ನಾನು ನನ್ನದು ಎನ್ನುವ ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥವಾಗಿ ಬದುಕುವ ವ್ಯಕ್ತಿಗಳನ್ನು ನೋಡುವುದು ಅಪರೂಪ. ಯಾವುದೇ ಫಲಾಪೇಕ್ಷೆಯಿಲ್ಲದೆ ಮನೆ ಹತ್ತಿರದ ಪಾರ್ಕ್ ನಲ್ಲಿ ಗಿಡ ನೆಟ್ಟು ಸಂಭ್ರಮಿಸುವ ನಿವೃತ್ತ ಕೆಪಿಸಿಎಲ್ ಉದ್ಯೋಗಿ ಅಪರಂಜಿ ಅವರು ಎಲ್ಲರಿಗಿಂತ ವಿಭಿನ್ನ ವ್ಯಕ್ತಿ…
ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ ।
ಹೊಂದಿರವರವರಹಂತೆಯು ಮೊಳೆಯುವನಕ ।।
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ ।
ಬಂಧ ಮುರಿವುದು ಬಳಿಕ ಮಂಕುತಿಮ್ಮ ।।
ಎಷ್ಟೊಂದು ಪ್ರೀತಿ ಬಾಂಧವ್ಯ ಇರುವಂಥ ತಂದೆ ಮಕ್ಕಳ ಸಂಬಂಧಗಳು ಕೂಡ ಹಾಳಾಗಿದ್ದನ್ನು ನಾವು ನೋಡಿದ್ದೇವೆ. ಎಲ್ಲ ರೀತಿಯಲ್ಲೂ ಹೊಂದಿಕೊಂಡು ಇರುವಂಥ ಸಂಬಂಧ ತಾನು, ನಾನು ಎಂಬ ಸ್ವಾರ್ಥ ಮೊಳಕೆ ಒಡೆಯುವತನಕ ಮಾತ್ರ. ತಾನು, ನಾನು ಎಂಬ ಅಹಂ ಬರುತ್ತಿದ್ದ ಹಾಗೆ, ತಂದೆ ದೊಡ್ಡವರು, ಮಕ್ಕಳು ಸಣ್ಣವರು ಎಂಬುದೆಲ್ಲ ಕಾಣುವುದಿಲ್ಲ. ನಾನು ಎಂಬ ಅಹಂ ದೊಡ್ಡದಾಗುತ್ತ ಹೋಗುತ್ತದೆ. ಬೇರೆಯೆಲ್ಲ ಸಂಬಂಧಗಳು ಸಣ್ಣದಾಗಿ ಕಾಣಿಸುತ್ತವೆ. ಇದೆ ಕಾರಣದಿಂದ ಸಂಬಂಧಗಳೆಲ್ಲ ಮುರಿದು ಬೀಳುತ್ತವೆ ಎಂದು ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿ ಅದೆಷ್ಟು ಮನ ಮುಟ್ಟುವಂತೆ ಹೇಳ್ಯಾರ…

ಆದರ ನಾವು ಹಚ್ಚಿದ ಸಸಿ ನಮಗಿಂತ ಎತ್ತರದ ಗಿಡವಾಗಿ, ಮರವಾಗಿ ಬೆಳೆದು ನಿಂತಾಗ ಮಕ್ಕಳು ಬೆಳೆಯುತ್ತಿದ್ದಾರೆನೋ ಎನ್ನುವ ಸಂತಸ ಪಡುವ ಭಾವ ಇದೆಯಲ್ಲ ಅದು ಅದ್ಭುತ. ಇಲ್ಲಿ ನಾ ನಿನಗಿಂತ ದೊಡ್ಡದಾಗಿ ನಾ ಬೆಳೆದಿನಿ, ನಿನ್ನ ಅವಶ್ಯಕತೆ ನಂಗಿಲ್ಲ ಅಂತ ಈ ಬೆಳೆಸಿದ ಸಸಿ ಹೇಳಂಗಿಲ್ಲ. ಅದು ಹಸಿರಿನಿಂದ ಕಂಗೊಳಿಸುತ್ತಿದ್ದಂತೆ ಅದರ ಆರೈಕೆ ಮಾಡಿದವರ ಮುಖದಲ್ಲೊಂದು ಮಂದಹಾಸ ಮೂಡತದಲ್ಲಾ ಅಷ್ಟೇ ಸಾಕು.

ಇವತ್ತ ಧಾರವಾಡದ ಸಪ್ತಗಿರಿ ಲೇಔಟ್ ನಲ್ಲಿ ಜಿಟಿ ಜಿಟಿ ಮಳೆ ಸುರಿತಾ ಇತ್ತು. ಅಪ್ಪ ಲುಂಗಿ ಸುತ್ತಕೊಂಡು ಕೈಯಲ್ಲೊಂದು ಪಾವಡಾ ಹಿಡಕೊಂಡು, ಇನ್ನೊಂದು ಕೈಯಲ್ಲಿ ಸಸಿ ಹಿಡಕೊಂಡು ಸಮೀಪದ ಪಾರ್ಕೊಂದರಲ್ಲಿ ಸಸಿ ನೆಡುವ ಕಾಯಕದಲ್ಲಿ ಮಗ್ನರಾಗಿದ್ದರು. ಎಂಥಾ ನಿಸ್ವಾರ್ಥ ಭಾವ ಅಲ್ವಾ, ಹೇಳೋದಕ್ಕಿಂತ ಮಾಡಿ ತೋರಿಸೋಣ ಅನ್ನೋ ಅವರ ಕಾಳಜಿಗೆ ನಂದೊಂದು ಸಲಾಂ…
ಅವರು ನೆಟ್ಟ ಸಸಿಯಂತೆ ನಾವು ಮೂವರು ಮಕ್ಕಳು ಬೆಳೆದಿದ್ದೇವೆ. ಅವರ ಕಷ್ಟ, ಸುಖದಲ್ಲಿ ಭಾಗಿಯಾಗಿದ್ದೇವೆ…ಆ ಸಂತೃಪ್ತಿ ನಮ್ಮಲ್ಲಿದೆ…ನೀವು ನೆಟ್ಟ ಸಸಿ ಹಲವಾರು ಜನರಿಗೆ ನೆರಳಾಗಲಿ…ಬೇರೆಯವರಿಗೂ ಸ್ಪೂರ್ತಿಯಾಗಲಿ..ಡಿವಿಜಿ ಹೇಳಿದಂತೆ ಸಂಬಂಧಗಳು ಮುರಿದರೆ ಮನುಷ್ಯ ಬದುಕತಾನೆ. ಆದರೆ ಪ್ರಕೃತಿ ಜತೆಗಿನ ಸಂಬಂಧ ಮುರುದರ ಬದುಕೋದು ಕಷ್ಟ…ಅಪ್ಪನ ಈ ಮೌನ ಸಂದೇಶ…ನಮಗೂ ಮಾದರಿ ಅನಸ್ತು ನೋಡಿ….
- ರಾಘವೇಂದ್ರ ಅಪರಂಜಿ
