ಕವಿ ರುಡ್ಯಾರ್ಡ್ ಕಿಪ್ಲಿಂಗ್ ಅವರ ಸುಂದರ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕನ್ನಡದ ಖ್ಯಾತ ಅನುವಾದಕ ಕೇಶವ ಮಳಗಿ ಅವರು, ತಪ್ಪದೆ ಓದಿ…
ಎಲ್ಲರೂ ತಮ್ಮತನವನು ಕಳೆದುಕೊಂಡು ಅದಕಾಗಿ
ನಿನ್ನನು ದೂರುವಾಗ ತಲೆಯೆತ್ತಿ ನಿಲ್ಲಬಲ್ಲೆಯಾದರೆ,
ಜನ ನಿನ್ನನು ಸಂದೇಹಿಸುವಾಗ ಅವರ ಅನುಮಾನಕೆ
ಆಸ್ಪದ ನೀಡಿ ನಿನ್ನ ನಂಬಿಕೆಯನು ಕಾಪಿಡಬಲ್ಲೆಯಾದರೆ
ಕಾಯುವಿಕೆಗೆ ಇನಿತೂ ದಣಿಯದೆ ಕಾಯಬಲ್ಲೆಯಾದರೆ,
ಸುಳ್ಳು ಹೇಳಿದಾಗ ಸುಳ್ಳಿನ ಬಲೆಗೆ ಸಿಲುಕಲಾರೆಯಾದರೆ,
ಅಥವ ದ್ವೇಷಕ್ಕೊಳಗಾದರೂ ಈರ್ಷೆಗೆ ಬಲಿಯಾಗದಿದ್ದರೆ
ಒಳ್ಳೆಯವನೆಂದು ತೋರಿಸಿ, ಜಾಣನಂತೆ ಮಾತಾಡದಿದ್ದರೆ,
ಕನಸುಗಳು ನಿನ್ನನ್ನೇ ಸವಾರಿ ಮಾಡದಂತೆ ಕನಸಬಲ್ಲೆಯಾದರೆ,
ವಿಚಾರಗಳನ್ನು ಗುರಿಯಾಗಿಸಿಕೊಳ್ಳದೆ ಚಿಂತಿಸಬಲ್ಲೆಯಾದರೆ,
ಗೆಲುವು-ವಿನಾಶಗಳೆರಡೂ ಸಮಸಮದ ಸೋಗುಗಳೆಂದು
ಅರಿತು ಎರಡನ್ನೂ ಮುಖಾಮುಖಿಯಾಗಬಲ್ಲೆಯಾದರೆ
ಮೂಳರನು ಬಲಿ ಹಾಕಲು ನಿನ್ನ ದಿಟದ ನುಡಿಗಳನು ತಿರುಚಿ
ಬಳಸಲಾಗಿದೆ ಎಂಬುದು ತಿಳಿದು ಅರಗಿಸಿಕೊಳ್ಳಬಲ್ಲೆಯಾದರೆ
ಅಥವಾ ನಿನ್ನ ಬದುಕಿಗೆ ನೀನೇನು ನೀಡಿರುವೆ ಎಂದು ನಿರುಕಿಸಿ
ಒಡೆದು ಚೂರಾದ ತುಣುಕಿಂದ ಮತ್ತೆ ಬದುಕನ್ನು ಕಟ್ಟುವೆಯಾದರೆ
ನಿನ್ನ ಗೆಲುವುಗಳನೆಲ್ಲ ಗಂಟುಮೂಟೆಯ ಹಾಗೆ ಕಟ್ಟಿ
ತೂರಿ ಬಿಸಾಕಿಬಿಡುವ ಕೆಚ್ಚೆದೆಯನು ತೋರಿಸುವೆಯಾದರೆ
ಸೋತು ಎಲ್ಲವನೂ ಮೊದಲಿಂದ ಆರಂಭಿಸಬಲ್ಲೆಯಾದರೆ
ನಿನ್ನ ವೈಫಲ್ಯದ ಕುರಿತು ತುಟಿ ಬಿಚ್ಚಿ ನುಡಿಯಲಾರೆಯಾದರೆ
ಅವರೆಲ್ಲ ಹೋದ ಬಹುಕಾಲದ ಬಳಿಕ ನಿನ್ನ ಹೃದಯ, ಮಾಂಸಮಜ್ಜೆ
ನರನಾಡಿಗಳನು ಹುರಿಗೊಳಿಸಿ ಸರದಿಯನು ಮುಗಿಸಬಲ್ಲೆಯಾದರೆ,
`ತಡೆಯಿರಿ!’ ಎಂದು ಹೇಳುವ ಛಲದ ಹೊರತಾಗಿ
ನಿನ್ನಲೇನೂ ಇಲ್ಲದಿರುವಾಗ ತಡೆದುಕೊಳ್ಳಬಲ್ಲೆಯಾದರೆ
ಸದ್ಗುಣಗಳನುಳಿಸಿಕೊಂಡು ಸಂದಣಿಯೊಂದಿಗೆ ಮಾತನಾಡಬಲ್ಲೆಯಾದರೆ ಅಥವ ಅರಸನೊಂದಿಗೆ ಹೆಜ್ಜೆ ಹಾಕುವಾಗಲೂ ಸಾಮಾನ್ಯರನು ಮರೆಯದಿದ್ದರೆ, ಹಗೆತನದ ವೈರಿಗಳೋ, ಪ್ರೀತಿಯ ಗೆಳೆಯರೋ, ನಿನ್ನನು ನೋಯಿಸದಿದ್ದರೆ. ಜನರೆಲ್ಲ ನಿನ್ನೊಂದಿಗೆ ನಡೆದಾಗಲೂ ‘ತರತಮವ’ ಮಾಡದಿದ್ದರೆ
ಅರವತ್ತು ಕ್ಷಣಗಳ ಸಾರ್ಥಕ ಓಟವನು `ಕ್ಷಮಿಸುವ ನಿಮಿಷ’ದ
ಮೂಲಕ ನೀನು ತುಂಬಿ ತುಳುಕಿಸಬಲ್ಲೆಯಾದರೆ
ಈ ಬುವಿಯು ನಿನ್ನದೇ. ಅದರೊಳಗೆ ಎಲ್ಲವೂ ಅಡಗಿದೆ,
ಹೆಚ್ಚಿಗಿನ್ನೇನು ಮಗುವೇ-ನೀನೊಬ್ಬ ‘ಮನುಷ್ಯ’ನಾಗಿರಬಲ್ಲೆ!
ಇಂಗ್ಲಿಷ್ : ರುಡ್ಯಾರ್ಡ್ ಕಿಪ್ಲಿಂಗ್

- ಕನ್ನಡಕ್ಕೆ ಅನುವಾದ : ಕೇಶವ ಮಳಗಿ (ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು), ಬೆಂಗಳೂರು
