗಬೇಕು” ಎಂದು ಅವಸರಿಸಿದರು. ಕೆಳಗಿಳಿದು ಬಂದಾಗ 4.10 ಆಗಿಯೇ ಹೋಗಿತ್ತು. ಸೆಕ್ಯೂರಿಟಿ ತಂಡಕ್ಕೆ ಧನ್ಯವಾದ ತಿಳಿಸಿ ಹೊರ ಬಂದೆವು. ದಾರಿಯುದ್ದಕ್ಕೂ ಮತ್ತಷ್ಟು ಫೋಟೋ ತೆಗೆದುಕೊಂಡೆವು. ಮಗ ಕಾಲೇಜಿನಿಂದ ರೂಮಿಗೆ ಹೋಗುವ ಮಾರ್ಗ ಮಧ್ಯೆ ನಮಗೆ ಮಾತನಾಡುತ್ತಿದ್ದ ತಾಣಗಳನ್ನು ತೋರಿಸಿ ಸಂಭ್ರಮಿಸಿದ.
ಸ್ಟಾರ್ ಬಕ್ಸ್‌ನಲ್ಲಿ ಕಾಫಿ ಕುಡಿಯಿರಿ ಎಂದು ಅಲ್ಲಿಗೆ ಕರೆದೊಯ್ದ. ಅದಕ್ಕೂ ದೊಡ್ಡ ಸಾಲಿತ್ತು. ಅಲ್ಲಿಯೇ ಕಾಫಿ ಬೀಜ ಹುರಿದು, ಪುಡಿಮಾಡಿ ಅದರಿಂದ ಕಾಫಿ ಮಾಡಿಕೊಟ್ಟದ್ದನ್ನು ಕುಡಿಯುವ ಅವಕಾಶಕ್ಕಾಗಿ ಮುಗಿ ಬಿದ್ದಿದ್ದರು ಕಾಫಿ ಪ್ರಿಯರು. ಸ್ವಾದಿಷ್ಟ ಕಾಫಿ ನಮ್ಮ ಚಿಕ್ಕಮಗಳೂರನ್ನು ನೆನಪಿಸಿಕೊಳ್ಳುವಂತೆ ಮಾಡಿತು.
ಅಂದು ರಾತ್ರಿ ಎಂಟೂವರೆಗೆ Nashville( Tennessee state) ಗೆ ವಿಮಾನ ಏರಬೇಕಿತ್ತು ಹಾಗಾಗಿ ಸಂಜೆ ಏಳು ಗಂಟೆಯ ಹೊತ್ತಿಗೆ ನಾವು ವಿಮಾನ ನಿಲ್ದಾಣ ತಲುಪಬೇಕಿತ್ತು. ಹಾಗಾಗಿ ತಡಮಾಡದೆ ರೂಮಿನ ಕಡೆ ಹೊರಟೆವು. ಕೈಕಾಲು ಮುಖ ತೊಳೆದು ಸಿದ್ಧವಾದೆವು. ಬ್ಯಾಗೇಜ್ ತೆಗೆದುಕೊಂಡು ಸಿದ್ಧವಾಗಿ ವಿಮಾನ ನಿಲ್ದಾಣದ ಕಡೆ ಮುಖಮಾಡಿದೆವು.
ಅಷ್ಟರಲ್ಲಿ ಒಂದು ಅಘಾತಕಾರಿ ವಿಷಯ ಬಂತು. ತಿಂಗಳ ಹಿಂದಷ್ಟೇ ಮಾತನಾಡಿಸಿ ಬಂದಿದ್ದ ದೊಡ್ಡಪ್ಪನವರ ಮಗ ಇನ್ನಿಲ್ಲ ಎಂದು ಸುದ್ದಿ ಬಂತು. ಅಯ್ಯೋ ವಿಧಿಯೇ.. ಇದೇನು ನಿನ್ನಾಟ ಎಂದು ಕೊಂಡೆ. ಆಪ್ತನಾದ ಅಣ್ಣನ ಅಂತಿಮ ದರ್ಶನ ನನಗೆ ಇಲ್ಲವಾಯ್ತು. ವಿಡಿಯೋ ಮೂಲಕ ದರ್ಶನ ಮಾಡಲಾಯ್ತು. ಕಾದಿದ್ದು ಕರೆದೊಯ್ದನೇ ಜವರಾಯ ಎಂದು ಈಗಲೂ ಎನಿಸಿದ್ದು.
ಜೀವನ ಜೋಕಾಲಿ ಹೀಗೆಯೇ ಬೆಳಗಿನಿಂದ ಖುಷಿಯಾಗಿದ್ದವರಿಗೆ ಸಂಜೆಯಾಗುತ್ತಿದ್ದಂತೆ ನೋವಿನ ಸುದ್ದಿ ಕೊಟ್ಟ.
(ಮುಂದುವರೆಯುವುದು)
ಹಿಂದಿನ ಸಂಚಿಕೆಗಳು :
- ಕಮಲಾಕ್ಷಿ ಸಿ ಆರ್
