ಕವಿ ಮತ್ತು ಲೇಖಕರು : ಚಿನ್ಮಯಾನಂದ ಹೆಗಡೆ
ಪ್ರಕೃತಿ ತಾನರಳುವುದಲ್ಲದೇ ನಮ್ಮ ಭಾವನೆಗಳನ್ನು ಅರಳಿಸುವುದು. ಪ್ರಕೃತಿಯ ಅದ್ಭುತ ಹಾಗೂ ಪ್ರೇಮಿಗಳ ಮಿಲನದ ಜೋಡಿಸುವಿಕೆಯ ಪ್ರಯತ್ನವೇ ಈ ಕವನ
ಕಾರ್ಮೋಡದೊಳಗಿಂದ ರವಿ ತಾನು ಇಣುಕಲು
ಬುವಿಯ ಮೇಲಿನ ತಮವು ದೂರವಾಯ್ತು
ಎಷ್ಟೊಂದು ದಿನವಾಯ್ತು, ಮನದನ್ನೆ ಬರಲಿಲ್ಲ
ನಲ್ಲನೆದೆ ಇನ್ನಷ್ಟು ಭಾರವಾಯ್ತು…
ಚಿಗುರೆಲೆಯು ನಳನಳಿಸಿ ಹಸಿರು ಸೀರೆಯಂತಾಗೆ
ಭೂರಮೆಯು ಅದನುಟ್ಟು ಬಸಿರಾದಳು
ಇನಿಯನೆದೆ ಇಂಚರವ ತಾ ಕೇಳಿ ಕೋಮಲೆಯು
ಆತುರದಿ ಬಂದವನ ಉಸಿರಾದಳು
ಕಾಜಾಣ ಕೂಗಿತ್ತು ಹೊಮ್ಮಿಗವು ಚಿಮ್ಮಿತ್ತು
ವನಸುಮವು ಘಮ್ಮೆನುತ ಕಂಪಡರಲು
ವಿರಹ ದಾಹದಿ ಬೆಂದು ಸುಡುತಿರುವ ಅವನೆದೆಗೆ
ಮಾನಿನಿಯು ತನ್ನೊಲವ ತಂಪಡರಲು
ಪ್ರಕೃತಿಯು ತಾನರಳಿ, ನವಭಾವವರಳಿಸಿ
ಭೂಲೋಕದಲಿ ನಾಕವನೇ ಸೃಜಿಸಿದೆ
ನಲ್ಲನಲ್ಲೆಯ ಜೋಡಿ ಮೋಡಿ ಮಾಡಿದೆ ನೋಡಿ
ಮರಳಿ ಪ್ರೀತಿಯ ಪಡೆದು ಸಂಭ್ರಮಿಸಿದೆ
– ಚಿನ್ನು
#ಕವನ #ಸಹತಯ