ಮಾಸ್ತಿಕಟ್ಟೆಯ ದೋಸೆ…ಆಹಾ …

ಮಾಸ್ತಿಕಟ್ಟೆ ಕಡೆಗೆ ಬಂದವರು ಶ್ರೀ ಗಣೇಶ ಭವನ ಎಂಬ ಪುಟ್ಟ ಹೋಟೆಲ್ ನಲ್ಲಿ ಪ್ಲೇಟು ಭರ್ತಿಯ ಖಾಲಿ ದೋಸೆ ತಿನ್ನಲು ಮರೆಯಬೇಡಿ ಎನ್ನುತ್ತಾರೆ ನಾಗೇಂದ್ರ ಸಾಗರ್, ತಪ್ಪದೆ ಮುಂದೆ ಓದಿ…

ಇಂದು ನನ್ನ ಹೊಟ್ಟೆಗೆ ದೋಸೆಯೇ ತಿಂಡಿಯಾಗಿ ಹೋಗಬೇಕು ಎಂತಿದ್ದರೆ ತಪ್ಪಿಸುವುದಾದರೂ ಹೇಗೆ ಹೇಳಿ? ನಾನು ಇಂದು ಮುಂಜಾನೆಯೇ ಮಾಸ್ತಿಕಟ್ಟೆ ಕಡೆ ಹೋಗುವ ಕೆಲಸವಿತ್ತು.. ಮೊದಲು ಮುಂಚೆ ಬೆಳಗಿನ ಕೆಲಸ ಮುಗಿಸಿ ಹೊರಡುವ ಗಡಿಬಿಡಿಯಲ್ಲಿ ಇದ್ದವನಿಗೆ ವಾಣಿ ಎರಡೆರಡು ಬಾರಿ ತಿಂಡಿ ತಿಂದೇ ಹೋಗಿಬಿಡಿ ಎಂದು ಜುಲುಮೆ ಮಾಡಿದ್ದಳು. ನಿನ್ನೆ ತಿಂಡಿಗೆ ಉದ್ದಿನ ಕಡುಬು ಮಾಡಿದ್ದಾಳೆ ಎಂದರೆ ಇಂದು ದೋಸೆ ಮಾಡದಿರುತ್ತಾಳೆಯೇ? ಇಲ್ಲ ಕಣೇ ಬಂದು ತಿನ್ನುತ್ತೇನೆ ಎಂದು ಹೇಳಿದೆ. ಹೇಗಾದರೂ ಇಂದು ಮನೆಯ ತಿಂಡಿ ತಪ್ಪಿಸಿಕೊಂಡು ಯಾವುದಾದರೂ ಒಂದು ಹೋಟೆಲಿನಲ್ಲಿ ನನ್ನ ಫೇವರಿಟ್ ಚಿತ್ರಾನ್ನ ತಿನ್ನುವ ಯೋಚನೆ ನನ್ನದು.

ಮೊದಲು ಮುಂಚಿತವಾಗಿ ಯೋಚಿಸಿದ ಕೆಲಸ ಮುಗಿಸಿ ಮತ್ತೇನಿದ್ದರೂ ತಿಂಡಿ ವಗೈರೆ.. ಅಷ್ಟಾಗಿ ಹತ್ತು ಮುಟ್ಟಿತ್ತು. ಮಾಸ್ತೀಕಟ್ಟೆಯ ಎಂದಿನ ಕಾಫೀ ಹೋಟೆಲ್ಲಿನಲ್ಲಿ ಈ ಬಾರಿ ಚಿತ್ರಾನ್ನದ ಸವಿ ನೋಡಿಬಿಡೋಣ ಎಂದುಕೊಂಡೆ.. ಯಾಕೋ ಮನಸ್ಸು ಬದಲಿಸಿ ತಿರುವಿನಲ್ಲಿರುವ ಹಳೆ ಹೋಟೆಲ್ಲಿಗೆ ನುಗ್ಗಿದೆ.
ತಿಂಡಿ ಏನುಂಟು ಎಂದೆ? ಕಾಲೀ ದೋಸೆ… ಅಯ್ಯೋ ಕತೆಯೇ ತಿಂಡಿ ತಿನ್ನುವ ಉಮೇದೇ ಟುಸ್ಸೆಂದಿತು.. ಹೆಂಡತಿಗೆ ಯಾಮಾರಿಸಿ ಬಂದಿದ್ದಕ್ಕೆ ಬಿತ್ತಲ್ಲ ಗೂಸಾ… ಬೇಡ ಬಿಡಿ ಎಂದು ಎದ್ದು ಹೋಗಲು ಮನಸ್ಸು ಬಾರದೇ ಅದನ್ನೇ ಒಂದು ಪ್ಲೇಟು ಕೊಡಿ ಎಂದೆ… ಪಕ್ಕದ ಪಾರ್ಟೀಷನ್ ಕಿಚನ್ನಿನೆಡೆಯಿಂದ ಚೊಯ್ ಎನ್ನುವ ಶಬ್ದ… ಚಿತ್ರಾನ್ನ ತಪ್ಪಿದ ಕಸಿವಿಸಿಯಲ್ಲಿ ಇದ್ದ ಹೊತ್ತಿನಲ್ಲಿ ಹೆಂಡತಿಯ ಫೋನು ಕರೆ ಬರಬೇಕೇ?

ಏನು ಯಜಮಾನರು ಯಾವ ತಿಂಡಿ ತಿನ್ನುತ್ತಿದ್ದಾರೋ? ಹೆಂಡತಿಯ ಕುತೂಹಲದ ಪ್ರಶ್ನೆಗೆ ಇನ್ನೇನು ನಿನ್ನ ಫೇವರಿಟ್.. ಆದರೆ ನೀರು ದೋಸೆ ಒಂದು ಅಲ್ಲ ಮಾರಾಯಿತಿ ಎಂದೆ.. ನನ್ನ ಕಾಲೆಳೆದ ಹೆಂಡತಿಯ ನಗು ಎಲ್ಲಿ ಹೋಟೆಲ್ಲು ಮಾಲೀಕರಿಗೆ ಕೇಳಿಸಿತೇನೋ ಎಂದು ಕಸಿವಿಸಿಯಲ್ಲಿ ಇರುವಾಗಲೇ ದೋಸೆ ಟೇಬಲ್ಲಿಗೆ ಬಂತು…

ಆಹಾ… ಮುಖವರಳಿಸುವ ದೋಸೆ.. ಇತರೆಡೆಗಳಂತೆ ಸೋಡಾ ಸೇರಿಸಿ ಹುಳಿ ಬರಿಸಿ ಹೊಯ್ದ ದೋಸೆಯಂತಲ್ಲ.. ಅಪ್ಪಟ ಮನೆ ಮಾದರಿಯದ್ದು.. ಚಟ್ನಿಯೂ ವೈನಾಗಿತ್ತು ಎನ್ನಿ.. ಅದಕ್ಕೊಂದು ದಪ್ಪ ಸಾಸಿವೆಯ ಒಗ್ಗರಣೆ ಬೇರೆ.. ಮನೆಯಲ್ಲಾದರೆ ಹೆಂಡತಿ ತಿನ್ನದೇ ಇರಬೇಡಿ ಎಂದು ತಿವಿದು ತಿವಿದು ಬಡಿಸುವ ತಾಜಾ ಬೆಣ್ಣೆ ಮುದ್ದೆ ಮತ್ತು ಜೋನೀ ಬೆಲ್ಲ ಇರಲಿಲ್ಲ ಅನ್ನುವುದೊಂದೇ ಕೊರತೆ.. ಎರಡು ದೋಸೆ ಇಳಿಸಿದ ಮೇಲೆ ಗಂಜಿಯ ಲೆಕ್ಕದ್ದೊಂದು ಇರಲಿ ಎಂದು ಮತ್ತೊಂದು ಸಿಂಗಲ್ ಕಾಲೀ ಎಂದೆ…

ದೋಸೆಯೊಂದಿಗೆ ಬಂದ ಹೋಟೆಲ್ ಮಾಲೀಕರು ನೀವು ಸಾಗರದವರು ಅಲ್ಲವೇ ಎಂದರು.. ಹೌದೆಂದೆ.. ಮೊದಲು ಗೊತ್ತಾಗಲಿಲ್ಲ ಕ್ಷಮಿಸಿ ಎಂದರು.. ಮೂರ್ನಾಲ್ಕು ತಿಂಗಳ ಹಿಂದೆ ಇವರೊಂದಿಗೆ ಒಮ್ಮೆ ಭೇಟಿ ಆಗಿತ್ತು.. ಆಹಾರ ಸಂಸ್ಕರಣೆಯ ಉದ್ದಿಮೆ ಆರಂಭಿಸುವ ಹಿನ್ನೆಲೆಯಲ್ಲಿ ವಾಣಿ, ನಾನು ಬಂದು ಮಾತಾಡಿದ್ದೆವು.

ಅಂದಂತೆ ಎಲ್ಲಿಗೆ ಬಂತು ಪ್ರಾಜೆಕ್ಟು ಎಂದೆ.. ಮಾಡುತ್ತೇನೆ ಎಂದ ತಮ್ಮನ ಹೆಂಡತಿಗೆ ಧೈರ್ಯ ಸಾಲುತ್ತಿಲ್ಲ.. ನಿಮ್ಮಲ್ಲಿಗೇ ಕರೆ ತರುತ್ತೇನೆ… ಪ್ರತ್ಯಕ್ಷ ನೋಡಿದ ಮೇಲಾದರೂ ಉಮೇದು ಬಂದೀತೋ ನೋಡೋಣ ಎಂದರು…

ಮಾಸ್ತಿಕಟ್ಟೆ ಇನ್ನೇನು ಘಟ್ಟ ಇಳಿಯಬೇಕು ಎನ್ನುವಲ್ಲಿ ಸಿಗುವ ಊರು.. ತುಂಬಾ ದೊಡ್ಡ ಜನಸಂಖ್ಯೆ ಏನೂ ಇಲ್ಲ.. ಹಿಂದೆ ಚಕ್ರಾ, ವರಾಹಿ ಎಂಬ ಜಲವಿದ್ಯುತ್ ಯೋಜನೆ ಆರಂಭಿಸಿದ ಕಾಲಕ್ಕೆ ಮೆರೆದ ಊರು.. ಈಗ ಅಷ್ಟೆಲ್ಲಾ ಗಡಿಬಿಡಿ ಇಲ್ಲದೇ ತಣ್ಣಗೆ ಮಲಗಿದೆ.. ಒಂದೇ ಒಂದು ಸರ್ಕಲ್ಲು ಊರಿನ ಜೀವಾಳ. ಟೂರಿಸ್ಟುಗಳು ಬರೋದೇ ಇಲ್ಲ ಎನ್ನುವ ಹಾಗಿಲ್ಲ.. ಹತ್ತರಲ್ಲಿ ಒಂದು ವಾಹನ ನಿಂತೀತು.. ಅವರದೇ ವಿಶೇಷ ವ್ಯಾಪಾರ.. ಮಿಕ್ಕಂತೆ ಸುತ್ತ ಹತ್ತೂರು ಇದ್ದರೂ ತುಂಬಾ ಸ್ಪೆಷಲ್ ಶಾಪಿಂಗ್ ಸುಳ್ಳು..

ಇಂತಹ ಸಂದರ್ಭದಲ್ಲಿ ಇಲ್ಲಿ ವ್ಯಾಪಾರ ನಂಬಿಕೊಂಡು ಉದ್ದಿಮೆ ಮಾಡೋದು ಸಾಧ್ಯವೇ ಮೂಲಭೂತ ಪ್ರಶ್ನೆ… ಸಾಧ್ಯವಿದೆ ಹೆಂಡತಿ ಸುತ್ತಿ ಬಳಸಿ ಹೇಳಿದ್ದಳು.. ಏಕೆ ಸಾಧ್ಯವಿಲ್ಲ ಎಂದು ನನ್ನ ಖಡಾ ಖಂಡಿತಾ ಅನಿಸಿಕೆ.. ಮಾಡುವುದು ಇನೋವೇಟಿವ್ ಆಗಿರಬೇಕು.. ನಿಮ್ಮ ಹೋಟೆಲ್ಲಿನ ಈ ದೋಸೆಯ ಹಾಗೆ… ಜೀವಮಾನಕ್ಕೆ ಆಗುವಷ್ಟು ಹೆಂಡತಿ ಮಾಡಿದ ದೋಸೆ ತಿಂದಿದ್ದರೂ ಕೂಡ ನಿಮ್ಮ ಈ ದೋಸೆ ನನಗೆ ಹೇಗೆ ಬೇಕು ಅನ್ನಿಸಿತೋ ಹಾಗೆ ನೀವು ಮಾಡುವ ಆಹಾರೋತ್ಪನ್ನ ವಿಶೇಷ ಆಗಿರಬೇಕು.. ಜನಾ ಆ ಟೇಸ್ಟಿಗೆ ಫಿದಾ ಆಗಿ ಹುಡುಕಿ ತೆಗೆದುಕೊಂಡು ಹೋಗುವಂತೆ ಇರಬೇಕು ಎಂದಿದ್ದೆ…
ಮತ್ತೆ ಹತ್ತಾರು ಪ್ರಶ್ನೆ.. ಸಮಜಾಯಿಷಿಗಳು.. ಮಾಲೀಕರು ಮುಂದಿನ ವಾರ ನಿಮ್ಮಲ್ಲಿಗೆ ಬಂದೇ ಬರುತ್ತೇನೆ.. ಒಂದೆರಡು ಸಕ್ಸಸ್ ಸ್ಟೋರಿಗಳನ್ನು ನೋಡೋಣ.. ಕೊಂಚ ತಡ ಆಗಲಿ ಪರವಾಗಿಲ್ಲ.. ಯೋಜನೆ ಮಾಡೇ ಬಿಡೋಣ.. ಎಂದರು.

ಬೆಳಿಗ್ಗೆ ಸಣ್ಣಗೆ ಮಳೆ ಬಂದ ಕಾರಣಕ್ಕೆ ಊರಿಗೆ ಮಬ್ಬು ಕವಿದಿತ್ತು.. ಸೂರ್ಯನ ಬಿಸಿಲು ಮಬ್ಬು ತೆರೆಯುವ ಹುನ್ನಾರದಲ್ಲಿ ಇರುವಂತೆಯೇ ಊರ ಸೇರುವ ಹುರುಕಿಯಲ್ಲಿ ಹೊರಟೆ….


  • ನಾಗೇಂದ್ರ ಸಾಗರ್

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW