ಕತೆಗಾರ್ತಿ ವಿಜಯಶ್ರೀ ಹಾಲಾಡಿ ಅವರು ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಕೃತಿಯಲ್ಲಿ ಕುಂದಾಪ್ರ ಕನ್ನಡದ ಬಳಕೆ ಮಾಡಿದ್ದು, ಮೂಲತಃ ಕವಯತ್ರಿಯವರು ತಮ್ಮ ಕವಿತೆಗಳಲ್ಲಿಯೆ ಅಡಗಿ ಹೋಗಿರಬಹುದಾದ ಭಾವಗಳನ್ನು ಕಥೆಗಳಲ್ಲಿ ಗಟ್ಟಿಗೊಳಿಸಲು ‘ಉಮ್ಮಲ್ತಿ..’ ಯಂತಹ ಕಥೆಗಳೂ ಇಲ್ಲಿವೆ. ಈ ಕೃತಿಯ ಕುರಿತು ಲೇಖಕರಾದ ವಿಜಯೇಂದ್ರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಉಮ್ಮಲ್ತಿ ಗುಡಿಯ ಸಾಕ್ಷಿ
ಲೇಖಕರು : ವಿಜಯಶ್ರೀ ಹಾಲಾಡಿ
ಪ್ರಕಾರ : ಕತೆಗಳು
ಒಂದು ಸಾಹಿತ್ಯ ಕೃತಿ ರಚಿಸುವವರು ಅದನ್ನು ಮುಗಿಸುವವರೆಗು ಎಷ್ಟು ಸಾರಿ ಬರೆದು,ಅಳಿಸಿ ಮತ್ತೆ ಬರೆದು ಮತ್ತೆ ಅಳಿಸಿ ಪೂರ್ತಿಗೊಳಿಸಿರುತ್ತಾರೊ ಅವರಿಗೇ ಗೊತ್ತು.ಇಷ್ಟಾಗಿಯೂ ಬರೆಹದ ಸಂಪೂರ್ಣ ತೃಪ್ತಿ ಎಂಬುದು ಎಷ್ಟು ಬಾರಿ ಹೊಡೆದು ಹಾಕಿದಾಗ ದೊರಕುತ್ತದೆ ಎಂದು ಯಾರಿಗಾದರು ಹೇಳಲಾಗುತ್ತದೆಯೇ? ಈ ಅವಿರತ ಶ್ರಮದ ಬಗ್ಗೆ ಓದುವವ ಯೋಚಿಸಿದರೆ ಓದಿಗೂ ‘ಒಂದು ತಯಾರಿ’ ಬೇಕೆಂದು ಅವನಿಗೆ ಅನ್ನಿಸಬಹುದು.
ನಾನು ಯಾವುದೇ ಓದನ್ನು ಆರಂಭಿಸುವಾಗ ಇದನ್ನು ನೆನಪಿಸಿಕೊಳ್ಳುತ್ತೇನೆ.ಒಂದು ಜವಾಬ್ದಾರಿಯಾಗಿಯೂ ಕೂಡ! ಆಗ ಲೇಖಕರ ದೃಷ್ಟಿಯಿಂದಲೂ ಕೃತಿಯನ್ನು ನೋಡುವ ಸಹ್ಯ ವಾತಾವರಣ ಸಿದ್ಧವಾಗುತ್ತದೆ ಎಂದು ನಾನು ನಂಬುತ್ತೇನೆ.
ಶ್ರೀಮತಿ ವಿಜಯಶ್ರೀ ಹಾಲಾಡಿಯವರ ‘ಉಮ್ಮಲ್ತಿ…’ ಓದುವಾಗ ಮತ್ತೊಮ್ಮೆಇದೆಲ್ಲ ನೆನಪಾಗುತ್ತದೆ. ಹೆಚ್ಚುಕಡಿಮೆ ನಮ್ಮಷ್ಟೇ ಸಂಖ್ಯೆಯಲ್ಲಿ, ನಮ್ಮದೇ ಜೊತೆಯಲ್ಲಿ — ಅದೂ ನಮ್ಮ ನಮ್ಮಮನೆಗಳಲ್ಲಿಯೇ –ಇರುವ,ನಮಗಿಂತಲೂ ಹೆಚ್ಚಿನ ಆಸಕ್ತಿಯಿಂದ ಬದುಕಿನಲ್ಲಿ ತೊಡಗಿಕೊಳ್ಳುವ ಮಹಿಳೆಯರ ಬಗೆಗೆ (ಇವರು ಸಂಸಾರ ಬಿಟ್ಟು ಓಡಿ ಹೋಗುವವರಲ್ಲ. ಏನಿದ್ದರೂ ಅದು ಗಂಡಸರಿಗೇ!) ನಮಗೆ ಎಷ್ಟು ತಿಳಿದಿದೆ? ತಿಳಿಯಲು ನಾವು ಏನು ಮಾಡಿದ್ದೇವೆ? ಅಥವಾ ಏನಾದರು ಮಾಡಿದ್ದೇವಾ?

ಈ ಆತ್ಮಪರಿಶೀಲನೆಯ ಪ್ರಶ್ನೆಯನ್ನು ಉಮ್ಮಲ್ತಿಯ ಕಥೆಗಳು ಮತ್ತೆ ಮತ್ತೆ ಕೇಳಿದಂತೆ ಭಾಸವಾಗುತ್ತದೆ. ಇದರಲ್ಲಿಆಧುನಿಕ-ಹಳ್ಳಿಗಾಡಿನ; ಶಿಕ್ಷಿತ-ಅಶಿಕ್ಷಿತ;ಮಕ್ಕಳ, ಹರೆಯದ ಮತ್ತು ವಯಸ್ಸಾದ ಹೆಣ್ಣು ಜೀವಗಳ ಹಲವು ಮಗ್ಗಲುಗಳ ಕಥೆಗಳಿವೆ.ಲೈಂಗಿಕ ಶೋಷಣೆಯೂ ಸೇರಿದಂತೆ ಅಂದಿನಿಂದ ಇಂದಿನವರೆಗು ಮಹಿಳೆಯರ ಜಗತ್ತು ಎದುರಿಸಿಕೊಂಡು ಬಂದ ವಿಧವಿಧದ ಸಂಕಷ್ಟಗಳ ದಾರುಣ ಚಿತ್ರಣ ಹಾಗು ತಮ್ಮದೆ ವಿಧದಲ್ಲಿ ಅದನ್ನು ಎದುರಿಸಿದ,ಪ್ರತಿಕ್ರಯಿಸಿದವರ ಚಿತ್ರಣವಿದೆ. ಹಗುರವಾಗಿ ಮಾತಾಡುವುದಾದರೆ ಇವುಗಳನ್ನು ಆರಾಮಾಗಿ ‘ಸ್ತ್ರೀವಾದ’ದ ಫಾರ್ಮುಲಾಕ್ಕೆ ನಿಲುಕಿಸಿ ಅದೇ ದಾರಿಯಲ್ಲಿ ಇದನ್ನು ವಿಶ್ಲೇಷಿಸುತ್ತ ಸಾಗಿ ಬಿಡಬಹುದು.ಆದರೆ ಹಾಗೆ ಮಾಡಲಾಗದೆಂದು ಇಲ್ಲಿಯ ಕಥೆಗಳು ಗಟ್ಟಿಯಾಗಿ ಸೂಚಿಸುತ್ತವೆ.ತನ್ನ ಬಗೆಗಿನ ಸ್ಪಷ್ಟ ಅರಿವು,ಅಸ್ಮಿತೆಗಳ ಆಧಾರದ ಮೇಲೆ ಹೋರಾಟ ಮಾಡಿಯಾದರು ಸಮಾನತೆ ಪಡೆಯಬೇಕೆನ್ನುವ ಸ್ತ್ರೀವಾದದಲ್ಲಿ ದೋಷವೇನೂ ಇಲ್ಲ. ಆದರೆ ಲೇಖಕಿಗೆ ಇದನ್ನು ಇಷ್ಟಕ್ಕೆ ಸೀಮಿತಗೊಳಿಸುವ ಯೋಚನೆ ಇದ್ದಂತಿಲ್ಲ.ಸಮಾನತೆಗಿಂತಲೂ ಮಿಗಿಲಾಗಿ, ಜೊತೆಗೇ ಬಾಳಬೇಕಾದಾಗ ಇರಬೇಕಾದ ನೋಟದ ಬಗೆಗೆ ಇಲ್ಲಿ ಒತ್ತು ಬಿದ್ದಂತಿದೆ.ಹೀಗಾಗಿ ಇಲ್ಲಿಯ ಕಥೆಗಳು ಈ ಹೋರಾಟದ ಮಾರ್ಗವನ್ನು ಅಷ್ಟಾಗಿ ಅನುಸರಿಸದೆ ದ್ವೇಷ ಬೇಳೆಸದ ತಾಯಿ ತೋರುವ ಮಮತೆಯ ದಾರಿಯನ್ನು ಹೆಚ್ಚಾಗಿ ಅನುಸರಿಸಿವೆ. ಸಾವು – ಬದುಕಿನ ಗಳಿಗೆಯಲ್ಲಿ ಕೂಡ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಪಾತ್ರಗಳು ತಾಳ್ಮೆ,ಬುದ್ಧಿವಂತಿಕೆಯನ್ನು ತೋರಿವೆ. ಉದಾಹರಣೆಗೆ: ದರ್ಖಾಸು ಮನೆಯ ಬೂದ ಮತ್ತು ವಾಸಯ್ಯನ ಮೇಲೆ ಮಾಣಿಕಿಬಾಯಿ ಮಾಡುವ ದೈಹಿಕ ಹಲ್ಲೆ. ಕಥೆ: ಮಾಣಿಕಿಬಾಯಿ; ಮತ್ತು ಹಡೆಗಂಡುಗಳ ಮೇಲೆ ದೇವೀಬಾಯಿಯ ಗ್ಯಾಂಗ್ ಮಾಡುವ ವ್ಯವಸ್ಥಿತ ದಾಳಿ. ಕಥೆ: ಗರಡಿ ಬೆಟ್ಟಿನ ದೊಂದಿ ಬೆಳಕಲ್ಲಿ.ಇದು ಮಾತ್ರ ಸ್ಪಷ್ಟವಾದ ಒಂದು ಅನಿವಾರ್ಯ ಸಂದರ್ಭ. ಇದನ್ನು ಬಿಟ್ಟರೆ, ಕಥೆಗಳಲ್ಲಿ ಬರುವ ಮಹಿಳೆಯರ ಹಿನ್ನೆಲೆಗಳನ್ನು ಗಮನಿಸಿದಾಗ ತಮ್ಮ ಮಿತಿಗಳ ಅರಿವಿನಿಂದಾಗಿ ಆ ಪಾತ್ರಗಳು ತಮ್ಮ ಬದುಕಿಗಾಗಿ ವೈರ,ದ್ವೇಷಗಳನ್ನು ಬಿಟ್ಟುಕೊಡುವುದನ್ನು ತಂತ್ರವಾಗಿ ಕೂಡ ಮಾಡಿಕೊಂಡಿರಲು ಸಾಧ್ಯ ಎನಿಸುತ್ತದೆ.( ಗಾಂಧಿಯ ಅಹಿಂಸೆ ಕೂಡ ಒಂದು ತಂತ್ರ ಎಂದು ಹೇಳುತ್ತಾರೆ). ಇದರಲ್ಲಿ ಸಹಜ ಅಸಹಾಯಕತೆ ಕೂಡ ಸೇರಿಕೊಂಡಿರಬಹುದು.ಅಷ್ಟೊಂದು ಓದಿನ ಹಿನ್ನೆಲೆ ಇರದ ಪಾತ್ರಗಳು ದುಡಿಮೆಯ ಮೂಲಕ ಗಂಡಿನ,ಸಮಾಜದ ದಬ್ಬಾಳಿಕೆಯನ್ನು ತಡೆದುಕೊಳ್ಳಲು ನೋಡುತ್ತವೆ. ಇದರಲ್ಲಿ ಮಕ್ಕಳ ಮೇಲಿನ ಪ್ರೀತಿ, ಜವಾಬ್ದಾರಿ ಮತ್ತು ಭವಿಷ್ಯದ ಚಿಂತನೆಯ ಅರಿವು ಅಡಗಿರುವ ಸೂಚನೆಗಳಿದ್ದಂತಿವೆ. ವಿದ್ಯಾವಂತ,ಆರ್ಥಿಕ ಸ್ವಾವಲಂಬನೆ ಪಡೆದ ಆಧುನಿಕ ಹೆಣ್ಣುಮಕ್ಕಳು ಬದುಕನ್ನು ಎದುರಿಸುವಲ್ಲಿ ತೋರುವ ಸ್ಪಷ್ಟತೆ, ದೃಢತೆಗಳಿಗೆ ಸಾಧನೆಯ ಮೂಲಕ ಅವರು ತಲುಪಿದ ಸ್ಥಾನವೇ ಕಾರಣ ಎಂಬುದನ್ನು ಹಲವು ಕಥೆಗಳು ಸಾರುತ್ತವೆ.( ಉದಾ: ಹೊಳೆ,ಗೆಜ್ಜೆ ಕಥೆಗಳು). ಮೇಲ್ಜಾತಿಯಲ್ಲಿ ಹುಟ್ಟಿಯೂ ಈ ಅನುಕೂಲ ಇರದ ಕಾರಣಕ್ಕೆ ಬದುಕಿನ ದಾರುಣತೆಯಲ್ಲಿ ಸಿಲುಕುವ ಹೆಣ್ಣುಗಳನ್ನು ಗಮನಿಸಿದಾಗ ಹೆಣ್ಣು ಯಾವ ಜಾತಿಯಲ್ಲಿ ಜನ್ಮ ತಳೆದರೂ ಶೋಷಣೆಯನ್ನು ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂದೇ ಅನಿಸುತ್ತದೆ. ಉದಾಹರಣೆಗೆ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಕಥೆಯ ಭಾಗೀರಥಿ,ಅವಳ ಮಕ್ಕಳು ಮತ್ತು ‘ಪಾರ್ತಿ ಚಿಕ್ಕಿ’ ಕಥೆಯ ಪಾರ್ವತಿ.
ಈ ಸಂಕಲನದ ಕಥೆಗಳಲ್ಲಿನ ಸ್ಥಾಯೀ ಭಾವವೆಂದರೆ ‘ಆತಂಕ’ ಮತ್ತು ಅದು ಹರಡುವ ದಟ್ಟ ವಿಷಾದ.ಪ್ರತಿ ಆತಂಕಕ್ಕೂ ಭಿನ್ನ ಸ್ವರೂಪವಿರುವುದರಿಂದ ಪ್ರತಿ ಕಥೆಯೂ ವಿಭಿನ್ನತೆಯನ್ನು ಹೇಳುತ್ತದೆ.’ಉಮ್ಮಲ್ತಿ..’ ಹಾಗು ‘ಪಾರ್ತಿ ಚಿಕ್ಕಿ’ ಗಳ ನಾಯಕಿಯರಿಗೆ ಮತ್ತು ‘ಕೆಮ್ಮಣ್ಣು’ ವಿನ ಸಂಜೀವಣ್ಣನಿಗೆ ಎದುರಾಗುವ ಆತಂಕ ಅವರನ್ನು ಒತ್ತಡಕ್ಕೆ,ಮಾನದಿಕ ಕಾಯಿಲೆಗೆ ಕಡೆಗೆ ಸಾವಿಗೆ ದೂಡಿದರೆ (ಒಂದುಕಡೆ ಇದನ್ನು ಚಿಕಿತ್ಸೆಯಾಗಿ ಕಂಡುಕೊಳ್ಳುವ ದುರಂತ ಕೂಡ ಇದೆ) ‘ಬುತ್ಯನ ಬೆಂಗಳೂರು ಪ್ರಯಾಣ’ ಮತ್ತು ‘ಮಹಾ ಪ್ರಸ್ಥಾನ’ ಗಳು ಆಧುನಿಕ ಬದುಕು ಧುತ್ತನೆ ನಿರ್ಮಿಸುವ ಆತಂಕವನ್ನು, ಕುಟುಂಬಗಳು ಎದುರಿಸುವ ಸಂಕಟವನ್ನು ಪ್ರಸ್ತಾಪಿಸುತ್ತದೆ.ಆಧುನಿಕ ಕಾಲದಲ್ಲು ಕಾರ್ಯ ಕಾರಣ ಸಂಬಂಧದ ಮೂಲಕ ಅಪ್ಪಳಿಸುವ ಆತಂಕ ‘ಏಕತಂತು’. ವಿನಲ್ಲಿದೆ. ದುರಂತವೆಂದರೆ ಲೈಂಗಿಕತೆಯನ್ನು ಕೂಡ ಆಧುನಿಕ ಜಗತ್ತಿನ ಸರಕಾಗಿಸಲು ನೋಡುವ ‘ಗರಡಿ ಬೆಟ್ಟದ…’ ಹಾಗು ‘ ಚನ್ನೆಮಣೆ’ ಕಥೆಗಳು ಹುಟ್ಟಿಸುವ ಆತಂಕ ಒಂದೇ ಆದರೂ ಸಂಘಟಿತ ಹಾಗು ಜಾಣತನದಿಂದ ಅದನ್ನು ನಿಭಾಯಿಸಿದ ರೀತಿ ಹೆಣ್ಣುಮಕ್ಕಳಿಗೊಂದು ಭರವಸೆಯನ್ನು ನೀಡುತ್ತದೆ. ಬಾಲ್ಯ ಕಾಲದ ಲೈಂಗಿಕ ಆಘಾತ ತರುವ ಆತಂಕ ಬದುಕಿನುದ್ದಕ್ಕೂ ಕಾಡುವುದನ್ನು ‘ವಕ್ರ ಕೋಡಿನ ಬಸವ’ ಕಥೆ, ಇಂಥವುಗಳಿಗೆ ಪರಿಹಾರವೇ ಇಲ್ಲವೇನೊ ಎಂಬ ಸಂದೇಹದಲ್ಲಿ ಮುಗಿಸುತ್ತದೆ. ಈ ಹಲವು ಕಥೆಗಳು ಅನೂಚಾನವಾಗಿ ಹೆಣ್ಣಿನ ಮೇಲಾಗುತ್ತ ಬಂದ ದೈಹಿಕ, ಮಾನಸಿಕ ಅತ್ಯಾಚಾರಗಳನ್ನು ಮನನೀಯವಾಗಿ ಚಿತ್ರಿಸುತ್ತವೆ.
ತನ್ನ ಅಪರ ವಯಸ್ಸಿನಲ್ಲೂ ಆರೈಕೆಯ ಅಗತ್ಯ ಇರುವ ಅಂತಹದೇ ಗಂಡಿಗೆ ಪ್ರೀತಿ ಎರೆಯುವ ‘ದೇವಮ್ಮಕ್ಕ’ ಈ ಸಂಕಲದ ಸ್ವಭಾವದಿಂದ ಬೇರೆಯಾಗಿ ನಿಲ್ಲುವ ಒಳ್ಳೆಯ ಕಥೆ.ಹೆಣ್ಣಿನ ಪ್ರೀತಿಯಲ್ಲಿ ಅಡಗಿರುವ ತಾಯ್ತನವನ್ನು ಇದು ಪ್ರಧಾನವಾಗಿ ಕಾಣಲು ನೋಡುತ್ತದೆ.
***
ಲೇಖಕಿ ಇಲ್ಲಿಯ ಕಥೆಗಳನ್ನು ಬಹುತೇಕ ತಾಳ್ಮೆಯಿಂದ ನಿರ್ವಹಿಸಿದ್ದಾರೆ. ದುರಂತಗಳಿಗೆ ಹೊಣೆಗಾರರನ್ನಾಗಿ ಮಾಡಲೆಂದೇ ಯಾರನ್ನೂ ಹುಡುಕುವುದಿಲ್ಲ.ಕುತೂಹಲ ಹುಟ್ಟಿಸಲೆಂದೇ ಯಾವ ತಂತ್ರವನ್ನೂ ಮಾಡುವುದಿಲ್ಲ. ಆದರೆ ನಿಲ್ಲದ ಸಹಜ ಓಟವೇ ಕಥೆಗಳಲ್ಲಿ ಕುತೂಹಲ ಹುಟ್ಟಿಸುತ್ತದೆ.ಕುಂದಾಪ್ರ ಕನ್ನಡದ ಬಳಕೆ ಕಥೆಗಳಿಗೆ ಅಗತ್ಯದ ವಾತಾವರಣ ಒದಗಿಸಿ ಅವುಗಳನ್ನು ಮತ್ತಷ್ಟು ಸುಂದರಗೊಳಿಸಿದೆ.ಮೂಲತಃ ಕವಯತ್ರಿಯಾದ ಇವರು ತಮ್ಮ ಕವಿತೆಗಳಲ್ಲಿಯೆ ಅಡಗಿ ಹೋಗಿರಬಹುದಾದ ಭಾವಗಳನ್ನು ಕಥೆಗಳಲ್ಲಿ ಗಟ್ಟಿಗೊಳಿಸಲು ನೋಡಿದಂತೆ ಅನಿಸುವ ‘ಉಮ್ಮಲ್ತಿ..’ ಯಂತಹ ಕಥೆಗಳೂ ಇಲ್ಲಿವೆ.

***
ಈ ಕಥೆಗಳ ಬಗ್ಗೆ ಇಷ್ಟು ಮಾತ್ರ ಹೇಳಬೇಕೇ? ಇಲ್ಲ. ಇನ್ನೂ ಹೇಳಬಹುದು ಮತ್ತು ಹೇಳಬೇಕು.ಹೆಣ್ಣುಗಳ ಬದುಕಿನಲ್ಲಿ ಬರುವ,ಬಾರದ ಒಳ್ಳೆಯ ಗಂಡುಗಳೂ ಇರುತ್ತವೆ. ಆದರೆ ಒಟ್ಟು ಕಥೆಗಳಲ್ಲಿ ಅದರ ಪ್ರಸ್ರಾಪ,ಆ ನೋಟದ ಕೊರತೆ ಇದ್ದಂತೆ ತೋರುತ್ತದೆ.ಅಥವಾ ಪ್ರಮಾಣ ಕಡಿಮೆ. ಅಥವಾ ಈ ಸಂಕಲನದ ಉದ್ದೇಶ ‘ಸದ್ಯಕ್ಕೆ’ ಅಷ್ಟೇ ಆಗಿರಲೂಬಹುದು! ಏಕೆಂದರೆ ಮುಂದಿನ ಕಥೆಗಳಲ್ಲಿ ಅದು ಸಾಧ್ಯವಾಗುವ ಸೂಚನೆಗಳನ್ನು ‘ಗೆಜ್ಜೆ’ ಕಥೆ ನೀಡುತ್ತದೆ.ಅದರಲ್ಲಿ ಬರುವ ಶಂಕ್ರಯ್ಯ,ಸಂದೀಪ ತುಂಬಾ ಒಳ್ಳೆಯ ಗಂಡುಗಳು.’ಪಾರ್ತಿಚಿಕ್ಕಿ’ ಯ ಅಪ್ಪಿ ಅಥವಾ ಅಪೂರ್ವ ಅತ್ಯಂತ ಅಂತಃಕರುಣದ ಗಂಡು. ‘ವಕ್ರಕೋಡಿನ ಬಸವ’ ದ ರವಿಪ್ರಕಾಶನ ಮೇಲೂ ಭರವಸೆ ಇಡಬಹುದು.
ಕೊನೆಯದಾಗಿ, ಕೆಮ್ಮಣ್ಣು ಕಥೆಯಲ್ಲಿ ಬರುವ ಸಂಜೀವಣ್ಣನ ಗಂಡುಮಕ್ಕಳ ಬಗ್ಗೆ. ಅವರು ಓದುಗರ ದೃಷ್ಟಿಯಲ್ಲಿ ಅಪಾರ್ಥಕ್ಕೊಳಗಾಗುವ ಸಾಧ್ಯತೆ ಇದೆ.ಅವರು ಕೂಡ ಈ ಜಾಗತೀಕರಣದ ಒಂದು ಭಾಗವೇ.ದುಡ್ಡು ಬದುಕಿನ ಎತ್ತರದ ಭಾಗವಾಗಿರುವ ಈ ದಿನಗಳಲ್ಲಿ ಭಾವನಾತ್ಮಕತೆಯನ್ನು ನೆಚ್ಚಿಕೊಳ್ಳಬೇಕೆಂಬುದು ಅವಾಸ್ತವದ ನಿರೀಕ್ಷೆ ಎನಿಸೀತೇನೊ! ವಾತಾವರಣವೆ ಇಲ್ಲಿ ಖಳನಾಯಕ ಮತ್ತು ಈ ಕಾಲದಲ್ಲಿ ಬದುಕಿರುವ ನಾವೆಲ್ಲರೂ ಉತ್ತರದಾಯಿಗಳು.
ಇಂತಹ ಒಂದೆರಡು ಮರು ಆಲೋಚನೆಗಳನ್ನು ಪರಿಗಣಿಸಿದಾಗಲೂ ಇದೊಂದು ಒಳ್ಳೆಯ ಸಂಕಲನ. ಸಾಹಿತ್ಯ ರಚಿಸುವುದು ಸೃಷ್ಟಿಕಾರ್ಯ.ಎಲ್ಲರಿಗು ಒಳ್ಳೆಯ ಮಕ್ಕಳನ್ನೇ ಹೆರುವ ಇಚ್ಛೆ ಇರುತ್ತದೆ. ಮೊದಲ ಸಂಕಲನದಲ್ಲಿಯೇ ವಿಜಯಶ್ರೀಯವರಿಗೆ ಇಲ್ಲಿ ಇದು ಸಾಧ್ಯವಾಗಿದೆ ಎಂಬುದೇ ಸಂತೋಷದ ಸಂಗತಿ. ಅವರಿಗೆ ಅಭಿನಂದನೆಗಳು. ಈ ಕಥೆಗಳು ಜನರನ್ನು ತಲುಪುವಂತಾಗಲಿ.
- ವಿಜಯೇಂದ್ರ ಪಾಟೀಲ
