– ಶಾಲಿನಿ ಪ್ರದೀಪ್
ak.shalini@outlook.com
ಹಾಫ್ ಪ್ಯಾಂಟ್ ಹುಡುಗ ಬಸ್ ಹತ್ತಲಿ, ಚಿತ್ರಮಂದಿರವನ್ನು ಹೋಗಲಿ ಅವನ ಟಿಕೆಟ್ ಹಾಫ್ ಆಗಿಯೇ ಇರುತ್ತೆ. ಅದೇ ಒಬ್ಬ ಹಾಫ್ ಪ್ಯಾಂಟ್ ಹುಡುಗ ಸಿನಿಮಾದಲ್ಲಿ ಅಭಿನಯಿಸಿದಾಗ ಆ ಚಿತ್ರ ಮಂದಿರವೆಲ್ಲಾ ಫುಲ್ ಆಗುವ ಕಾಲವೊಂದಿತ್ತು. ಆ ಆಫ್ ಪ್ಯಾಂಟ್ ಹುಡುಗ ಮತ್ಯಾರು ಅಲ್ಲ, ನಮ್ಮ ಚಿನಕುರಳಿ ಪಟಾಕಿ ಮಾಸ್ಟರ್ ಆನಂದ. ಮಾಸ್ಟರ್ ಆನಂದ ೧೯೮೯ರಲ್ಲಿ ರವಿಚಂದ್ರನ್ ಅವರ ನಿರ್ದೇಶನದ ‘ಕಿನ್ನರಿ ಜೋಗಿ’ ಸಿನಿಮಾದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಪ್ರತಿಭಾವಂತ ನಟ.
ಚಿತ್ರರಂಗಕ್ಕೆ ಬಂದದ್ದು ಬಹುಶ ತಮ್ಮ ೬ ನೇಯ ವಯಸ್ಸಿನಲ್ಲಿರಬೇಕು. ಆ ವಯಸ್ಸಿನ ಮಕ್ಕಳು ಶಾಲೆಯ ಪಠ್ಯಕ್ರಮದ ಪದ್ಯವನ್ನೇ ಹೇಳಲು ಕಸರತ್ತು ನಡೆಸುತ್ತಾರೆ. ಆದರೆ ಆನಂದಗೆ ಡೈಲಾಗ್ ಹೊಡೆಯುವುದು, ನಟಿಸುವುದು ಎಂದರೆ ನೀರು ಕುಡಿದಷ್ಟು ಸುಲಭ. ಸಿನಿಮಾ ದಿಗ್ಗಜರ ಮುಂದೆ ನಿಂತು ಅವರಿಗಿಂತ ನಾನೇನು ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿದ ಪುಟ್ಟ ಪ್ರಚಂಡಈ ಆನಂದ.
ಆನಂದ ಸಿನಿಮಾ ನೋಡಿದ ಮೇಲೆ ಎಷ್ಟೋ ತಾಯಂದಿರುಗಳು ತಮ್ಮ ಮಕ್ಕಳಿಗೂ, ಆನಂದನಿಗೆ ಹೋಲಿಕೆ ಮಾಡಿ ತಮ್ಮ ಮಕ್ಕಳಿಗೆ ಬೈಯ್ದು, ಬುದ್ದಿಹೇಳಿದ್ದು ಇದೆ. ಆಗ ಮಕ್ಕಳು ಆನಂದನನ್ನು ಕೆಂಗಣ್ಣಿನಿಂದ ನೋಡಿದ್ದು ಇದೆ. ಆದರೆ ಎಷ್ಟೇ ಸಿಟ್ಟಾದರು ಆನಂದನ ಪ್ರತಿಭೆಯ ಮುಂದೆ ಯಾವುದು ಶಾಶ್ವತವಾಗಿ ಉಳಿಯುತ್ತಿರಲಿಲ್ಲ. ‘ಗೌರಿ ಗಣೇಶ’ ಸಿನಿಮಾದಲ್ಲಿ ಅನಂತನಾಗ್ ಅವರ ಜೊತೆ ಬಾಲ ಕಲಾವಿದನಾಗಿ ಸಾಥ್ ನೀಡಿ ಅಲ್ಲಿಯೂ ಸೈ ಎನ್ನಿಸಿಕೊಂಡರು. ಈ ಸಿನಿಮಾ ಯಶಸ್ಸಿಗೆ ಅನಂತ ನಾಗ್ ಹೇಗೆ ಕಾರಣಕರ್ತರೋ, ಅಷ್ಟೇ ಈ ಆನಂದನ ಅಭಿನಯವು ಕಾರಣವಾಗಿತ್ತು. ‘ಗೌರಿ ಗಣೇಶ’ ಸಿನಿಮಾದ ಅಭಿನಯಕ್ಕಾಗಿ ೧೯೯೧-೯೨ ಮತ್ತು ‘ತಾಯಿ ಇಲ್ಲದ ತವರು’ ಸಿನಿಮಾಕ್ಕಾಗಿ ೧೯೯೪-೯೫ ರಲ್ಲಿ ‘ಕರ್ನಾಟಕ ರಾಜ್ಯ ಪ್ರಶಸ್ತಿ’ ಯನ್ನು ಎರಡು ಬಾರಿ ಅತ್ಯುತ್ತಮ ಬಾಲ ನಟನೆಗಾಗಿ ಇವರಿಗೆ ಲಭಿಸಿದ್ದು ಇವರ ಪ್ರತಿಭೆಗೆ ಹಿಡಿದ ಕೈ ಕನ್ನಡಿ.
ಹೀಗೆ ಬಾಲ ಕಲಾವಿದನಾಗಿ ಸಾಕಷ್ಟು ಯಶಸ್ಸನ್ನು ಕಂಡ ಆನಂದ, ಮುಂದೊಂದು ದಿನ ದೊಡ್ಡ ಹಾಸ್ಯಕಲಾವಿದನಾಗುತ್ತಾನೆ ಎಂದು ಜನ ಭವಿಷ್ಯ ನುಡಿದಿದ್ದರು. ಆದರೆ ಆ ಭವಿಷ್ಯ ನಿಜವಾಗಲಿಲ್ಲ. ಆನಂದನಿಗೆ ಸಿನಿಮಾವೇ ಜೀವಾಳಗಿತ್ತು. ಆದರೆ ಚಿತ್ರರಂಗವು ಹೊಸ ಕಲಾವಿದರ ಗುಂಗಿನಲ್ಲಿ ಆನಂದನನ್ನು ದೂರ ಮಾಡಿತ್ತು.
ಮಾಸ್ಟರ್ ಆನಂದ ಬಹು ವರ್ಷಗಳ ಕಾಲ ತೆರೆಯ ಮೇಲೆ ಕಾಣಲಿಲ್ಲ. ನಂತರದ ದಿನಗಳಲ್ಲಿ ‘ಫ್ರೆಂಡ್ಸ್’ ಸಿನಿಮಾದಲ್ಲಿ ಸಣ್ಣ ಪಾತ್ರ ಸೇರಿದಂತೆ ಕಿರುತೆರೆಗಳಿಗೆ ಧಾರಾವಾಹಿ ನಿರ್ದೇಶನ ಮಾಡಿದರು. ಆದರೆ ಅದು ಜನರ ಮೇಲೆ ಅಷ್ಟೊಂದು ಪರಿಣಾಮ ಬೀರಲಿಲ್ಲ. ಕೊನೆಗೆ ಇವರಿಗೆ ಬ್ರೇಕ್ ಸಿಕ್ಕಿದ್ದು ಬಿಗ್ ಬಾಸ್. ಅಲ್ಲಿಂದ ಆನಂದರ ಇನ್ನೊಂದು ಇನ್ನಿಂಗ್ಸ್ ಶುರುವಾಯಿತು. ಈಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕಾಮಿಡಿ ಕಿಲಾಡಿ’ಯಲ್ಲಿ ನಿರೂಪಕರಾಗಿದ್ದಾರೆ.
ಮಾಸ್ಟರ್ ಆನಂದರಿಂದ, ಮಿಸ್ಟರ್ ಆನಂದ ಆಗಿರಬಹುದು ನಿಜ. ಆದರೆ ಅವರಲ್ಲಿನ ಪ್ರತಿಭೆ ಮಾತ್ರ ಬತ್ತಿಲ್ಲ. ಅದೇ ಉತ್ಸಾಹ, ಹುಮ್ಮಸ್ಸು ಅವರ ನಟನೆಯಲ್ಲಿ ಇನ್ನೂ ಕಾಣ್ಣುತ್ತದೆ. ಒಂದು ವೇಳೆ ಕನ್ನಡ ಚಿತ್ರರಂಗ ಆನಂದರ ಪ್ರತಿಭೆಗೆ ಮಣೆ ಹಾಕಿದ್ದರೇ? ಇಂದು ಈ ಆನಂದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರಾಗುತ್ತಿದ್ದರು. ಆದರೆ ಜನ ಇವರ ಮೇಲಿಟ್ಟಿದ್ದ ನಿರೀಕ್ಷೆಯನ್ನು ಜಿತ್ರರಂಗ ಈಡೇರಿಸಿಲ್ಲವಲ್ಲ ಎನ್ನುವುದು ಬೇಸರ.
ಹಿಂದಿನ ಸಿನಿಮಾಗಳಲ್ಲಿ ಎಲ್ಲಾ ಪಾತ್ರಗಳಿಗೆ ಸಮನಾದ ತೂಕವಿರುತ್ತಿತ್ತು. ಮಾಸ್ಟರ್ ಆನಂದನಂತಹ ಪ್ರತಿಭೆಗಳು ಹೊರಬರಲು ಅಂದಿನ ಸಿನಿಮಾ ಕಥೆಗಳು ಒಂದು ಕಾರಣ. ಆದರೆ ಇಂದಿನ ಬಹುತೇಕ ಸಿನಿಮಾಗಳಲ್ಲಿ ಪೋಷಕ, ಬಾಲ ಕಲಾವಿದರು ಹೋಗಲಿ ಕಡೆ ಪಕ್ಷ ನಾಯಕಿಯ ಪಾತ್ರಕ್ಕೂ ಅಷ್ಟೊಂದು ಮಹತ್ವವಿಲ್ಲ. ಕಥೆ ಏನಿದ್ದರೂ ನಾಯಕನ ಸುತ್ತ ಗಿರಗಿಟ್ಲೆ ಆಡುತ್ತಿರುತ್ತದೆ. ಹೀಗಿದ್ದಾಗ ಆನಂದನಂತಹ ಹಾಸ್ಯ ಕಲಾವಿದರು ಬೆಳಕಿಗೆ ಬಾರದೆ ಹೋಗುತ್ತಾರೆ.
ಆನಂದ ‘ಕಾಮಿಡಿ ಕಿಲಾಡಿ’ ಕಾರ್ಯಕ್ರಮವನ್ನು ತನ್ನ ಪ್ರತಿಭೆಗೆ ವೇದಿಕೆಯನ್ನಾಗಿ ಮಾಡಿಕೊಂಡು ತಮ್ಮಲ್ಲಿನ ಕಲೆಯನ್ನು ಹೊರಹಾಕುತ್ತಿದ್ದಾರೆ. ಮೊನ್ನೆ ನಟ ಸಾರ್ವಭೌಮ ರಾಜಕುಮಾರ ಅವರು ಒಂದು ವೇಳೆ ಟೈಟಾನಿಕ್ ಸಿನಿಮಾದಲ್ಲಿ ನಟಿಸಿದ್ದರೆ ಹೇಗಿರುತ್ತಿತ್ತು? ಎಂದು ಸ್ವತಃ ಅವರೇ ಅಭಿನಯಿಸಿ ತೋರಿಸಿದಾಗ ನೋಡುಗರು ಮೂಕ ಪ್ರೇಕ್ಷಕರಾದರು. ಇವರ ನಟನೆಗೆ ಈ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾದ ನವರಸ ನಾಯಕ ಜಗ್ಗೇಶ್ ಕೂಡಾ ಪೆಚ್ಚಾದರು. ಎಲ್ಲೋ ಇರಬೇಕಾದ ಹುಡುಗ ಎಲೆಮರೆ ಕಾಯಿಯಂತ್ತಾಗಿದ್ದು ಇವರಿಗೂ ಬೇಸರವಾಯಿತು. ‘ಮುಂದಿನ ದಿನಗಳಲ್ಲಿ ಆನಂದ ತಮ್ಮನ್ನು ತಾವು ಕೆರೆದುಕೊಳ್ಳಲು ಸಮಯವಿಲ್ಲದಷ್ಟು ಚಿತ್ರರಂಗದಲ್ಲಿ ಬೆಳೆಯಲಿ. ಕನ್ನಡ ಚಿತ್ರರಂಗದವರು ಇವರನ್ನು ಬೆಳೆಸಬೇಕು’ ಎಂದು ಸ್ವಲ್ಪ ಖಾರವಾಗಿಯೇ ನುಡಿದರು.
ಬಹುಶ ಇಂದಿನ ಚಿತ್ರರಂಗದಲ್ಲಿ ಜಗ್ಗೇಶರವರಂತಹ ಉಪ್ಪು-ಖಾರ ಹುಳಿ ತುಂಬಿರುವ ಮಾತುಗಳು ಅವಶ್ಯಕತೆ ಇದೆ. ಇಂತಹ ಮಾತುಗಳಿದ್ದರೆ ಮಾತ್ರ ಮಲಗಿರುವ ಚಿತ್ರರಂಗದವರನ್ನು ಹೊಡೆದ್ದೆಬ್ಬಿಸಲು ಸಾಧ್ಯ ಮತ್ತು ಮುಂದಿನ ದಿನಗಳಲ್ಲಿ ಆನಂದನಂತಹ ಎಷ್ಟೋ ಕಲಾವಿದರಿಗೆ ತಮ್ಮ ಪ್ರತಿಭೆಗಳನ್ನು ತೋರಿಸಲು ದಾರಿ ದೀಪವಾಗುವುದು.
ಜಗ್ಗೇಶ ಅಣ್ಣ, ಆನಂದ ಅವರಿಗಷ್ಟೇ ಅಲ್ಲ ಎಷ್ಟೋ ಮೂಲೆ ಗುಂಪಾದ ಕಲಾವಿದರ ಮಾತು ನೀವಾಗಿದ್ದೀರಿ. ಮುತ್ತು ಹಳೆಯದಾದ ಮಾತ್ರಕ್ಕೆ ಅದರ ಬೆಲೆ ಎಂದೂ ಕಮ್ಮಿ ಆಗುವುದಿಲ್ಲ. ಕೊನೆವರೆಗೂ ಅದು ಬೆಲೆಬಾಳುವ ಮುತ್ತಾಗಿಯೇ ಉಳಿಯುತ್ತದೆ. ಹಾಗೆಯೇ ಕಲಾವಿದರಿಗೆ ವಯಸ್ಸಾದ ಮಾತ್ರಕ್ಕೆ ಅವರಲ್ಲಿನ ಪ್ರತಿಭೆಗೂ ವಯಸ್ಸಾಗುವುದಿಲ್ಲ ಎನ್ನುವುದಕ್ಕೆ ಈ ಕಾಮಿಡಿ ಕಿಲಾಡಿ ಕಾರ್ಯಕ್ರಮವೇ ಸಾಕ್ಷಿ.
ಈ ಕಾರ್ಯಕ್ರಮದಲ್ಲಿ ಸರಿಗಮ ವಿಜಿ, ಟೆನ್ನಿಸ್ ಕೃಷ್ಣ, ರೇಖಾ ದಾಸ್, ಹೊನ್ನಳ್ಳಿ ಕೃಷ್ಣ, ಬ್ಯಾಂಕ್ ಜನಾರ್ಧನ, ಅರ.ಟಿ. ರಮಾರಂತಹ ಹಳೆಯ ಕಲಾವಿದರನ್ನು ಮೆಂಟರನ್ನಾಗಿ ಮಾಡಿ ಅವರಿಗೆ ಗೌರವದ ಸ್ಥಾನ ನೀಡಿದ್ದು ನಿಜಕ್ಕೂ ಸಂತೋಷವಾಯಿತು. ಆಕೃತಿ ಕನ್ನಡದ ಪರವಾಗಿ ಈ ಕಾರ್ಯಕ್ರಮದ ತಂಡಕ್ಕೆ ಹೃತಪೂರ್ವಕ ಅಭಿನಂದನೆಗಳು ಮತ್ತು ಶುಭವಾಗಲಿ…
#ಸನಮ