‘ದುಡ್ಡಿದ್ದರೇನು ಸಿರಿ ಇದ್ದರೇನು, ತಾಯಿಯ ಮಡಿಲಿಗೆ ಸರಿಸಮಾನವೇ?’… ಯುವ ಕವಿ ವಿಕಾಸ್. ಫ್. ಮಡಿವಾಳರ ಅವರ ಲೇಖನಿಯಲ್ಲಿ ಅರಳಿದ ತಾಯಿ ಕುರಿತಾದ ಒಂದು ಸುಂದರ ಕವನವನ್ನು ತಪ್ಪದೆ ಓದಿ…
ಹೊಟ್ಟೆಗಿರಲಾರದವ ಜೋಳಿಗೆಯ ಹಿಡಿದು ಹೊರಟಿದ್ದ ನೆಮ್ಮದಿಯ ಹುಡುಕುತ್ತ
ಹಸಿದ ಹೊಟ್ಟೆಗೆ ರೊಟ್ಟಿಯ ನೆನಪಾಗಿತ್ತು, ಕಣ್ಗಳು ಅರಳಿತ್ತು ಅತ್ತಿತ್ತ
ಕಂಡ ಬದುಕನು ಹಾಳೆಯಲಿ ಗೀಚಿ ಹಾಡಿದ್ದ ಆತ ಮೈಮರೆತು
ಅವನ ಹಾಡಿಗೆ ಬಾನು ಕೆಂಪಾಗಿತ್ತು, ಚಂದಿರ ಬಂದಿದ್ದ ತಾ ಸೋತು….1
ಮನೆಯ ಕಟ್ಟೆಯ ಮೇಲೆ ಕಣ್ಮುಚ್ಚಿ ಮಲಗಿರಲು ಜೋಳಿಗೆಯೇ ತಲೆದಿಂಬಾಗಿತ್ತು
ಇಳಿ ಬೆಳೆದಿಂಗಳಲಿ ಹೊಲವನ್ನು ಹುಳುಲು ಮಾಯೆಲ್ಲಾ ಸುಸ್ತಾಗಿತ್ತು
ತಾಯಿಯು ಬಂದಳು, ನೀರನ್ನು ತಂದಳು, ನಕ್ಕಳು ಅವನ ಸ್ಥಿತಿ ನೋಡಿ
ನೀರುಣಿಸಿದಳಾಕೆ, ಮುಖ ಒರೆಸಿದಳಾಕೆ, ದೃಷ್ಟಿಯ ತಗೆದಳು ಮರೆಮಾಡಿ….2
ದುಡ್ಡಿದ್ದರೇನು ಸಿರಿ ಇದ್ದರೇನು. ತಾಯಿಯ ಮಡಿಲಿಗೆ ಸರಿಸಮಾನವೇ?
ತೊಡೆಯ ಮೇಲೆ ಮಲಗಿದರೆ ಸಾಕು, ಅದಿಕಿಂತ ದೊಡ್ಡ ಸ್ವರ್ಗವೇ.
ಕೈ ತುತ್ತು ಕೊಟ್ಟು ಹಾಡಿದಳು ಲಾಲಿಯ, ನಕ್ಷತ್ರಗಳನು ಎನಿಸುತ್ತ.
ನಕ್ಕನು ಚಂದಿರ ತಾಯಿ ಮಗನನು ಕಂಡು, ಸಿಕ್ಕಿತು ನೆಮ್ಮದಿ ಎನ್ನುತ್ತ…3
- ವಿಕಾಸ್. ಫ್. ಮಡಿವಾಳರ