ನಾಯಿ ಸಾಕಿದವರಿಗೆ ತಮ್ಮ ನಾಯಿ ಮೇಲೆ ಭಯ ಇಲ್ಲದೆ ಇರಬಹುದು, ಆದರೆ ಅಪರಿಚಿತ ವ್ಯಕ್ತಿಗಳಿಗೆ ನಾಯಿ ಎಂದರೆ ಅವರ ನಾಯಿ- ಇವರ ನಾಯಿ ಎಂದೇನೂ ಇರುವುದಿಲ್ಲ. ಭಯ ಇದ್ದೆ ಇರುತ್ತದೆ. ‘ಸಾಮಾಜಿಕ ಜವಾಬ್ದಾರಿ’ ವಿಷಯದ ಕುರಿತು ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಆ ಹುಡುಗ ಪ್ರತಿದಿನ ನಾಯಿಯನ್ನು ಬಿಟ್ಟು, ಅದರ ಚೈನನ್ನು ತನ್ನ ಕೈಯ್ಶಲ್ಲಿ ಹಿಡಿದುಕೊಂಡು ಅದನ್ನು ವಾಕಿಂಗ್ ಕರೆದುಕೊಂಡು ಹೋಗುವುದು. ದಿನಾ ಬೆಳಿಗ್ಗೆ ಎಂಟು ಗಂಟೆಯ ಸಮಯ, ಅದೇ ದಾರಿ. ಅದು ಬೆಂಗಳೂರಿನ ಮುಖ್ಯರಸ್ತೆಯಾದ್ದರಿಂದ ಎಲ್ಲಾ ತರದ ವಾಹನಗಳ ಓಡಾಟ ಹೆಚ್ಚಾಗೇ ಇರುತ್ತದೆ. ಶಾಲೆಗೆ ಹೋಗುವ ಮಕ್ಕಳು, ಪೋಷಕರು, ಕೆಲಸಕ್ಕೆ ಹೋಗುವವರು, ಅಲ್ಲೇ ಇರುವ ಹೋಟೆಲ್ ಹೀಗೆ ಜನಸಂದಣಿ ಇದ್ದೇ ಇರುತ್ತದೆ. ಆ ನಾಯಿಯೋ ಬಾಲ ಅಲ್ಲಾಡಿಸಿಕೊಂಡು ಅವನ ಹಿಂದೆ, ಆಗಾಗ ಯಾರನ್ನಾದರೂ ನೋಡಿದ ತಕ್ಷಣ ಅವರ ಕಡೆಗೊಮ್ಮೆ ಸುಳಿದಾಡಿ ಮತ್ತೆ ಆ ಹುಡುಗನನ್ನು ಹಿಂಬಾಲಿಸುವುದು. ಆದರೆ, ಆ ನಾಯಿ ತಮ್ಮ ಕಡೆಗೆ ಬಂದಾಗ ಭಯದಿಂದ ಕೂಗಿ ಹಿಂದೆ ಓಡಿದವರು, ಬದಿಗೆ ಸರಿದವರು ಎಷ್ಟೋ ಮಂದಿ. ಹಾಗಂತ ಅವನೇನು ಅವಿದ್ಯಾವಂತನಲ್ಲ. ಈಗಿನ ಯುವಕ. ಅವನಿಗೆ ತನ್ನ ನಾಯಿ ಯಾರಿಗೇನೂ ಮಾಡುವುದಿಲ್ಲವೆಂಬ ಧೈರ್ಯ, ನಂಬಿಕೆ ಇರಬಹುದು. ಆದರೆ ಬೇರೆಯವರಿಗೆ….?
ಅದರಲ್ಲೂ ಚಿಕ್ಕ ಮಕ್ಕಳು ನಾಯಿಗೆ ಹೆದರುವುದು ಜಾಸ್ತಿ. ಒಂದು ವೇಳೆ ನಾಯಿಗೆ ಹೆದರಿ ಫುಟ್ಟ್ಪಾತ್ ನಿಂದ ಮಗು ರಸ್ತೆಗಿಳಿದು ಅನಾಹುತವಾದರೆ ಯಾರು ಹೊಣೆ? ಇದ್ದಕ್ಕಿದಂತೆ ನಾಯಿ ತಮ್ಮ ಹತ್ತಿರ ಬಂದಾಗ ತಪ್ಪಿಸಿಕೊಳ್ಳಲು ಹೋಗಿ ವಾಹನಕ್ಕೆ ಸಿಲುಕಿ ಯಾರದಾದರೂ ಜೀವ ಹೋಗಬಹುದು. ಇಡೀ ಜೀವನ ನರಳುವಷ್ಟು ದೈಹಿಕ ಊನವಾಗಬಹುದು. ಮಕ್ಕಳು ಹೆದರಿ ಸುಧಾರಿಸಿಕೊಳ್ಳಲಾರದಷ್ಟು ಮಾನಸಿಕ ಆಘಾತಕ್ಕೆ ಒಳಗಾಗಬಹುದು. ಸವಾರನೂ ಅಚಾನಕ್ಕಾಗಿ ಸಂಭವಿಸುವ ಈ ಘಟನೆಗೆ ಬೆಲೆ ತೆರಬೇಕಾಗಬಹುದು. ಆಕಸ್ಮಿಕವಾಗಿ ನಡೆದ ಘಟನೆಗೆ ಕೊರಗಬಹುದು. ಪಶ್ಚಾತ್ತಾಪದಲ್ಲಿ ಬೇಯಬಹುದು.

ಫೋಟೋ ಕೃಪೆ : ಅಂತರ್ಜಾಲ
ಹಾಗಾದರೆ ಆ ಹುಡುಗ ಕೈಯಲ್ಲಿ ಹಿಡಿದಿರುವ ಚೈನು ಶೋಕಿಗಾಗಿಯೋ? ಅದನ್ನು ಕಟ್ಟಿ ತನ್ನ ಹಿಡಿತದಲ್ಲಿ ಇಟ್ಟುಕೊಂಡು ಕರೆದುಕೊಂಡು ಹೋದರೆ ಆಗುವ ನಷ್ಟವಾದರೂ ಏನು? ಜನನಿಬಿಡ ಪ್ರದೇಶದಲ್ಲಿ ಈ ರೀತಿ ಸಾಕುಪ್ರಾಣಿಗಳನ್ನು ಬಿಟ್ಟು ಮಜಾ ನೋಡುವ ಮಂದಿಗೆ ಏನನ್ನಬೇಕು? ಇದು ಪ್ರತಿನಿತ್ಯದ ಸಮಸ್ಯೆಯಾಗಿದ್ದರಿಂದ ಎಷ್ಟೋ ಅವಸರದಲ್ಲಿರುವವರೂ ಸಹ ಆ ನಾಯಿಯನ್ನು ನೋಡಿದಾಕ್ಷಣ ಅದು ಹೋಗಿಯಾಗಲಿ ಎಂದು ತಾವೇ ಹಿಂದೆ ಸರಿದು ನಂತರ ಹೋದದ್ದೂ ಉಂಟು. ಎಷ್ಟೋ ಜನ ಹೆದರುತ್ತಿದ್ದರೂ, ನಾಯಿ ತನ್ನ ಹಿಂದೆ ಬರುತ್ತದೆಂಬ ನಂಬಿಕೆಯಿಂದ ಆ ಯುವಕ ತನ್ನ ಪಾಡಿಗೆ ತಾನು ಮುಂದೆ ಹೋಗುತ್ತಾನೆ. ಎಂತಹ ಬೇಜವಾಬ್ದಾರಿ ವರ್ತನೆ. ಸ್ವಲ್ಪವಾದರೂ ಮನುಷ್ಯತ್ವ, ಕಳಕಳಿ, ಸಾಮಾಜಿಕ ಜವಾಬ್ದಾರಿ ಬೇಡವೇ.
ಹೆಂಗಳೆಯರು ಕೂದಲನ್ನು ಗಾಳಿಗೆ ಹಾರಲು ಬಿಟ್ಟರೆ ನೋಡಲು ಚೆಂದವಂತೆ. ಇದರ ಬಗ್ಗೆ ಅನೇಕ ಕವನಗಳು, ಹಾಡುಗಳು ಪ್ರಸಿದ್ಧವಾಗಿದ್ದೂ ಇದೆ. ಆದರೆ ತಲೆ ಬಾಚುವಾಗ ಉದುರುವ ಕೂದಲನ್ನು ಮನೆಯ ಮುಂದಿನ ಬಾಲ್ಕನಿಯಲ್ಲಿ ನಿಂತು ರಸ್ತೆಗೆ ಗಾಳಿಯಲ್ಲಿ ತೇಲಿ ಬಿಟ್ಟರೆ ಏನು ಚೆಂದ ಹೇಳಿ? ಅದು ಇನ್ಯಾರದೋ ಮನೆಯ ಬಾಲ್ಕನಿಗೋ, ಕಿಟಕಿಗೂ, ಮನೆಯ ಮುಂಬಾಗಿಲಿಗೋ, ದಾರಿಯಲ್ಲಿ ಓಡಾಡುವವರ ಮೇಲೋ ಬೀಳುತ್ತದೆ. ಉದುರಿದ ಕೂದಲನ್ನು ಮುದ್ದೆ ಮಾಡಿ ಡಸ್ಟ್ ಬಿನ್ನಲ್ಲಿ ಹಾಕಿದರೆ ಆಗುವ ನಷ್ಟವಾದರೂ ಏನು? ಹಾಗಂತ ಇದರ ಅರಿವಿಲ್ಲದೇ ಮಾಡುವುದೇನಲ್ಲ. ಹಾಕಿದರೆ ಏನಾಯ್ತು ಎನ್ನುವ ಉಡಾಫೆ ಅಷ್ಟೆ.
ಇನ್ನು ಹಲವರು ರಸ್ತೆಯಲ್ಲಿ ಉಗುಳುವುದು, ಅಲ್ಲೇ ಬದಿಯಲ್ಲಿ ಮೂತ್ರ ಮಾಡುವುದು. ಇದಂತೂ ದಾರಿ ಹೋಕರಿಗೆ ಅಸಹ್ಯ ಹಾಗೂ ಮುಜುಗರ ತರಿಸುವಂಥದ್ದು. ಇನ್ನು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಕಸ ಬಿಸಾಡುವುದು, ದಾರಿಯ ಮಧ್ಯದಲ್ಲೇ ಗುಂಪು ಕಟ್ಟಿ ಜೋರಾಗಿ ಗಂಟೆಗಟ್ಟಲೆ ಮಾತನಾಡುತ್ತ ನಿಲ್ಲುವುದು, ತಾವು ದುಡ್ಡು ಕೊಟ್ಟು ತೆಗೆದುಕೊಂಡ ಬೀಡಿ, ಸಿಗರೇಟ್ ಹೊಗೆಯನ್ನು ಸಮಾಜಕ್ಕೆ ಬಿಟ್ಟಿ ಕೊಡುಗೆಯಾಗಿ ಕೊಟ್ಟು ಸೇದದವರ ಆರೋಗ್ಯಕ್ಕೂ ಕುತ್ತು ತರುವುದು. ಇತ್ತೀಚೆಗೆ ಜಾಸ್ತಿಯಾದ ಇನ್ನೊಂದು ಸಂಗತಿಯೆಂದರೆ ಯುವಕ, ಯುವತಿಯರು ದಾರಿಯ ಬದಿಯಲ್ಲೇ ಎಲ್ಲೆಂದರಲ್ಲಿ, ಹೊತ್ತು ಗೊತ್ತಿಲ್ಲದೇ ಬರ್ತಡೇ ಸೆಲೆಬ್ರೇಟ್ ಮಾಡುವುದು. ಫೋಟೋ, ವಿಡಿಯೋ, ನಗು, ಕೇಕೆ ಎಲ್ಲಾ ಸರಿ. ಆದರೆ ಅಲ್ಲೇ ಪಕ್ಕದಲ್ಲಿರುವ ಮನೆಗಳು, ಅದರಲ್ಲಿ ಮಲಗಿರುವ ಚಿಕ್ಕಮಕ್ಕಳು, ವಯಸ್ಸಾದವರು, ಅನಾರೋಗ್ಯ ಪೀಡಿತರು, ಪರೀಕ್ಷೆಗೆಂದು ಶ್ರದ್ಧೆಯಿಂದ ಓದುತ್ತಿರುವ ಮಕ್ಕಳು, ಪಕ್ಕದಲ್ಲಿರುವ ಕ್ಲಿನಿಕ್, ಅಲ್ಲಿ ಜ್ವರದಿಂದ ನರಳುತ್ತಾ ಕಾದಿರುವ ರೋಗಿಗಳು, ಅಬ್ಬಾ! ಒಂದೇ, ಎರಡೇ. ಯಾವುದರ ಬಗ್ಗೆಯಾದರೂ ಕಿಂಚಿತ್ ಯೋಚನೆ ಇದೆಯೇ. ಇದೆಲ್ಲಾ ಮಾಡುವುದು ವಿದ್ಯಾವಂತರೆನಿಸಿಕೊಂಡ ಯುವ ಜನಾಂಗವೇ. ಒಮ್ಮೊಮ್ಮೆ ರಸ್ತೆ ಮಧ್ಯದಲ್ಲಿ ಸಂಭ್ರಮದಲ್ಲಿರುವ ಈ ಯುವಪಡೆ ವಾಹನಗಳಿಗೂ ಜಾಗ ಬಿಡುವುದಿಲ್ಲ. ತಮ್ಮ ಸೆಲ್ಫಿ, ಕೂಗಾಟದಲ್ಲೇ ಮುಳುಗಿರುತ್ತಾರೆ. ಎಷ್ಟೋ ಬಾರಿ ದ್ವಿಚಕ್ರ ವಾಹನ ಸವಾರರೇ ಬದಿಯಿಂದ ಹೋಗಿದ್ದೂ ಉಂಟು.

ಫೋಟೋ ಕೃಪೆ : ಅಂತರ್ಜಾಲ
ಇನ್ನು ಮನೆಗಳ ಹತ್ತಿರದಲ್ಲಿರುವ ಯಾವುದಾದರೂ ಒಂದು ಅಂಗಡಿಯಲ್ಲೋ, ಬೇಕರಿಯಲ್ಲೋ, ಚಾಟ್ಸ್ ಸೆಂಟರ್ ನಲ್ಲೋ ತಮಗೆ ಬೇಕಾದದ್ದನ್ನು ತೆಗೆದುಕೊಂಡು ಅಲ್ಲಿ ನಿಲ್ಲಲು, ಕೂರಲು ಜಾಗವಿಲ್ಲವೆಂದು, ಎದುರು/ಪಕ್ಕದಲ್ಲಿರುವ ಮನೆಯ ಕಾಂಪೌಂಡ್ ಹತ್ತಿರ, ಅಲ್ಲಿರುವ ಗಾಡಿಗಳ ಮೇಲೆ ಕುಳಿತು ತಿನ್ನುವುದೂ ಉಂಟು. ತಿನ್ನುತ್ತಿದ್ದಾರಲ್ಲ, ಪಾಪ ಎಂದುಕೊಂಡರೆ, ಆ ಅಂಗಡಿಯಲ್ಲಿರುವ ಡಸ್ಟ್ ಬಿನ್ ಉಪಯೋಗಿಸದೇ ತಿಂದ ಕವರ್ಗಳನ್ನು , ಪೇಪರ್ ಪ್ಲೇಟ್ಗಳನ್ನು, ಉಪಯೋಗಿಸಿದ ಬಾಟಲ್ಗಳನ್ನು ಅಲ್ಲೇ ಬಿಸಾಡುವುದರ ಜೊತೆಗೆ ಅರ್ಧಂಬರ್ಧ ತಿಂದ ಆಹಾರ ಪದಾರ್ಥಗಳನ್ನೂ ಸಹ ಗಾಡಿ ನಿಲ್ಲಿಸಿದ ಜಾಗದಲ್ಲೇ ಚೆಲ್ಲಿ ಹೋದರೆ ಸುಮ್ಮನಿರಲು ಹೇಗೆ ಸಾಧ್ಯ?
ಹಾಗಂತ ಈಗಿನ ಕಾಲದಲ್ಲಿ ಯಾರಿಗೆ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ. ಹೇಳಿದರೆ ನಿಮಗೇನು ಅಂತ ಬಾಯಿಗೆ ಬಂದಂತೆ ಮಾತನಾಡುವ ಮಂದಿಯೇ ಹೆಚ್ಚು. ಅದರ ಬದಲು ಹೌದು, ಅವರು ಹೇಳಿದ್ದರಲ್ಲಿ ಎಷ್ಟು ಸತ್ಯವಿದೆ? ನಾವು ಎಲ್ಲಿ ತಪ್ಪಿದ್ದೇವೆ ಎಂದು ಒಮ್ಮೆ ವಿವೇಚಿಸಿದರೆ ಒಳ್ಳೆಯದು. ಏಕೆಂದರೆ, ನಾವು ಬದುಕುತ್ತಿರುವ ಸಮಾಜದಲ್ಲಿ ನಮಗೂ ಕೆಲವು ಜವಾಬ್ದಾರಿಗಳಿವೆ. ಅದನ್ನು ಅನುಸರಿಸಿದರೆ ನಮ್ಮಂತೆಯೇ ಈ ಸಮಾಜದಲ್ಲಿ ಬದುಕುತ್ತಿರುವವರಿಗೆ ತೊಂದರೆಯಾಗುವುದಿಲ್ಲ. ಇದು ನಮ್ಮ ಜವಾಬ್ದಾರಿಯ ಜೊತೆಗೆ ಕರ್ತವ್ಯವೂ ಹೌದು. ಆದಷ್ಟು ನಮ್ಮ ನಮ್ಮ ಜವಾಬ್ದಾರಿಯನ್ನು ಪಾಲಿಸುತ್ತಾ ಉತ್ತಮ ನಾಗರಿಕರಾಗಿ ಬದುಕೋಣ ಎಂಬ ಆಶಯದೊಂದಿಗೆ.
- ಸುತ್ತ ಮುತ್ತ ಲೇಖನಗಳ ಸಂಕಲನದಿಂದ
ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಮಂಗಳ ಎಂ ನಾಡಿಗ್
