ಸಂಬಂಧಿಕರು, ರಕ್ತ ಸಂಬಂಧಿಕರನ್ನು ನಂಬದೆ ಇರುವಂತ ಕಾಲವಿದು, ಅಂತದರಲ್ಲಿ ಗೊತ್ತು ಗುರಿ ಇಲ್ಲದ ವ್ಯಕ್ತಿಯನ್ನು ಮಾತಾಡಿಸಿದಾಗ ಮುಂದೇನಾಗುತ್ತದೆ ಅನ್ನೋದನ್ನ ತಪ್ಪದೆ ನನ್ನ ಈ ಒಂದು ಪುಟ್ಟ ಕತೆಯನ್ನು ಓದಿ…
ಯಾರೇ ….ಗೊತ್ತಿಲ್ಲದವರು ಬಂದು ಮಾತಾಡಿಸಿದ್ರೆ ಮಾತಾಡ್ಬೇಡಾ, ಯಾರೇ …ಗೊತ್ತಿಲ್ಲದವರು ಏನಾದ್ರೂ ಕೊಟ್ರೆ ತಗೋಬೇಡ, ಯಾರೇ … ಗೊತ್ತಿಲ್ಲದವರಿಗೆ ಮನೆ ಅಡ್ರೆಸ್, ಫೋನ್ ನಂಬರ್ ಕೇಳಿದ್ರೆ… ಹೇಳ್ಬೇಡಾ… ಅಂತ ಎಲ್ಲ ಅಮ್ಮಂದಿರು ತಮ್ಮ ಹೆಣ್ಮಕ್ಕಳಿಗೆ ಹೇಳೋ ತರ ನಮ್ಮ ಅಮ್ಮನೂ ಗಿಣಿ ತರ ಕೂಡಸ್ಕೊಂಡು ಹೇಳಿದ್ಲು.
ನಂದು ಕೆಟ್ಟ ಗುಣ ಅಂದ್ರೆ ಒಮ್ಮೆ ಮಾತು ಶುರುವಾದ್ರೆ ನಮ್ಮ ಮಾತನ್ನ ನಾವೇ ಕೇಳೋಲ್ಲ. ಹಾಗಾಗಿ ಮೊದಲೇ ವ್ಯಕ್ತಿಗಳನ್ನು ಅಳೆದು, ತೂಗಿ ಆಮೇಲೆ ಮಾತಿನ ಅಖಾಡಕ್ಕೆ ನಿಲ್ಲೋವಂತ ವ್ಯಕ್ತಿ ನಾನು.
ಹೀಗಿದ್ದಾಗ ಮೊನ್ನೆ ಕಾರ್ ನಲ್ಲಿ ಹೋಗುತ್ತಿದ್ದೆ. ನನ್ನ ಮುಂದೆ ‘ಸೋಫಾ ರಿಪೇರಿ ಮಾಡಿ ಕೊಡಲಾಗುತ್ತದೆ’ ಅಂತ ಟೂ ವೀಲರ್ ನಲ್ಲಿ ವ್ಯಕ್ತಿಯೋರ್ವ ಬೋರ್ಡ್ ಹಾಕಿಕೊಂಡು ಹೋಗುತ್ತಿದ್ದ. ನಮ್ಮನೆಯ ಸೋಫಾ ನಮ್ಮ ಭಾರ ಹೊರಲಾರದೆ ಕೊಯ್ಯೋ… ಅನ್ನುತ್ತಿತ್ತು. ಅದಕ್ಕೆ ಸ್ವಲ್ಪ ಶಕ್ತಿ ತುಂಬಿದ್ರೆ, ನಮ್ಮನ್ನು ಇನ್ನಷ್ಟು ದಿನ ಹೊರ ಬಲ್ಲದು ಅನ್ನೋ ಲೆಕ್ಕಚಾರದಲ್ಲಿ ಮುಂದೆ ಹೋಗುತ್ತಿದ್ದ ಸೋಫಾ ರಿಪೇರಿಯವನನ್ನು ಅಡ್ಡಗಟ್ಟಿದೆ. ‘ಏನಪ್ಪಾ… ಸೋಫಾಕ್ಕೆ ಮರು ಜೀವ ಕೊಡ್ತೀಯಾ’… ಅಂತ ಅವನ ಹಿಂದೆ ಮುಂದೆ ನೋಡದೆ ಕೇಳಿದೆ. ಅವನು ‘ಹೌದು, ಮೇಡಂ ಸೋಫಾದ ಎಲ್ಲ ಕೆಲಸ ಮಾಡ್ತೀನಿ. ಕೆಲಸ ಏನಾದ್ರೂ ಇದೇನಾ ಮೇಡಂ’ ಅಂದ. ಹೌದು… ಇದೆ ಅಂದೆ.’ನನ್ನ ವಾಟ್ಸಪ್ಪ್ ಗೆ ಒಂದು ನಿಮ್ಮ ಅಡ್ರೆಸ್ ಗೂಗಲ್ ಮ್ಯಾಪ್ ಕಳಸ್ತೀರಾ’ ಅಂದ. ಏನು ಯೋಚ್ನೆ ಮಾಡದೇ ಅಡ್ರೆಸ್ ಕಳಸಿದೆ.
ಮನೆಗೆ ಬಂದು ಪದ್ದಣ್ಣನಿಗೆ ಮೇಲು ಧ್ವನಿಯಲ್ಲಿ ‘ಪದ್ದಣ್ಣ… ಪದ್ದಣ್ಣ’… ಅಂದೆ. ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಪದ್ದಣ್ಣನಿಗೆ ನಾನು ಮೇಲು ಧ್ವನಿಯಲ್ಲಿ ಮಾತಾಡಿದಾಗಲೆಲ್ಲ ಏನೋ ಕಿತಾಪತಿ ಮಾಡ್ಕೊಂಡು ಬಂದಿದ್ದಾಳೆ ಅನ್ನೋದು ಮೊದಲೇ ಗೊತ್ತಾಗುತ್ತೆ. ಬೇರೆ ಸಮಯದಲ್ಲಿ ನಮ್ಮ ಧ್ವನಿ ಆಸ್ಥಾನದಲ್ಲಿನ ರಾಜರ ಆದೇಶದಂತೆ ಜೋರ್ ಆಗಿರುತ್ತೆ. 13 ವರ್ಷದಿಂದ ಪಳಗಿದ ಜೀವ ಅರ್ಥ ಮಾಡ್ಕೊಂಡು, ಏನ್ ಮಾಡ್ಕೊಂಡು ಬಂದಿದ್ದಿ ಹೇಳು ಅಂದ. ರಸ್ತೆಯಲ್ಲಿ ಹೀಗಿಗೆ ಆಯ್ತು. ಈಗ ಅವನು ಬರ್ತಾನೆ. ಹೆಂಗೂ ಸೋಫಾ ನೆಲಕ್ಕೆ ಹಚ್ಚಿದೆ. ಪದ್ದಣ್ಣ ಬಯ್ಯೋ ಮುಂಚೆನೇ ‘ಪ್ಲೀಸ್… ಸಿಟ್ಟಾಗಬೇಡಾ… ಬಂದವನ ಮುಂದೆ ಮರ್ಯಾದೆ ತಗಿಬೇಡಾ’ ಅಂತ ಅವನು ಬರೋ ಮುಂಚೆನೇ ಪದ್ದಣ್ಣನ ತಲೆಯನ್ನ ಸೆಟ್ ಮಾಡಿದೆ.
ಸೋಫಾದವನು ಅಲ್ಲಿ ಇಲ್ಲಿ ಅಲೆದಾಡಿ ನನ್ನ ಮನೆಗೆ ಬಂದ. ಬಂದು ಸೋಫಾ ಪರಿಸ್ಥಿತಿ ನೋಡಿ ‘ಎಷ್ಟು ವರ್ಷ ಆಯ್ತು ಸರ್… ಇದರಲ್ಲಿ ಅದು ಇದು ಹೋಗಿದೆ’ ಅಂತ ಲಿಸ್ಟ್ ಕೊಟ್ಟ. ‘ಅದರಲ್ಲಿ ಜೀವ ಹೋಗಿದೆ ಅಂತ ಗೊತ್ತು. ಮರುಜೀವ ತರೋಕೆ ಎಷ್ಟು ಹೇಳ್ತೀಯಾ.. ಹೇಳಪ್ಪಾ’ ಎಂದು ಪದ್ದಣ್ಣ ಕೇಳಿದ. ‘ಸರ್… ಜಾಸ್ತಿ ಹೇಳೋಲ್ಲ … ಕಡಿಮೆಯೇ ಹೇಳ್ತಿನಿ’ ಅಂತ ತನ್ನದೊಂದು ಲೆಕ್ಕ ನಮ್ಮ ಮುಂದಿಟ್ಟ.
ಸೋಫಾ ದೊಡ್ಡ ಶೋ ರೂಮ್ ಮುಂದೆ ಅವನ ರೇಟ್ ಕಮ್ಮಿನೆ ಅನಿಸಿತು. ಪದ್ದಣ್ಣ ಜಾಸ್ತಿ ಯೋಚ್ನೆ ಮಾಡದೇ “ಆಯ್ತು ಮಾಡು” ಅಂದ.. ‘ಸಾ… ರ್’… ಎಂದು ರಾಗ ತಗೆದು” ನನ್ನ ಹೊಲಿಗೆ ಮಿಷಿನ್ ಇಲ್ಲೇ ಇಡ್ತೀನಿ. ನಾಳೆ ಸೋಫಾ ಬಟ್ಟೆ ತಗೊಂಡು ಬಂದು ಕೆಲಸ ಶುರು ಮಾಡ್ತೀನಿ” ಅಂದ. ಆಯಿತು ಹಾಗೆ ಮಾಡು ಎಂದ ಪದ್ದಣ್ಣ. ಮತ್ತೆ ಸಾ…. ರ್…. ಎಂದು ಚೇವಿಂಗ್ ಗಮ್ ತರ ಎಳೆದು ಬಿಟ್ಟ… ಪದ್ದಣ್ಣ ಕಿರಿ ಕಿರಿಯಿಂದ ‘ಏನಪ್ಪಾ… ಏನ್ ಹೇಳ್ಬೇಕು ಅಂತಿದ್ದೀಯೋ ಅದನ್ನ ಬೇಗ ಹೇಳು’ ಅಂದ. ‘ಸೋಫಾ ಬಟ್ಟೆ ತರೋಕೆ ಅಡ್ವಾನ್ಸ್ ಬೇಕು’… ಅನ್ನುತ್ತಿದ್ದಂತೆ ‘ಎಷ್ಟು ಬೇಕು…. ಹತ್ತು ಸಾವಿರ ಹಾಕಿದ್ರೆ ಸಾಕಾ?’ ಎಂದು ಪದ್ದಣ್ಣ ಕೇಳಿದ. ಅದಕ್ಕೆ ಅವನು ಮರು ಮಾತಾಡದೆ ಸಾಕು ಸರ್ ಅಂದು ಅಲ್ಲಿಂದ ಹೊರಟು ಹೋದ.
ಪದ್ದಣ್ಣ ಹೇಳಿದಂತೆ ಅಡ್ವಾನ್ಸ್ ಆಗಿ ಹತ್ತು ಸಾವಿರ ರೂಪಾಯಿ ಅವನ ಅಕೌಂಟ್ ಗೆ ಗೂಗಲ್ ಪೇ ಹಾಕಿದ. ನಂಗೆ ಅವನು ಮನೆಗೆ ಬರ್ತಾನೋ ಇಲ್ವೋ ಅನ್ನೋ ಭಯ ಶುರುವಾಯಿತು, ಗೊತ್ತು ಗುರಿ ಇಲ್ಲದವನನ್ನು ರೋಡಿನಿಂದ ಹಿಡ್ಕೊಂಡು ಮನೆಗೆ ಕರೆದಿದ್ದಲ್ಲದೆ, ಮೇಲೆ ದುಡ್ಡು ಕೊಟ್ಟು ಬೇರೆ ಕಳಸಿದೆ. ನಮ್ಮನ್ನ ಜಾಣರು ಅಂತ ಯಾರು ಕರೆಯೋಲ್ಲ. ಆದರೆ ಈಗ ಒಂದು ವೇಳೆ ಅವನು ಏನಾದ್ರೂ ಬರಲಿಲ್ಲ ಅಂದ್ರೆ ನನ್ನ ಕತೆ ಮುಗಿತು… ಒಂದು ಕಡೆ ಪದ್ದಣ್ಣ ಬಿಡೋಲ್ಲ, ಇನ್ನೊಂದು ಕಡೆ 70+ ನಮ್ಮ ಅಪ್ಪ ಅಮ್ಮ ಬಿಡೋಲ್ಲ ಏನ್ ಮಾಡೋದು ಅನ್ನೋ ಚಿಂತೆ ಶುರುವಾಯಿತು.
ಮುಂದೆ ಏನಾಯಿತು…ಸೋಫಾ ಹುಡುಗ ಬಂದನೋ ಇಲ್ವೋ ಮುಂದಿನ ಭಾಗ ತಪ್ಪದೆ ಓದಿ…
- ಶಾಲಿನಿ ಹೂಲಿ ಪ್ರದೀಪ್