ಲೇಖನ – ಹೂಲಿಶೇಖರ
ನಮ್ಮ ನೆಚ್ಚಿನ ನಾಟಕಕಾರ, ಜ್ಞಾಪೀಠ ಪ್ರಶಸ್ತಿ ವಿಜೇತರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಡಾ. ಚಂದ್ರಶೇಖರ ಕಂಬಾರರು ಈಗ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ದ್ದಾರೆ. ನಾಟಕಕಾರನಾದ ನನಗೆ ಇದು ಹೆಮ್ಮೆಯ ಸಂಗತಿ. ಈ ಮಧುರ ಸಂದರ್ಭದಲ್ಲಿ ಅವರೊಂದಿಗಿನ ನನ್ನ ಮೂರು ನಿಕಟ ಕ್ಷಣಗಳನ್ನು ಆಕೃತಿ ಕನ್ನಡ ಡಾಟ್ ಕಾಮ್ ಅಂತರ್ ಜಾಲ ಮ್ಯಾಗಝಿನ್ ಮೂಲಕ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಇದು ಇಸ್ವಿ ೨೦೦೦ನೇ ವರ್ಷದ ನೆನಪು. ಆಗ ಇನ್ನೂ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರಲಿಲ್ಲ.ಡಾ.ಕಂಬಾರರು ಆಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸಂವಹನ ವಿಭಾಗದಲ್ಲಿ ಸಲಹೆಗಾರರಾಗಿದ್ದರು. ನಾನು ಆವಿಭಾಗದ ಸಂವಹನಾಧಿಕಾರಿಯಾಗಿದ್ದೆ. ರಾಜ್ಯದ ಜನತೆಗೆ ವಿದ್ಯುತ್ ಕ್ಷೇತ್ರದ ಪುನರ್ರಚನೆಯ ಸಲುವಾಗಿ ವಾಸ್ತವ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿತ್ತು. ಬೆಂಗಳೂರಿನ ಕಾವೇರಿ ಭವನದ ನಿಗಮದ ಮುಖ್ಯ ಕಚೇರಿಯಲ್ಲಿ ನಮ್ಮ ಕಚೇರಿಯಿತ್ತು. ವಾರದಲ್ಲಿ ನಾಲ್ಕು ದಿನ ಡಾ. ಕಂಬಾರರು ಕಚೇರಿಗೆ ಬಂದು ಕೂಡುತ್ತಿದ್ದರು. ಅವರು ಬರದಿದ್ದಾಗ ನಾನೇ ಅವರ ಮನೆಗೆ ಹೋಗಿ ಮಾತಾಡಿ ಬರುತ್ತಿದ್ದೆ. ವಾರ ಪೂರ್ತಿ ಅವರ ಸಂಪರ್ಕದಲ್ಲಿರುತ್ತಿದ್ದೆ. ನೋಡಿ. ನೆನಪುಗಳು ಇಲ್ಲಿವೆ.
*****
ಪ್ರಸಂಗ ೧ –
ಅದೊಮ್ಮೆ ತಿಪಟೂರಿನ ಪಲ್ಲಾಗಟ್ಟಿ ಪದವಿ ಕಾಲೇಜಿನಿಂದ ನಮಗಿಬ್ಬರಿಗೂ ವಾರ್ಷಿಕ ಸಂದರ್ಭದ ಕಾರ್ಯಕ್ರಮಕ್ಕೆ ಆವ್ಹಾನ ಬಂದಿತು. ಡಾ. ಕಂಬಾರರು ಮುಖ್ಯ ಅತಿಥಿ. ನಾನು ಅತಿಥಿ. ಅಲ್ಲಿಯ ಪ್ರಿನ್ಸಿಪಾಲರು ಅಧ್ಯಕ್ಷರು. ನಾನು ಶಿಕ್ಷಣೇತರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆನಾದ್ದರಿಂದ ಮತ್ತು ಪಿ.ಎಚ್.ಡಿ ಮಾಡಿಲ್ಲವಾದ್ದರಿಂದ ಕಾಲೇಜಿನವರು ನನ್ನನ್ನು ಕಾರ್ಯಕ್ರಮಗಳಿಗೆ ಹೆಚ್ಚಾಗಿ ಆವ್ಹಾನಿಸುವುದಿಲ್ಲ. ಯಾಕಂದರೆ ನನಗ್ಯಾರೂ ಶಿಷ್ಯರಿಲ್ಲ. ಸಾಹಿತ್ಯದ ಗುಂಪುಗಳಿಲ್ಲ. ಇದು ಗೊತ್ತಿದ್ದ ಕಂಬಾರರು ತಾವೇ ಕಾಲೇಜಿವನರಿಗೆ ಹೇಳಿ ಈ ವ್ಯವಸ್ಥೆ ಮಾಡಿದ್ದರು. ಸರಿ ನಾನೂ ಒಪ್ಪಿಕೊಂಡೆ. ಇಬ್ಬರೂ ಒಂದೇ ಕಾರಿನಲ್ಲಿ ಹೋಗುವುದೆಂದು ತೀರ್ಮಾನವಾಯಿತು. ಕಾರ್ಯಕ್ರಮ ಕಾಲೇಜಿನಲ್ಲಿ ಬೆಳಿಗ್ಗೆ ಹನ್ನೊಂದಕ್ಕೆ ಆಯೋಜಿತವಾಗಿತ್ತು. ಅವತ್ತು ಮುಂಜಾನೆ ನಸುಕಿನಲ್ಲಿ ಕಂಬಾರರ ಬನಶಂಕರಿ ಮನೆಯಿಂದ ಹೊರಡುವುದು ಎಂದು ತೀರ್ಮಾನವಾಯಿತು.
ಇಬ್ಬರೂ ಬೆಳಿಗ್ಗೆ ಬೆಂಗಳೂರನ್ನು ಬಿಟ್ಟೆವು. ಪತಿದೇವರನ್ನು ಒಬ್ಬರನ್ನೇ ಹೊರಗೆ ಹೇಗೆ ಕಳಿಸುವುದೆಂದು ಅವರ ಶ್ರೀಮತಿಯವರು ಚಿಂತಿಸುತ್ತಿದ್ದರು. ಜೊತೆಯಲ್ಲಿ ನಾನೂ ಇದ್ದೇನೆ ಎಂದು ತಿಳಿದಾಗ ಅವರಿಗೆ ಸಮಾಧಾನವಾಯಿತು. ‘ದಾರ್ಯಾಗ ಎಲ್ಲೆರ ಚಹಾ ಕುಡುಕೊಂತ ಹೋಗ್ರಿ’ ಎಂದೂ ಹೇಳಿದರು. ಕಂಬಾರರು ಮುಗುಳ್ನಕ್ಕು ಗಾಡಿ ಹತ್ತಿದರು. ನಾನು ಯಾವತ್ತೂ ಡ್ರೈವರ್ ಪಕ್ಕದ ಮುಂದಿನ ಸೀಟು ಬಿಟ್ಟುಕೊಟ್ಟವನಲ್ಲ. ‘ಇಲ್ಲೇ ನನ್ನ ಬಾಜೂಕ ಕುಂಡರ್ರೀ ನಿಮ…’ ಎಂದು ನನ್ನನ್ನೂ ತಮ್ಮ ಜತೆ ಹಿಂದಿನ ಸೀಟಿನಲ್ಲಿ ಕೂಡ್ರಿಸಿಕೊಂಡರು. ದಾರಿಯುದ್ಧಕ್ಕೂ ನನ್ನ ಮುಂದಿನ ನಾಟಕಗಳ ಬಗ್ಗೆ ಕೇಳಿದರು. ನಾನು ಪ್ರಿಂಟ ಆದ ನಾಟಕಗಳ ಬಗ್ಗೆಯಷ್ಟೇ ಹೇಳಿದೆ. ಮುಂದೆ ಬರೆಯಲಿರುವ ನಾಟಕಗಳ ಬಗ್ಗೆ ಏನೂ ಹೇಳಲಿಲ್ಲ. ಯಾಕೆ ಅಂತ ಕೇಳಬೇಡಿ. ನನ್ನದೊಂದು ನಾಟಕ ಹೀಗೆ ಬಾಯಿ ಬಿಟ್ಟಾಗ ಮುಂದೆ ಅದು ಹಿಂದಿಯಲ್ಲಿ ಸಿನಿಮಾ ಆಗಿ ಹೊರಬಂದಿತ್ತು. ಹ್ಯಾಗೋ ಏನೋ. ಇವೆಲ್ಲ ಒಳ ಸುಳಿಗಳು. ದಾರಿಯುದ್ಧಕ್ಕೂ ಕಂಬಾರರು ತಮ್ಮ ಬಾಲ್ಯದ ಬಗ್ಗೆ, ನಾನು ನನ್ನ ಬಾಲ್ಯದ ಬಗ್ಗೆ ಮಾತಾಡಿಕೊಂಡೆವು. ನಾವಿಬ್ಬರೂ ಹುಟ್ಟಿದ್ದು ಅಕ್ಕ ಪಕ್ಕದ ತಾಲೂಕಿನಲ್ಲಿ. ಅವರದು ಗೋಕಾಕ ತಾಲೂಕು. ನನ್ನದು ಸವದತ್ತಿ ತಾಲೂಕು. ನನ್ನ ಅಪ್ಪನ ಹೆಸರು ಬಸಪ್ಪ. ಅಚ್ಚರಿ ಎಂದರೆ ಕಂಬಾರರ ಅಪ್ಪನ ಹೆಸರೂ ಬಸಪ್ಪ. ನನ್ನ ಅಪ್ಪ ನನ್ನ ಊರಲ್ಲಿ ಪತ್ತಾರ ಮಾಸ್ತರರ ‘ಸಂಗ್ಯಾ ಬಾಳ್ಯಾ’ ಆಟದಲ್ಲಿ ಪ್ರಸಿದ್ಧರು. ಕಂಬಾರರ ಅಪ್ಪನೂ ಬಯಲಾಟದಲ್ಲಿ ಪ್ರಸಿದ್ಧರು. ಇಬ್ಬರೂ ಅಚ್ಚರಿ ಪಡುತ್ತ ದಾರಿ ಸವೆಸುತ್ತಿದ್ದೆವು. ಮಾತಿನಲ್ಲಿ ಬಿ.ಜಯಶ್ರೀ, ಹುಕ್ಕೇರಿ ಬಾಳಪ್ಪ, ಏಣಗಿ ಬಾಳಪ್ಪ, ಅಣ್ಣಾರಾವ ಮಿರ್ಜಿ, ಹೂಲಿ ವೆಂಕರಡ್ಡಿ, ಮುದೇನೂರು ಸಂಗಣ್ಣನವರು, ಬೆಳಗಾವಿಯ ಲಿಂಗರಾಜ ಕಾಲೇಜು, ಬಯಲು ಸೀಮೆಯೊಳಗಿನ ಚಿಮಣಾಗಳು ಬಂದು ಹೋದರು. ನಡುವೆ ಗಾಡಿ ನಿಲ್ಲಿಸಿ ಇಳಿದು ಹತ್ತಿದೆವು. ಇಬ್ಬರಿಗೂ ಯಾವ ‘ದಾರೀ ತಲಬು’ [ಚಟ] ಗಳೂ ಇರಲಿಲ್ಲ. ರಸ್ತೆ ಬದಿ ಇದ್ದ ಸಣ್ಣ ಅಂಗಡಿ ಹುಡುಕಿ ಚಹಾ ಕುಡಿದೆವು.
ಹತ್ತು ಗಂಟೆಗೆ ತಿಪಟೂರು ತಲುಪಿ ಪಲ್ಲಾಗಟ್ಟಿ ಪದವಿ ಕಾಲೇಜಿನ ಗೇಟು ಹೊಕ್ಕೆವು. ನಮ್ಮನ್ನೇ ಕಾಯುತ್ತಿದ್ದ ಅಧ್ಯಾಪಕ ವೃಂದ ಓಡಿ ಬಂದರು. ವಿದ್ಯಾರ್ಥಿ-ನಿಯರಿಂದ ಪುಷ್ಪ ಗುಚ್ಛ ಸ್ವಾಗತವೂ ಆಯಿತು. ನಂತರ ಪ್ರಿನ್ಸಿಪಾಲರ ಕೊಠಡಿಯಲ್ಲಿ ಚಹಾ-ಪಾನಿ ಆಯಿತು. ಕಾರ್ಯಕ್ರಮದ ಪಟ್ಟಿಯಲ್ಲಿ ಯಾವ ರಾಜಕಾರಣಿಗಳೂ ಇರಲಿಲ್ಲ. ಸರಿಯಾಗಿ ಹನ್ನೊಂದು ಗಂಟೆಗೆ ಹೊರ ಬಯಲಿನಲ್ಲಿ ಹಾಕಿದ್ದ ದೊಡ್ಡ ವೇದಿಕೆಗೆ ಇಬ್ಬರನ್ನೂ ಕರೆದೊಯ್ದರು.
ವಿದ್ಯಾರ್ಥಿನಿಯರಿಂದ ಕನ್ನಡಾಂಬೆ ಗೀತೆ. ಸ್ವಾಗತ ಗೀತೆ ಆಯಿತು. ವೇದಿಕೆಯಲ್ಲಿ ಕಂಬಾರರ ಪಕ್ಕದಲ್ಲಿಯೇ ಕೂತಿದ್ದೆ. ಮೊದಲು ನನ್ನ ಭಾಷಣ. ನಾನು ಯಾವತ್ತೂ ಗ್ರಂಥಾಲಯದ ಪುಸ್ತಕಗಳನ್ನು ಇಟ್ಟುಕೊಂಡು ಭಾಷಣ ಮಾಡಿದವನಲ್ಲ. ನನ್ನದು ಏನಿದ್ದರೂ ಅನುಭವದ ಮಾತುಗಳು. ನಾನು ಬಾಲ್ಯದಲ್ಲಿ ಇಂದಿರಾ ಗಾಂಧಿಯವರ ಸಭೆಯಲ್ಲಿ ಪ್ರಾರ್ಥನೆ ಹಾಡಿ ಅವರ ಕೈಯಿಂದ ಗುಲಾಬಿ ಹೂ ಪಡೆದದ್ದು, ಹುಕ್ಕೇರಿ ಬಾಳಪ್ಪನವರ ಪಕ್ಕದಲ್ಲಿ ಕೂತು ಊಟ ಮಾಡಿದ್ದು, ಅವರು ನನಗಾಗಿ ಅಲ್ಲೇ ಹಾಡಿದ್ದು, ಏಣಗಿ ಬಾಳಪ್ಪನವರ ನಾಟಕ ಕಂಪನಿಗೆ ಹೋಗಿ ನಾಟಕದಲ್ಲಿ ಪಾತ್ರ ಕೇಳಿದ್ದು, ಭಾರತ್ ಸೇವಾ ದಳ ಸೇರಿ ಬೆಳಗಾವೀ ರಸ್ತೆಗಳನ್ನು ಗುಡಿಸಿದ್ದು, ಹೈಸ್ಕೂಲಿನಲ್ಲಿ ಓದುವಾಗಲೇ ಬೆಳಗಾವಿಯಲ್ಲಿ ‘ಮಹಾಜನ್ ಕಮೀಶನ್’ ಎದುರು ನಿಂತು ವಿದ್ಯಾರ್ಥಿಯಾಗಿ ಕರ್ನಾಟಕದ ಪರವಾಗಿ ವಾದಿಸಿದ್ದು, ಉಪರಾಷ್ಟ್ರಪತಿಗಳಾಗಿದ್ದ ಶ್ರೀ ಬಿ.ಡಿ.ಜತ್ತಿವರ ಜತೆ ಮಾತಾಡಿ ಅವರ ಜೋಡಿ ಫೋಟೋ ತಗೆಸಿಕೊಂಡದ್ದು, ನಾನು ಬರೆದ ಮೊದಲ ವೃತ್ತಿ ನಾಟಕ ”ಕಲಿತ ಕಳ್ಳ” ಇದನ್ನು ಕಂಪನಿಯೊಂದು ನೂರಾರು ಪ್ರಯೋಗ ಮಾಡಿ ಒಂದು ಪೈಸೆಯನ್ನೂ ನನಗೆ ಕೊಡದೆ ಹೋದದ್ದು, ನಾಟಕ ಶಿಬಿರಗಳಿಗಾಗಿ ನಾಗಪೂರ, ಮುಂಬೈ, ದೆಹಲಿ, ಕಾಸರಗೋಡು ತಿರುಗಾಡಿದ್ದು ಅದರ ಅನುಭವಗಳನ್ನು ಹೇಳುತ್ತ ‘ವಿದ್ಯಾರ್ಥಿಗಳು ಓದಬೇಕು. ಆದರೆ ಓದು ಒಕ್ಕಾಲು. ಬುದ್ಧಿ ಮುಕ್ಕಾಲು ಇದ್ದರಷ್ಟೇ ಮುಂದೆ ಬರಲು ಸಾಧ್ಯ ಅಂದೆ..’ ನನ್ನ ಮಾತಿನಲ್ಲಿ ಬ್ರೆಕ್ಟನಾಗಲೀ, ಶೇಕ್ಸಪಿಯರ್‌ನಾಗಲೀ, ಅವರ ಮಾತುಗಳ ಉದಾಹರಣೆಯಾಗಲೀ ಇರಲಿಲ್ಲ. ಸಭೆಯಿಂದ ಭರ್ಜರಿ ಕರತಾಡನವಾಯಿತು. ಕಂಬಾರರು ಅಲ್ಲೇ ನನ್ನ ಬೆನ್ನು ಚಪ್ಪರಿಸಿದರು. ನಂತರ ಅವರು ತಮ್ಮ ಮಾತಿನಲ್ಲಿ ನನಗೆ ‘ಜವಾರಿ ನಾಟಕಕಾರ’ ಎಂದೂ ಹೇಳಿದರು.
ಕಾರ್ಯಕ್ರಮ ಮುಗಿದಾಗ ಮಧ್ಯಾನ ಎರಡು ಗಂಟೆ. ಪ್ರಿನ್ಸಿಪಾಲರು ನಮಗೆ ಊಟದ ವ್ಯವಸ್ಥೆ ಆಗಿದೆ ಎಂದು ಹೇಳಿ ಹೊರಟು ಬಿಟ್ಟರು. ನಮ್ಮ ವ್ಯವಸ್ಥೆಗೆ ಒಬ್ಬ ಅಧ್ಯಾಪಕರು ನಿಂತಿದ್ದರು. ಬೇರೆ ಯಾರೂ ಇರಲಿಲ್ಲ. ಎಲ್ಲ ಜವಾಬ್ದಾರಿ ಮುಗಿಯಿತು ಎಂದು ಅವರವರ ಮನೆಗೆ ಹೋದರು. ನಮ್ಮ ಆತಿಥ್ಯಕ್ಕೆ ನಿಂತಿದ್ದ ಅಧ್ಯಾಪಕರು ನಮ್ಮ ಕಾರಿನಲ್ಲೇ ಹತ್ತಿ – ‘ಸರ್ರ ಇಲ್ಲೇ ಒಂದು ಖಾನಾವಳಿ ಇದೆ. ಭರ್ಜರಿ ಜೋಳದ ರೊಟ್ಟೀ ಊಟ. ಫುಲ್ ಮೀಲ್ಸು. ಗಟ್ಟಿ ಮೊಸರು’ ಅಂದರು. ಕಂಬಾರರು ಒಳಗೇ ನಕ್ಕರು. ನಾನು ಒಳಗೇ ಬೇಸರಗೊಂಡೆ. ನನ್ನನ್ನು ಹೋಗಲಿ ಕಂಬಾರರಂಥ ದೊಡ್ಡ ನಾಟಕಕಾರರೂ ಬಂದಾಗ ಸರಿಯಾದ ವ್ಯವಸ್ಥೆ ಮಾಡಿಲ್ಲವಲ್ಲ ಎಂದು ಹಳಿಹಳಿಸಿದೆ.
ಯಾವುದೋ ಒಂದು ಸಂದಿಯಲ್ಲಿ ನಮ್ಮ ಕಾರನ್ನು ನುಗ್ಗಿಸಿದ ನಮ್ಮ ಹೊಣೆಗಾರ ಅಧ್ಯಾಪಕರು ‘ಇಲ್ಲೇ ಇಳೀರಿ ಸರ್ರ’ ಅಂದರು. ಇಬ್ಬರೂ ಇಳಿದೆವು. ನೋಡಿದರೆ ಸಣ್ಣ ಮನೆಯಂಥ ಒಂದು ಹಾಲ್. ಒಳಗೆ ಉದ್ದ ಹಲಗೆಗಳನ್ನು ಹಾಕಿ ಟೇಬಲ್ ಥರ ಮಾಡಲಾಗಿತ್ತು. ಇಬ್ಬರು ಗಿರಾಕಿಗಳು ಊಟ ಮಾಡುತ್ತಿದ್ದರು. ನಾನು ಕಂಬಾರರ ಮುಖ ನೋಡಿ ”ಸರ್… ಇದು ಖರೇವಂದ್ರೂ ಜವಾರೀ ಹೊಟೆಲ್ಲು ನೋಡ್ರಿ.” ಅಂದೆ. ”ಹೋಗ್ಲಿ ಬಿಡ್ರಿ. ಪಾಪಿ ಕೈಗೆ ಸಿಕ್ಕಷ್ಟ ಪ್ರಸಾದ. ಮೊದಲ ತಡಾ ಆಗೇತಿ. ಹೊಟ್ಟಯಾಗಿನ ಹುಳಾ ಸಾಯಾಕ ಹತ್ಯಾವ. ನಡೀರಿ” ಅಂದರು. ಒಳಗೆ ಹೋಗಿ ಕೂತೆವು. ನಾವು ಕೂತದ್ದೇ ತಡ. ಖಾನಾವಳಿ ಮಾಲೀಕ ನಮ್ಮ ಅಧ್ಯಾಪಕರಿಗೆ ದೊಡ್ಡ ದನಿಯಲ್ಲೇ ಹೇಳಿದ.
”ಏನ್ರಿ ಸರ್ರ ನೀವು. ಹನ್ನೆರಡೂವರೆಗೇ ಬರತೀನಿ ಅಂದಿದ್ರಿ. ಎಣೆಗಾಯಿ ಪಲ್ಲೆ ಎಂಥಾ ಛಂದ ಮಾಡಿದ್ವಿ. ಈಗ ಬರೇ ಖಾರಬ್ಯಾಳಿ ಅಷ್ಟ ಉಳದೈತಿ ನೋಡ್ರಿ. ಹೊರಗಿನ ಗಿರಾಕಿ ಭಾಳ ಬಂದೂವು ಇವತ್ತ” ಅಂದ. ನಾವು ಮುಖ ಮುಖ ನೋಡಿಕೊಂಡೆವು. ”ರೊಟ್ಟಿಯಾದ್ರೂ ಅದಾವಿಲ್ಲೋ ತಮ್ಮಾ. ಬರೇ ಖಾರಬ್ಯಾಳೀ ತಿನ್ರಿ ಅಂತೀಯೇನು ಮತ್ತ?” ಅಂದರು. ಅಂಗಡಿಯವ ಹಲ್ಲು ತಗೆದು ”ಹಂಗೇನಿಲ್ಲರೀ ಸರ್. ನೀವು ಕಾಡು ಕುದುರೀ ಸಿನಿಮಾ ತಗದಾವರಲ್ಲ? ನೋಡೇನ್ರಿ ಅದನ್ನ. ನಿಮಗಂತನ ಬಿಸಿ ರೊಟ್ಟೀ ಬಡಿಯಾಕ ಹಚ್ಚೇನಿ. ತಡೀರಿ” ಅನ್ನುತ್ತ ನೀರಿನ ತಂಬಿಗೆ, ಲೋಟ ತಂದಿಟ್ಟ. ಯಾವುದೋ ಕಾಲದಲ್ಲಿ ಗುಲಬರ್ಗಾ ಕಡೆಯಿಂದ ಬಂದವ ಎಂದು ನಮ್ಮ ಜೊತೆಗೆ ಬಂದವರು ಹೇಳಿದರು. ಇಂಥವರಿಗೆ ಕಂಬಾರರು ದೊಡ್ಡ ನಾಟಕಕಾರ ಅನ್ನುವುದು ಗೊತ್ತಿರಲಿಲ್ಲ. ಸಿನಿಮಾ ನಿರ್ದೇಶಕರು ಅನ್ನುವುದಷ್ಟೇ ಗೊತ್ತಿತ್ತು.
ನಾನೂ ಕಂಬಾರರು ಆಜೂ-ಬಾಜೂ ಕೂತೆವು. ನಮ್ಮ ದೇಖರೀಕಿ ಮಾಡಲು ಮಾಡಲು ಬಂದಿದ್ದ ಅಧ್ಯಾಪಕರೂ ನಮ್ಮ ಜತೆಯೇ ಕೂತರು. ಕಂಬಾರರಂಥ ನಾಟಕಕಾರ ದೊಡ್ಡವನಾದದ್ದು ಇಂಥಲ್ಲಿ. ಏನೂ ಬೇಸರ ಮಾಡಿಕೊಳ್ಳದೆ, ಎದುರು ಬಂದದ್ದನ್ನು ಇದ್ದಂತೆ ಸ್ವೀಕರಿಸಿ ಊಟ ಮಾಡಿದರು. ಗಟ್ಟಿ ಮೊಸರು ಇರಲಿಲ್ಲ. ಮಜ್ಜಿಗೆ ಇತ್ತು. ಸಾರು ತಿಳಿಯಾಗಿತ್ತು. ತರಕಾರಿ ಇಲ್ಲದ ಕಾಳು ಪಲ್ಲೆ. ಹಸಿವಿನ ಕಾರಣಕ್ಕೆ ಊಟದ ಶಾಸ್ತ್ರವಾಯಿತು. ”ರವೀಂದ್ರ ಕಲಾಕ್ಷೇತ್ರದಾಗ ರಿಹರ್ಸಲ್ ಊಟಾ ಮಾಡಿದಾಂಗ ಆತು” ಎಂದರು ನಗುತ್ತ. ಸಾಮಾನ್ಯರಲ್ಲಿ ಸಾಮಾನ್ಯನಾಗದ ಲೇಖಕ ಎಂಥ ಪರಿಸ್ಥಿತಿಗೂ ಸಿದ್ಧನಾಗಿರಬೇಕು. ಇಲ್ಲದಿದ್ದರೆ ದೊಡ್ಡವನಾಗಲಾರ ಅಂದುಕೊಂಡೆ. ಅದನ್ನು ಕಂಬಾರರ ಬಾಲ್ಯ ಕಲಿಸಿಕೊಟ್ಟಿತ್ತು. ನನಗಂತೂ ನನ್ನ ಬಾಲ್ಯ ಏನೆಲ್ಲ ಕಲಿಸಿತ್ತು. ಇಲ್ಲಿಂದ ಕಂಬಾರರ ಬಗೆಗಿನ ಗೌರವ ಇನ್ನೂ ಹೆಚ್ಚಾಯಿತು. ಇಬ್ಬರೂ ಕಾರು ಹತ್ತಿದೆವು. ಮುಂದೆ ಬೆಂಗಳೂರು ಕಡೆಗೆ ಹೊರಡುವುದೆಂದುಕೊಂಡೆ. ಆದರೆ ಅವರು ಇವತ್ತು ಬೆಂಗಳೂರಿಗೆ ಹೋಗುವುದು ಬೇಡ ಅಂದುಬಿಟ್ಟರು. ಅಚ್ಚರಿಯಾಯಿತು. ನನಗೆ ಒಂದಿಷ್ಟು ಕೆಲಸವಿದೆ. ನಾಳೆ ರಾತ್ರಿ ಹೊರಡೋಣ ಅಂದರು.
ಉಳಿಯಲು ವ್ಯವಸ್ಥೆಯನ್ನು ಅವರೇ ಮಾಡಿದರು. ತಿಪಟೂರಿನಲ್ಲಿ ಪು.ತಿ.ನ. ಹೆಸರಿನಿ ಹೊಟೆಲ್ ಒಂದಿದೆ. ದೊಡ್ಡ ಬಾಡಿಗೆಯೇನಲ್ಲ. ಚಿಕ್ಕದಾದರೂ ಚೊಕ್ಕ ಹೊಟೆಲ್ಲು. ಅದನ್ನು ಯಾವಾಗ ಯಾರು ಬುಕ್ ಮಾಡಿದ್ದರೋ. ಇಬ್ಬರಿಗೂ ಸೇರಿ ಒಂದು ಕೋಣೆ. ಇಬ್ಬರೂ ಹೊಟೆಲ್ಲಿನ ಕೋಣೆ ಸೇರಿಕೊಂಡೆವು. ಕಾರಿನ ಚಾಲಕ ಕಾರಿನಲ್ಲಿಯೇ ಉಳಿದ. ಒಂದು ಗಂಟೆಯ ವಿಶ್ರಾಂತಿಯ ನಂತರ ಕಂಬಾರರು ಎದ್ದು ಹೇಳಿದರು. ‘ಹೂಲಿಶೇಖರ… ಕೋಡಿಹಳ್ಳಿ ಸ್ವಾಮೀಜಿ ಬರೂದಕ್ಕ ಹೇಳೀದಾರ. ಹೋಗೇ ಬಂದು ಬಿಡೂನು’ ಅಂದರು. ನಾನು ತಲೆಯಾಡಿಸಿದೆ. ರೂಮಿಗೇ ಚಹ ತರಿಸಿಕೊಂಡು ಕುಡಿದು ಅರಸೀಕೆರೆಯತ್ತ ಹೊರಟೆವು. ಕೋಡೀಹಳ್ಳಿ ಮಠ ಅರಸೀಕೆರೆಯಿಂದ ಒಂದು ಅರ್ಧ ಗಂಟೆಯ ಪ್ರಯಾಣ ಅಷ್ಟೇ. ಅರಸೀಕೆರೆ ಸಮೀಪಿಸುತ್ತಿದ್ದಂತೆ ಗುರುಗಳಿಗೆ ಅರಸೀಕೆರೆಯಿಂದ ಒಂದು ಪೋನ್ ಕರೆ ಬಂತು. ಅವರಿಗೆ ಪರಿಚಯಸ್ಥರಂತೆ. ಇವತ್ತು ಸಂಜೆ ಊಟಕ್ಕೆ ನಮ್ಮಲ್ಲಿಗೇ ಬನ್ನಿ ಅಂದರಂತೆ. ಇವರು ‘ಕೋಡೀಮಠ ದಾರಿಯಲ್ಲಿದೀನಿ. ನಾಳೆ ಮಧ್ಯಾನ ನಿಮ್ಮಲ್ಲಿ ಊಟ ಮಾಡಿಕೊಂಡು ವಾಪಸು ಬೆಂಗಳೂರಿಗೆ ಹೋಗುತ್ತೇವೆ’ ಎಂದು ಹೇಳಿದರು. ನಾನು ಅಂದುಕೊಂಡೆ. ನಾಳೆ ರಾತ್ರಿಯೇ ಮನೆ ಮುಟ್ಟುವುದು ಎಂದು. ಮಾನಸಿಕವಾಗಿಯೂ ಸಿದ್ಧನಾದೆ. ನನಗೂ ಕುತೂಹಲವಿತ್ತು. ಕೋಡೀ ಮಠದ ಬಗ್ಗೆ ತುಂಬ ಕೇಳಿದ್ದೆ. ರಾಜಕೀಯ ಭವಿಷ್ಯ ಹೇಳುವುದರಲ್ಲಿ ಅವರು ಸಿದ್ಧ ಹಸ್ತರು. ಇಂದಿರಾ ಗಾಂಧಿಯಂಥವರೂ ಕೋಡೀಮಠಕ್ಕೆ ಬಂದು ಭವಿಷ್ಯ ಕೇಳಿ ಹೋಗುತ್ತಿದ್ದರು ಅಂದರೆ ಅದರ ಖ್ಯಾತಿ ಎಷ್ಟಿರಬೇಡ. ಆ ಸ್ವಾಮಿಗಳನ್ನು ನೋಡಲು ನಾನೂ ಉತ್ಸುಕನಾದೆ.
ಕೋಡೀ ಮಠ ತಲುಪಿದಾಗ ಸಂಜೆ ಸೂರ್ಯ ಮುಳುಗಲು ಇನ್ನೇನು ತಯಾರಾಗಿದ್ದ. ಡಾ.ಕಂಬಾರರು ಬರುತ್ತಿರುವುದು ಸ್ವಾಮಿಗಳಿಗೆ ಮೊದಲೇ ಗೊತ್ತಿತ್ತು. ನಮ್ಮ ಹಾದಿ ಕಾಯುತ್ತ ಕೂತಿದ್ದರು. ನನ್ನ ಪರಿಚಯವನ್ನು ಮಾಸ್ತರರೇ ಮಾಡಿ ಕೊಟ್ಟರು. ನಾನು ಸ್ವಾಮಿಗಳಿಗೆ ಪದ್ಧತಿಯಂತೆ ನಮಸ್ಕರಿಸಿದೆ. ಅವರಿಬ್ಬರೂ ಅದು-ಇದು ಮಾತಾಡುತ್ತಿದ್ದಂತೆ ನಾನು ಮಠವನ್ನು ಒಂದು ಸುತ್ತು ಹಾಕಲು ಹೊರಟೆ. ಅಲ್ಲಿದ್ದ ಶಿಷ್ಯರೊಬ್ಬರು ನನ್ನನ್ನು ಕರೆದುಕೊಂಡು ಅಡ್ಡಾಡಿ ಮಠ ತೋರಿಸಿದರು. ಸ್ವಾಮೀಜಿಯವ ಹತ್ತಿರ ಸಾವಿರಾರು ವರ್ಷಗಳ ಹಿಂದೆ ಬರೆದ ಹೊತ್ತಿಗೆ ಇದೆಯೆಂದೂ ಅದನ್ನು ನೋಡಿಯೇ ಸ್ವಾಮೀಜಿಯವರು ಭವಿಷ್ಯ ಹೇಳುತ್ತಾರೆ ಎಂದು ಶಿಷ್ಯರು ಹೇಳಿದರು. ಭವಿಷ್ಯ ಕೇಳಲು ಶ್ರೀಮತಿ ಇಂದಿರಾ ಗಾಂಧೀ, ಶ್ರೀ ನಿಜಲಿಂಗಪ್ಪ, ಶ್ರೀ ವೀರೇಂದ್ರ ಪಾಟೀಲರು, ಶ್ರೀ ಬಿ.ಡಿ.ಜತ್ತಿಯವರಿಂದ ಹಿಡಿದು ಇತ್ತೀಚಿನ ಎಲ್ಲಾ ರಾಜಕೀಯಸ್ಥರು ಶ್ರೀಮಠಕ್ಕೆ ಬಂದು ಹೋಗಿದ್ದಾರೆ. ಈಗಲೂ ಬರುತ್ತಾರೆ ಎಂದು ಅವರು ಹೇಳಿದರು. ಬೇಕಾದರೆ ನೀವೂ ಕೇಳಿ ಎಂದೂ ಹೇಳಿದಾಗ ನಕ್ಕು ಸುಮ್ಮನಾದೆ. ಮತ್ತೆ ಮಠದ ಪ್ರಾಂಗಣಕ್ಕೆ ಬಂದು ನೋಡಿದರೆ ಡಾ.ಕಂಬಾರ ಗುರುಗಳು ಅಲ್ಲಿರಲಿಲ್ಲ. ಎಲ್ಲಿ ಹೋದರು ಎಂದು ನೋಡುತ್ತಿದ್ದರೆ ಅಲ್ಲಿದ್ದವರೊಬ್ಬರು ಹೇಳಿದರು.
”ಸರ್ರು ಒಳಗ ಜ್ಯೋತಿಷ್ಯ ಕೇಳೂದಕ್ಕೆ ಹೋಗೀದಾರೆ” ಅನ್ನುತ್ತ ಬಾಗಿಲು ಮುಚ್ಚಿದ ಕೋಣೆಯತ್ತ ಕೈ ತೋರಿದರು. ಅಲ್ಲಿ ಒಳಗೆ ಬಾಗಿಲು ಮುಚ್ಚಿಕೊಂಡು ಸ್ವಾಮಿಗಳು ಡಾ. ಕಂಬಾರ ಅವರಿಗೆ ಭವಿಷ್ಯ ಹೇಳುತ್ತಿದ್ದರು. ಅಲ್ಲಿ ಹೇಳಿಕೆ ನಡೆದಾಗ ಯಾರೂ ಒಳಗೆ ಹೋಗುವಂತಿಲ್ಲ ಎಂಬ ಸೂಚನೆಯೂ ಸಿಕ್ಕಿತು. ನಾನು ಅಲ್ಲೇ ಕೂತು ಗೋಡೆಯ ಮೇಲಿನ ಚಿತ್ರಗಳನ್ನು ನೋಡತೊಡಗಿದೆ. ಕಂಬಾರರ ದೈವೀ ಭಕ್ತಿ, ಜೋತಿಷ್ಯದಲ್ಲಿ ಅವರಿಗಿರುವ ನಂಬಿಕೆ, ಜಾನಪದ ನಾಟಕಗಳಿಗೆ ಕಾರಣವೂ ಆಗಿರಬಹುದು. ಯಾಕಂದರೆ ಅವರು ಶಿರಸಂಗಿ ಕಾಳಿಕಾದೇವಿಯ ಪರಮಭಕ್ತರಾಗಿದ್ದರು ಎಂದು ಗೊತ್ತಿತ್ತು. ನಾನೂ ಕೂಡ ಬಾದಾಮಿ ಬನಶಂಕರಿಯ ಭಕ್ತನೇ. ಯಾಕಂದೆ ಆಕೆ ನನ್ನ ಕುಲದೇವರು. ಇಬ್ಬರಿಗೂ ಹೆಣ್ಣು ದೇವರು ಆರಾಧ್ಯ ದೇವತೆಯರಾಗಿದ್ದರು.
ಮುಕ್ಕಾಲು ತಾಸಿನ ನಂತರ ಕಂಬಾರರು ಕೋಣೆಯಿಂದ ಹೊರ ಬಂದರು. ಮುಖದಲ್ಲಿ ಏನೋ ಕಳೆಯಿತ್ತು. ಗೆಲುವಾಗಿದ್ದರು. ಇನ್ನು ಹೋಗೋಣ ಅಂದರು. ಕಾರು ತಿಪಟೂರಿನ ವಸತಿಗೃಹದತ್ತ ಹೊರಟಾಗ ದೀಪ ಬೆಳಗಿದ್ದವು.
ಅಂದು ಅಲ್ಲಿಯೇ ವಸ್ತಿ ಆಯಿತು. ಕಂಬಾರ ಗುರುಗಳು ಗೆಲುವಾಗಿದ್ದರೆಂದು ಹೇಳಿದೆನಲ್ಲ. ಜಬರದಸ್ತ ಊಟ ಮಾಡಿದರು. ಈ ನಡುವೆ ಮನೆಯಿಂದ ಪೋನು ಬಂದಾಗ ಹೇಳಿದರು. ‘ಗಾಬರಿ ಆಗಬ್ಯಾಡ. ನನ್ನ ಜೋಡೀ ಹೂಲಿ ಶೇಖರ ಅದಾರ’ ಅಂದದ್ದು ಕಿವಿಗೆ ಕೇಳಿಸಿತು.
ಬೆಳಿಗ್ಗೆ ಎದ್ದವರೇ ಸ್ನಾನ ಮಾಡಿ ಮತ್ತೆ ಅರಸೀಕೆರೆಯತ್ತ ಹೊರಟೆವು. ಕಂಬಾರರಿಗೆ ದೊಡ್ಡ ಹೊಟೆಲ್ ತಿಂಡಿ ಇಷ್ಟವಾಗುತ್ತಿರಲಿಲ್ಲವೇನೋ. ದಾರಿಯಲ್ಲಿ ಸಣ್ಣ ಇಡ್ಲಿ ಹೊಟೆಲ್ಲಿನಲ್ಲಿಯೇ ತಿನ್ನೋಣ ಅಂದರು. ಅದು ಬೆಂಗಳೂರು-ಶಿವಮೊಗ್ಗ ಹೆದ್ದಾರಿ. ‘ಇಡ್ಲಿಗೆ ಇಲ್ಲಿ ತೆಂಗಿನ ಚಟ್ನಿ ಚುಲೋ ಮಾಡ್ತಾರ’ ಅಂದರು. ಅದು ನಿಜವೂ ಇತ್ತು. ಕಂಬಾರರು ಊಟದಲ್ಲೂ ರಸಿಕರು ಅಂದುಕೊಂಡೆ. ಇಬ್ಬರೂ ನಾಲ್ಕು ನಾಲ್ಕು ಇಡ್ಲಿ ತಿಂದು ಕಾರು ಹತ್ತಿದೆವು.
ಅರಸೀಕೇರೆಯಿಂದ ಐದು ಮೈಲಿ ದೂರದಲ್ಲಿ ಒಂದು ತೆಂಗಿನ ದೊಡ್ಡ ತೋಟ. ತೋಟದ ಮಧ್ಯದಲ್ಲಿ ಒಂದು ಅರಮನೆಯಂಥ ದೊಡ್ಡ ಮನೆ. ಅಲ್ಲಿಗೆ ಕಾರು ಬಂದಾಗ ನಾನು ವಿಚಿತ್ರವಾಗಿ ನೋಡುತ್ತಿದ್ದೆ. ನಾವು ಕಾರಿನಿಂದ ಇಳಿಯುತ್ತಿದ್ದಂತೆಯೇ ಮನೆಯೊಡೆಯರು ನಮ್ಮನ್ನು ಎದುರುಗೊಂಡರು. ಅಲ್ಲಿನವರಿಗೆ ಕಂಬಾರರು ಹಳೆಯ ಪರಿಚಯದವರು ಎಂದು ಗೊತ್ತಾಯಿತು. ಸಿನಿಮಾಕ್ಕೆ ದುಡ್ಡು ಹಾಕಬಲ್ಲ ದೊಡ್ಡ ಕುಳ ಇದ್ದರೂ ಇರಬಹುದು. ವಿನಯವಂತರು. ನನ್ನ ಪರಿಚಯವನ್ನು ಕಂಬಾರ ಗುರುಗಳೇ ಮಾಡಿಕೊಟ್ಟರು. ಒಳಗೆ ಹೋಗುತ್ತಿದ್ದಂತೆ ಹಜಾರದ ದೊಡ್ಡ ಸೋಫಾದಲ್ಲಿ ಕುಳಿತವರು ಸಿನಿಮಾ ನಟ ದೊಡ್ಡಣ್ಣ. ಅವರನ್ನು ಅಲ್ಲಿ ನೋಡಿ ನನಗೆ ಅಚ್ಚರಿಯಾಯಿತು. ದೊಡ್ಡಣ್ಣ ಮೊದಲು ಭದ್ರಾವತಿಯವರು. ರಂಗಭೂಮಿಯಲ್ಲಿ ನಟರಾಗಿದ್ದವರು. ನಾನು ಭದ್ರಾವತಿಗೆ ಹೋದಾಗಲೆಲ್ಲ ಕಲಾಶ್ರೀ ಶಾಮಮೂರ್ತಿಯವರು ಇವರ ಬಗ್ಗೆ ಹೇಳುತ್ತಿದ್ದರು.
ದೊಡ್ಡಣ್ಣ ಖುಶಿಪಟ್ಟರು. ನಾವು ಮಾತಾಡುತ್ತಿದ್ದಂತೆ ಮನೆಯೊಡತಿ ಬಂದರು. ಕೊರಳ ತುಂಬ ಬಂಗಾರದ ಸರ. ಹಣೆಗೆ ದೊಡ್ಡ ಕುಂಕುಮ. ಕೈಯಲ್ಲಿ ಬಂಗಾರದ ದಪ್ಪ ಬಳೆಗಳು. ನಮಗೆ ಕೈಮುಗಿದು ಹೇಳಿದರಾಕೆ. ”ನಿಮಗಾಗಿ ಸ್ಪೇಶಲ್ ಅಡುಗೆ ಮಾಡಿಸ್ತೀನಿ. ಊಟ ಮಾಡಿಕೊಂಡೇ ಹೋಗಬೇಕು”. ಅಂದರಾಕೆ ನಗುತ್ತ. ”ನಾನು ಬಂದಿರೋದೇ ಊಟಕ್ಕೆ. ಸುಮ್ನೆ ಹೋಗೋದುಂಟಾ ತಾಯಿ” ಅಂದರು. ಜ್ಯೂಸು ಕುಡಿದ ನಂತರ ಎದ್ದು ಹೊರಗೆ ಅಡ್ಡಾಡುತ್ತ ತೋಟ, ಆಳುಕಾಳು, ಕೂಲಿಕಾರರ ಮನೆಗಳು, ದನ-ಕರು, ಟ್ರಾಕ್ಟರು ಎಲ್ಲ ವೈಭವ ನೋಡಿ ಮನೆಯತ್ತ ವಾಪಸಾದೆವು. ಅಷ್ಟರಲ್ಲಿ ಊಟ ಸಿದ್ಧವಾಗಿತ್ತು.
ಯಾರ ಪಕ್ಕನಾದರೂ ಕೂತು ಊಟ ಮಾಡಬಹುದು. ಆದರೆ ಈ ದೊಡ್ಡಣ್ಣನ ಪಕ್ಕ ನಮ್ಮಂಥವರು ಕೂಡಬಾರದು. ಅವರಿಗೂ ಮುಜುಗುರ. ನಮಗೂ ಮುಜುಗುರ. ‘ ಬಂಡೆ ಅನ್ನಕ್ಕೂ ತಟ್ಟೆ ಅನ್ನಕ್ಕೂ ತಾಳೆ ಹಾಕುವುದೇ?’ ಅದನ್ನು ಕಂಡು ದೊಡ್ಡಣ್ಣನೇ ತಮಾಶೆ ಮಾಡಿ ನಕ್ಕರು. ಊಟ ಆದಮೇಲೆ ತುಸು ಹೊತ್ತು ಅಲ್ಲಿದ್ದು ಬೆಂಗಳೂರ ಕಡೆಗೆ ಹೊರಟೆವು. ಕಂಬಾರರು ಖುಶಿಯಲ್ಲಿದ್ದರು. ನನಗೂ ಅದು ಹೊಸ ಅನುಭವ. ಕಂಬಾರರು ನನಗೆ ಸಧ್ಯಕ್ಕೆ ಅರ್ಥವಾಗುವುದಿಲ್ಲ ಅಂದುಕೊಂಡೆ ಮನಸ್ಸಿನಲ್ಲಿ.
ಪ್ರಸಂಗ-೨ ಮುಂದಿನ ಭಾಗದಲ್ಲಿ *****