ಕತೆಗಾರರಾಗಿ, ನಾಟಕಕಾರರಾಗಿ ಕನ್ನಡ ನಾಡಿಗೆ ಪರಿಚಯಗೊಂಡ ಸುಬ್ರಾವ ಕುಲಕರ್ಣಿಯವರು ಪ್ರವಾಸಪ್ರಿಯರು. ದೇಶ ಸುತ್ತು, ಕೋಶ ಓದು ಎನ್ನವಂತೆ ಸುಬ್ರಾವ ಅವರು ದೇಶ ವಿದೇಶಗಳನ್ನು ಸುತ್ತುತ್ತಲೇ ಇರುತ್ತಾರೆ. ಇದುವರೆಗಿನ ತಮ್ಮ ಪ್ರವಾಸದ ಅನುಭವಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಗುಲಬರ್ಗಾದ ಪ್ರಸಿದ್ಧ ಪ್ರಕಾಶನ ಸಂಸ್ಥೆ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ. ಲೇಖಕರ ಪ್ರವಾಸ ಮಾಹಿತಿಗಳನ್ನು ಇಲ್ಲಿ ಸಂಗ್ರಹಿಸಿ ನಮ್ಮ ಓದುಗರಿಗೆ ನೀಡಲಾಗುತ್ತಿದೆ.
ನನ್ನ ಜೀವನದ ಮೊದಲ ಪ್ರವಾಸ
ಬಾಲ್ಯದಲ್ಲಿ ನವಿಲುತೀರ್ಥಕ್ಕೆ ಪ್ರವಾಸ ಹೋಗಿದ್ದು…!
ನಾನು ನಾಲ್ಕನೆಯ ತರಗತಿಯಲ್ಲಿದ್ದಾಗ ನನ್ನ ಹಳ್ಳಿಯ ಮಾಸ್ತರರು ಸಂಕ್ರಮಣದ ಪುಣ್ಯದಿನ ನವಿಲು ತೀರ್ಥಕ್ಕೆ ಎಲ್ಲ ಮಕ್ಕಳನ್ನೂ ಶಾಲಾ ಪ್ರವಾಸ ಕರೆದುಕೊಂಡು ಹೋಗುವುದಾಗಿ ಹೇಳಿದರು.
ಪಾಲಕರೆಲ್ಲ ಒಪ್ಪಿದರು. ನಮಗಂತೂ ಬಲು ದೊಡ್ಡ ಖುಶಿ. ಎಲ್ಲ ಹುಡುಗರನ್ನು ಕರೆದು ಹೇಳಿದ ಮಾಸ್ತರರು ಪ್ರವಾಸಕ್ಕೆ ಏನೇನು ತರಬೇಕೆಂದು ಹೇಳಿದರು. ಅಲ್ಲಿ ಮಲಪ್ರಭೆ ನದಿ ಹರಿಯುತ್ತದೆ. ಆಗ ಇನ್ನೂ ಮಲಪ್ರಭೆಗೆ ಆಣೆಕಟ್ಟು ಕಟ್ಟಿರಲಿಲ್ಲ. ಅದಕ್ಕೆ ಆಗ ವಡಕು ಹೊಳೆ ಎಂದು ಕರೆಯುತ್ತಿದ್ದರು. ಅಲ್ಲಿ ಯಾರೂ ಸ್ನಾನ ವಗೈರೆ ಮಾಡಬಾರದು. ಏನಾದರೂ ಅನಾಹುತವಾದರೆ ತಮ್ಮ ತಲೆಗೆ ಬರಬಾರದೆಂದು ಮೊದಲೇ ಹೇಳಿದರು. ನಾಲ್ಕು ಕೊಲ್ಲಾರಿ ಎತ್ತಿನ ಬಂಡಿಯಲ್ಲಿ ಹೋಗುವುದು. ಅಲ್ಲಿ ಅಡ್ಡಾಡುವುದು. ಆಟ ಆಡುವುದು, ಹಾಡುವುದು, ಏಕಪಾತ್ರಾಭಿನಯ ಮಾಡುವುದು.ಊಟಮಾಡಿ ನಂತರ ್ದೇ ಮೋಟರಿನಲ್ಲಿ ವಾಪಸು ನಮ್ಮ ಊರಿಗೆ ಬರುವುದೆಂದು ಹೇಳಿದರು. ಊಟಕ್ಕೆ ಅವರವರ ಮನೆಯಿಂದ ಬುತ್ತಿ ಕಟ್ಟಿಸಿಕೊಂಡು ಬರಬೇಕು. ಎಲ್ಲರ ಬುತ್ತಿಗಳನ್ನು ಒಟ್ಟುಗೂಡಿಸಿ ಎಲ್ಲರಿಗೂ ಬಡಿಸಲಾಗುತ್ತದೆ. ಎಂದೂ ಹೇಳಿದರು.
ಅದರಂತೆ ನಾನು ಮನೆಯಿಂದ ಎಳ್ಳು ಹಚ್ಚಿದ ಭಕ್ಕರಿ[ರೊಟ್ಟಿ], ಚಪಾತಿ, ಗಟ್ಟಿ ಝುಣುಕ, ಶೇಂಗಾ ಹಿಂಡಿ,ಚಿತ್ರಾನ್ನ, ಮೊಸರನ್ನ ಮಾಡಿಸಿಕೊಂಡು ಎಲ್ಲರೊಂದಿಗೆ ಮೋಟರು ಹತ್ತಿದ್ದೆ. ನನ್ನ ತರಗತಿಯ ಎಲ್ಲರೂ ಬಂದಿದ್ದರು. ನಮ್ಮ ತರಗತಿ ನನ್ನ ಓರಿಗೆಯ ಬಾಲಿಕೆಯರೂ ಅದರಲ್ಲಿದ್ದರು. ಎಲ್ಲರ ಕೈಯಲ್ಲಿ ಬುತ್ತಿಯ ಗಂಟುಗಳು.
ಆಗ ಬಸ್ಸಿನ ಸೌಕರ್ಯವಾಗಲೀ ಮೋಟರುಗಳ ಸೌಕರ್ಯವಾಗಲೀ ಇದ್ದಿರಲಿಲ್ಲ. ಊರಿನ ರೈತರ ಕೊಲ್ಲಾರಿ ಬಂಡಿಗಳೇ ಇಂಥ ಸಮಯದಲ್ಲಿ ಸೌಕರ್ಯಗಳಾಗಿದ್ದವು. ಅದರಂತೆ ನಮ್ಮೂರಿನ ನಾಲ್ಕು ಜನ ರೈತರು ತಮ್ಮ ಎತ್ತಿನ ಬಂಡಿಗಳನ್ನು ನಮಗಾಗಿ ಸಿದ್ಧ ಮಾಡಿದರು. ಚಕ್ಕಡಿಗಳಿಗೆ ಕೊಲ್ಲಾರಿ ಕಟ್ಟಿ, ಎತ್ತುಗಳಿಗೆ ಝಲಾರ ಹಾಕಿ, ಕೋಡುಗಳಿಗೆ ಬಣ್ಣ ಹಚ್ಚಿ ಬಣ್ಣ-ಬಣ್ಣದ ರಿಬ್ಬನ್ನು ಕಟ್ಟಿದರು.ಕೊರಳಿಗೆ ಗೆಜ್ಜೆ ಸರ ಹಾಕಿದರು. ೫-೬ ಹುಡುಗರಿಗೆ ಒಂದು ಕೊಲ್ಲಾರಿಯಂತೆ ಗುಡಾರ ಹಾಸಿ ಸಜ್ಜು ಮಾಡಿದರು. ಎಲ್ಲ ಹುಡುಗರೂ ಬಂಡಿಯನ್ನೇರಿ ಹರಹರ ಮಹಾದೇವ ಎಂದು ಕೂಗುತ್ತ ನವಿಲು ತೀರ್ಥದತ್ತ ಚಕ್ಕಡಿ ಓಡಿದವು.
ಕಲ್ಲಿನ ಗುಡ್ಡದ ದಾರಿಗುಂಟ ಸಾಗಬೇಕಾದದ್ದರಿಂದ ಬಂಡಿಗಳು ಕುಲುಕುತ್ತ ನಿಧಾನವಾಗಿ ಸಾಗಿದವು. ನಮಗೆ ಅನಂದವೋ ಆನಂದ. ಒಬ್ಬೊಬ್ಬ ಹುಡುಗ ಒಂದೊಂದು ಹಾಡು ಹೇಳತೊಡಗಿದ. ನಾವೂ ಉತ್ಸಾಹಗೊಂಡು ನಮಗೆ ತಿಳಿದ ಹಾಡನ್ನು ಹೇಳಿದೆವು.
ಮಲಪ್ರಭಾ ದಂಡೆಗೆ ಬಂದು ಚಕ್ಕಡಿಗಳ ಕೊರಳು ಪಟ್ಟಿ ಬಿಚ್ಚಿದರು. ಎತ್ತುಗಳು ಕಣಕಿ ಮೇಯುತ್ತ ವಿಶ್ರಾಂತಿ ಮಾಡಿದವು. ನಾವು ನದಿಯ ದಂಡೆಗುಂಟ ಓಡಾಡುತ್ತ ಆಟವಾಡಿದೆವು. ಕಬಡ್ಡಿ, ಕಣ್ಣು ಮುಚ್ಚಾಲೆಯಾಟ, ಗಿಡಮಂಗನಾಟ, ಹೀಗೆ ನಮಗೆ ಗೊತ್ತಿರುವ ಆಟಗಳನ್ನು ಆಡಿದೆವು. ಹುಡುಗಿಯರು ಖೋಖೋ ಆಟ, ಹಂಚಿಬಿಲ್ಲೀಯಾಟ ಆಡಿದರು. ಮಧ್ಯಾನದ ಹೊತ್ತಿಗೆ ಎಲ್ಲರೂ ಊಟಕ್ಕೆ ಕುಳಿತೆವು ನಮ್ಮ ಮಾಸ್ತರರು ಚಕ್ಕಡಿಯವರ ಸಹಾಯದಿಂದ ಎಲ್ಲರ ಬುತ್ತಿ ಸಂಗ್ರಹಿಸಿ ರೊಟ್ಟಿ ಪಲ್ಲೆ ಒಂದೊಂದು ಬುಟ್ಟಿಗೆ ಹಾಕಿದರು. ಹುಡುಗಿಯರು ಎದ್ದು ಎಲ್ಲರಿಗೂ ಬಡಿಸಿದರು.
ಎಲ್ಲರೂ ಮನೆಯಿಂದ ಗಂಗಾಳ ತಂದಿದ್ದರು. ಒಂದೊಂದು ಮನೆಯಿಂದ ಒಂದೊಂದು ರುಚಿ ಊಟ. ಎಲ್ಲ ಜಾತಿಯ ಮನೆಯಿಂದಲೂ ಬುತ್ತಿ ಬಂದಿತ್ತು. ಎಲ್ಲ ಕೂಡಿಸಿ ಉಣ್ಣುವಾಗ ಅಡುಗೆಗೆ ಜಾತಿಯೇ ಇರಲಿಲ್ಲ. ಎಂಥಾ ಸಂತೋಷ. ಹೊಳೀ ದಂಡೆಯ ಊಟದ ರುಚಿಯೇ ಬೇರೆ. ಭರ್ಜರಿ ಊಟಾಯಿತು. ಎಲ್ಲರೂ ಢರ್ರ ಎಂದು ತೇಗಿದರು.
ಆಮೇಲೆ ಒಂದು ತಾಸು ವಿಶ್ರಾಂತಿ. ಹೊತ್ತು ಹೊರಳಿ ಎರಡು ತಾಸು ಆದ ಮೇಲೆ ಊರ ಕಡೆಗೆ ಹೊರಡಲು ಕೊಲ್ಲಾರಿ ಬಂಡಿಗಳು ಸಿದ್ಧವಾದವು. ಎತ್ತುಗಳು ನೊಗಕ್ಕೆ ಕೊರಳು ಕೊಟ್ಟವು. ಮಾಸ್ತರರು ಎಲ್ಲರ ತಲೆ ಎಣಿಸಿಕೊಂಡು ಬಂಡಿ ಹತ್ತಿಸಿದರು. ದೇವರ ಪದಗಳನ್ನು ಹೇಳುತ್ತ ಊರ ಕಡೆಗೆ ಸಾಗಿದೆವು. ಕತ್ತಲಾಗುವ ಮುಂಚೆಯೇ ಎಲ್ಲರೂ ಊರಿಗೆ ಬಂದೆವು. ಅಂದಿನ ಪ್ರವಾಸ ನಮಗೆ ಮೊಟ್ಟಮೊದಲನೆಯದು. ಅದರ ಆನಂದವೇ ಬೇರೆ. ನೆನಪಾದರೆ ಇಂದಿಗೂ ಅದು ಹಸಿರು. ಅಂಥ ಶಾಲಾ ಪ್ರವಾಸ ಇಂದು ನಮ್ಮ ಮೊಮ್ಮಕ್ಕಳಿಗೆ ಇಲ್ಲದಿರುವುದು ಖೇದದ ಸಂಗತಿ.
***
ನವಿಲು ತೀರ್ಥ
ಸವದತ್ತಿಯಿಂದ ಆರೇಳು ಮೈಲು ದೂರ ಇರುವ ಗುಡ್ಡವನ್ನೂ ಸೀಳಿಕೊಂಡು ಮಲಪ್ರಭೆ ನದಿ ಹರಿದು ಮುಂದೆ ಹೋಗುತ್ತದೆ. ಈ ಪ್ರದೇಶಕ್ಕೆ ವಡಕು ಹೊಳೆ ಎಂದೂ ಪ್ರತೀತಿ. ಈ ಹೆಸರು ಹೇಗೆ ಬಂತೆಂಬುದಕ್ಕೆ ಒಂದು ಕತೆಯಿದೆ. ಪಶ್ಚಿಮದ ಕಡೆಯಿಂದ ಹರಿದು ಬರುತ್ತಿದ್ದ ಮಲಪ್ರಭೆಗೆ ಎದುರಿಗೆ ಗುಡ್ಡವೊಂದು ಅಡ್ಡಲಾಗಿ ನಿಂತದ್ದು ಅವಳ ಮುನ್ನೋಟಕ್ಕೆ ತಡೆಯಾಗುತ್ತದೆ. ಆಗ ಮಲಪ್ರಭೆ ತನ್ನ ದಾರಿ ಬದಲಿಸಲು ಪೂರ್ವಕ್ಕೆ ಬೆಳವಲದ ಕಡೆ ಸಾಗಲು ನೋಡುತ್ತಾಳೆ. ಆಗ ಗುಡ್ಡದ ಮೇಲಿನಿಂದ ಇವಳನ್ನೇ ನೋಡುತ್ತ ನಿಂತಿದ್ದ ನವಿಲೊಂದು ಕೂಗುತ್ತ ಗುಡ್ಡಕ್ಕ ಹೆದರಿ ಮಲ್ಲವ್ವ ಬಯಲು ನಾಡಿನ ಕಡೆ ಓಡಿ ಹೊಂಟಾಲ ನೋಡ್ರಿ ಎಂದು ಹಂಗಿಸುತ್ತದೆ. ಅದನ್ನು ಕೇಳಿ ಮಲಪ್ರಭಗೆ ಕೋಪ ಬಂದು ತನ್ನ ಪ್ರವಾಹದ ಶಕ್ತಿಯಿಂದ ಆ ಗುಡ್ಡವನ್ನೇ ಸೀಳಿ ಆಚೆ ಮುನ್ನುಗ್ಗುತ್ತಾಳೆ. ಆ ರಭಸಕ್ಕೆ ಹಂಗಿಸಿದ ನವಿಲಿರೆಕ್ಕೆಗಳು ಸೀಳಿ ನದಿಯ ಎರಡೂ ಬದಿ ಗುಡ್ಡದ ಮೇಲೆ ಬೀಳುತ್ತವೆ. ಅಂದಿನಿಂದ ಈ ಸ್ಥಳಕ್ಕೆ ನವಿಲುತೀರ್ಥ ಎಂಬ ಹೆಸರೂ, ಗುಡ್ಡವನ್ನು ಒಡೆದು ಮುಂದೆ ಸಾಗಿದ ಸ್ಥಳವಾದ್ದರಿಂದ ಒಡಕು ಹೊಳೆ ಎಂದೂ ಹೆಸರಾಗುತ್ತದೆ. ಈ ಸ್ಥಳದಲ್ಲಿಯೇ ಈಗ ಮಲಪ್ರಭಾ ನದಿಗೆ ಆಣೆಕಟ್ಟು ಕಟ್ಟಿದ್ದಾರೆ. ಪ್ರವಾಸದ ತಾಣ ಈಗ ನೀರಲ್ಲಿ ಮುಳುಗಿ ಹೋಗಿದೆ
#ಪಸತಕ