‘ಅಂತರಂಗದ ಧ್ಯಾನ’ – ನಾರಾಯಣ ಸ್ವಾಮಿ

ಗಜಲ್ ಕಾರ ನಾರಾಯಣ ಸ್ವಾಮಿ ಅವರ ‘ಅಂತರಂಗದ ಧ್ಯಾನ’ ಪುಸ್ತಕದ ಕುರಿತು ಸಾಹಿತಿ ಪಾರ್ವತಿ ಎಸ್ ಅವರು ಬರೆದ ತಮ್ಮಅನಿಸಿಕೆಯನ್ನು ತಪ್ಪದೆ ಓದಿ…

ಪುಸ್ತಕ : ಅಂತರಂಗದ ಧ್ಯಾನ
ಲೇಖಕರು : ನಾರಾಯಣ ಸ್ವಾಮಿ
ಪ್ರಕಾರ : ಗಜಲ್
ಪ್ರಕಾಶನ : ಆಶಾ ಪ್ರಕಾಶನ
ಬೆಲೆ : ೧೨೦ /

ಬದುಕಿನ ಸವಿ ನೆನಪುಗಳನ್ನು ಪೆನ್ ಡ್ರೈವನಲ್ಲಿ ಸಂಗ್ರಹಿಸಿಕೊಂಡಂತೆ
ಕಹಿ ಘಟನೆಗಳನ್ನು ಮನಸ್ಸು ತನ್ನ ಪರದೆಯಲಿ ಸಂಗ್ರಹಿಸುತ್ತದೆ.

– ಗುಲ್ಝಾರ್

ಸ್ನೇಹ, ತ್ಯಾಗ, ಪ್ರೇಮ ಒಲವಿನ ಒರತೆಗಳ ಜೊತೆಗೆ ಕೋಪ, ದ್ವೇಷ, ಅಸೂಯೆ, ಈರ್ಷೆಗಳ ಆಗರವೆ ಈ ಮರ್ಕಟವೆಂಬ ಮನಸ್ಸು. ಮನಸ್ಸಿನ ನಿರೀಕ್ಷೆ ಮತ್ತು ವಾಸ್ತವತೆಯ ನಡುವಿನ ಅಂತರವೆ ಒತ್ತಡವಾಗಿದೆ. ಬಯಕೆಗಳು ಹೆಚ್ಚಿದಂತೆ ಅತೃಪ್ತಿ ಅಸಮಾಧಾನಗಳ ಭಾರದಿಂದ ಒಮ್ಮೆ ನಲುಗಿದರೆ, ಮತ್ತೊಮ್ಮೆ ಸಂಭ್ರಮಕೆ ನಲಿಯುವದು ಹೀಗೆ ಮನುಷ್ಯನ ಮನವು ಹಲವು ಏರಿಳಿತಗಳ ಝರಿಯಂತೆ, ಭಾವಗಳ ವಿಕಲ್ಪವು ಸಾಮಾನ್ಯವಾಗಿ ಮಾನವರ ಮನವನು ಹೊಕ್ಕರೆ ಸಂತಸವನೆ ಸೂರೆಗೊಳಿಸಿ ಸೂತಕದ ಧಾರೆಯನೆ ಸೂಸುವದು ಅಂತಹ ವಿಷ ಗಳಿಗೆಯಲಿ ಕದಡಿದ ಹೃದಯದಲಿ ಶಾಂತಿ ನೆಮ್ಮದಿಯನು ಮರು ಸ್ಥಾಪಿಸಿ ಸೂ ಸ್ಥಿತಿಗೆ ತರುವ ನಿಗ್ರಹಿಕೆಗೆ ಧ್ಯಾನವೆ ಶ್ರೀರಕ್ಷೆಯಾಗಿದೆ. ಧ್ಯಾನವೆಂದರೆ ಯಾವುದೇ ಆಲೋಚನೆಗಳು ಅಥವಾ ಬಾಹ್ಯ ಸಂವೇದನೆಗಳು ಗೃಹಿಕೆಗೆ ತಾಗದ ಸ್ಥಿತಿಯಾಗಿದೆ, ಈಂತಹ ಪ್ರಶಾಂತತೆಯನು ಪಡೆಯುವ ಪವಾಡವೆಂದರೆ ನಿರೀಕ್ಷೆಗಳಿಗೆ ತಿಲಾಂಜಲಿಯ ತಿಲಕವನ್ನು ಧರಿಸುವದರಿಂದ ಗೊಂದಲಗಳ ಆವರಿಸುವಿಕೆ ನಿರ್ಮೂಲವಾಗುವದು, ಅನ್ಯರ ಏಳಿಗೆ ಕಂಡು ಅಸೂಯೆ ಪಡದೆ ಮುದಗೊಳ್ಳುವಂತ ನಿರ್ಮಲತೆಯನು ಕಾಣುವ ವಿವೇಚನಾ ಶಕ್ತಿಯನು ಶಕ್ತವಾಗಿ ಉಪಯೋಗಿಸಿ ತಾನು ಸಾಧಿಸಬೇಕಾದುದನ್ನು ಅಳೆದು ತೂಗುವ ಆಲೋಚನೆಯಿಂದ ತನ್ನ ಮಿತಿಗಳಲ್ಲಿ ಪ್ರಯತ್ನಿಸಿ ಸಾರ್ಥಕ್ಯ ಹೊಂದಲು ಕಲೆ ಸಾಹಿತ್ಯ ಸಂಗೀತದಂತ ಹಲವು ರಂಗಗಳನ್ನು ಆಯ್ದುಕೊಂಡಿರುವದು ಕಾಣಬಹುದು.

ಸಾರಸ್ವತದ ಕಾವ್ಯದ ಕುರಿತು ಹೇಳುವದಾದರೆ, ಮಣ್ಣ ಸಾರವ ಹೀರಿ ಸಿಹಿ ಹಣ್ಣು ನೀಡುವದು ಕವಿತೆ ಎನ್ನಬಹುದು, ಹಾಗೆಯೆ ಮೊದಲ ಮಳೆಯು ಭೂರಮೆಯ ಸ್ಪರ್ಶಿಸಲು ಹೊಮ್ಮಿದ ಘಮಲೆ ಕಾವ್ಯವಾಗಿದೆ, ಆಂಗ್ಲ ಕವಿ ವರ್ಡ್ಸವರ್ತರ ಪ್ರಕಾರ “ಶಕ್ತಿಶಾಲಿ ಭಾವಗಳನ್ನು ಲಯ, ಗೇಯತೆ ಇರುವಂತೆ ಉದ್ಭವಿಸುವ ಸ್ವಾಭಾವಿಕ ಉಕ್ತಿಯೆ ಕವಿತೆ” ಎಂದಿರುವರು, ವೀಣೆ ಮೀಟಿದಾಗ ಹೊಮ್ಮುವ ಸುನಾದದ ಭಾವಗಂಗೆಯಲಿ ತೇಲಿಸುವಂತಹವು ಕಾವ್ಯಗಳಾದರೆ ಕಾವ್ಯದ ರಾಣಿಯೆ ಗಜಲ್ ಇಂತಹ ಗಜಲ್‌ ನ ಗಂಗೊತ್ರಿಯಲ್ಲಿ ಅಸಂಖ್ಯಾತ ಕರುನಾಡಿನ ವಾಂಙ್ಮಯ ಲೋಕದ ಮನಸುಗಳು ಮಿಂದೆಳುತ್ತಿರುವುದು ಸಂತಸದ ಸಂಗತಿಯಾಗಿದೆ.

ಕೋಲಾರ ಜಿಲ್ಲೆಯ ವಕೀಲರಾದ ನಾನಿಯವರ ಅಂತರಂಗದ ಧ್ಯಾನ ಎನ್ನುವ ಗಜಲ್ ಗುಲ್ದಸ್ಥವು ನನ್ನ ಕೈ ಸೇರಿ ಬಹು ದಿನಗಳೆ ಉರುಳಿದವು
ಒಂದೆ ಗುಕ್ಕಿಗೆ ಓದಿ ಮುಗಿಸಿದೆನಾದರು ಅನಿಸಿಕೆ ಬರೆಯಲು ವಿಳಂಬವಾಗಿರುವದಕ್ಕೆ ವಿಷಾದಿಸುವೆ.

ನಾರಾಯಣ ಸ್ವಾಮಿಯವರ ಮೊದಲ ಗಜಲ್ ಸಂಕಲನದ ಶೀರ್ಷಿಕೆ ಯಡೆಗೆ ಒಮ್ಮೆ ಕಣ್ಣು ಹಾಯಿಸಿದಾಗ ನನಗೆ ಮೂಡಿದ ಪ್ರಶ್ನೆ ಎಂದರೆ ಅಂತರಂಗವೆಂದರೇನು ? ಅಂತರಂಗಕೆ ಧ್ಯಾನ ಏಕೆ ಬೇಕು? ಎಂದು ನನ್ನೊಳಗೆ ನಾ ಕೇಳಿದಾಗ ಅಂತರಂಗ ಇದು ಸಂಸ್ಕೃತದ ಪದವಿದು ಇದರ ಅರ್ಥ ಪ್ರಜ್ಞೆ ಹಾಗೂ ಭಾವಗಳ ವೇದಿಕೆಯಾಗಿದೆ, ಸಿಹಿ, ಕಹಿ ನೆನಪಿನ ನವಿಲು ಗರಿಗಳ ಸಂಗ್ರಹಿಸಿಟ್ಟ ಮನಸಿನ ಸಂದೂಕವಾಗಿದೆ.
ಕಂಗಳಿಗೆ ಗೋಚರಿಸುವ ದೇಹವು ಬಹಿರಂಗವಾದರೆ, ಚಿಪ್ಪೊಳಗಿನ ಮುತ್ತಿನಂತೆ ಭಾವಗಳ ಅಣೆಕಟ್ಟಂತಿರುವ ಮನಸ್ಸೆ ಅಂತರಂಗವಾಗಿದೆ.
ಇಂತಹ ಆಂತರ್ಯದ ನಾದದಲಿ ತಳೆದು ನಿಂದ ನಾನಿಯವರ ಶೇರ್ ಗಳೆಡೆಗೆ ಇಣುಕಿದಾಗ.

ಗಜಲ್ 1 ರ ಮಕ್ತ :

ಕಲ್ಲು ಮಣ್ಣುಗಳಿಂದ ಗುಡಿಯ ಕಟ್ಟಿ ಮೂರ್ತಿಯಾಗಿ ಕೂಡಿಸಲಾರೆ ನಿನ್ನ
ನಾನಿಯು ಹಗಲಿರುಳು ನಿನ್ನನೆ ಧ್ಯಾನಿಸುತ್ತಾ ದೇವರಂತೆ ಪೂಜಿಸುವೆ ಅಮ್ಮ

ಬರಹವು ನಮ್ಮ ಸುತ್ತಮುತ್ತಲಿನ ಪ್ರಪಂಚದ ಬದುಕು ಹಾಗು ಅನುಭವಗಳ ಉಗ್ರಾಣವಾಗಿದೆ ಅಂತೆಯೆ ನಾನಿಯವರು ಬಾಳಿನಲಿ ಧಾರುಣತೆ ತೋರುವ ಅಂಶಗಳ ಚಿತ್ರಣವನು ಚಿತ್ರಿಸಿದ್ದಾರೆ. ಇರುವಾಗ ಪಾಪಿ ಎಂದು ದೂರಿದವರು ತೀರಿದಾಗ ಪಾಪ ಎಂದರಂತೆ ಎನ್ನುವ ಮಾತನು ಪುಷ್ಠಿಕರಿಸಿರುವರು ಎನಿಸಿತೆನಗೆ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ ಅನ್ನುವ ಸತ್ಯವನು ಮನಗಂಡಿರುವದು ತೋರಿಸುತ್ತದೆ, ವಿಪರ್ಯಾಸವೆಂದರೆ ಬದುಕಿರುವಾಗ ಹೆತ್ತವರಿಗೆ ಅದೇಷ್ಟೊ ಮಕ್ಕಳು ತಿರುಗಿಯು ನೋಡಿರುವದಿಲ್ಲ ಆದರೆ ತೀರಿದ ನಂತರ ಸ್ವ ಪ್ರತಿಷ್ಠೆಗೆ ಅವರ ಮೂರ್ತಿಗಳನ್ನು ಕೆತ್ತಿಸಿ ಅದ್ದೂರಿ ಪೂಜೆ ಪುನಸ್ಕಾರ ಅನ್ನ ಸಂತರ್ಪಣೆಯ ಕಾರ್ಯಕ್ರಮ ಏರ್ಪಡಿಸಿದ್ದ ಸಂಗತಿಗಳನ್ನು ಕಂಡು ಹೆತ್ತವರ ತ್ಯಾಗ, ಪ್ರೇಮದ ಫಲವೆ ನಮ್ಮ ಜೀವ, ಜೀವನ ಭಿಕ್ಷೆ ಅವರು ಜೀವಂತವಿರುವಾಗಲೇ ಪ್ರೀತಿಸಿ ಎನ್ನುವ ಅಮೋಘವಾದ ಸಂದೇಶವಿತ್ತಿದ್ದಾರೆ.

ಗಜಲ್ 2 ರ ಮತ್ಲ ಹಾಗು ಮಕ್ತ :

ಶತಮಾನದ ನೋವು ನನ್ನೆದೆಯನಿಂದು ಕಾಡುತಿದೆ ಗೆಳತಿ
ಕಾಡುತ್ತಿರುವ ನೋವಿಗೆ ಮುಲಾಮೊಂದು ಬೇಕಾಗಿದೆ ಗೆಳತಿ
ನನ್ನೂರಿನ ಗುಡಿಸಲರಮನೆಗೆ ಮತ್ತೆ ಪಯಣ ಬೆಳೆಸುತಿರುವೆ
ನಾನಿಯ ಎದೆಯೊಳಗೆ ಮತ್ತೆ ಶಾಂತಿ ನೆಲೆಸಬೇಕಾಗಿದೆ ಗೆಳತಿ.

ಇಲ್ಲಿ ನಾನಿಯವರು ಶತಮಾನ ಎನ್ನುವ ಪದವನ್ನು ವಿರಹದ ನೋವಿನ ಆಳ, ಅಘಾದತೆ ಹಾಗೂ ಅದರ ತೀವ್ರತೆಯ ಪ್ರತೀಕವಾಗಿ ಸೂಚಿಸಿದ್ದಾರೆನಿಸಿತು.
ಶತಶತಮಾನಗಳಿಂದಲು ಪ್ರೇಮಿಗಳಿಗಿಂತ ವಿರಹಿಗಳ ಎದೆಯಲಿ ಪ್ರೇಮ ಶಾಶ್ವತವಾಗಿ ನೆಲೆಯಾಗಿದೆ ಅಂತಾಗಲು ಯೋಚಿಸಿರಬಹುದು,
ಕಾಡುವ ನೋವು ಎಂದರೆ ವಿರಹವೆ ಆಗಿದೆ ಹಾಗೆಯೆ ಮುಲಾಮು ಎಂದರೆ ಗೆಳತಿಯಿಂದ ಸಿಗಬೇಕಾದ ಪ್ರೇಮವಾಗಿದೆ ಯತ್ನಿಸಿ ಸೋತು ಸುಣ್ಣವಾಗಿ ಕೊನೆಗೆ ನೆಮ್ಮದಿಯನು ಅರಸಿ ನನ್ನೂರ ಗುಡಿಸಲರಮನೆಗೆ ಅಂದರೆ ಇಲ್ಲಿ ಗುಡಿಸಲೆಂದರೆ ಈ ದೇಹವೆ ಆಗಿದೆ ಅರಮನೆ ಎಂದರೆ ನೆಮ್ಮದಿ, ಅಥವಾ ಸಂತೃಪ್ತಿಯ ತಾಣವಾದ ದೇಹದೊಳಿರುವ ಅಂತರಂಗವಾಗಿದೆ, ಧ್ಯಾನವಾಗಿದೆ, ಧ್ಯಾನದ ಪ್ರತಿರೂಪವಾದ ಶಾಂತಿಗಾಗಿ ಮೊರೆಯಿಟ್ಟಿದ್ದಾರೆನ್ನಬಹುದು ಮೇಲಿನ ಎರಡು ಅಶೇರ್ ಅವಲೋಕಿಸಿದಾಗ ನನಗೆ ಹೊಳೆದದ್ದು ” ನಿಮ್ಮ ಜೀವನವನ್ನು ಒಬ್ಬ ವ್ಯಕ್ತಿ ಮಾತ್ರ ಬದಲಿಸಬಹುದು ಆ ವ್ಯಕ್ತಿ ಬೇರೆ ಯಾರು ಅಲ್ಲ ಅದು ನೀವೆ ಆಗಿದ್ದಿರಿ ಎನ್ನುವ ರೂಮಿಯ ಸಾಲುಗಳು.

‘ಅಂತರಂಗದ ಧ್ಯಾನ’ ಕವಿ ನಾರಾಯಣ ಸ್ವಾಮಿ

ಗಜಲ್ 3 ರ 3 ನೇ ಶೇರ್ :

“ಹೊರಗೆ ಸಿಹಿಯ ಮಾತನಾಡಿ ಒಳಗೊಳಗೆ ವಿಷವನುಣಿಸುವರು”
“ಜಾತಿ ಧರ್ಮದ ಅಮಲನ್ನು ತುಂಬುವವರನ್ನು ಹೇಗೆ ಮರೆಯಲಿ.”

ಇದನ್ನೆ ನಮ್ಮ ಗ್ರಾಮೀಣ ಶೈಲಿಯಲ್ಲಿ ಕಳ್ಳಾಗ ಕತ್ರಿ ಬಾಯಾಗ ಬೆಲ್ಲ ಎಂದಿರುವ ಸಾಲು ಅನುರಣಿಸಿತು, ಗಜಲ್ ಗೆ ದೃಶ್ಯವನ್ನು ಕಣ್ಣಮುಂದೆ ಚಿತ್ರಿಸುವಂತ ಶಕ್ತಿ ಇದೆ, ಓದುಗರ ಚಿತ್ತಭಿತ್ತಿಯಲ್ಲಿ ಘಟನೆಗಳನ್ನು ಪರಿಣಾಮಕಾರಿಯಾಗಿ ಕೆತ್ತುವ ನೈಪುಣ್ಯತೆ ಹೊಂದಿದೆ ಎನ್ನಬಹುದು.

ಕಾರ್ಯವಾಸಿ ಕತ್ತೆಕಾಲು ಹಿಡಿಯುವಂತೆ ತಮ್ಮ ಬೇಳೆ ಬೆಯಿಸಿಕೊಳ್ಳಲು ಎದುರಿಗೆ ಸಿಹಿ ಮಾತನಾಡಿ ಬೆನ್ನಿಗೆ ಚೂರಿ ಇರಿದು ವಿದ್ರೋಹವೆಸಗುವರನು ಹೇಗೆ ಮರೆಯಲಿ ಎನ್ನವ ರದೀಪ್ ನಿಂದ ನಯವಂಚಕರ ಕುರಿತು ತಣ್ಣನೆಯ ಆಕ್ರೋಶ ಸೂಸಿದ್ದಾರೆ. ಹುಸಿ ಜಾಲಗಳ ಮೂಲಕ ಜಾತಿ ಮತವೆಂಬ ವಿಷಬೀಜ ಬಿತ್ತುವವರನು ಪರೋಕ್ಷವಾಗಿ ಖಂಡಿಸಿದ್ದಾರೆ.

ಗಜಲ್ 4 ರ ಮಕ್ತ :

ಮಾರಾಟವಾಗದೆ ಉಳಿದು ಹೋದರೆ ಸ್ವಾಭಿಮಾನದ ಕಣ್ಣೀರಾಗಿ ಹರಿದು ಹೋಗುವೆ,
ನಾನಿಯ ಎದೆಯ ಭಾರವನಳಿಸಲು ಬರುವೆಯೆಂದು ಕಾಯುತಿರುವೆ ಬಂದುಬಿಡು ಗೆಳತಿ.

ಮನೆಯಲ್ಲಿ ಹೆಚ್ಚಾಗಿ ಸಂಗ್ರಹಿಸಿದ ಧಾನ್ಯಗಳನ್ನು ಸಂತೆಯಲ್ಲಿ ಮಾರುವಂತೆ ನಾನಿಯವರು ಮನ ತುಂಬಿದ ನೋವುಗಳನ್ನು ಸಂತೆಯಲಿ ಮಾರಲು ಹೊರಟಿದ್ದಾರೆ ಆದರೆ ಮಾರಾಟವಾಗದೆ ಹೋದರೆ ಎನ್ನುವ ಆಳುಕು ಕೂಡಾ ಇರುವದರಿಂದ ಉಳಿದ ಭಾವಗಳನು ಕಂಬನಿಯ ಮಳೆ ಸುರಿಸಿ ಭಾರದ ಎದೆಯನು ಹಗುರವಾಗಿಸಲು ಗೆಳತಿಯ ಸಾಂಗತ್ಯಕ್ಕಾಗಿ ಮೊರೆಯಿಟ್ಟು ಹಂಬಲಿಸಿರುವದು ಗೊಚರಿಸುತ್ತದೆ.

‘ ಎದೆಗೆ ಬೆಂಕಿ ಬಿದ್ದಾಗ ತಕ್ಷಣಕ್ಕೆ ಆರಿಸಲೆಂದೆ ಭಗವಂತ ಕಂಗಳಲಿ ಕಂಬನಿ ಸಂಗ್ರಹಿಸಿಟ್ಟ ”
ಎನ್ನುವ ನುಡಿಯಂತೆ ಸಮಸ್ಯೆಯ ಪರಿಹರಿಸುವ ಬಗೆಯ ಮಾರ್ಗವಾಗಿ ಕಂಬನಿಯು ಹರಿದಾಗ ಭಾರ ಇಳಿಯುವ ಇರಾದೆಯನು ನೆನೆದಿದ್ದಾರೆ

ಗಜಲ್ 12 ರ ಮತ್ಲ :

ಕಾತರಿಸುವ ಜೀವಕೆ ಆಸರೆಯಾಗದೆ ಹೋದ ಪ್ರೀತಿಯೆಂಬ ಮಾಯೆಯಿದು,
ನಾನಿಯ ಕೈಗೆ ಸಿಗದ ಮಾಯಾ ಜಿಂಕೆಯನು ಸದಾ ಹುಡುಕುತಿರುವೆ ಒಲವೆ…

ಒಲವೆ ಎನ್ನುವ ರದೀಪ್ ಮೂಲಕ ಪ್ರೀತಿ ಎಂದರೇನು ಪ್ರೀತಿ ಆವರಿಸಿದ ಮನದ ತವಕ ತಲ್ಲಣಗಳೇನು,-? ತೀರದ ದಾಹದಂತೆ ಕಾಡುವ ವಿರಹದಿಂದಾಗಿ ಪ್ರೀತಿಯನು ಮಾಯೆ ಎಂದಿರುವರು ಮದಿರೆಯ ಮತ್ತಿನಲಿ ಮಾಯೆಯನು ಮರೆಯಬಹುದಾದರೂ ನಶೆ ಇಳಿಯಲು ಮತ್ತೆ ಹೃದಯದ ತೀರಕೆ ತೆರೆಗಳಂತೆ ಅಪ್ಪಳಿಸುವ ನೆನಪುಗಳ ಸರಮಾಲೆಗೆ ಕೊರಳೊಡ್ಡಿರುವದನು ನೆನೆಯುತ ಜಿಂಕೆಯಂತೆ ಕೈಗೆ ಸಿಗದೆನ್ನುವ ಕಲ್ಪನೆಯಾಗಿದೆ. ವಿರಹವನು ಉರಿಯುವ ಕೆಂಡದ ಮೇಲೆ ಕುಳಿತ ಪಾತ್ರೆಯ ಸ್ಥಿತಿ ಎನ್ನಬಹುದು. ಕೆಳಗೆ ಉರಿ, ಮೇಲೆ ತಂಪು, ನಡುವೆ ಕುದಿ ಇದು ಪ್ರೇಮಿಗಳ ಬೆಗುದಿಯಾಗಿದೆ.

ಗಜಲ್ 20ರ 4ನೆ ಶೇರ್ :

ಕಾತುರತೆಯ ಸಂಗಮದ ಹವಣಿಕೆಯಲ್ಲಿ ಕನಸು ಲೀನವಾಗಿದೆ,
ಆತುರದ ಸಮಾಗಮಕೆ ದೇಹವು ಕಾವುತುಂಬಿ ಹಣಿಯಾಗುತಿದೆ ಸಖಿ.

ಎದೆ ನೆಲವ ಉಳುಮೆಗೈದ ಪ್ರೀತಿಯ ಹುಲುಸಾದ ಫಸಲೆ ಗಜಲ್ ಪ್ರೇಮಿಗಳಲ್ಲಿ , ಹೊಮ್ಮಿದ ಭಾವ ಅಂತರಂಗದ ನಿರ್ಮಲತೆಯನು ಕಾಣುವ ವಿವೇಚನಾ ಶಕ್ತಿಯನು ಶಕ್ತವಾಗಿ ಉಪಯೋಗಿಸಿ ತಾನು ಸಾಧಿಸಬೇಕಾದುದನ್ನು ಅಳೆದು ತೂಗುವ ಆಲೋಚನೆಯಿಂದ ತನ್ನ ಮಿತಿಗಳಲ್ಲಿ ಅಭಿವಕ್ತಪಡಿಸದಿದ್ದರೆ ಅದೊಂದು ಅನಿರ್ವಚನೀಯ ವೇದನೆಯೆ ಎನ್ನಬಹುದು. ತಿರಸ್ಕರಿಸುವ ಹೃದಯವೊಂದನ್ನು ಬದುಕಿನುದ್ದಕ್ಕೂ ಪ್ರೀತಿಸೋದೆ ಪ್ರೇಮವಾಗಿದೆ. ಪ್ರಿಯತಮೆಯ ಪ್ರಲಾಪಗಳಿಗೆ ಅನರ್ಘ್ಯ ರತ್ನಗಳಿಂದಾದ ಅದ್ವೀತಿಯ ಆನಂದಕ್ಕಾಗಿ ಹಾತೊರೆದ ಭಾವೋನ್ಮತ್ತತೆಯನು ಕಾಣಬಹುದು ಆದುದರಿಂದಲೇ ಪ್ರೇಮಿಗಳನ್ನು ಸ್ವರ್ಗದ ದೂತರೆಂದಿರುವದು. ಆಳವಾದ ಪ್ರೀತಿಯು ಪ್ರೀತಿಸುವ ಹೃದಯಗಳ ಬಾಳಿಗೆ ಶಕ್ತಿಯನ್ನು ಇಮ್ಮಡಿಸುತ್ತದೆ.

ಗಜಲ್ 25 ರ ಮಕ್ತ :

ಮಬ್ಬು ಕವಿದ ಚಂದ್ರ ಮೇಲೇರಿ ಬಂದರೂ ತಂಪಾಗಲಿಲ್ಲ ಬಡವನ ಬದುಕು,
ನಾನಿಯೆಂಬ ರೈತನ ಬಾಳಿನಲಿ ಬೆಳದಿಂಗಳು ಮರಿಚಿಕೆಯಾಗಿ ಕಂಡಿತಲ್ಲೋ.

ಇಡಿ ಈ ಸಂಕಲನದಲ್ಲಿ ನನ್ನ ಅಂತರಂಗದ ಕದ ತಾಕಿದ ಬರಹದಲ್ಲಿ ಈ ಗಜಲ್ ಮೊದಲಿನದು. ಆರಂಭದ ಮತ್ಲದಿಂದ ಹಿಡಿದು ಪ್ರತಿ ಅಶೇರ ನ ಊಲಾ ಮಿಶ್ರ,, ಸಾನಿ ಮಿಶ್ರಗಳಲ್ಲದೆ ಮಕ್ತದವರೆಗೂ ನನ್ನೊಳಗೆ ಕಾಡಿ ನೆಲೆಗೊಂಡಿದೆ. ನಾನು ಕೃಷಿ ಕುಟುಂಬದ ನೆಲೆಯಲ್ಲಿ ಜನಿಸಿರುವ ಕಾರಣವಾಗಿ ನನ್ನನು ಇನ್ನಿಲ್ಲದಂತೆ ಸೆಳೆದು ಕಣ್ಣಾಲಿಗಳ ತೇವವಾಗಿಸಿತು. ಪ್ರತಿ ಶೇರಗಳ ಕುರಿತು ಹರಿಯುವ ಜಲದಂತೆ ವಿಷಯ ವಿವರಿಸಬಹುದು.

ಚುರುಗುಟ್ಟುವ ಬಿಸಿಲ ಧಗೆಯಲಿ ಅನ್ನ ಬೆಳೆಯುವ ಕಾಯಕ ಯೋಗಿಗೆ ಇರುಳಾದರೆ ಸಾಲದ ಶೂಲಗಳಿಗೆ ಸಿಲುಕಿ ಅಭದ್ರತೆ ಅಸಾಯಕತೆಯಲ್ಲಿಯೆ ನರಳುವದು ನೆನೆದರೆ ಹೃದಯ ಬಾಯಿಗೆ ಬರುತ್ತದೆ, ಹಸಿ ಒಣ ಬರಗಳಿಂದ, ನಿಗದಿತವಿರದ ಬೆಲೆಗಳ ಕುಸಿತದಿಂದ ದಲ್ಲಾಳಿಗಳ ದರ್ಪದಲಿ ಅನ್ನದಾತನ ಬದುಕು ಬಿರುಗಾಳಿಗೆ ಸಿಕ್ಕ ತರಗೆಲೆಯಾಗಿರುವದು ನೆನೆಯುತ್ತ ರೂಪಕಗಳಿಲ್ಲದ ಕಟು ಪದಗಳಲ್ಲಿ ರಾಜಕಾರಣಿಗಳನ್ನು ಈ ಗಜಲ್ ನಲ್ಲಿ ವಿಡಂಬಿಸಿದ್ದು ಕಾಣಬಹುದು.

ಗಜಲ್ 33 ರ ಮತ್ಲ :

ಪ್ರೀತಿ ಪ್ರೇಮವೆಂಬುದು ಬಯಲ ಸಿಮೆಯ ಬೆಂಕಿ ಇದ್ದಂತೆ ಎಂದು ಬಗೆದಿದ್ದೆ,
ನಾನಿಯ ಹೃದಯವನ್ನೂ ಸುಡುವುದು ಎಂಬುದನ್ನು ನಾನು ಅರಿಯದೆ ಹೋದೆ.

ಪ್ರೇಮ ಎನ್ನುವದೊಂದು ಹಂಬಲ ಮತ್ತು ನಿತ್ಯ ವಿರಹದ ಸ್ಥಿತಿ, ನಂಬಿಕೆಯನು ಖಿನ್ನತೆಗೆ ತಳ್ಳಿದರೆ, ನೋವು ಹತಾಷೆಗಳಿಗೆ ದೂಡಿದರೆ ಅದು ಪ್ರೇಮವೆ ಅಲ್ಲ ಲೌಕಿಕ ಅಗತ್ಯಗಳ ಪೂರೈಕೆಯಾಗುವದಷ್ಟೆ, ಗಾಳಿಗಂಟಿದ ಘಮಲಿನ ಹಾಗೆ ಘಮಲು ಗಾಳಿಯನ್ನು ಆಶ್ರಯಿಸುತ್ತದೆ ಹೊರತು ಆಕ್ರಮಿಸುವದಿಲ್ಲ, ಅಲ್ಲದೆ ಗಾಳಿಯನು ಭಾರಗೊಳಿಸುವದಿಲ್ಲ , ಅದು ಸಹಸ್ರ ದಳ ಪದ್ಮವನು ಅರಳಿಸುವ ತಂಗಾಳಿಯಾಗಿದೆ.

ಗಜಲ್ 57 ರಲ್ಲಿ 4ನೇ ಶೇರ್ :

ಸಂಜೆಗತ್ತಲಿನಲಿ ನೊಂದು ಹರಿಸಿದ ಕಣ್ಣಿರಿನ ಬಿಂದುವಾಗಿ ಜಾರಿ ಹೋಗಲಿಲ್ಲ ನೀನು,
ಹೃದಯವೆಂಬ ನನ್ನ ಹೊಲದಲಿ ಪ್ರೀತಿಯ ಮೊಳಕೆಯಾಗಿ ಚಿಗುರೊಡೆಯುತಿರುವೆಯಲ್ಲ ಗೆಳತಿ.

ಹೌದು ಪ್ರೇಮವೆಂದರೆನೆ ಆಧ್ಯಾತ್ಮದ ಅನುಭೂತಿಯಾಗಿದೆ, ಎರಡು ಹೃದಯಗಳ ನಿರ್ಮಲ ಮನಸ್ಸಿನಲಿ ಯಾವುದೆ ಮೊಹವಿರದೆ ಅರಳಿದ ಹೂ ಅದು.
ಮೊಗೆದು ಕೊಟ್ಟಷ್ಟು ಬತ್ತದ ಸೆಲೆಯಾಗುವದು, ವಿರಳವು ಅಲ್ಲದೆ ಸೀಮಾತಿತವು ಅಲ್ಲದಿರುವ ಪ್ರೇಮದ ವ್ಯಾಪ್ತಿಯು ಅನಂತವಾಗಿರುವದು ಒಮ್ಮೆ ಹೃದಯದಲಿ ಪ್ರೇಮದ ಕಿಡಿಯು ಹೊತ್ತಿದರೆ ಅದು ಶಾಶ್ವತವಾದ ಬೆಳಕಾಗುವದು ಎಂಬ ಸತ್ಯವನು ಸಾಕ್ಷಿಕರಿಸಿದೆ ಯಾಕೆಂದರೆ ಪ್ರೇಮದಂತೆ ಇನ್ನಾವುದು ನಮ್ಮನ್ನು ಇಷ್ಟು ಪ್ರಮಾಣದಲ್ಲಿ ವಿಕಾಸಗೊಳಿಸಲಾರದೆನ್ನುವ ಹಫೀಜ್ ರ ನುಡಿಯನೆ ಪುಷ್ಟಿಕರಿಸುವದು ಕಾಣಬಹುದು.

ಸುಂದರವಾದ ಮುಖಪುಟ ಹಾಗೂ ಪ್ರತಿ ಬರಹಕ್ಕೆ ಅಷ್ಟೇ ಮುದ್ದಾದ ರೇಖಾಚಿತ್ರಗಳಿಂದ ಅಮ್ಮ ಎನ್ನುವ ರದೀಪ್ ನಿಂದ ಆರಂಭವಾದ ನಾನಿಯವರ ಗಜಲಗಳ ಯಾನ ಅಪ್ಪ ಎನ್ನುವ ರದೀಪ್ ಇರುವ ಗಜಲ್ ಗೆ ಮುಕ್ತಾಯಗೊಂಡಿರುವ ಹೀಗೆ ವಿಷೇಶವಾದ ಸುಮಾರು 60 ಗಜಲ್ ಗಳ ಗುಚ್ಛವಾಗಿದೆ. ಒಂದಷ್ಟು ಕಾಫಿಯಾನ ಗಜಲ್ ಗಳಿವೆ, ಪ್ರತಿ ಶೇರ್ ನಲ್ಲಿಯು ರವಿಯ ನಿಯಮ ಪಾಲನೆಯಾಗಿದೆ, ಆದರೆ ಸಾಧ್ಯವಾದಷ್ಟು ಕಾಫಿಯಾಗಳು ಸಮಾನ ಅಕ್ಷರಗಳಲಿ ಮೂಡಿದರೆ ಇನ್ನೂ ಶೇರ ಗಳ ಸೌಂದರ್ಯ ನೂರ್ಮಡಿಸುತಿತ್ತು.

ಗಜಲ್ 2, 4, 32, 43, 51, 54, 56 ,57, 58, 59, ಇಷ್ಟು ಸಂಖ್ಯೆಯ ಗಜಲ್ ಗಳು ಗೆಳತಿ ಎನ್ನುವ ರದೀಪನೆ ಹೊಂದಿರುವದರಿಂದ ಏಕತಾನತೆ ಕಾಡಿಸುವದು ಬದಲಾಗಿ ಅದೆ ಅರ್ಥ ನೀಡುವ ವಿಧವಿಧವಾಗಿ ರದೀಪ್ ಬಳಕೆ ಮಾಡಬಹುದಿತ್ತು. ಚೆಲುವೆ, ನಾನು, ನೀನು ಎನ್ನುವ ರದೀಪ್ ಗಳನೆ ಪದೆ ಪದೆ ಒಂದೆ ಭಾವದಲಿ ಉಲಿಯುವ ಬದಲು ಬರಹಗಾರ ಪರಕಾಯ ಪ್ರವೇಶವಾಗುವ ಪಾತ್ರಗಳ ಅಂಶಗಳೆಡೆಗೆ ಮುಂದಿನ ಕೃತಿಯಲಿ ಗಮನ ವಹಿಸಲಿ ಎನ್ನುವ ಸದಾಶೆಯದ ಭರವಸೆ ಹುಟ್ಟಿಸಲಿ.

ಈ ಕೃತಿ ನಾನಿಯವರ ದ್ವೀತಿಯ ಸಂಕಲನವಾದರು ಗಜಲ್ ನದು ಮೊದಲನೆಯದು ಇರುವದರಿಂದ ಮುಂದಿನ ಬರಗಳಿಗೆ ಮುನ್ನಚ್ಛರಿಕೆ ಕ್ರಮಗಳಿಂದ ನೂರಾರು ಕೃತಿಗಳು ಸಾರಸ್ವತ ಲೋಕದ ಹಿರಿಮೆಗೆ ಇಂಬಾಗುವೆಡೆಗೆ ದಾಪುಗಾಲಿಡಲಿ. ಪ್ರೇಮದೊಳಗಣ ವಿರಹವು ಇವರ ಬಹುತೇಕ ಗಜಲ್ ಗಳ ವಿಷಯ ವಸ್ತುವಾಗಿರುವದು ಕಂಡು ನನಗೆ 15 ನೇ ಶತಮಾನದ ಮೌಲಾನಾ ಜಾಮಿಯ ಎನ್ನುವ ಪರ್ಶಿಯನ್ ಸೂಫಿ- ಸಂತಕವಿಯ ಸಾಲುಗಳು ನೆನಪಿಸಿದವು ಪ್ರೇಮ ವೇದನೆಯಿರದ ಹೃದಯ ಯಾವುದು ಇಲ್ಲ, ಇರಲು ಅದೇನು ಕಲ್ಲೆ-ಮಣ್ಣೆ-?

ಎಲ್ಲರೂ ಪ್ರೇಮಿಯಾಗಿಯೆ ತೀರುವರು ಬದುಕಲ್ಲಿ ಒಂದಿಲ್ಲೊಮ್ಮೆ
ಎನ್ನುವ ಸಾಲುಗಳ ಮೆಲುಕು ಹಾಕುತ್ತಲೆ ಬರಹದಿಂದ ವಿರಮಿಸುವೆ.


  • ಪಾರ್ವತಿ ಎಸ್ (ದೇಸಾಯಿ) ಬೂದೂರು – ಸಾಹಿತಿಗಳು, ಯಾದಗಿರಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW