ಅನುಭವಿ ಪ್ರಕಾಶ್ ಸರ್ ಅಲ್ಲಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿದ್ದ ಪ್ರಾಣಿಗಳ ಹೆಜ್ಜೆ, ಗುರುತುಗಳನ್ನು ತೋರಿಸುತ್ತಾ ಇದು ಇಷ್ಟೇ ವಯಸ್ಸಿನ ಹುಲಿ,ಚಿರತೆ ಎಂದು ಮಾಹಿತಿ ಪೂರ್ಣವಾಗಿ ಅಂದಾಜಿಸುತ್ತಿದ್ದರು. – ಗಿರಿವಾಲ್ಮೀಕಿ, ತಪ್ಪದೆ ಮುಂದೆ ಓದಿ…
ಸೂರ್ಯನ ಬೆಳಕನ್ನೇ ಮಡಚಿ ಮುಗುಚಿ ಹಾಕಿಕೊಂಡಿತ್ತು ಹಿನ್ನೀರ ಮೇಲಿನ ಮೋಡ. ಮುರ ಸಂಜೆಯ ಹೊತ್ತಿನ ಸುತ್ತಲಿನ ಕಾಡು, ಸಿಕಾಡಾಗಳ ಕೇಕೆಯಲ್ಲಿ ದೀರ್ಘ ಮೌನವನ್ನು ಸುತ್ತಲು ಹೊದ್ದು ಮುಂಜಾನೆಯ ಸೂರ್ಯನ ಬೆಳಕಿಗಾಗಿ ಹಾತೊರೆಯುತ್ತಾ ಮುನಿಸಿ ಮುಲುಗುತ್ತಿತ್ತು. ಅಷ್ಟೇನೂ ಚಿರ ಪರಿಚಿತವಲ್ಲದ ಕಣಿವೆಯೊಳಗೆ ಬೆಳದಿಂಗಳ ಬೆಳಕಿನಲ್ಲಿ ಪ್ರಕಾಶ ಎಸ್ ಎಚ್, ವಾಚರ್ ಸರ್ದಾರ್ ಮತ್ತು ನಾನು ಕಾಡು ಹಾದಿ ತುಳಿಯುತ್ತಿದ್ದೆವು. ಬೆಳದಿಂಗಳ ಹಾಲು ಮಂದ್ರ ಬೆಳಕಿನಲ್ಲಿ ಗಡಿ ಭಾಗದ ಕಾಡು ಮುನಿಸಿಕೊಂಡ ಪ್ರೇಯಸಿಯಂತೆ ಗವ್ವೆನ್ನುತಿತ್ತು. ಚಂದಿರನ ಮಬ್ಬು ಬೆಳಕಿನ ಕಾಡಿನ ಹಿನ್ನೆಲೆಯಲ್ಲಿ ಪೂರ್ವ ದಿಕ್ಕಿನ ಗೋವಾ-ಕರ್ನಾಟಕ ಗಡಿಭಾಗದ ಕಣಿವೆಯ ಮೇಲೆ “ವಜ್ರಾ-ಸಕ್ಲಾ ಜಲಪಾತ” ಕಿವಿ ಗಡಚಿಕ್ಕುವಂತೆ ಭೋರ್ಗರೆಯುತ್ತಿದ್ದರೆ ಪಶ್ಚಿಮ ಘಟ್ಟದ ಬೆಳದಿಂಗಳ ಕಾಡಿಗೆ ಭರ್ತಿ ಬಯಲುಸೀಮೆಯ ಜೋಗತಿಯ ಜೀವಕಳೆ.!

ಸ್ವಪ್ನಗಂಧ ರೆಸಾರ್ಟ್ ದಾಟಿ ಖಾನಾಪುರದ ಕಡೆ ಹೊರಟ ಹಂದಿ ಮುಖದ ಡಕೋಟಾ ಲಾರಿಯ ಹೆಡ್ಲೈಟ್ ಬೆಳಕಿನಲ್ಲಿ, ಕಾಡಿನ ಜಂಬ್ಬಿಟ್ಟಿಗೆ ಮಣ್ಣಿನ ಧೂಳಿನ ಕಣಗಳನ್ನು ಭೇದಿಸಿಕೊಂಡ ಅಸಂಖ್ಯ ಕಾಡಿನ ಮಿಂಚು ಹುಳುಗಳು ಮಂದ ಬೆಳಕಿನೊಳಗೆ ಅಂಡಿನಲ್ಲಿ ಬೆಳಕು ಸೂಸುತ್ತಾ ಜೈತ್ರಯಾತ್ರೆ ಹೊರಟಿದ್ದವು. ಇಬ್ಬನಿಗೆ ತೋಯ್ದ ಬೆನ್ನಗಲದ ಚೋರ್ಲಾದ ಕಣಿವೆಯ ಕಾಡು ಹಾದಿಯಲ್ಲಿ ನಾವು ಮೂವರು ಮಾತ್ರ ಇಡೀ ಜಗತ್ತಿನ ಸಂಪೂರ್ಣ ಸಂಪರ್ಕವನ್ನು ಕಡಿದುಕೊಂಡು ಅಪಾದಮಸ್ತಾಕರಾಗಿ ಕಣಿವೆಯ ಪಾಲಾಗಿದ್ದೆವು.ಗೋವಾ,ಮಹರಾಷ್ಟ್ರ,ಕರ್ನಾಟಕ ಗಡಿ ಭಾಗದ ಆ ತ್ರಿಭುಜಾಕೃತಿಯ ದಟ್ಟ ಕಾಡಿನೊಳಗೆ ವನ್ಯ-ಮೃಗಗಳ ಹಿಂಡಿನ ಜೀವಂತ ಸಂಚಾರ ಕಾಡಿನ ಹಾದಿಯಲ್ಲಿ ಅನುಭವಕ್ಕೆ ಬರುತ್ತಿತ್ತು. ಅನುಭವಿ ಪ್ರಕಾಶ್ ಸರ್ ಅಲ್ಲಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿದ್ದ ಪ್ರಾಣಿಗಳ ಹೆಜ್ಜೆ, ಗುರುತುಗಳನ್ನು ತೋರಿಸುತ್ತಾ ಇದು ಇಷ್ಟೇ ವಯಸ್ಸಿನ ಹುಲಿ,ಚಿರತೆ ಎಂದು ಮಾಹಿತಿ ಪೂರ್ಣವಾಗಿ ಅಂದಾಜಿಸುತ್ತಿದ್ದರು.
ಕಣಿವೆಯೊಳಗೆ ಕತ್ತಲಾಗತೊಡಗಿತು, ಪೊಡವಿ ಬೆಳಗಿದ ಸೂರ್ಯ ಮಬ್ಬಾಗತೊಡಗಿದರೆ, ಕಾಡಿಗೆ ಕತ್ತಲಲ್ಲಿ ಜೀವ ಬರತೊಡಗಿತು. ಸಾಮಾನ್ಯವಾಗಿ ಕಾಡುಗಳಲ್ಲಿ ಮರದ ಕಾಂಡಕ್ಕೆ ಅಂಟಿಕೊಂಡು ಆರೋಹಣ ಕ್ರಮವಾಗಿ ಹಬ್ಬಿಕೊಂಡು ಬೆಳೆಯುವ ಬಳ್ಳಿಗಳ ಸುತ್ತಲೂ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಗಳಲ್ಲಿ ಜನಜನಿತವಾಗಿರುವ ನಂಬಿಕೆಗಳ ಬಗ್ಗೆ ಚರ್ಚಿಸುತ್ತಾ ಪಶ್ಚಿಮ ಘಟ್ಟದ ಗಡಿಭಾಗದ ಅಡವಿಯ ಆಗಸದ ಕ್ಷೀಣ ಬೆಳಕಿನ ಹಾದಿಯಲ್ಲಿ ಸಿದ್ದಿ ಸರ್ದಾರನನ್ನು ಕಿಚಾಯಿಸುತ್ತಾ ನಾವು ಕ್ಯಾಂಪಿನೆಡೆಗೆ ಸಾಗತೊಡಗಿದೆವು.
ಸಾಮಾನ್ಯವಾಗಿ ಕಾಡಿನಲ್ಲಿ ಬಳ್ಳಿಯೊಂದು ನೆಲದಿಂದ ಮರವೊಂದಕ್ಕೆ ವಾಲಿಕೊಂಡು ಮೇಲೆ ಹೊರಟಿದ್ದರೆ ಆ ಭೌಗೋಳಿಕ ಪರಿಧಿಯಲ್ಲಿ ದೆವ್ವ, ಅತೃಪ್ತ ಪ್ರೇತಾತ್ಮಗಳ Negative energy ಅಲ್ಲಿ ಸಂಚರಿಸುತ್ತಿರುತ್ತದೆಂದು ಚಾರ್ಮಾಡಿ ಕಾಡಿನ ಕೆಲ ಹಿರಿಯರು ನನಗೆ ಈ ಹಿಂದೆ ಹೇಳಿದ್ದರೆಂದು, ಅವರಿಬ್ಬರಿಗೂ ಹೇಳುತ್ತಾ, ದೈತ್ಯ ಧೂಪದ ಮರವನ್ನು ದಾರಿಯ ಗುರುತಿಗಾಗಿ ಇಟ್ಟುಕೊಂಡು, ಅದೇ ಹಾದಿಯಲ್ಲಿ ಮತ್ತೆ ವಾಪಸ್ಸಾಗಿ ಬರಲು ಮುಂದೆ ಸಾಗಿದೆ. ಅಲ್ಲಿಂದ ಸಣ್ಣ ಇಳಿಜಾರು ದಾಟಿ ದಿಬ್ಬ ಏರಿ ಹಿಂದಿರುಗಿ ನೋಡಿದರೆ ಇವರಿಬ್ಬರ ಸುಳಿವಿಲ್ಲಾ. ಆಶ್ಚರ್ಯಕರ ರೀತಿಯಲ್ಲಿ ಇಬ್ಬರೂ ನನ್ನ ಹಿಂದೆ ಇದ್ದಕ್ಕಿದ್ದಂತೆ ಮಾಯವಾಗಿದ್ದರು.!
ಫೋಟೋ ಕೃಪೆ : GOOGLE (ಸಾಂದರ್ಭಿಕ ಚಿತ್ರ)
ಒಂದು ಕ್ಷಣ ನನ್ನ ಎದೆ ಧಸ್ಸೆಕ್ಕೆಂದರೂ, ದಿನ ನಿತ್ಯದ ಕಾಡಿನ ಕತ್ತಲಿನ ಅನುಭವವಿದ್ದದ್ದರಿಂದ ಸಾವರಿಸಿಕೊಂಡು ಸುತ್ತ ಕಣ್ಣಾಡಿಸಿದೆ. ಸುತ್ತಲೂ ಬರೀ ಜಿಗ್ಗಿನಂತ ಲಂಟಾನಗಳ ಕಳೆಯ ಅಭೇಧ್ಯ ಕೋಟೆ. ಧೀರ್ಘ ಕತ್ತಲು,ನಡೆಯುತ್ತಿದ್ದರೆ ನನ್ನದೇ ಹೆಜ್ಜೆ ನೂರಾರು ಬಾರಿ ಮತ್ತೆ ಮತ್ತೆ ಕೇಳುತ್ತಿದ್ದೇನೆ ಎನ್ನುವ ಪುನರಾವರ್ತಿತ ಭಾವ. ಕಾಡು ಎಂದಿನಂತೆ ಧೀರ್ಘ ಮೌನ ಧರಿಸಿ ಸುಮ್ಮನೆ ಆಗೊಮ್ಮೆ ಈಗೊಮ್ಮೆ ಗಾಳಿಗೆ ಮುಲುಗುತ್ತಿದ್ದರೆ, ನನಗೆ ಮಾತ್ರ ಕರಡಿ & ಸರಿದಾಡುವ ಹಾವುಗಳು ಆಕ್ರಮಣದ ಭಯ..!
ಇವರು ಕತ್ತಲಲ್ಲಿ ಕಣ್ಮರೆಯಾದದ್ದಕ್ಕೂ ಮರಕ್ಕೆ ಬಳ್ಳಿಗಳು ಎಲ್ಲಾದರೂ ನಾ ಹೇಳಿದ ಹಾಗೇ ಎಡದಿಂದ ಮೇಲೆ ಸಾಗಿರಬಹುದ ಎಂದು ಸುತ್ತಲು ಪರಿಕ್ಷೀಸುತ್ತಿದ್ದರೆ, ನನ್ನ ಬೆನ್ನ ಹುರಿಯಲ್ಲಿ ಸಣ್ಣಗೆ ನಡುಕ. ನಾ ನಿಂತ ಜಾಗದಿಂದ ಕೂಗಿದರೂ ಆ ಕಡೆಯಿಂದ ಯಾವ ಮರು ಉತ್ತರವಿಲ್ಲಾ. ಈ ಕಾಡೊಳಗೆ ಸರಿ ರಾತ್ರಿಯಲ್ಲಿ ಇಬ್ಬರು ಎಲ್ಲಿ ಮಾಯವಾದರೋ ಎನ್ನುವ ದಿಗಿಲು ನನ್ನೊಳಗೆ ಇಮ್ಮಡಿಯಾಗುತ್ತಿದ್ದರೆ, ಕೆಲವು fantasy ಇಂಗ್ಲೀಷ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ Zombie ಥರದ ಮನುಷ್ಯಾಕೃತಿಗಳು ಈ ಮರಗಳ ಹಿಂಬದಿಯಲ್ಲಿ ನನ್ನನ್ನೇ ಗಮನಿಸುತ್ತಿರಬಹುದಾ, ಎನ್ನುವ ಗುಮಾನಿ ಶುರುವಾಗಿ ಹಿಂದೆಂದಿಗಿಂತಲೂ ತ್ರಿಭುಜಾಕೃತಿಯ ಕಾಡು ಸಣ್ಣಗೆ ಹೆದರಿಕೆ ಹುಟ್ಟಿಸತೊಡಗಿತು಼.
ಅಲ್ಲಿಂದ ಮೂವರು ದಾರಿ ತಪ್ಪಿಸಿಕೊಂಡೆವು
ಮುಂದುವರಿಯುತ್ತದೆ….
- ಗಿರಿವಾಲ್ಮೀಕಿ