“ಏನು ಬರೆಯುವುದು..? ಏನೂ ಹೊಳೆಯುತ್ತಿಲ್ಲವಲ್ಲ.. ಏಂದು ಕೈಚೆಲ್ಲಿ ಕುಳಿತಾಗ.. ಥಟನೆ ಭಾವದ ಮಿಂಚೊಂದು ಹೊಳೆದು ಹಾಳೆಗಳಲ್ಲಿ ಕವಿತೆಯಾಗಿ ಹರಿದು ಸಂಚಲನ ಮೂಡಿಸಿ ಮುದ ನೀಡಿ ಬಿಡುತ್ತದೆ. ಅಂತಹ ಅಚಾನಕ್ ಅನುಭಾವದ ಕವಿತೆಯಿದು. ಓದಿ ನೋಡಿ.. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ ಇದು ಎಲ್ಲರ ಬದುಕಿನ ನಿತ್ಯ ಸತ್ಯ ಭಾವವೂ ಹೌದು. ಬೆಳಕಿನ ಭಾಷ್ಯವೂ ಹೌದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಯಾವ ಚಿಲುಮೆಗೆ ಯಾವ ನೀರೋ?
ಯಾರ ನಿಲುಮೆಗೆ ಯಾರು ಬೇರೋ?
ಯಾರ ಒಲುಮೆಗೆ ಯಾರ ಬದುಕೋ?
ಯಾರ ನಲುಮೆಗೆ ಯಾರು ಬೆಳಕೋ?
ಯಾವ ಕುಲುಮೆಗೆ ಯಾವ ಚೈತನ್ಯವೋ?
ಯಾರ ಗೆಲುಮೆಗೆ ಯಾರ ಕಾರುಣ್ಯವೋ?
ಯಾರ ವಹಿಮೆಗೆ ಯಾರು ಶರಣೋ.?
ಯಾರ ಜುಲುಮೆಗೆ ಯಾರ ಹರಣವೋ?
ಯಾವ ಕೊಳಲಿಗೆ ಯಾರ ಉಸಿರೋ?
ಯಾರ ಕೊರಳಿಗೆ ಯಾರು ಹೆಸರೋ?
ಯಾರ್ಯಾರ ಬೆರಳಿಗೆ ಯಾರ ಕರವೋ.?
ಯಾರ್ಯಾರ ನೆರಳಿಗೆ ಯಾರ ವರವೋ.?
ಅನುದಿನ ಅನಿರೀಕ್ಷಿತಗಳ ದಿವ್ಯ ಗಾರುಡಿ
ಅನುಕ್ಷಣ ಆಕಸ್ಮ್ಮಿಕಗಳ ಅನನ್ಯ ಕನ್ನಡಿ
ನಯನಕೂ ನಿಲುಕದ ನೆಳಲುಬೆಳಕಿನಾಟ
ಬದುಕಿದು ನಿತ್ಯ ಸತ್ಯ ವಿಸ್ಮಯಗಳ ಮಾಟ.!
ಸಕ¯ವೂ ಕಲ್ಪನಾತೀತ ಅಚ್ಚರಿ ಸರಮಾಲೆ
ವಿಧಾತನ ವಿಚಿತ್ರ ವೈಶಿಷ್ಟ್ಯಗಳ ವಿಧಿಲೀಲೆ
ಕಾಲನ ಅನೂಹ್ಯ ಅಡಿಗಳ ಮಾಯಾಜಾಲ.!
ಜಗವಿದು ಅಕ್ಷರಶಃ ಅದೃಶ್ಯನ ಆಡಂಬೋಲ.!
ಯಾವುದಿದೆ ನಮ್ಮ ನಿರೀಕ್ಷೆ ಪ್ರತೀಕ್ಷೆಗಳಲ್ಲಿ
ಏನೇನಿದೆ ನಮ್ಮ ಅರಿವು ಅಂದಾಜುಗಳಲ್ಲಿ?
ಕಣವಲ್ಲ ಅಣುವಲ್ಲ ತೃಣವೂ ನಮ್ಮದಿಲ್ಲವಿಲ್ಲಿ
ಹಗಲಲ್ಲ ಇರುಳಲ್ಲ ಕ್ಷಣವೂ ನಮ್ಮಂತಿಲ್ಲವಿಲ್ಲಿ
ಭ್ರಮೆ ಕಳಚಿದರಷ್ಟೇ ಬೆಳಕು ದಕ್ಕಬಹುದಿಲ್ಲಿ.!
- ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ.
