ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರ “ಅಂತರಂಗದ ಪ್ರಣತಿ” ಮೂರನೆಯ ಕವನ ಸಂಕಲನ ಕೃತಿಯ ಕುರಿತು ವಿಜಯಲಕ್ಷ್ಮಿ ನಾಯ್ಕ್ ಬಿಳಿಯೂರು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅಂತರಂಗದ ಪ್ರಣತಿ
ಲೇಖಕರ : ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ
ಪ್ರಕಾಶಕರು: ಓಂ ಶ್ರೀ ಶಕ್ತಿ ಪ್ರಕಾಶನ ಕಲಬುರ್ಗಿ
ಮುದ್ರಣ ವರ್ಷ: 2025
ಪುಟಗಳ ಸಂಖ್ಯೆ: 86
ಬೆಲೆ: 150.00
“ಅಂತರಂಗದ ಪ್ರಣತಿ” ಇದು ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಬರೆದ ಫಿಲಿಫೈನ್ಸ್ ದೇಶದ ಕಾವ್ಯ ಪ್ರಕಾರವಾದ ‘ತನಗ’ ಕವನಗಳನ್ನು ಒಳಗೊಂಡ ಕವನ ಸಂಕಲನವಾಗಿದೆ. ‘ತನಗ’ ಕಾವ್ಯದಲ್ಲಿ ಒಟ್ಟು ನಾಲ್ಕು ಸಾಲುಗಳಿರುತ್ತವೆ. ಪ್ರತಿಯೊಂದು ಸಾಲಿನಲ್ಲಿಯೂ ಏಳು ಅಕ್ಷರಗಳು ಇರಲೇಬೇಕು. ‘ಅಅಬಬ’ ಅಂತ್ಯ ಪ್ರಾಸ ಹೊಂದಿದ್ದರೆ ತನಗಕ್ಕೊಂದು ಅಂದ. ತನಗಕ್ಕೆ ಶೀರ್ಷಿಕೆಗಳು ಇರುವುದಿಲ್ಲ.

ಮೊದಲನೇ ತನಗ :
ಮುಂಜಾನೆಯ ಮಂಜಲ್ಲಿ
ನನ್ನ ಹೃದಯದಲ್ಲಿ
ನೀ ನೆಲೆಸಿದೆಯಲ್ಲಿ
ಪ್ರೇಮಾನುರಾಗದಲ್ಲಿ
ಈ ತನಗದ ನಾಲ್ಕು ಸಾಲುಗಳಲ್ಲಿಯೂ ಅಂತ್ಯ ಪ್ರಾಸವಿದೆ. ಒಂದೊಂದು ಸಾಲಿನಲ್ಲಿ ಏಳೇಳು ಅಕ್ಷರಗಳು ಬೆರೆತ ಒಟ್ಟು ಇಪ್ಪತ್ತೆಂಟು ಅಕ್ಷರಗಳ ಗುಚ್ಛ. ಇದರಲ್ಲಿ ಹೃದಯದಲ್ಲಿ ಉದಿಸಿದ ಪ್ರೇಮಕ್ಕೆ ಮುಂಜಾನೆಯ ಮಂಜಿನ ಸ್ಪರ್ಶವನ್ನು ನೀಡಿದ್ದಾರೆ ಕವಿಗಳು. ಕವಿಯ ಕಲ್ಪನೆಯಲ್ಲಿ ಪ್ರಕೃತಿಯಿಂದ ಪ್ರೀತಿಯ ಪಯಣ ಆರಂಭವಾಗಿದೆ.
ಇನ್ನೊಂದು ತನಗ :
ಭಕ್ತಿಯಿಲ್ಲದ ಪೂಜೆ
ಗುರುವಿಲ್ಲದ ಗುರಿ
ಅಂಬಿಗನು ಇಲ್ಲದ
ಖಾಲಿ ದೋಣಿಯೇ ಸರಿ
ಈ ತನಗದ ಎರಡು ಮತ್ತು ನಾಲ್ಕನೇ ಸಾಲಿನಲ್ಲಿ ಅಂತ್ಯಪ್ರಾಸ ಬಂದಿದೆ. ಇದರಲ್ಲಿ ಕವಿಗಳು ಪೂಜೆ ಮಾಡುವಾಗ ಭಕ್ತಿ ಇರಬೇಕು. ಡಾಂಭಿಕತೆ ಇರಬಾರದು. ಗುರಿಯನ್ನು ತಲುಪಬೇಕಾದರೆ ನಮಗೆ ಗುರುಗಳ ಮಾರ್ಗದರ್ಶನ ಬೇಕು. ಒಟ್ಟಿನಲ್ಲಿ ಭಕ್ತಿ, ಗುರುಗಳು ಇರದಿದ್ದರೆ ನಮ್ಮ ಬಾಳಿನ ಪಯಣ ಅಂಬಿಗನೇ ಇಲ್ಲದ ದೋಣಿಯಂತಾಗುತ್ತದೆ ಎಂದು ಬಹಳ ಮಾರ್ಮಿಕವಾಗಿ ಬರೆದಿದ್ದಾರೆ.
ಮಗದೊಂದು ತನಗ :
ಆಗಸದಿ ಮೋಡದ
ಸಂಚಾರವು, ಸುರಿಯೆ
ವರ್ಷಧಾರೆ ರೈತನ
ಮೊಗದಿ ಹೂ ನಗೆಯು
ಈ ತನಗವು ಮಳೆಯು ಸುರಿದಾಗ ರೈತರ ಮೊಗದಲ್ಲಿ ಕಂಡುಬರುವ ಸಂಭ್ರಮವನ್ನು ವರ್ಣಿಸುತ್ತದೆ. ಬೆಳೆಯನ್ನು ಬೆಳೆಯಲು ಮಳೆಯ ಅವಶ್ಯಕತೆ ಇದೆ. ಮೊದಲು ಸುರಿಯುವ ವರ್ಷಧಾರೆ ರೈತರಿಗೆ ಹರ್ಷವನ್ನು ತರುತ್ತದೆ ಎಂದು ಬರೆದಿರುವ ತನಗ ಚೆನ್ನಾಗಿದೆ.
ಮತ್ತೊಂದು ತನಗ :
ಮಹಿಳೆಗೆ ಉಚಿತ
ಪ್ರಯಾಣದ ಭಾಗ್ಯವು
ಗಂಡಸರಿಗೆಲ್ಲವೂ
ಪಾಕಶಾಲೆ ವರವು
ಈ ತನಗ ಹಾಸ್ಯ ಮತ್ತು ವಾಸ್ತವವನ್ನು ಬೆರೆಸಿ ಬರೆದ ತನಗವಾಗಿದೆ. ಸರ್ಕಾರದಿಂದ ಮಹಿಳೆಯರಿಗೆ ದೊರಕಿದ ಉಚಿತ ಪ್ರಯಾಣದ ಸೇವೆಯಿಂದ ಸ್ತ್ರೀಯರು ಸುತ್ತಾಟ ನಡೆಸುತ್ತಾರೆ. ಇದರಿಂದ ಗಂಡಂದಿರು ಮನೆಯಲ್ಲಿ ಅಡುಗೆ ತಯಾರಿ ಮಾಡಿ ತಿನ್ನುವ ಪ್ರಮೇಯ ಒದಗಿದೆ ಎಂದು ಕವಿಗಳು ತಮ್ಮ ಸ್ವ ಅನುಭವವೋ ಏನೋ (ಕೇವಲ ತಮಾಷೆಗಾಗಿ) ಎಂಬಂತೆ ಬರೆದ ತನಗ ಸೊಗಸಾಗಿದೆ.
ಇನ್ನೊಂದು ತನಗ :
ಲೇಖನಿಯಲ್ಲಿ ಎಷ್ಟು
ಶಕ್ತಿಯು ಅಡಗಿದೆ
ಇಡೀ ಬ್ರಹ್ಮಾಂಡವನ್ನೇ
ಅಲುಗಾಡಿಸುವಷ್ಟು
ಈ ತನಗವು ಬರಹದ ಸಾಮರ್ಥ್ಯವನ್ನು ಬಿಂಬಿಸುತ್ತಿದೆ. ಯಾವುದಾದರೊಂದು ಘಟಿಸಿದ ಸಮಾಜಘಾತುಕ ಶಕ್ತಿಗಳ ಕ್ರೌರ್ಯದ ವಿಚಾರವನ್ನು ಮಾಧ್ಯಮಗಳಲ್ಲಿ ಬರೆದರೆ ಅದಕ್ಕೆ ಇಡೀ ಪ್ರಪಂಚವನ್ನೇ ಅಲ್ಲಾಡಿಸುವಷ್ಟು ಶಕ್ತಿ ಇರುತ್ತದೆ. ಇದರಿಂದ ಅನ್ಯಾಯಕ್ಕೆ ಸೋಲು, ನ್ಯಾಯಕ್ಕೆ ಗೆಲುವು ಖಚಿತ ಎಂದು ಬರೆದ ತನಗ ಅರ್ಥಪೂರ್ಣವಾಗಿದೆ.

ಈ “ಅಂತರಂಗದ ಪ್ರಣತಿ”ಯಲ್ಲಿ ಇನ್ನೂ ಹತ್ತು ಹಲವಾರು ಅಂದ ಚೆಂದದ, ವೈಚಾರಿಕ, ಸಾಂಸ್ಕೃತಿಕ, ಪ್ರಾಕೃತಿಕ, ಸಾಹಿತ್ಯಿಕ, ಪಾರಂಪರಿಕ, ಪ್ರೇಮಪೂರ್ವಕ, ಭಕ್ತಿಪೂರ್ವಕ ತನಗಗಳಿವೆ.
ಈ ಕೃತಿಯಲ್ಲಿ ಶ್ರೀಹರಿಯ ಧ್ಯಾನವಿದೆ. ಹಾರುವ ಹಕ್ಕಿಯ ಸ್ವಾತಂತ್ರ್ಯವಿದೆ. ನಲ್ಲೆಯ ಸಾಂಗತ್ಯವಿದೆ. ನಲ್ಲನ ಸಾಮಿಪ್ಯವಿದೆ. ಜೀವನದ ಸಾರವಿದೆ. ಇಳೆಯ ಸೊಗಸಿದೆ. ಸತ್ಯಧರ್ಮಗಳ ಪಾಠವಿದೆ. ಚುಕ್ಕಿ ಚಂದ್ರಮರ ಆಟವಿದೆ. ನಾಡಭಕ್ತಿಯ ಸೊಗಡಿದೆ. ಜ್ಞಾನದ ಮಾರ್ಗವಿದೆ. ಬಾಲಗೋಪಾಲನ ತುಂಟಾಟವಿದೆ. ಕತ್ತಲು ಬೆಳಕಿನ ಗುದ್ದಾಟವಿದೆ. ಈ ಎಲ್ಲಾ ಸುಂದರ ತನಗಗಳನ್ನು ಆಸ್ವಾದಿಸಲು ನಿಮ್ಮ ಮನ ಕಾತರಿಸುತ್ತಿವೆಯೇ..? ಹಾಗಾದರೆ ಓದುಗರು ಈ ಕೃತಿಯ ಪುಟ ತೆರೆಯಲೇಬೇಕು.
ಈ “ಅಂತರಂಗದ ಪ್ರಣತಿ” ಎಂಬ ತಮ್ಮ ಮೂರನೆಯ ಕವನ ಸಂಕಲನ ಕೃತಿಯನ್ನು ಸ್ನೇಹ ಪೂರ್ವಕವಾಗಿ ಕಳುಹಿಸಿಕೊಟ್ಟ ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ
(Dr. Mallikarjun Alamel.Hc ) ಸರ್ ಅವರಿಗೆ ತುಂಬು ಮನದ ಧನ್ಯವಾದಗಳು. ತಮ್ಮ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ನಾನು ಆಶಿಸುತ್ತೇನೆ.
- ವಿಜಯಲಕ್ಷ್ಮಿ ನಾಯ್ಕ್ ಬಿಳಿಯೂರು
