ಸಾನ್ವಿಯನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದೆ. ಅವಳೊಂದಿಗೆ ಕಳೆದ ಒಂದೊಂದು ಕ್ಷಣ ಮಧುರವಾಗಿತ್ತು. ನಾನು ಅವಳನ್ನು ಗಾಢವಾಗಿ ಪ್ರೀತಿಸುತ್ತಿದ್ದೆ. ಒಬ್ಬರನೊಬ್ಬರು ಬಿಟ್ಟಿ ಇರಲಾರದಷ್ಟು ನಮ್ಮ ನಡುವೆ ಮಾತು ಶುರುವಾಗಿತ್ತು. ಆದರೆ ಕೊನೆಗೆ ಆಕೆ ಯಾಕೆ ಹಾಗೆ ಮಾಡಿದಳು???, ತಿಳಿಯಲಿಲ್ಲ … ಮುಂದೇನಾಯಿತು ಎನ್ನುವುದನ್ನು ವಿಕಾಸ್. ಫ್. ಮಡಿವಾಳರ ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಪ್ರೇಮ ಕತೆಯನ್ನು ತಪ್ಪದೆ ಓದಿ…
“ಏನಾದ್ರು ಆಗ್ಲಿ ನಾಳೆ ಅವಳಿಗೆ ಎಲ್ಲಾನು ಹೇಳಿ ಬಿಡ್ತೀನಿ. ನಂಗೆ ಗೊತ್ತು ಅವ್ಳಿಗೂ ನನ್ನ ಮೇಲೆ ಪ್ರೀತಿ ಇದೆ “. ಸಾನ್ವಿ ಅವನನ್ನ ಪ್ರೀತಿ ಮಾಡ್ತಾ ಇದ್ದಾಳೊ ಇಲ್ವೋ ಅನ್ನೊ ಪ್ರಶ್ನೆ ಧೃವನ ತಲೇಲಿ ಬೆಳಗ್ಗೆಯಿಂದ ಕಾಡ್ತಾ ಇತ್ತು. ಅದಕ್ಕೆ ಆ ರಾತ್ರಿ ಕನ್ನಡಿ ಮುಂದೆ ನಿಂತು ಏನೇನೊ ಗೋಣಗುತ್ತಾಯಿದ್ದೆ . ಪಾಪ ಅವಳನ್ನು ಪ್ರೀತಿಸಿದ್ದು ಎಷ್ಟು ನಿಜವೋ, ತನ್ನ ಪ್ರೀತಿಯನ್ನ ವ್ಯಕ್ತಪಡಿಸಲಾಗದೆ ಫ್ರೆಂಡ್ ಶಿಪ್ ಜೂಮ್ ನಲ್ಲಿ ಒದ್ದಾಡ್ತಾ ಇದ್ದಿದ್ದು ಅಷ್ಟೇ ನಿಜ. ಅವಳು ನನ್ನನ್ನು ಪ್ರೀತಿಸ್ತಾ ಇದ್ದಾಳಾ ಇಲ್ವಾ?. ಪ್ರೀತಿಸ್ತಾ ಇದ್ದಿದ್ರೆ ಯಾಕೆ ಫ್ರೆಂಡ್ಸ್ ಅಂತ ಹೇಳ್ತಾಳೆ?. ಒಂದು ವೇಳೆ ಫ್ರೆಂಡ್ ಆಗಿದಿದ್ರೆ ದಿನರಾತ್ರಿ ಅಷ್ಟು ಹೊತ್ತು ಯಾಕೆ ಮಾತಾಡ್ತಾಳೆ?. ನನ್ನ ನೋಡ್ಲಿಲ್ಲ ಅಂದ್ರೆ ನಿದ್ದೆ ಬರಲ್ಲ ಅಂತ ಯಾಕೆ ಹೇಳ್ತಾಳೆ?. ಕಾಲೇಜ್ ನಲ್ಲಿ ಬೇರೆ ಹುಡುಗಿ ಜೊತೆ ಮಾತಾಡಿದ್ರೆ ಯಾಕೆ ಉರಿತಾಳೆ?. ನಾನೇ ಹೇಳಲಿ ಅಂತ ಕಾಯ್ತಾ ಇದ್ದಾಳೋ ಏನೋ? ತಲೇಲಿ ಓಡುತ್ತಿದ್ದ ನೂರೆಂಟು ಪ್ರಶ್ನೆಗಳಿಗೆ ಅವನ ಹತ್ತಿರ ಉತ್ತರವಿರಲಿಲ್ಲ. ಇದಕೆಲ್ಲ ಫುಲ್ ಸ್ಟಾಪ್ ಇಡ್ಬೇಕು, ಅದಕ್ಕಾಗಿ ನಾಳೆ ಅವ್ಳಿಗೆ ಎಲ್ಲಾನೂ ಹೇಳಿಬಿಡ್ಬೇಕು ಅಂತ ನಿರ್ಧರಿಸಿದ.
ಧೃವ 20-21 ರ ಹದಿ ಹರೆಯದ ಯುವಕ . ಚಿಗುರಿದ ಮೀಸೆ, ಬಿಸಿ ರಕ್ತಕ್ಕೆ ಸಮನಾದ ಮೈಕಟ್ಟು, ಕಂದು ಬಣ್ಣದ ಯುವಕ. ಅಪ್ಪ ಟೀಚರ್, ಅಮ್ಮ ಗೃಹಿಣಿ. ಅಣ್ಣ ಹಿಟ್ಲರ್. ಮೊನ್ನೆ ತಾನೆ ಪಿಎಸ್ಐ ಎಕ್ಸಾಮ್ ಪಾಸ್ ಆಗಿದ್ದ. ಮನೇಲಿ ಎಲ್ರು ಸ್ಟ್ರಿಕ್ಟ್ ಇದ್ರು. ಅದಕ್ಕೆ ಅವನು ಉಡಾಳನಂತಿದ್ದ. ಹಾಗೋ ಹೀಗೋ ಮಾಡಿ ಎಸ್ಎಸ್ ಎಲ್ ಸಿಯಲ್ಲಿ 90%. ಪಿಯುಸಿಯಲ್ಲಿ 80% ತಗೆದು ಶಿರಸಿ ಕಾಲೇಜಿಗೆ ಬಿಎಸ್ ಸಿ ಓದಲು ಬಂದಿದ್ದ. ಸ್ಪೋರ್ಟ್ಸ್ ಲ್ಲಿ ಎತ್ತಿದ ಕೈ. ಲೀಡರ್ ಶಿಪ್ ಅಲ್ಲಿ ಅವನನ್ನು ಮೀರಿಸುವರಿರಲಿಲ್ಲ. ಓದುವುದು ಬಿಟ್ಟು ಉಳಿದೆಲ್ಲದರಲ್ಲೂ ಮುಂದಿದ್ದ. ಕಾರಣ ಮೂರನೇ ಸೇಮ್ ಅಲ್ಲಿ ಒಂದೆರಡು ವಿಷಯಗಳು ಉಳಿದುಕೊಂಡಿದ್ದವು.
ಧೃವನಿಗೂ ಒಂದು ವೀಕ್ ನೆಸ್ ಇತ್ತು. ಅವನಿಗೆ ಹುಡುಗಿಯರ ಜೊತೆ ಮಾತಾಡಲು ತುಂಬಾ ಭಯವಾಗುತ್ತಿತ್ತು. ಯಾರಾದರು ಮಾತಾಡಲು ಬಂದರೆ ಒಂದು ಅಡಿ ದೂರ ನಿಲ್ಲುತ್ತಿದ್ದ . ಅದಕ್ಕೆ ಅವನು ಸಿಂಗಲ್ ಆಗಿದ್ದ. ಹಾಗಂತ ಅವನಿಗೆ ಪ್ರೀತಿ ಇರಲಿಲ್ಲ ಅಂತ ಅಲ್ಲ. ಪ್ರೀತಿ ಹೇಳಿಕೊಳ್ಳುವ ಧೈರ್ಯ ಇರಲಿಲ್ಲ. ಹೀಗೆ ನಡೀತಾ ಇತ್ತು ನಮ್ಮ ಹೀರೋನ ಜೀವನ.
“ಈ ಪ್ರೀತಿ, ಈ ಪ್ರೇಮ ಪುಸ್ತಕದ ಬದನೇಕಾಯಿ” ಅಂತ ಹಾಡು ಹೇಳಿ ತಿರುಗಾಡುತ್ತಿದ್ದವನ ಜೀವನದಲ್ಲಿ ಒಂದು ದಿನ ಆ ದುರಂತ ನಡೆದೆ ಹೋಯಿತು. ಅವತ್ತು ಇಂಟರ್ನಲ್ ಎಕ್ಸಾಮ್ ಇತ್ತು. ಇಷ್ಟು ದಿನ ಏನೂ ಓದದವನು, ಇವತ್ತು ಪರೀಕ್ಷೆಯಲ್ಲಿ ಏನಂತ ಕಿತ್ತು ಬಿಸಾಕುತ್ತಾನೆ. ಅದಕ್ಕೆ ಪರೀಕ್ಷೆಯಲ್ಲಿ ಏನೂ ಬರೆಯದೆ ಅರ್ಧಕ್ಕೆ ಹೊರಗೆ ಬಂದು. ತನ್ನ ಗೆಳೆಯರಿಗಾಗಿ ಕಾಯುತ್ತಾ ನಿಂತಿದ್ದ . ಆಗ ಅವನ ಕಣ್ಣೇದುರಿಗೆ ಅವಳು ಬಂದಳು.
ತಿರುಗಿ ತಿರುಗಿ ನೋಡುವಂತ ಹುಡುಗಿ ಏನಲ್ಲ ಅವಳು. ಆಕಾಶ ನೀಲಿಯ ಚೂಡಿ ಹಾಕಿದ್ದಳು. ತಿಳಿ ನೀರಿನಂತೆ ಮೃದುವಾಗಿದ್ದಳು. ಗೋಧಿ ಬಣ್ಣ, ಉದ್ದ ಕೂದಲು, ಹಣೆ ಮೇಲೆ ಕುಂಕುಮದ ಬೊಟ್ಟು, ಕೆನ್ನೆಯ ಪಕ್ಕ ಕಪ್ಪು ಕಾಡಿಗೆ, ತುಟಿಯ ಅಂಚಿನಲ್ಲಿ ಸಣ್ಣ ಮುಗುಳ್ನಗೆ, ಅವಳು ನಡೀತಾ ಇದ್ರೆ ಅಪ್ಸರೆ ಧರೆಗಿಳಿದು ಬರುತ್ತಿದ್ದಂತೆ ಭಾಸವಾಗಿತ್ತು. ಅವಳ ಹೆಜ್ಜೆಯ ಗೆಜ್ಜೆಗೆ ಅವನ ಎದೆ ಜಲ್ ಜಲ್ ಅಂತ ಇತ್ತು. ನಮ್ಮ ಹೀರೊ ಅವಳನ್ನು ನೋಡಿದ ಮೊದಲ ಕ್ಷಣದಲ್ಲೆ ಪ್ರೀತಿಯಲ್ಲಿ ಬಿದ್ದಿದ್ದ. ಅವಳು ತನ್ನತ್ತ ಬರುತ್ತಿದ್ದಾಳೆ ಎಂದಾಕ್ಷಣ ಭಯದಲ್ಲಿ ಹೃದಯದ ಬಡಿತ ಹೆಚ್ಚಾಗಿತ್ತು. ಮೈ ತುಂಬಾ ಬೆವರು ಇಳಿದಿತ್ತು. ಇಬ್ಬರ ಕಣ್ಣುಗಳು ಒಬ್ಬರನ್ನೊಬ್ಬರು ನೋಡುತ್ತಾ ಇದ್ದವು. ಅವನೋ ತುಂಬಾ ಧೈರ್ಯವಂತ ಪ್ರಾಣಿ. ಅವನಿಗೆ ಅದೆಷ್ಟು ಧೈರ್ಯವಿತ್ತು ಅಂದ್ರೆ ನಿಂತಲ್ಲೆ ಕಾಲುಗಳು ನಡಗುತ್ತಾ ಇದ್ದವು. ಮೌನಿಯಾಗಿ ನಿಂತಿದ್ದ ಅವನನ್ನು ನೋಡಿ ಅವಳೆ ಮೌನ ಮುರಿದಳು. “ಹಾಯ್… ನನ್ನ ಹೆಸರು ಸಾನ್ವಿ. ನಿಮ್ಮಿಂದ ಒಂದು ಹೆಲ್ಪ್ ಆಗ್ಬೇಕಿತ್ತು ” ಅವಳ ಮಾತಿಗೆ ಅವನು ಏನು ಹೇಳಬೇಕೆಂದು ತೋಚದೆ ” ಬಂದೆ… ಬಂದೆ… ” ಅಂತ ಗೊಣಗುತ್ತಾ ಹಾರಿ ಹೋಗಿದ್ದ ಹೃದಯವನ್ನ ಗಟ್ಟಿಯಾಗಿ ಹಿಡಿದುಕೊಂಡು ಓಡಿಯೆ ಬಿಟ್ಟ.
ಇದಾದ ಕೆಲವು ದಿನ ಧೃವನಿಗೆ ನಿದ್ದೆ ಬರಲೇ ಇಲ್ಲ. ಅವಳ ಪರಿಚಯ ಅವನಿಗಿತ್ತಾದರು ಯಾವತ್ತೂ ಅವಳೆದುರು ಮಾತಾಡಿರಲಿಲ್ಲ. ಬೆಳಗ್ಗೆ ಕ್ಲಾಸಿಗೆ ಹೋದಾಗೊಮ್ಮೆ ಅವಳ ಮುಖವನ್ನು ನೋಡುವುದು, ಕವನಗಳನ್ನು ಬರೆದು ಸ್ಟೇಟಸ್ ಹಾಕುವುದು, ಒಳಗೊಳಗೆ ಖುಷಿ ಪಡುವುದು ಶುರುವಾಯಿತು. ಅಮಾವಾಸ್ಯೆಗೊಮ್ಮೆ.. ಹುಣ್ಣಿಮೆಗೊಮ್ಮೆ… ಕಾಲೇಜಿಗೆ ಬರುತ್ತಿದ್ದವನು ಈಗ ದಿನಾ ಬರ್ತಾ ಇದ್ದ. ಅವಳ ಜೊತೆ ಮಾತಾಡಬೇಕೆಂದು ಹವನಿಸುತ್ತಾ ಇದ್ದ. ಕೊನೆಗೂ ಅವರಿವರಿಂದ ಅವಳ ನಂಬರ್ ಸಿಕ್ತು. ಮಾತು ಶುರುವಾದವು. ಮೊದ ಮೊದಲು ತುಂಬಾ ಕಡಿಮೆ ಮಾತಾಡುತ್ತಿದ್ದವರು ದಿನ ಕಳೆದಂತೆ ಹತ್ತಿರವಾದರು. ಕಾಲೇಜಿನ ಸಂದಿ, ಮೆಟ್ಟಿಲು, ವೆಹಿಕಲ್ ಸ್ಟಾಂಡ್, ಕ್ಲಾಸ್, ಲೈಬ್ರರಿಯಲ್ಲಿ ಭೇಟಿಯಾಗುವುದು ಸಹಜವಾಯಿತು. ಬರಿ 5 ನಿಮಿಷ ಜೊತೆಗೆ ಇರುವವರು ಈಗ ದಿನಗಟ್ಟಲೆ ಜೊತೆಯಾಗಿ ಇರುವುದು ರೂಢಿಯಾಯಿತು. ಕೊನೆಗೂ ನಮ್ಮ ಹುಡುಗ ಪೂರ್ತಿಯಾಗಿ ಪ್ರೀತಿಯಲ್ಲಿ ಬಿದ್ದ. ಅವಳ ಅಂಧವನ್ನು ಮನಸ್ಸಿನೊಳಗೆ ಹೊಗಳುತ್ತಿದ್ದ. ಅವಳ ಗುಣಕ್ಕೆ ಸೋತು ಹೋಗಿದ್ದ. ಆದರೆ ತನಗಿದ್ದ ಪ್ರೀತಿಯನ್ನು ಹೇಳಲಾಗದೆ ಒದ್ದಾಡುತ್ತಾ ಇದ್ದ.
ದಿನಗಳು ಕಳೆದವು, ವರ್ಷಗಳು ಉರುಳಿದವು. ದೇವಸ್ಥಾನ, ಪಾರ್ಕ್, ಆ ಊರು, ಈ ಊರು ಅಂತ ಸುತ್ತಾಡುವುದು ಶುರುವಾಯಿತು. ಅವನ ಪ್ರೀತಿಯನ್ನು ಹೇಳಿಕೊಳ್ಳಲು ಅದೆಷ್ಟೊ ಹರಸಾಹಸ ಮಾಡಿ ಕೊನೆಗೂ ಹೇಳಿಕೊಳ್ಳಲಾಗದೆ ಮೌನಿಯಾಗಿದ್ದ. ಕಾಲೇಜಿನಲ್ಲಿ ಅವರಿಬ್ಬರು ಮಾಡುತ್ತಿದ್ದ ಕಣ್ಣು ಸನ್ನೆಗಳಿಂದ ಅವನ ಗೆಳೆಯರಿಗೆ ವಿಷಯ ಗೊತ್ತಾಯಿತು. ಅವರು ಅವನ ಬೆಂಬಲಕ್ಕೆ ನಿಂತರು. ಹೀಗೆಲ್ಲ ಹೆದರಿದ್ರೆ ಆಗಲ್ಲ, ಹೋಗಿ ಎಲ್ಲಾನು ಹೇಳಿಬಿಡು ಅವಳ ಮುಂದೆ. ಪಕ್ಕಾ ಒಪ್ಪಿಕೊಳ್ತಾಳೆ. ಅದು ಇದು ಅಂತ ಹುರುದುಂಬಿಸಿದರು. ಕೊನೆಗೆ ದೃವ ಸಾನ್ವಿಗೆ ಪ್ರೊಪೋಸ್ ಮಾಡಲು ಒಪ್ಪಿದ.
ಆ ರಾತ್ರಿ ಧೃವನಿಗೆ ನಿದ್ದೆ ಬರಲೆ ಇಲ್ಲ. ಬೆಳಗ್ಗೆ ಯಾವಾಗ ಆಗುತ್ತತ್ತೋ ಅಂತ ಕಾಯ್ತಾ ಇದ್ದ. ಮಾರನೆಯ ದಿನ ಊರಲ್ಲಿರೋ ಎಲ್ಲ ದೇವಸ್ಥಾನಕ್ಕೂ ಭೇಟಿ ಕೊಟ್ಟ. ಯಾವ ದೇವರನ್ನು ನಂಬದವ, ಅವತ್ತು ಎಲ್ಲ ದೇವರಲ್ಲೂ ಹರಕೆ ಹೊತ್ತುಕೊಂಡು ಕಾಲೇಜಿಗೆ ಬಂದ. ಎಲ್ಲರೂ ಅವರವರ ಲೋಕದಲ್ಲಿ ತಲ್ಲೀಣರಾಗಿದ್ದರು. ದೃವ ಲಾಸ್ಟು ಬೆಂಚಲ್ಲಿ ಕೂತು ಸಾನ್ವಿ ಬರುವಿಕೆಗೆ ಕಾಯ್ತಾ ಇದ್ದ. ಕೊನೆಗೂ ಅವಳು ಬಂದಳು, ಕಣ್ಣ ಸನ್ನೆಯಲ್ಲಿ ಮಾತುಗಳು ಶುರುವಾದವು. ಸಂಜೆ ಭೇಟಿಯಾಗೊಣವೆಂದು ನಿರ್ಧರಿಸಿದರು. ಸಂಜೆಯಾಯಿತು, ಇಬ್ಬರು ಹತ್ತಿರದ ಗಣೇಶನ ಗುಡಿಗೆ ಹೆಜ್ಜೆ ಬೆಳೆಸಿದರು.
ಧೃವನ ಮನಸ್ಸಲ್ಲಿ ಭಯ ಕಾಡುತ್ತಿತ್ತು. ಏನು ಹೇಳಬೇಕೆಂದು ತೋಚದೆ ಸುಮ್ಮನಿದ್ದ. “ಏನು ಹೇಳು ಧೃವ” ಅಂತ ಕೇಳಿದ ಪ್ರಶ್ನೆಗೆ ಮಾತೇ ಬರಲಿಲ್ಲ. ಕೊನೆಗೂ ಗಟ್ಟಿ ಮನಸ್ಸು ಮಾಡಿ ಎಲ್ಲವನ್ನು ಹೇಳಿ ಮಂಡಿಯೂರಿ “ಐ ಲವ್ ಯು… ಸಾನ್ವಿ. ನೀನು ಇಲ್ದೆ ನಾನು ಬದುಕಿರಲ್ಲ” ಅಂದು ಬಿಟ್ಟ. ಕಣ್ಣುಗಳು ಮುಚ್ಚಿದ್ದವು, ಹೂವು ಹಿಡಿದಿದ್ದ ಕೈಗಳು ನಡಗುತ್ತಿದ್ದವು. ಏನು ಉತ್ತರಿಸುತ್ತಾಳೆಂದು ಮನಸ್ಸು ಕಾತುರದಿಂದ ಕಾಯುತ್ತಿತ್ತು. ಆದರೆ ಯಾವುದೇ ಉತ್ತರ ಬರಲೇ ಇಲ್ಲ. ಗಾಬರಿಯಾಗಿ “ನಿನಗೆ ನಾನು ಇಷ್ಟ ಇಲ್ವಾ” ಅಂತ ಕೇಳಿದ.
“Sorry ಧೃವ… ನನಗೆ ನಿನ್ನ ಮೇಲೆ ಆತರ ಫೀಲಿಂಗ್ಸ್ ಇಲ್ಲ. ವೀ ಆರ್ ಜಸ್ಟ್ ಫ್ರೆಂಡ್ಸ್.” ಅವಳ ಮಾತುಗಳನ್ನು ಕೇಳಿ ಏನು ಹೇಳಬೇಕೆಂದು ತಿಳಿಯಲೇ ಇಲ್ಲ. ಪ್ರೀತಿಯಿಂದ ಕಟ್ಟಿದ ಕನಸುಗಳು ಕಣ್ಣೆದುರೆ ಒಡೆದದ್ದು ಕಂಡು ನೀರು ಬಂದಿತ್ತು. ಅದನ್ನು ತೋರಿಸಿಕೊಳ್ಳಬಾರದೆಂದು ನಗುವ ನಾಟಕ ಮಾಡಿದ. ಅವಳಿಗೂ ಅವನ ಪ್ರೀತಿ ಅರಿವಾಯಿತು. ಸಮಾಧಾನ ಮಾಡಬೇಕೆಂದೆನ್ನಿಸಿತು. ಆದರು ಕಲ್ಲು ಹೃದಯ ಮಾಡಿ “ಸರಿ ನಂಗೆ ಲೆಟ್ ಆಗ್ತಾ ಇದೆ ಬಾಯ್ ” ಅಂತ ಹೇಳಿ ತಿರುಗಿ ನೋಡದೆ ಹೊರಟೆ ಬಿಟ್ಟಳು. ಕೈ ಚಾಚಿ ಕರೆಯಬೇಕೆಂದು ಅನಿಸಿತು. ಆದರೆ ಅವಳು ನನ್ನವಳಲ್ಲ ಎಂಬ ಸತ್ಯ ಅರಿವಾಗಿ ಸುಮ್ಮನಾದ.
ಅವಳು ದೂರವಾಗಿದ್ದಳು
ಅವನು ಮೌನವಾಗಿದ್ದ
ಮಾತೇನೋ ಮುಗಿದಿತ್ತು
ಪ್ರೀತಿಯೂ ಕೊನೆಯಾಗಿತ್ತು…
- ವಿಕಾಸ್. ಫ್. ಮಡಿವಾಳರ