‘ಲಾಲಿ ಹಾಡುವ ಅಪ್ಪ ಬೇಕಾಗಿದ್ದಾನೆ…ತುತ್ತು ತಿನ್ನಿಸುವ , ಹೊತ್ತು ತಿರುಗಿಸುವ ಅಪ್ಪ ಬೇಕಾಗಿದ್ದಾನೆ’….ಖ್ಯಾತ ಮನಃಶಾಸ್ತ್ರಜ್ಞೆ ಶಾಂತಾ ನಾಗರಾಜ್ ಅವರು ಅಪ್ಪನ ಕುರಿತಾದ ಭಾವನಾತ್ಮಕ ಕವಿತೆಯನ್ನು ತಪ್ಪದೆ ಓದಿ…
ಹೆಗಲ ಮೇಲೆ ಕೂರಿಸಿಕೊಂಡು
ಜಗತ್ತನ್ನು ತೋರಿಸುವ
ಅಪ್ಪ ಬೇಕಾಗಿದ್ದಾನೆ
ತೊಡೆ ಮೇಲೆ ಮಲಗಿಸಿ
ಚುಕ್ಕು ತಟ್ಟುತ್ತಾ ಲಾಲಿ ಹಾಡುವ
ಅಪ್ಪ ಬೇಕಾಗಿದ್ದಾನೆ
ತುತ್ತು ತಿನ್ನಿಸುವ , ಹೊತ್ತು ತಿರುಗಿಸುವ
ಮತ್ತೆ ಮತ್ತದೇ ಕತೆ ಹೇಳಿ ಮಲಗಿಸುವ
ಅಪ್ಪ ಬೇಕಾಗಿದ್ದಾನೆ
ಶಾಲೆ ಕಾಲೇಜುಗಳಲ್ಲಿ ಸ್ಪರ್ಧೆ ಗಿಳಿಸದೇ
ಮೇಲೆ ಪಡೆದಂಕಗಳ ಹೇಳಿ ಬಯ್ಯದ
ಅಪ್ಪ ಬೇಕಾಗಿದ್ದಾನೆ
‘ಪಾಸಾದರೂ ಸರಿ, ಫೇಲೇ ಆದರೂ ಸರಿ
ನಾನಿನ್ನೊಂದಿಗೆ, ನೀ ಮುದ್ದುಮಗುವೆ’
ಎನ್ನುವ ಅಪ್ಪ ಬೇಕಾಗಿದ್ದಾನೆ
ಎಡವಿದರೆ ಹಿಡಿದೆತ್ತುವ, ಗೆದ್ದರೆ ಮೆಚ್ಚುವ
ಗೆಲ್ಲದಿರೆ ಚುಚ್ಚದೇ ಜೊತೆಯಾಗುವ
ಅಪ್ಪ ಬೇಕಾಗಿದ್ದಾನೆ
ನಿನ್ನಿಷ್ಟದ ಓದು, ನಿನ್ನಿಷ್ಟದ ಕೆಲಸ
ನಿನ್ನದೇ ಆಯ್ಕೆಯ ಮದುವೆ ಎಂದು
ಹರಸುವ ಅಪ್ಪ ಬೇಕಾಗಿದ್ದಾನೆ
ಮಕ್ಕಳೆದೆಯಲಿ ಬೆಚ್ಚಗೆ ಕೂತು
ಇದ್ದರೂ ಇಲ್ಲದೆಯೂ ಆಪ್ತವಾಗುವ
ಅಪ್ಪ ಬೇಕಾಗಿದ್ದಾನೆ
- ಶಾಂತಾ ನಾಗರಾಜ್