“ಇದು ಅದೃಶ್ಯ ಅವ್ಯಕ್ತನ ಅನಾವರಣದ ಕವಿತೆ. ಅಗೋಚರನ ಅನಂತ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಆರಾಧಿಸುವರಿಗೆ ಅನುಭಾವದರ್ಶವಾಗುವ, ನಿರಾಕರಿಸುವವರಿಗೆ ನಿದರ್ಶನವಾಗದ, ವಿಧಾತನ ಈ ವಿರಾಟ್ ಲೀಲೆಯೇ ವಿಸ್ಮಯ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. (ಅಂತರ್ಜಾಲದಿ ಗೋಚರಿಸಿದ ಈ ಅದ್ಭುತ ಚಿತ್ರವೇ ಅಗೋಚರನ ಮೇಲಿನ ನನ್ನೀ ಕವಿತೆಗೆ ಸ್ಫೂರ್ತಿ)
ಮುಗಿಲಲ್ಲಿ ಬೆಳಕಿನಾ ದೀಪವಾಗಿ
ಹಗಲುಗಳ ಹರಸಿರುವೆ ದಿನಕರನಾಗಿ
ಇರುಳ ಮಿನುಗಿಸಿಹೆ ತಾರಾಪುಂಜವಾಗಿ.!
ಕಡಲಲ್ಲಿ ಜಲಧಿಯ ಸ್ವರೂಪವಾಗಿ
ಜಲಚರಗಳ ಕಾದಿಹೆ ಗುಪ್ತಗಾಮಿನಿಯಾಗಿ
ಅಲೆದಡಗಳ ಕುಣಿಸಿಹೆ ಯಾಮಿನಿಯಾಗಿ.!
ಧರೆಯೊಳಗೆ ಸುಪ್ತಸತ್ವ ರೂಪವಾಗಿ
ಬೆಳೆಗಳ ಸೆಲೆಯಾಗಿರುವೆ ಕಾರುಣ್ಯವಾಗಿ
ಚರಾಚರಗಳ ಸಲಹಿರುವೆ ಚೈತನ್ಯವಾಗಿ.!
ಉಸಿರುಗಳ ಉಳಿಸಿರುವೆ ಪ್ರಾಣಾನಿಲವಾಗಿ
ದಾಹಗಳ ಅಳಿಸಿರುವೆ ಜೀವಜಲವಾಗಿ
ಮಳೆಗಾಳಿಗಳ ಆದರಿಸಿರುವೆ ಆಸರೆಯಾಗಿ.!
ಮಾರ್ದನಿಸಿಹೆ ಹಕ್ಕಿಕೊರಳ ಇಂಚರವಾಗಿ
ಪ್ರತಿಫಲಿಸಿಹೆ ಎಲ್ಲೆಡೆ ಬೆಳಕ ಸಂಚಲನವಾಗಿ
ಆಡಿಸಿಹೆ ಅಣುರೇಣುಗಳ ಸಂಪೂರ್ಣವಾಗಿ.!
ಅಗೋಚರನಾದರೂ ಆವರಿಸಿಹೆ ಅನಂತವಾಗಿ
ಅವ್ಯಕ್ತನಾದರೂ ಹರಡಿರುವೆ ದಿಗ್ದಿಗಂತವಾಗಿ
ಅದೃಶ್ಯನಾದರೂ ಅನುಗ್ರಹಿಸಿಹೆ ಸಾದೃಶವಾಗಿ.!
ಕಾಣುವವರಿಗೆ ದೃಷ್ಟಿಸಿದಡೆಯೆಲ್ಲಾ ನಿನ್ನಿರಿವು
ಒಳಗಣ್ಣು ತೆರೆದರೆ ಸೃಷ್ಟಿಯೊಳಗೆಲ್ಲ ನಿನ್ನರಿವು
ಅನುಕ್ಷಣ ಅನುಭಾವವಾಗಿ ನಿನ್ನದೇ ಹರಿವು.!
- ಎ.ಎನ್.ರಮೇಶ್. ಗುಬ್ಬಿ.