ಕಪ್ಪೆ ಗೂಡು! ನೆನೆದರೆ ಪುಳಕಗೊಳಿಸುವ ಮಧುರ ನೆನಪುಗಳನ್ನು ಓದುಗರ ಮುಂದೆ ತಂದಿದ್ದಾರೆ ಕೊಡಗಿನ ಚೆಟ್ಟಿಮಾನಿ ಗ್ರಾಮದ ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರು, ‘ಕಪ್ಪೆಗೂಡಲ್ಲಿ ಉಳಿದ ನೆನಪುಗಳು ಅಂಕಣದ ಭಾಗ ೧ ಇಂದಿನಿಂದ ಆರಂಭವಾಗಲಿದ್ದು, ತಪ್ಪದೆ ಎಲ್ಲರೂ ಓದಿ…
ಚೂರೂ ಕೈಕೆಸರು ಮಾಡಿಕೊಳ್ಳದೆ ಆಡುವ ಆಟ. ಎಷ್ಟು ಆಡಿದರೂ ಸಾಕೆನಿಸದ ಉತ್ಸಾಹ ! ನದಿ ಅಥವಾ ಸಮುದ್ರ ತೀರದ ಮರಳು. ಜೊತೆಯವರು ಕಟ್ಟುತ್ತಾ ಹೋದಂತೆ ಮತ್ತೆ ಮತ್ತೆ ಕುಸಿಯುವುದನ್ನು ನೋಡುವ ಬೇಸರ. ಕಾಲನ್ನು ಮರಳಿನೊಳಗೆ ಹುದುಗಿಸಿ ಪಾದಗಳಿಗೆ ಕಚಗುಳಿಯಿಡುತ್ತಾ
ಮರಳಾಟ ಆಡುವುದು ಮುಗಿಯುವ ಕತೆಯಲ್ಲ.ಅದಕ್ಕೆ ವಯಸ್ಸಿನ ಹಂಗಿಲ್ಲ. ಲಿಂಗ ಭೇದವಿಲ್ಲ. ಉತ್ಸಾಹ ಇರಬೇಕಾದುದು ಕಟ್ಟುವವರಿಗಷ್ಟೆ ! ಎಷ್ಟು ಸಲ ಕುಸಿದರೂ ಕಟ್ಟಿ ನಿಲ್ಲಿಸುವ ಛಲಬೇಕೇ ಬೇಕು ಕಟ್ಟುವವರಿಗೆ ! ಜೊತೆಯವರು ಚೇಷ್ಟೆಗಾಗಿ ಕೆಡವಿದರೂ ಬೇಸರ ಮಾಡದೆ ಕಟ್ಟಲು ಮತ್ತೆ ಮಾಡುವ ಪ್ರಯತ್ನ!
ಓಹ್ ! ಸಾಧ್ಯವೇ… ಓ…ಬಾಲ್ಯವೇ…
ನೀ ಎದೆಯೊಳಗೆ ತುಂಬುವ ಕಲ್ಪನೆಗಳಿಗೆ ಲೆಕ್ಕವಿಟ್ಟವರುಂಟೆ?
ಆಡುತ್ತಾಡುತ್ತಾ ಬೆಳೆದುಬಿಟ್ಟರೂ ಮಗುತನದ ಮನೋಭಾವವನ್ನು ಬಿಟ್ಟು ಕೊಡದಿರುವವರ ಜೀವನೋತ್ಸಾಹಕ್ಕೆ ಎಣೆಯುಂಟೆ?
ಫೋಟೋ ಕೃಪೆ : google
ನನ್ನ ಕಪ್ಪೆ ಮನೆಯಲ್ಲಿ ಕಪ್ಪೆ ಮರಿಹಾಕುತ್ತೆ ! ಸಮುದ್ರದ ಮುತ್ತಿನ ಚಿಪ್ಪು ಸೇರಿಬಿಡುತ್ತೆ…. ಅಲೆಯ ಹೆಗಲೇರಿ ಬರುವ ಇನ್ನೂ ಏನೇನೋ..ಅದಕ್ಕೆ ನನ್ನದೆಂಬ ಗುರುತು ಬೇರೆ ! ಮರುದಿನ ಸಂಜೆ ಓಡಿಬಂದು ನೋಡಿದರೆ ನನ್ನದೂ ಇಲ್ಲ,ನಿನ್ನದೂ ಇಲ್ಲ ! ಕಡಲ ಕಿನಾರೆಯದಾದರೆ ತೆರೆಯ ಪಾಲು ! ನದೀ ತೀರದ್ದಾದರೆ ಯಾರದೋ ಹೆಜ್ಜೆಯಡಿಗೆ ಸಿಲುಕಿ ಗುರುತೇ ಉಳಿಸದಂತೆ ಭಗ್ನವಾಗಿಬಿಡುವ ಹಣೆಬರಹ! ಉಳಿದ ಕಪ್ಪೆಗೂಡಿನ ಸ್ಥಳ ಯಾವುದೋ ವಿಷಾದ ತುಂಬುವ ಅವಶೇಷ !
ಅಸ್ತಿತ್ವವನ್ನು ಮರೆಯಾಗಿಸಿ ಮತ್ತೆ ಮತ್ತೆ ಕಟ್ಟುವ ಅಭಿಲಾಶೆ ಮೂಡಿಸುವ ಮರಳರಾಶಿಯ ಆಕರ್ಷಣೆ. ಬದುಕಿನ ನಶ್ವರತೆ ಹೇಗೆ ಕ್ರೀಡೆಗಳ ಮೂಲಕ ನಮಗೆ ಪಾಠ ಕಲಿಸುತ್ತಿತ್ತು ಅಲ್ಲವೇ? ಇದು ನನ್ನ ಕಾಲದ ಆಟ ! ಅಷ್ಟೇ ಅಲ್ಲ,ಸ್ವಲ್ಪ ಮುಂದುವರಿದು ಎರಡು ಮೂರು ದಶಕಗಳ ಹಿಂದಿನವರೆಗೂ ಚಿಣ್ಣರನ್ನು ಸೆಳೆಯುತ್ತಿದ್ದ, ಆಟಿಕೆಗಳೇ ಬೇಡದ ಸರಳ ಸಂಕೀರ್ಣ ಆಟ! ಆ ಶುದ್ಧ ಸ್ಫಟಿಕಸದೃಶ ಹರಿಯುವ ನದೀ ನೀರಿನಲ್ಲಿ ನೆಗೆಯುವ ಕಪ್ಪೆಗಳು,
ಸ್ವಚ್ಛಂದವಾಗಿ ವಿಹರಿಸುವ ಮೀನುಗಳು,ಅವುಗಳಿಗಾಗಿ ಕಾದಿದ್ದು ಅವು ನೀರಿನಿಂದ ಮೇಲಕ್ಕೆ ನೆಗೆಯುತ್ತಿದ್ದಂತೆ ಗಬಕ್ಕನೆ ಕೊಕ್ಕು ಚಾಚಿ ನುಂಗಿ ಬಿಡುತ್ತಿದ್ದ ನೀರ್ಹಕ್ಕಿಗಳು
ಆಹಾ ! ಆ ನದಿಯ ಗಮನೋತ್ಸಾಹ ! ಸಂಜೆ ಸೂರ್ಯನ ಕಿರಣಗಳು ಸೃಷ್ಟಿಸುವ ದೈವಿಕ ಸೌಂದರ್ಯ, ಮನದ ಭರ್ತಿಗೆ ತುಂಬಿಕೊಳ್ಳುತ್ತಾ ಮೈಮರೆತು ಬಿಡುತ್ತಿದ್ದ ಆ ಮೋಹಕ ನೋಟ! ಬಣ್ಣವನ್ನೂ ಆಕಾರವನ್ನೂ ಕ್ಷಣ ಕ್ಷಣಕ್ಕೂ ಬದಲಿಸಿಬಿಡುವ ಗಾಳಿ ಬೆರಳು ! ಓದಿದ ಪುಸ್ತಕಗಳ ಕೇಳಿದ ಪ್ರಸಂಗಗಳ ಕಲ್ಪನೆಯ ಪಾತ್ರಗಳು ಮನದ ರಂಗಸ್ಥಳವನ್ನು ಪುಳಕಿಸುತ್ತಾ ಮೆರವಣಿಗೆ ಹೊರಡುತ್ತಿದ್ದವು.

ಎಲ್ಲಾ ಮುಗಿದು ದಾರಿ ಕಾಣದಷ್ಟು ಕತ್ತಲಾಗುತ್ತಿದೆ ಎನಿಸಿದಾಗ ಧುತ್ತೆಂದು ಬರುವ ಮನೆಯ ನೆನಪು ! ಅಪ್ಪನ ನೆನೆದು ಮೈಬೆವರಲು ಆರಂಭವಾಯಿತೆಂದರೆ ಹೊಳೆಯುವ ಬಣ್ಣದ ಜರತಾರೀ ಸೀರೆಯುಟ್ಟ ನದಿ ಕಾವೇರಿಯ ಮೈಮೇಲೆ ತಟತಟ ಅಂಗೈ ಬಡಿಯುತ್ತಾ,ಬಣ್ಣದೋಕುಳಿಯಂತೆ ಮೇಲ್ನೆಗೆಯುವ ನೀರ್ಮಣಿ ಮಾಲೆಯ ಸೌಂದರ್ಯವನ್ನು ಸೂರೆಗೊಳ್ಳುತ್ತಾ ಅದನ್ನೇ ಬೊಗಸೆಯಲ್ಲಿ ತುಂಬಿ ಒಬ್ಬರ ಮೇಲೊಬ್ಬರು ಎರಚಿಕೊಳ್ಳುತ್ತಾ ಹೆದರಿಕೆಯಿಂದ ಬಿಸಿಯೇರಿದ ಮೈಮನಗಳ ತಾಪವನ್ನು ತಣಿಸಿಕೊಳ್ಳುತ್ತಿದ್ದೆವು ! ಈ ಸುಖ, ಬಾಟಲಿ ನೀರಲ್ಲೇ ಬ್ರಹ್ಮಾಂಡ ಕಾಣುವ ಈಗಿನ ಬಹುತೇಕ ಮಕ್ಕಳಿಗೆ ಲಭ್ಯವಾಗಲು ಸಾಧ್ಯವೇ?
ಅದಕ್ಕೇ ನನ್ನ ನೆನಪುಗಳ ಸಂದೂಕವನ್ನು ಕಪ್ಪೆಗೂಡಲ್ಲಿ ಹೂತುಬಿಟ್ಟಿದ್ದೇನೆ.ಅವಸರದ ಕರ್ತವ್ಯವನ್ನು ನಿಭಾಯಿಸುವಲ್ಲಿ ಬಚ್ಚಿಟ್ಟು ಮರೆತಿದ್ದೆ. ಒಂದೊಂದೇ ಮುತ್ತು ರತ್ನಗಳನ್ನು ಹೊರತಂದು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ.. ಸ್ವಾಗತಿಸುವಿರಲ್ಲಾ.
- ಶಿವದೇವಿ ಅವನೀಶಚಂದ್ರ, ಕೊಡಗು