ಅಂಗೈಯಲ್ಲಿ ಪ್ರಪಂಚ (ಭಾಗ- ೧೩)

ನಿವೃತ್ತಿ ಜೀವನ ಅಥವಾ ಯೌವ್ವನದ ಹಂತ ದಾಟಿದ ನಂತರದ ಜೀವನ ಕೆಲವರಿಗೆ ಕಷ್ಟ ಎನಿಸುತ್ತಿರುವುದು ಸತ್ಯ. ಎಲ್ಲವುದಕ್ಕೂ ಮಕ್ಕಳು ಹೇಳಿದಂತೆ ಕೇಳಬೇಕು ಜೊತೆಗೆ ಕಾಡುವ ವಯೋಸಹಜ ಆರೋಗ್ಯ ಸಮಸ್ಯೆಗಳು. ವಿದ್ಯಾಭ್ಯಾಸ, ಯೌವ್ವನದಂತೆ ಕೆಲಸ, ನಿವೃತ್ತಿಯೂ ಜೀವನದ ಇನ್ನೊಂದು ಹಂತ ಅಷ್ಟೇ, ಅದೇ ಕೊನೆಯಲ್ಲ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’ ತಪ್ಪದೆ ಮುಂದೆ ಓದಿ.

ಎಲ್ಲಾ ಕೆಲ್ಸಾನು ನಂಗೇ ಹೇಳ್ತಾರೆ. ತರ್ಕಾರಿ ತನ್ನಿ, ಮಗು ಯೂನಿಫಾರಂ ಇಸ್ತ್ರಿ ಮಾಡುಸ್ಕೊಂಬನ್ನಿ, ಗಿಡಕ್ಕೆ ಸ್ವಲ್ಪ ನೀರ್ಹಾಕಿ ಹೀಗೆ ಏನಾದ್ರೂ.. ಹೇಳಕ್ಹೋದ್ರೆ ಮಾತಾಡೋ ಮುಂಚೇನೇ ಈಗ ಹೇಗಿದ್ರೂ ಕೆಲ್ಸಕ್ ಏನ್ ಹೋಗಲ್ವಲ್ಲ, ಮಾಡಿದ್ರೆ ಏನಾಯ್ತು? ನಿಮ್ಗೂ ಹೊತ್ತ್ಹೋಗುತ್ತೆ. ಸುಮ್ನೆ ಕೂತ್ಕಂಡಿದ್ರೆ ತಿಂದಿದ್ದೂ ಅರ್ಗಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳ್ತಾಳೆ ಸೊಸೆ ಎಂದು ಕಣ್ತುಂಬಿಕೊಂಡರೂ, ಕಾಣಿಸದೇ ಇರುವಂತೆ ತಡೆಹಿಡಿದು ಹೇಳಿದ್ದರು ವಾಯುವಿಹಾರ ಮಾಡುತ್ತಿರುವ ಹಿರಿಯರೊಬ್ಬರು ತಮ್ಮ ಜೊತೆ ಹೆಜ್ಜೆ ಹಾಕುತ್ತಿದ್ದ ಸಮಾನ ವಯಸ್ಕರೊಂದಿಗೆ. ನಮ್ಮನೇಲೂ ಇದೇ ಕಥೆ. ನಿನ್ಗೆ ಈಗ ಅನುಭವ ಆಗ್ತಾ ಇದೆ ಅಷ್ಟೇ. ನಿವೃತ್ತಿ ಆದ್ಮೇಲೆ ಮೊದ್ಲೇ ದಿನ ಕಳ್ಯದು ಕಷ್ಟ. ಅದ್ರೂ ಜೊತೆ ಮನೇಲೂ ಯಾರೂ ಬೆಲೆ ಕೊಡಲ್ಲ. ಇಷ್ಟ್ ವರ್ಷ ನಮ್ಮನೆ, ಮಕ್ಳು, ಸಂಸಾರ ಅವರ ವಿದ್ಯಾಭ್ಯಾಸ ಅಂತ ನಮ್ಮ ಆಸೆ-ಆಕಾಂಕ್ಷೆನೆಲ್ಲಾ ಬದಿಗೊತ್ತಿ ಬದ್ಕಿದ್ವಿ. ಮಕ್ಕಳಿಗೆ ಅಂತ ಸಾಲ ಮಾಡಿ ಮನೆಕಟ್ಟಿ, ನಿವೃತ್ತಿಯಲ್ಲಿ ಬಂದ ಹಣದಲ್ಲೂ ಅವ್ರಿಗೆ ಕಷ್ಟ ಆಗ್ಬಾರ್ದು ಅಂತ ಸಾಲ ಪೂರ್ತಿ ತೀರುಸ್ದೆ. ಯಾವ್ದೂ ಲೆಕ್ಕಕ್ಕಿಲ್ಲ. ಈಗ ದುಡ್ಯಲ್ಲ ಸುಮ್ನೆ ಕೂತಿರ್ತಾರೆ ಅನ್ನೋದಷ್ಟೇ ಎಲ್ಲರಿಗೂ ಕಾಣ್ಸದು. ಇದು ಅವರ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದ ಇನ್ನೊಬ್ಬರ ಮಾತು.

ಏಳ್ಗಂಟೆ ಆದ್ರೂ ಸೊಸೆ ಏಳಲ್ಲ. ಗಂಡಂಗೆ ತಿಂಡಿ ಮಾಡ್ಕೊಡ್ಬೇಕು, ಮಧ್ಯಾಹ್ನಕ್ಕೆ ಡಬ್ಬಿಗೆ ಹಾಕ್ಕೊಡ್ಬೇಕು, ಮಗೂಗೆ ಶಾಲೆಗೆ ತಯಾರಿ ಮಾಡ್ಬೇಕು ಯಾವ ಜವಾಬ್ದಾರಿನೂ ಇಲ್ಲ ಅವ್ಳಿಗೆ. ಎಲ್ಲ ನಾನೇ ಮಾಡ್ಬೇಕು. ನನ್ಗೂ ಮಾಡೀ ಮಾಡೀ ಸಾಕಾಗಿದೆ. ಗಂಡ, ಮಕ್ಳು ಎಲ್ಲರಿಗೂ ಇಷ್ಟ್ ವರ್ಷ ಮಾಡಾಯ್ತು. ಮಗಂಗೆ ಮದ್ವೆ ಆದ್ಮೇಲೆ ಸೊಸೇನೂ ಕೆಲ್ಸಕ್ ಹೋಗೋಳು ಅಂತ ಅವ್ಳಿಗೂ ಎಲ್ಲಾ ಸೇವೇನೂ ಮಾಡಿದ್ದಾಯ್ತು. ಆಮೇಲೆ ಮಗೂನ ನೋಡ್ಕಳದು ಹೀಗೆ. ನನ್ಗೂ ಸ್ವಲ್ಪ ವಿಶ್ರಾಂತಿ ಬೇಕು. ನನ್ನದೇ ಅಂತ ಭಾವನೆಗಳಿವೆ, ನನ್ಗೂ ಅಂತ ಒಂದು ಬದ್ಕಿದೆ ಅಂತ ಯಾರೂ ಯಾಕೆ ಅರ್ಥ ಮಾಡ್ಕೊಳಲ್ಲ. ಮಕ್ಕಳ ಜವಾಬ್ದಾರಿ ಮುಗುದ್ಮೇಲಾದ್ರೂ ನಾನು ಬಿಡುವಾಗ್ತೀನಿ ಅಂದ್ಕೊಂಡೆ. ಆದ್ರೆ ದಿನದಿನಕ್ಕೂ ಇನ್ನೂ ಜವಾಬ್ದಾರಿ ಜಾಸ್ತೀನೇ ಆಗ್ತಿದೆ. ಆಗಾಗ ಸುಸ್ತಾಗುತ್ತೆ, ಕೇಳೋರು ಯಾರೂ ಇಲ್ಲ. ಎಲ್ಲರೂ ಅವರವರ ಕೆಲಸದಲ್ಲಿ ವ್ಯಸ್ತರು. ಶನಿವಾರ, ಭಾನುವಾರ ಬಂದ್ರೆ ಹೊರಗಡೆ ಹೋದ್ರೆ ರಾತ್ರೀನೇ ಮನೇಗ್ಬರೋದು. ಇದು ಹಿರಿಯ ಮಹಿಳೆಯೊಬ್ಬರ ಅಳಲು. ಹೌದು, ನಮ್ ಅಣ್ಣ-ಅತ್ತಿಗೆ, ನನ್ತಂಗಿ, ಭಾವ ಎಲ್ಲರೂ ಪುಣ್ಯಕ್ಷೇತ್ರಗಳಿಗೆ ಹೋಗ್ತಿದಾರೆ. ನನ್ನನ್ನೂ ಕರೆದ್ರು. ಹೇಳಿದ್ದುಕ್ಕೆ ನೀನ್ಹೋದ್ರೆ ಮಗು ನೋಡ್ಕೊಳ್ಳೋರು ಯಾರು ಎಂದ ಮಗ. ನನ್ಗೂ ಆಸೆ ಇತ್ತು, ಎಲ್ಲರ್ಜೊತೆ ಹೋಗಿ ದೇವರ ದರ್ಶನ ಮಾಡ್ಕೊಂಡ್ಬರ್ಬೇಕು ಅಂತ. ಇಷ್ಟ್ ವರ್ಷ ಅಂತೂ ಎಲ್ಲೂ ಹೋಗ್ಲಿಲ್ಲ. ಇದು ಇನ್ನೊಬ್ಬ ಹಿರಿಯ ಮಹಿಳೆಯ ಬೇಸರ.

ಫೋಟೋ ಕೃಪೆ : ಗೂಗಲ್

“ವಯಸ್ಸನ್ನು ಪರಿಗಣಿಸದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಒಂದೊಂದು ಕ್ಷಣವನ್ನೂ ಸಂಭ್ರಮಿಸಬೇಕು” ಎಂಬುದು ಖ್ಯಾತ ನಿವೃತ್ತ ವೈದ್ಯಾಧಿಕಾರಿಯಾದ ಡಾ.ಎಸ್. ಕೋದಂಡರಾಮ್ ಸರ್ ಅವರ ಮಾತು. ನುಡಿದಂತೆ ನಡೆಯುತ್ತಿರುವ ವ್ಯಕ್ತಿ ಅವರು. ಅಕ್ಕಪಕ್ಕದಲ್ಲಿರುವ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರತೀ ತಿಂಗಳು ಹೋಗಿ ರೋಗಿಗಳನ್ನು ಪರೀಕ್ಷಿಸಿ, ಔಷಧಿಗಳನ್ನು ಸಂಗ್ರಹಿಸಿ ಕೊಡುತ್ತಾರೆ. ಇದಕ್ಕೆ ತಮ್ಮ ವೃತ್ತಿ ಜೀವನವೂ ಸಹಾಯಕವಾಗಿದೆ ಎಂಬುದನ್ನು ಅವರೇ ಹೇಳುತ್ತಾರೆ. ಜೊತೆಗೆ ಬುದ್ಧಿಮಾಂದ್ಯ ಮಕ್ಕಳಿಗೆ ಅತ್ಯಂತ ಅವಶ್ಯಕತೆ ಇರುವಂತಹ ಡೈಪರ್ ಗಳನ್ನು ಸಮಾನ ಮನಸ್ಕರ ಸಹಾಯದೊಂದಿಗೆ ಆಗಾಗ ಹೋಗಿ ನೀಡುತ್ತಾರೆ. ಏಕಾಂಗಿಯಾಗಿರುವ ವಯಸ್ಸಾದವರ ಜೊತೆ ಹೋಗಿ ಸ್ವಲ್ಪ ಸಮಯ ಕಾಲ ಕಳೆಯುತ್ತಾರೆ. ಯೋಧರ ಮನೆಗಳಿಗೆ ಭೇಟಿ ನೀಡಿ ಅವರನ್ನು ಕಾರ್ಯಕ್ರಮಗಳಿಗೆ ಕರೆಸಿ, ಸನ್ಮಾನ ಮಾಡಿ ಅವರ ಅನುಭವಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಮಾಡುತ್ತಾರೆ. ಇದು ಅನೇಕ ಯುವಜನರಲ್ಲಿ ಸೇನೆಗೆ ಸೇರುವ ಹಂಬಲ, ದೇಶಭಕ್ತಿ ಮೂಡಿಸುವಲ್ಲಿ ಸಹಕಾರಿಯಾಗುತ್ತದೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಿವೃತ್ತಿ ನಂತರವೂ ಅತ್ಯಂತ ಜೀವನೋತ್ಸಾಹದಿಂದ ಬದುಕುತ್ತಿದ್ದಾರೆ.

ಹೌದು, ಇದೆಲ್ಲಾ ಕೆಲವು ಉದಾಹರಣೆಯಷ್ಟೇ. ನಿವೃತ್ತಿ ಜೀವನ ಅಥವಾ ಯೌವ್ವನದ ಹಂತ ದಾಟಿದ ನಂತರದ ಜೀವನ ಕೆಲವರಿಗೆ ಕಷ್ಟ ಎನಿಸುತ್ತಿರುವುದು ಸತ್ಯ. ಮನೆಯಲ್ಲಿ ಗೌರವವಿಲ್ಲ, ದುಡಿಮೆ ಇಲ್ಲ, ಹೊತ್ತು ಹೋಗಲ್ಲ. ಎಲ್ಲವುದಕ್ಕೂ ಮಕ್ಕಳು ಹೇಳಿದಂತೆ ಕೇಳಬೇಕು ಜೊತೆಗೆ ಕಾಡುವ ವಯೋಸಹಜ ಆರೋಗ್ಯ ಸಮಸ್ಯೆಗಳು. ಮಗ ಸೊಸೆಯರ ಜೊತೆ ಹೊಂದಾಣಿಕೆಯಿಲ್ಲ, ಮೊಮ್ಮಕ್ಕಳು ಹತ್ತಿರ ಬರಲ್ಲ, ಮಾತಾಡ್ಸಲ್ಲ ಯಾವುದಕ್ಕೂ ಸ್ವಾತಂತ್ರ್ಯ ಇಲ್ಲ ಹೀಗೆ.. ಎಲ್ಲಕ್ಕೂ ಹೆಚ್ಚಾಗಿ ಇನ್ನು ಮುಂದೆ ಹಣದ ವಿಷಯದಲ್ಲಿ ಮಕ್ಕಳ ಮೇಲೆ ಅವಲಂಬನೆ ಆಗಬೇಕೆನ್ನುವುದು ಅರ್ಧ ಮನಸ್ಸಿಗೆ ಕೊರಗು ಉಂಟುಮಾಡಿ ಹಲವರಲ್ಲಿ ಜೀವನೋತ್ಸಾಹ ಕುಗ್ಗಿಸುತ್ತಿದೆ. ಕೆಲವರಿಗೆ ನಮ್ಮ ದುಡ್ಡಿಗೋಸ್ಕರ, ಆಸ್ತಿಗೋಸ್ಕರ ನಮ್ಮತ್ರ ಬರ್ತಾರೆ ಎಂಬ ಬೇಸರವಿದೆ. ಇನ್ನೂ ಹೆಚ್ಚಿಗೆ ಹೇಳುವುದಾದರೆ ಕಷ್ಟಪಟ್ಟು ದುಡಿದು ಈಗ ಎಲ್ಲರಿಗೂ ಬಿಟ್ಟು ಹೋಗ್ಬೇಕಲ್ಲ ಎನ್ನುವ ಮನಸ್ಥಿತಿಯವರೂ ಇದ್ದಾರೆ. ಇದರಿಂದಾಗಿ ನಾವು ಹೇಳಿದಂತೆ ಎಲ್ಲರೂ ಕೇಳಿಕೊಂಡಿರಬೇಕು ಎಂಬ ಧೋರಣೆ ಹೊಂದಿದವರೂ ಸಹ ಇದ್ದಾರೆ. ಒಂದಲ್ಲಾ ಒಂದು ರೀತಿಯಲ್ಲಿ ಕೊರಗು, ಕೆಲವರಲ್ಲಿ ಅಹಂ, ಬೇಸರ, ಹೀಗೆ ಒಟ್ಟಿನಲ್ಲಿ ಯಾವುದೋ ಒಂದು ಕಾರಣದಿಂದ ಜೀವನದಲ್ಲಿ ಉತ್ಸಾಹ, ನೆಮ್ಮದಿ ಕಳೆದುಕೊಂಡು ಬದುಕುವಂತಾಗಿದೆ. ಇದಕ್ಕೆಲ್ಲಾ ಪರಿಹಾರ ನಮ್ಮ ಕೈಯ್ಯಲ್ಲೇ ಇದೆ. ನಾಡಿನ ಹಿರಿಯ ಕವಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿಯವರು ಹೇಳಿದಂತೆ “ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ” ಈ ಹಾಡನ್ನು ಕೇಳಿದರೆ ಹೇಗೆ ಬದುಕಬೇಕೆಂಬ ಅರಿವು ಮೂಡುವುದರ ಜೊತೆಗೆ ಜೀವನೋತ್ಸಾಹ ಹೆಚ್ಚುವುದಂತೂ ಖಂಡಿತಾ ಸತ್ಯ.

ವಿದ್ಯಾಭ್ಯಾಸದ ನಂತರ ಬದುಕನ್ನು ಕಟ್ಟಿಕೊಳ್ಳಲು ಹೇಗೆ ಕೆಲಸದೆಡೆ ಮನಸ್ಸು ಮಾಡುತ್ತೇವೋ ಹಾಗೇ ನಿವೃತ್ತಿಯ ನಂತರ ನಮ್ಮ ಬದುಕಿನ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು. ನಿಜವಾದ ಖುಷಿ ಎಂದರೇನು ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಮೊದಲು ನಮಗೆ ಏನು ಬೇಕು ಎಂದು ಕಂಡುಕೊಂಡು, ಗುರಿ ಇಟ್ಟುಕೊಂಡಿದ್ದರೆ ಪ್ರತಿಕ್ಷಣವೂ ಹೊಸತೆನಿಸುತ್ತದೆ. ನಿವೃತ್ತಿಗೆ ಮುಂಚೆಯೇ ಮುಂದಿನ ದಿನಗಳ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಯಾರಿ ಮಾಡಿದ್ದರಂತೂ ಈ ಸಮಯ ನಿಜವಾಗಲೂ ಸಂತೋಷಮಯ. “ಜೀವನದಲ್ಲಿ ನಮಗೆ ಅಂತ ಸಮಯ ಕೊಟ್ಟುಕೊಳ್ಳುವ ಕಾಲ ಇದು”. ವಾಕಿಂಗ್, ಆರೋಗ್ಯಕರ ಆಹಾರ, ಸ್ನೇಹಿತರ ಒಡನಾಟ, ಓದುವುದು, ಕೈತೋಟ, ಚಿಕ್ಕ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆಯುವುದು, ದೇವಸ್ಥಾನಗಳಿಗೆ ಭೇಟಿ ನೀಡುವುದು, ಯೋಗ, ಧ್ಯಾನ, ಆಧ್ಯಾತ್ಮ ಹೀಗೆ ಯಾವ ವಿಷಯದಲ್ಲಿ ನಮಗೆ ಆಸಕ್ತಿ ಇದೆಯೋ ಅದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಇಷ್ಟು ವರ್ಷ ಮಾಡಲಾಗದಿದ್ದ ನಮ್ಮ ಹವ್ಯಾಸಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಇದು ಸಕಾಲ. ಈಗ ಯಾವ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ ಮುಂದುವರೆದ ತಂತ್ರಜ್ಞಾನದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ನಮಗೆ ಲಭ್ಯ. ಪ್ರತಿಯೊಂದಕ್ಕೂ ಬೇರೆಯವರ ಮೇಲೆ ಅವಲಂಬನೆಯಾಗಬೇಕಾದ ಅವಶ್ಯಕತೆ ಖಂಡಿತಾ ಇಲ್ಲ. ಕುಳಿತಲ್ಲಿಗೇ ಎಲ್ಲಾ ಸೌಲಭ್ಯವನ್ನು ನೀಡುವಂತಹ ಇದು ನಮ್ಮ ಹವ್ಯಾಸಗಳಿಗೂ ಒಂದು ವರದಾನ ಎಂದರೆ ತಪ್ಪಲ್ಲ.

ಫೋಟೋ ಕೃಪೆ : ಗೂಗಲ್

ಸಾಹಿತ್ಯ-ಸಂಗೀತ, ಹಾಸ್ಯ, ಅಡುಗೆ, ಚಿತ್ರಕಲೆ, ತೋಟಗಾರಿಕೆ, ಕರಕುಶಲ ಕಲೆ ಹೀಗೆ ಎಲ್ಲವೂ ನಮಗೆ ಸಾಮಾಜಿಕ ಜಾಲತಾಣದಲ್ಲಿ ಲಭ್ಯ. ಇದರಲ್ಲಿ ತೊಡಗಿಸಿಕೊಂಡ ಅನೇಕರು ನೆಮ್ಮದಿ ಕಂಡುಕೊಂಡದ್ದಂತೂ ಸತ್ಯ. ನಿವೃತ್ತಿಯಾದ ಮೇಲೆ ಹಿಂದಿನ ದಿನಗಳನ್ನು ನೆನೆದು ಇಂದು ಕೊರಗುವುದರಲ್ಲಿ ಯಾವ ಅರ್ಥವೂ ಇಲ್ಲ. ಹಿಂದಿನ ದಿನಗಳ ಅನುಭವದ ಮೇಲೆ ಮುಂದಿನ ದಿನಗಳನ್ನು ಸುಗಮವಾಗಿಸಿಕೊಳ್ಳಬಹುದು. ಇಷ್ಟು ದಿನ ಮಾಡದಿರುವುದರ ಬಗ್ಗೆ ಚಿಂತಿಸುವ ಬದಲು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನಿಸಿದರೆ ನಿಜವಾದ ಆನಂದ ಸಿಗುವುದು.

ಜೊತೆಗೆ ನಮ್ಮ ದಿನಚರಿಯಲ್ಲೂ ಹೊಸತನವಿರಲಿ, ಒಂದೇಕಡೆ ವಾಯುವಿಹಾರ ಮಾಡುವುದರ ಬದಲು ಸಾಧ್ಯವಾದ ಬೇರೆಬೇರೆ ಸ್ಥಳಗಳಲ್ಲಿ ಮಾಡಬಹುದು. ಒಬ್ಬರೇ ಮಾಡಲು ಬೇಸರ ಅಥವಾ ಕಷ್ಟವೆನಿಸಿದರೆ ಸಮಾನ ಮನಸ್ಕರ ಜೊತೆ ಮಾತನಾಡುತ್ತಾ ಹೆಜ್ಜೆ ಹಾಕಿದರೆ ಶ್ರಮವೆನ್ನುವುದು ಹತ್ತಿರವೂ ಸುಳಿಯುವುದಿಲ್ಲ. ವಯಸ್ಸಾಯಿತೆಂದು ಕೊರಗುವುದರ ಬದಲು ಪ್ರತಿಕ್ಷಣವನ್ನೂ ಸಂತೋಷದಿಂದ ಜೀವನಾನುಭವವನ್ನು ಅನುಭವಿಸಿ. ಅದು ವೃತ್ತಿಯದೇ ಆಗಿರಲಿ ಅಥವಾ ನಡೆದುಬಂದ ಹಾದಿಯೇ ಆಗಿರಲಿ. ಅದರಿಂದ ಬೇರೆಯವರಿಗೂ ಮಾರ್ಗದರ್ಶನ ಸಿಗಬಹುದು.

ಇಷ್ಟು ದಿನ ಬದುಕಿ ಬಾಳಲು ಕಾರಣಕರ್ತರಾದ ಸಮಾಜಕ್ಕೆ ಈಗ ನಾವು ನಮ್ಮ ಕೈಲಾದದ್ದು ಕೊಡುವ ಸಮಯ. ವಿದ್ಯಾಭ್ಯಾಸವಾಗಲಿ, ಕೆಲಸವಾಗಲಿ ನಮಗೋಸ್ಕರ ನಾವು ಮಾಡಿದ್ದರೂ ಅದರ ಹಿಂದೆ ನೂರಾರು, ಸಾವಿರಾರು ಜನರ ಶ್ರಮವಂತೂ ಇರುವುದು ಸತ್ಯ. ಉದಾಹರಣೆಗೆ, ಒಂದು ಮಗು ವಿದ್ಯೆ ಕಲಿಯಬೇಕಾದರೆ ಅದಕ್ಕೆ ಬೇಕಾಗುವಂತಹ ವ್ಯವಸ್ಥೆಯನ್ನು ಮಗುವಿನ ಪೋಷಕರು ಮಾಡಿದರೂ ಸಹ, ಮುಖ್ಯವಾಗಿ ಮಗು ಓದಲು ಒಂದು ವಿದ್ಯಾಸಂಸ್ಥೆ, ಅದರ ಸಂಸ್ಥಾಪಕರು, ಶಿಕ್ಷಕರು, ಪುಸ್ತಕ ತಯಾರಿಸುವವರು, ಪರೀಕ್ಷೆಗೆ ಬೇಕಾದ ತಯಾರಿ, ಪ್ರಯಾಣದ ಸೌಲಭ್ಯ, ಈ ರೀತಿ ಹಲವಾರು ಜನರ ಶ್ರಮ ಖಂಡಿತಾ ಇರುತ್ತದೆ. ಅದೇ ರೀತಿ ನಾವು ಒಂದು ಕಡೆ ಕೆಲಸ ಮಾಡಬೇಕಾದರೂ, ಕೆಲಸ ನೀಡುವ ಸಂಸ್ಥೆಯ ಹಿಂದೆ ವರ್ಷಗಳ ಇತಿಹಾಸ, ಸಾವಿರಾರು ಜನರ ಹಗಲಿರುಳಿನ ಸೇವೆ ಪ್ರತಿಯೊಂದೂ ಇರುತ್ತದೆ. ಹೌದು, ನಾವಲ್ಲಿ ಕೆಲಸ ಮಾಡುತ್ತೇವೆ ಅದಕ್ಕೆ ಸಂಬಳ ಕೊಡುತ್ತಾರೆ ಇಂತಹ ಧೋರಣೆ ಖಂಡಿತಾ ಬೇಡ. ಏಕೆಂದರೆ, ಎಲ್ಲರಿಗೂ ಹೊಲ, ಗದ್ದೆಯೆಂಬ ಆಸ್ತಿಯಾಗಲಿ ಅಥವಾ ಸ್ವಂತ ಬಂಡವಾಳ ಹಾಕಿ ವ್ಯಾಪಾರ ಶುರು ಮಾಡುವ ಆರ್ಥಿಕ ಸ್ಥಿತಿಯಾಗಲೀ ಖಂಡಿತಾ ಇರುವುದಿಲ್ಲ. ಎಷ್ಟೇ ಓದಿದರೂ ಕೆಲಸ ಕೊಡುವವರೇ ಇಲ್ಲದಿದ್ದರೆ ದುಡಿಮೆಗೆ ದಾರಿಯೆಲ್ಲಿ? ಕೆಲಸ ಸಿಕ್ಕಿದ ಮೇಲೆ ವಿದ್ಯಾಭ್ಯಾಸದ ಸಾಲದಿಂದ ಹಿಡಿದು, ಹಿರಿಯರು ಮಾಡಿದ ಸಾಲ, ಮುಂದೆ ತಮ್ಮ ಬದುಕು ಕಟ್ಟಿಕೊಳ್ಳಲು ಬೇಕಾದ ವ್ಯವಸ್ಥೆ, ಮದುವೆ, ಮನೆ, ಮಕ್ಕಳು ಅವರ ಜವಾಬ್ದಾರಿ ಹೀಗೆ ಎಲ್ಲದಕ್ಕೂ ಆ ಕೆಲಸವೇ ಅಡಿಪಾಯ. ಆ ಕೆಲಸ ಮಾಡಿದ ಇಷ್ಟು ವರ್ಷಗಳು ನಮ್ಮ ಜೊತೆ ನೇರವಾಗಿ ಅಥವಾ ಪರೋಕ್ಷವಾಗಿ ಅನೇಕರ ಸಹಕಾರವಂತೂ ಇದ್ದೇ ಇರುತ್ತದೆ. ಹಾಗಂತ ಇಂದು ನಾವು ಅವರನ್ನೇ ಹುಡುಕಿ ಸಹಾಯ ಮಾಡಬೇಕೆಂದಿಲ್ಲ. ನಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನಮ್ಮ ಕೈಲಾದ ಸಹಾಯ ( ನಾನು ಇದನ್ನು ಸಹಾಯ ಎನ್ನುವುದಕ್ಕಿಂತ ಸೇವೆ ಎನ್ನಲು ಇಷ್ಟಪಡುತ್ತೇನೆ )ವನ್ನು ಅಗತ್ಯ ಇರುವವರಿಗೆ, ಅದೂ ಯೋಗ್ಯರಿಗೆ ಮಾಡುವ ಸಮಯ. ಏಕೆಂದರೆ, ಕಷ್ಟಪಟ್ಟು ದುಡಿದ ಹಣ, ಮನಸ್ಸಿನಿಂದ ಮಾಡುವ ಕೆಲಸ ಯಾವುದೂ ವ್ಯರ್ಥವಾಗಬಾರದಲ್ಲವೇ..

ಇನ್ನೊಂದು ಮಾತು. ನನಗೆ ವಯಸ್ಸಾಯ್ತು, ಎಲ್ಲರೂ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂಬ ನಿರೀಕ್ಷೆಗಿಂತ ನಮ್ಮ ಆರೋಗ್ಯದ ಬಗ್ಗೆ ಮೊದಲು ನಾವು ಕಾಳಜಿ ವಹಿಸುವುದು ಉತ್ತಮ. ಅದು ಆಹಾರದಲ್ಲಿ, ಮಾನಸಿಕ ಚಿಂತನೆಯಲ್ಲಿ , ವ್ಯಾಯಾಮ, ಯೋಗ, ಧ್ಯಾನ ಹೀಗೆ ಯಾವುದಾದರೂ ಇರಬಹುದು. ಇವುಗಳನ್ನೆಲ್ಲಾ ನಮ್ಮ ದಿನನಿತ್ಯದ ಬದುಕಿನಲ್ಲಿ ತೊಡಗಿಸಿಕೊಂಡಷ್ಟೂ ಒಳ್ಳೆಯದು. “ಎಲ್ಲಕ್ಕಿಂತ ಹೆಚ್ಚಾಗಿ ನಾನು ದುಡೀತಾ ಇಲ್ಲ, ಈಗ ನನಗ್ಯಾರೂ ಬೆಲೆ, ಗೌರವ ಕೊಡಲ್ಲ ಎಂಬ ಕೀಳರಿಮೆ ಮೊದಲು ನಮ್ಮಲ್ಲಿ ಬರಲೇಬಾರದು. ಏಕೆಂದರೆ, ನಮ್ಮ ಬದುಕು ನಿರ್ಧರಿತವಾಗುವುದು ನಾವು ಇಷ್ಟು ದಿನ ಹೇಗೆ ಬದುಕಿದ್ದೀವಿ ಎನ್ನುವುದರ ಮೇಲೆ”. ಹಣಕ್ಕಿಂತ ವ್ಯಕ್ತಿಗೆ, ವ್ಯಕ್ತಿತ್ವಕ್ಕೆ ಬೆಲೆ ಜಾಸ್ತಿ. ಒಂದು ವೇಳೆ ಹಣ, ದುಡಿಮೆಗೆ ಗೌರವ ನೀಡುವುದಾದರೆ ಅದಕ್ಕೆ ಆಯಸ್ಸು ಕಡಿಮೆ. ಏಕೆಂದರೆ ದುಡಿಮೆ ನಿಂತ ತಕ್ಷಣ, ಹಣ ಖಾಲಿಯಾದ ತಕ್ಷಣ ಬದುಕೇ ಖಾಲಿ ಎನಿಸಲು ಶುರುವಾಗುತ್ತದೆ. ಅಂತಹವರಿಂದ ಆದಷ್ಟು ದೂರವಿದ್ದರೆ ಮನಸ್ಸಿಗೆ ನೆಮ್ಮದಿ ಸಿಗುವುದು ಖಂಡಿತ.

ಇದೆಲ್ಲದರ ಜೊತೆಗೆ ಮನೆಯವರ ಸಹಕಾರವೂ ಬೇಕೇ ಬೇಕು. ನಮಗಾಗಿ ಇಷ್ಟು ವರ್ಷ ದುಡಿದ ಹಿರಿಜೀವಗಳಿಗೆ ನಮ್ಮ ಕೈಲಾದಷ್ಟು ನೆಮ್ಮದಿ, ಸುಖ-ಸಂತೋಷ ನೀಡುವುದನ್ನು ಬಿಟ್ಟರೆ ನಮಗೆ ಇನ್ನೇನು ಮಾಡಲು ಸಾಧ್ಯ. ನಮ್ಮ ಕುಟುಂಬದ ಜೊತೆ ನಾವು ಸಂತೋಷವಾಗಿದ್ದೇವೆ ಎಂಬ ಭಾವನೆ ಅವರಿಗೆ ಬಂದರೆ ಅದಕ್ಕಿಂತ ಹೆಚ್ಚಿನದಿನ್ನೇನು ಬೇಕು. ಅವರಿಗೂ
ಆಸೆ-ಆಕಾಂಕ್ಷೆಗಳಿರುತ್ತವೆ. ಎಲ್ಲಾ ಕಡೆ ಓಡಾಡಬೇಕು, ಬೇಕಾದ ಆಹಾರ ಪದಾರ್ಥಗಳನ್ನು ತಿನ್ನಬೇಕು ಹೀಗೆ ಚಿಕ್ಕಪುಟ್ಟ ಈಡೇರದ ಆಸೆಗಳು ಎಷ್ಟು ವರ್ಷವಾದರೂ ಹಾಗೇ ಉಳಿದಿರುತ್ತವೆ. ಜೊತೆಯಿರುವವರು ಬರೀ ತಮ್ಮ ಅಗತ್ಯಗಳಿಗೆ ಅವರನ್ನು ಬಳಸಿಕೊಳ್ಳದೇ ಅವರ ಬೇಕುಬೇಡಗಳನ್ನು ಅರಿತು ಆದಷ್ಟು ಅವುಗಳನ್ನು ಪೂರೈಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ನಿಜವಾಗಲೂ ಅವರಿಗೆ ಈ ವಯಸ್ಸಿನಲ್ಲಿ ಮಕ್ಕಳ ಪ್ರೀತಿ, ಹಿತವಾದ ಸ್ಪರ್ಶ, ಅವರ ಜೊತೆ ಒಂದಿಷ್ಟು ಮಾತುಕತೆ ಎಲ್ಲವೂ ಬೇಕೆನಿಸುತ್ತದೆ. ಮೊಮ್ಮಕ್ಕಳ ಒಡನಾಟವೂ ಅವರಲ್ಲಿ ಜೀವನೋತ್ಸಾಹವನ್ನು ತುಂಬುತ್ತದೆ.

ಸಮಾಜಕ್ಕೆ ನಮ್ಮನ್ನು ನಾವು ತೆರೆದುಕೊಂಡಷ್ಟೂ ನಮಗೆ ಬದುಕಿನ ಅರಿವಾಗುತ್ತದೆ. ಉದಾಹರಣೆಗೆ, ಒಮ್ಮೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವವರ ಜೊತೆ ಕಾಲಕಳೆದು ಅವರು ಅಲ್ಲಿಗೆ ಬಂದಿರುವ ಕಾರಣ ತಿಳಿದರೆ ಅವರ ಮುಂದೆ ನಮ್ಮದೇನೂ ಸಮಸ್ಯೆಯೇ ಅಲ್ಲ ಎನಿಸುತ್ತದೆ. ಇಷ್ಟುದಿನ ಚಿಕ್ಕಪುಟ್ಟದ್ದನ್ನೆಲ್ಲಾ ದೊಡ್ಡದಾಗಿ ನೋಡುತ್ತಿದ್ದ ನಮ್ಮ ದೃಷ್ಟಿಕೋನವೂ ಬದಲಾಗುತ್ತದೆ. ಮನೆಯಲ್ಲಿ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಉತ್ಸಾಹದಿಂದ ಬದುಕಲು ಸಾಧ್ಯವಾಗುತ್ತದೆ. ಆದಷ್ಟು ಮನೆಯವರ ಜೊತೆ ಮನಬಿಚ್ಚಿ ಮಾತಾಡಿ, ಏನಾದರೂ ಸಮಸ್ಯೆಯಿದ್ದರೆ ಸರಿಪಡಿಸಿಕೊಂಡು ಖುಷಿಯಿಂದ ಸಮಯ ಕಳೆಯೋಣ.

ಎಲ್ಲರ ಜೀವನವೂ ಸುಂದರವಾಗಿಯೇ ಇರುತ್ತದೆ ಎಂದು ನಾನು ಖಂಡಿತಾ ಹೇಳುವುದಿಲ್ಲ. ನಾವು ಅದನ್ನು ಚೆಂದವಾಗಿಸಿಕೊಳ್ಳಬಹುದು ಎಂಬುದನ್ನು ಮಾತ್ರ ನಾನು ಬಲ್ಲೆ. ಉದಾಹರಣೆಗೆ, ಪ್ರತಿದಿನ ಜೊತೆಯಿರುವವರೊಂದಿಗೆ ಸಿಟ್ಟು, ಜಗಳ, ದ್ವೇಷ, ಇವೆಲ್ಲಾ ಮಾಡಿದರೂ ದಿನ ಕಳೆಯುತ್ತದೆ. ಸಂತೋಷದಿಂದ ಇದ್ದರೂ ದಿನ ಕಳೆಯುತ್ತದೆ. ಹೇಗೆ ಕಳೆಯುತ್ತೇವೆ ಎನ್ನುವುದು ನಮ್ಮ ವರ್ತನೆಯ ಮೇಲೆ, ನಮ್ಮ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಮುಂದಿನ ದಿನಗಳಿಗೆ ಆದಷ್ಟು ಇಂದಿನ ಸುಂದರ ನೆನಪಿನ ಕ್ಷಣಗಳನ್ನು ಮೆಲುಕು ಹಾಕಲು ಅವಕಾಶ ಮಾಡಿಕೊಡೋಣ. ಎಲ್ಲರೂ ಜೀವನೋತ್ಸಾಹದಿಂದ ಬದುಕೋಣ ಎಂಬ ಆಶಯದೊಂದಿಗೆ.

  • ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ

ಹಿಂದಿನ ಸಂಚಿಕೆಗಳು :


  • ಮಂಗಳ ಎಂ ನಾಡಿಗ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW