ಎಲ್ಲವನ್ನೂ, ಎಲ್ಲರನ್ನೂ ಮರೆತು ಹೊಸ ಬದುಕು ಕಟ್ಟಿಕೊಂಡು ನಮ್ಮಿಷ್ಟದಂತೆ ಬದುಕುತ್ತಿದ್ದೇವೆ ಎಂದುಕೊಂಡರೂ ಹಲವು ಸಂದರ್ಭಗಳಲ್ಲಿ ತಮ್ಮವರೆನಿಸಿಕೊಂಡವರ ಅನುಪಸ್ಥಿತಿ ತುಂಬಾ ಕಾಡುತ್ತದೆ. ಕಣ್ಣೀರು ಬರುತ್ತದೆ. ಯಾಕೆ ? ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಹರೆಯ ಉಕ್ಕಿ’ ತಪ್ಪದೆ ಮುಂದೆ ಓದಿ.
ಮನೆಯವರನ್ನು ಧಿಕ್ಕರಿಸಿ ಮದುವೆಯಾದವರ ಮುಂದಿನ ಬದುಕಿನ ಚಿತ್ರಣದ ಸಾಧ್ಯತೆಗಳು :
ಶಾರ್ವರಿ ಈಗ ತುಂಬು ಗರ್ಭಿಣಿ. ಅವಳ ಗಂಡ ಹೇಮಂತ್ ಆಟೋ ಡ್ರೈವರ್. ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು, ಮನೆಗೆ ಬಿಡುವುದು, ಬೇರೆ ಸಮಯದಲ್ಲಿ ಬಾಡಿಗೆಗೆ ಆಟೋ ಓಡಿಸುವುದು. ಈಗಷ್ಟೇ ಕರೋನ ಮುಗಿದು ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಇನ್ನೊಂದಷ್ಟು ರೂಲ್ಸುಗಳು, ಪೋಷಕರೂ ಒಟ್ಟೊಟ್ಟಿಗೆ ಆಟೋದಲ್ಲಿ ಮಕ್ಕಳನ್ನು ಕಳುಹಿಸಲು ಹಾಕುವ ಹಿಂದೇಟು, ಆ ಕಡೆ ಸರಿಯಾಗಿ ಬಾಡಿಗೆಯೂ ಇಲ್ಲ. ಇತ್ತ ಹೆಂಡತಿಗೆ ಯಾವಾಗ ಬೇಕಾದರೂ ಹೆರಿಗೆ ನೋವು ಬರಬಹುದು. ಕೈಯ್ಯಲ್ಲಿ ಹಣವಿಲ್ಲ, ಆಟೋ ಓಡಿಸದಿದ್ದರೆ ವಿಧಿಯಿಲ್ಲ. ಸಮಯವೆಂದು ಬಂದರೆ ಹೆಂಡತಿಯ ಜೊತೆಗೆ ಯಾರಿಲ್ಲ, ಎಲ್ಲದಕ್ಕೂ ತಾನೇ ಜೊತೆಯಾಗಿ ನಿಲ್ಲಬೇಕು. ಒಟ್ಟಿನಲ್ಲಿ ಜೀವನ ಅತಂತ್ರ. ಯಾಕೆ? ಹೆತ್ತವರು, ಬಂಧುಗಳು ಯಾರೂ ಇಲ್ಲವೇ ಎನ್ನುತ್ತೀರಾ. ಎಲ್ಲರೂ ಇದ್ದಾರೆ, ಆದರೆ ಇವರ ಪಾಲಿಗಿಲ್ಲ. ಇಬ್ಬರೂ ಇಷ್ಟಪಟ್ಟು ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದೇ ಇದಕ್ಕೆ ಕಾರಣ.
ಭವಾನಿಯ ಗಂಡ ರಮೇಶನಿಗೆ ಹೃದಯ ಸಂಬಂಧಿ ಕಾಯಿಲೆ. ಅರ್ಜೆಂಟಾಗಿ ಆಪರೇಷನ್ ಆಗಬೇಕೆಂಬ ವೈದ್ಯರ ಸಲಹೆಯ ಮೇರೆಗೆ ನಾಳೆಯೇ ನಿಗದಿಯಾಗಿದೆ. ವಿಷಯ ತಿಳಿದ ತಕ್ಷಣ ಭವಾನಿಯ ತಂದೆ-ತಾಯಿ, ಅಣ್ಣ ಊರಿನಿಂದ ಬರುವುದರ ಜೊತೆಗೆ ತಮ್ಮ ಕೈಲಾದಷ್ಟು ಹಣವನ್ನೂ ತಂದಿದ್ದರು. ಅವಳ ತಾಯಿ ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಹೇಳಿ, ತಲೆ ತಡವುತ್ತಾ ಧೈರ್ಯ ತುಂಬುತ್ತಿದ್ದರೆ, ಅವಳ ತಂದೆ-ಅಣ್ಣ ರಮೇಶನಿಗೆ ನಿಮಗೇನೂ ಆಗುವುದಿಲ್ಲ, ನಾವೆಲ್ಲಾ ಇದ್ದೇವೆ ಎಂದು ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದರು. ರಮೇಶನ ಅಣ್ಣ ಜೊತೆಗಿದ್ದು ಎಲ್ಲವನ್ನೂ ನಿಭಾಯಿಸುತ್ತಿದ್ದರೆ, ಅವನ ತಂದೆ-ತಾಯಿಗೆ ಧೈರ್ಯ ತುಂಬುತ್ತಿದ್ದುದು ಅವನ ತಂಗಿ ಮತ್ತು ಅವಳ ಗಂಡ. ಹೀಗೆ ತುಂಬು ಕುಟುಂಬ ಸುಖದಲ್ಲಿರುವಂತೆ ಕಷ್ಟದಲ್ಲೂ ಭವಾನಿಯ ಕೈಹಿಡಿದಿತ್ತು. ಆಪರೇಷನ್ ಆಗಿ ಈಗ ರಮೇಶ ವಿಶ್ರಾಂತಿ ಪಡೆಯುತ್ತಿದ್ದಾನೆ. ಈಗಲೂ ಅವಳ ತಾಯಿ ಅವಳ ಸಹಾಯಕ್ಕಾಗಿ ನಾಲ್ಕು ದಿನ ಮಗಳ ಮನೆಯಲ್ಲೇ ಇರುವ ಮಾತಾಗಿದೆ.

ಇಲ್ಲಿ ಹಿರಿಯರು ನೋಡಿ ಮಾಡಿದ ಮದುವೆ, ಅವರ ವಿರುದ್ಧವಾಗಿ ಆದ ಲವ್ ಮ್ಯಾರೇಜ್ ಗಳ ಮುಂದಿನ ಜೀವನದ ಚಿತ್ರಣವನ್ನು ಕಾಣಬಹುದು. ಯಾವುದು ತಪ್ಪು/ ಸರಿ ಎನ್ನುವ ಚರ್ಚೆ ಖಂಡಿತಾ ಅಲ್ಲ. ಏಕೆಂದರೆ, ಲವ್ ಮಾಡಿ ಮದುವೆಯಾದವರೂ ಬೇಕಾದಷ್ಟು ಮಂದಿ ಚೆನ್ನಾಗಿ ಬದುಕುತ್ತಿದ್ದಾರೆ. ಅವರ ಇಷ್ಟಕ್ಕೆ ಒಪ್ಪಿ ಹಿರಿಯರೂ ಜೊತೆ ನಿಂತು ಮದುವೆ ಮಾಡಿದ್ದೂ ಇದೆ. ಹಿರಿಯರೇ ನೋಡಿ ಮಾಡಿದ ಮದುವೆಯಲ್ಲೂ ಬೇಕಾದಷ್ಟು ಸಮಸ್ಯೆಗಳು ಆಗಿದ್ದೂ ಉಂಟು. ಕಷ್ಟದಲ್ಲಿ ಸಂಬಂಧಿಕರೆಲ್ಲಾ ಹಿಂದೆ ಸರಿದು ಅವರನ್ನು ಒಂಟಿ ಮಾಡಿದ್ದೂ ಉಂಟು.
ಈ ಹರೆಯವೇ ಹಾಗೆ. ಗಂಡು-ಹೆಣ್ಣನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಬಿಡುತ್ತದೆ. ಆಗ ಅವರಿಗೆ ಯಾವುದು ತಪ್ಪು/ ಯಾವುದು ಸರಿ ಎಂಬ ವಿವೇಚನೆಯಾಗಲಿ, ಹಿರಿಯರ ಮಾತು ಕೇಳುವ ಮನಸ್ಥಿತಿಯಾಗಲಿ ಇರುವುದಿಲ್ಲ. ಹರೆಯದಲ್ಲಿ ಪ್ರೀತಿಗೆ ಸೋತು ತಮ್ಮದೇ ಆದ ಜಗತ್ತಿನಲ್ಲಿ ವಿಹರಿಸುತ್ತಾ, ಮನೆಯವರ ವಿರೋಧದ ನಡುವೆಯೂ ತಮ್ಮ ಬದುಕು ಕಂಡುಕೊಂಡು ಮುಂದೆ ಸಾಗಿದವರು ಬಹಳಷ್ಟು ಮಂದಿ. ಕೈ ತುಂಬಾ ದುಡಿಯುತ್ತೇವೆ, ಎಷ್ಟೇ ಚೆನ್ನಾಗಿದ್ದೇವೆ ಎಂದುಕೊಂಡರೂ, ಎಲ್ಲವನ್ನೂ, ಎಲ್ಲರನ್ನೂ ಮರೆತು ಹೊಸ ಬದುಕು ಕಟ್ಟಿಕೊಂಡು ನಮ್ಮಿಷ್ಟದಂತೆ ಬದುಕುತ್ತಿದ್ದೇವೆ ಎಂದುಕೊಂಡರೂ ಹಲವು ಸಂದರ್ಭಗಳಲ್ಲಿ ತಮ್ಮವರೆನಿಸಿಕೊಂಡವರ ಅನುಪಸ್ಥಿತಿ ತುಂಬಾ ಕಾಡುತ್ತದೆ. ಕಣ್ಣೀರು ಬರುತ್ತದೆ, ಸಂಕಟವಾಗುತ್ತದೆ. ಇನ್ನು ಕೆಲವೊಮ್ಮೆ ತಾವೇ ಕೈಯ್ಯಾರೆ ಮಾಡಿಕೊಂಡದ್ದಕ್ಕೆ ಪಶ್ಚಾತ್ತಾಪವೂ ಆಗುತ್ತದೆ.
ಅಂತಹ ಒಂದಷ್ಟು ಸಂದರ್ಭಗಳು :
- ಮದುವೆಯ ದಿನ: ತಂದೆ-ತಾಯಿ, ಒಡಹುಟ್ಟಿದವರ ಅನುಪಸ್ಥಿತಿ ಕಾಡುತ್ತದೆ. ಎಷ್ಟೇ ಅವರನ್ನೆಲ್ಲಾ ಬೇಡವೆಂದು ಬಿಟ್ಟು ಬಂದಿದ್ದರೂ, ಒಮ್ಮೆಯಾದರೂ ಎಲ್ಲರೂ ಕಣ್ಮುಂದೆ ಸುಳಿದು ಕಣ್ಣಂಚು ಒದ್ದೆಯಾಗುತ್ತದೆ.
- ಪ್ರಣಯ ಪಕ್ಷಿಗಳಾಗಿ ಬಾನಲ್ಲಿ ಹಾರಾಡಿ, ತೇಲಾಡಿ ಮತ್ತೆ ಭುವಿಗೆ ಬಂದು ದಿನನಿತ್ಯದ ಬದುಕು ಶುರುವಾಗಿ ವಾಸ್ತವದ ಅರಿವಾದಾಗ.
- ದಿನಗಳೆದಂತೆ: ಅಕ್ಕಪಕ್ಕ , ಕೆಲಸ ಮಾಡುವಲ್ಲಿ ತಮ್ಮ ಮನೆಯವರ ಬಗ್ಗೆ ಮಾತನಾಡುವಾಗ, ಅವರ ಕಾಳಜಿ ಮಾಡುವಾಗ.
- ಅನಾರೋಗ್ಯ ಉಂಟಾದಾಗ, ಹಣದ ಅವಶ್ಯಕತೆ ಬಿದ್ದಾಗ.
- ಬಸುರಿಯಾಗಿ ಸುಸ್ತು, ಸಂಕಟವಾದಾಗ ಅಮ್ಮ ಜೊತೆಗಿದ್ದಿದ್ದರೆ ಏನಾದರೂ ಮಾಡುತ್ತಿದ್ದಳು ಎನಿಸದೇ ಇರದು.
- ಬೇರೆ ಗರ್ಭಿಣಿಯರಿಗೆ ಸೀಮಂತ ಮಾಡುವಾಗ,

ಫೋಟೋ ಕೃಪೆ : ಅಂತರ್ಜಾಲ
ಹೆರಿಗೆ ಸಂದರ್ಭ :
- ಬಾಣಂತನ: ಇದಕ್ಕಂತೂ ತಾಯಿ ಜೊತೆಗಿದ್ದು ಬಾಣಂತಿ ಮಗುವನ್ನು ನೋಡಿಕೊಂಡು ಶುಶ್ರೂಷೆ, ಕಾಳಜಿ ಮಾಡಿದಷ್ಟು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ.
- ಬೇರೆ ಮಕ್ಕಳಿಗೆ ಅಜ್ಜ, ಅಜ್ಜಿ ಪ್ರೀತಿಯಿಂದ ನೋಡಿಕೊಳ್ಳುವಾಗ ನಮ್ಮ ಮಕ್ಕಳಿಗೆ ನಮ್ಮಿಂದಲೇ ಇದು ಸಿಗಲಿಲ್ಲ ಎಂಬ ಪಶ್ಚಾತಾಪ.
- ಮಕ್ಕಳು ದೊಡ್ಡವರಾದಂತೆ ನಮ್ಮ ಮನೆಗೆ ಯಾಕೆ ಯಾರೂ ಬರುವುದಿಲ್ಲ ಎಂದು ಕೇಳುವ ಪ್ರಶ್ನೆಗೆ ಗಂಟಲು ಕಟ್ಟಬೇಕಾದ ಪರಿಸ್ಥಿತಿ.
- ನಂಬಿ ಬಂದ ಗಂಡ ಕೈಕೊಟ್ಟು ಹೋದಾಗ/ ಹೆಂಡತಿಯಾಗಿ ಬಂದವಳು ಮೋಸ ಮಾಡಿ ಹೋದಾಗ.
- ಕಟ್ಟಿಕೊಂಡವನು ಕುಡಿದು ಬಂದು ಜಗಳವಾಡುವ, ಹೊಡೆಯುವ ಪ್ರವೃತ್ತಿಯನಾದರೆ ಇನ್ನೂ ಕಷ್ಟ. 12)ಹೆತ್ತವರು, ಒಡಹುಟ್ಟಿದವರು ಎದುರಿಗೆ ಕಂಡರೂ ಮಾತನಾಡಿಸದೇ ಹೋದಾಗ, ಅವರ ಸಾವಿನ ಸುದ್ದಿಯನ್ನು ತಿಳಿಸದೇ ಇದ್ದಾಗ, ಒಂದು ವೇಳೆ ವಿಷಯ ತಿಳಿದು ಹೋದರೂ, ಮುಖವನ್ನು ಸಹ ನೋಡಲು ಬಿಡದೇ ಹೊರದೂಡಿದಾಗ.
- ನಂಬಿ ಬಂದವನು ಕಾಯಿಲೆಯಿಂದ ಸೋತು ಮಲಗಿದಾಗ, ತಾನೇ ಕಷ್ಟಪಟ್ಟು ಕೂಲಿಯೋ ನಾಲಿಯೋ ಮಾಡಬೇಕಾದ ಪರಿಸ್ಥಿತಿ ಬಂದಾಗ.
- ಸಮಾಜ ನೋಡುವ ವಕ್ರದೃಷ್ಟಿಗೆ ಸೋತು ಹೈರಾಣಾದಾಗ. ಆಸ್ತಿ-ಅಂತಸ್ತು, ಮೇಲು-ಕೀಳು, ಭೇದಭಾವದ ಸುಳಿಗೆ ಸಿಲುಕಿ ನಲುಗಿದಾಗ.
- ತಾನು ಮಾಡಿಕೊಂಡ ಈ ಮದುವೆಯಿಂದ ಹೆತ್ತವರಿಗೆ ಆಘಾತವಾಗಿ ಆರೋಗ್ಯ ಹದಗೆಟ್ಟಾಗ/ಮರಣ ಹೊಂದಿದಾಗ.
- ಆಚಾರ-ವಿಚಾರ, ಶಾಸ್ತ್ರ- ಸಂಪ್ರದಾಯ, ಹಬ್ಬ- ಹರಿದಿನಗಳು, ಆಹಾರ ( ಸಸ್ಯಾಹಾರ/ ಮಾಂಸಾಹಾರ) ಹೀಗೆ ಎಲ್ಲವೂ ಬೇರೆ ಬೇರೆಯಾದಾಗ ಹೊಂದಾಣಿಕೆ ಬಹಳ ಕಷ್ಟ. ಆಗ ತಮ್ಮಲ್ಲಿಯೇ ಒಬ್ಬರ ಮಾತಿಗೆ ಇನ್ನೊಬ್ಬರು ಗೌರವ ನೀಡುತ್ತಿಲ್ಲ ಎನಿಸಿ ವೈಮನಸ್ಸು ಉಂಟಾಗುತ್ತದೆ.
- ಸುಖ-ದುಃಖ ಹಂಚಿಕೊಳ್ಳಲು ಯಾರೂ ಇಲ್ಲದಿದ್ದಾಗ.
- ಮನೆಯವರ ಸುಖ-ಸಂತೋಷದಲ್ಲಿ, ಮದುವೆ ಮುಂತಾದ ಸಮಾರಂಭಗಳಲ್ಲಿ ತಮಗೆ ಕರೆ ಬರದಿದ್ದಾಗ. ಅಬ್ಬಾ! ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ಹೀಗೆ ಜೀವನದ ಪ್ರತಿ ಕ್ಷಣವೂ ಮುಂದೆ ಕಾಡುವಂತೆ ಆಗಬಹುದು.
“ಸ್ನೇಹಿತರು ಜೊತೆಗೆ ನಿಂತು ಎಲ್ಲವನ್ನೂ ಸರಿದೂಗಿಸುವರು, ಇಲ್ಲವೆಂದಲ್ಲ. ದುಡ್ಡಿದ್ದರೆ ಈಗ ಎಲ್ಲಾ ಕೆಲಸಕ್ಕೂ ಜನ ಸಿಗುವರು. (ಬಾಣಂತಿಗೆ, ಮಗುವಿಗೆ ನೀರು ಹಾಕುವುದರಿಂದ ಹಿಡಿದು ಅಡುಗೆ, ತಿಂಡಿ, ಆರೋಗ್ಯ ಸರಿ ಇಲ್ಲದವರನ್ನು ನೋಡಿಕೊಳ್ಳುವುದಕ್ಕೂ ಸಹ) ಇದೂ ನಿಜ. ಆದರೆ….ಕುಟುಂಬವೆಂಬ ಪರಿಕಲ್ಪನೆಯಲ್ಲಿ ಬೆಳೆದವರಿಗೆ ಹೆತ್ತವರ, ಒಡಹುಟ್ಟಿದವರ ರಕ್ತಸಂಬಂಧ ಭಾವನಾತ್ಮಕವಾಗಿ ಬೆಸೆದುಕೊಂಡಿರುವಾಗ ಅವರ ಜೊತೆ ಕಳೆದ ದಿನಗಳ ನೆನಪು, ಅವರಿಂದ ದೂರವಾಗಿ ಮಾನಸಿಕವಾಗಿ ಅನುಭವಿಸುವ ನೋವು ಪದಗಳಲ್ಲಿ ಹೇಳಲು ಖಂಡಿತಾ ಸಾಧ್ಯವಿಲ್ಲ.”
ಕೊನೆಯದಾಗಿ ಒಂದು ಮಾತು. ಇಷ್ಟಪಡುವುದು ತಪ್ಪಲ್ಲ. ಮೊದಲು ವಿದ್ಯಾಭ್ಯಾಸ, ಜೊತೆಗೆ ತಮ್ಮನ್ನು ತಾವು ಸಾಕಿಕೊಳ್ಳುವಷ್ಟಾದರೂ ಸಂಬಳ ಬರುವಷ್ಟು ದುಡಿಮೆಯ ಕೆಲಸ ಹೆಣ್ಣಿಗೆ. ಗಂಡಿಗೆ, ನಂಬಿ ಬಂದವಳನ್ನು ಬಾಳಿಸುವಷ್ಟಾದರೂ ಯೋಗ್ಯತೆ ಸಂಪಾದಿಸಿಕೊಂಡಾಗ. ಇಷ್ಟೆಲ್ಲಾ ಇದ್ದರೂ ಮನೆಯವರ ಮನವೊಲಿಸಿ, ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾದರೆ ಅದರ ಖದರ್ರೇ ಬೇರೆ. ಒಂದು ವೇಳೆ ಹಿರಿಯರು ಒಪ್ಪದಿದ್ದರೂ, ನೀವು ಚೆನ್ನಾಗಿ ಬಾಳಿ ಬದುಕುವುದನ್ನು ನೋಡಿದ ಮುಂದೊಂದು ದಿನ ನಿಮ್ಮ ಬಳಿ ಅವರಿಗೇ ಬರಬೇಕೆನಿಸಬಹುದು. ಹೌದು, ನಮ್ಮ ಒಪ್ಪಿಗೆ ಕೇಳಿ ಆಶೀರ್ವಾದ ಬೇಡಿದ್ದರು, ನಮ್ಮ ಸ್ಥಾನಮಾನಕ್ಕೆ ಗೌರವ ಕೊಟ್ಟಿದ್ದರು ಎನ್ನುವ ನೆನಪು ಅವರಿಗೂ ಆಗಾಗ ಕಾಡಬಹುದು. ಇದೆಲ್ಲಾ ಏನೇ ಇದ್ದರೂ, ಎಲ್ಲಕ್ಕಿಂತ ಮೊದಲು ತಾವು ಬೆಳೆದ ವಾತಾವರಣ, ಇಂತಹ ತೀರ್ಮಾನ ತೆಗೆದುಕೊಳ್ಳುವ ಮುನ್ನ ತಮ್ಮ ಮನೆಗೆ ಸರಿ ಹೊಂದುತ್ತದೆಯೋ/ಇಲ್ಲವೋ, ತಂದೆ-ತಾಯಿ ಒಪ್ಪುತ್ತಾರೋ/ ಇಲ್ಲವೋ, ಮುಂದಿನ ಆಗುಹೋಗುಗಳು ಎಲ್ಲವುದನ್ನೂ ಮೊದಲೇ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಮಂಗಳ ಎಂ ನಾಡಿಗ್
