ಕನ್ನಡ ಬೆಳೆಸುವುದೆಂದರೆ ಹೇಗೆ? -ಶಿವರುದ್ರಪ್ಪ ಎಚ್. ವೀ.

ಮೊಬೈಲ್ ಫೋನ್ ಗಳಲ್ಲಿ ದಿನನಿತ್ಯದ ಸಂಪರ್ಕ, ಸಾಮಾನ್ಯ ವ್ಯವಹಾರ, ಮಾತುಕತೆ, ಬರಹಗಳನ್ನು ಕನ್ನಡದಲ್ಲಿ ವ್ಯವಹರಿಸಿದರೆ ಕನ್ನಡ ಉಳಿಸಿದಂತೆ. ಆದಷ್ಟು ಕನ್ನಡ ಭಾಷೆ ಬಳಸೋಣ, ಉಳಿಸೋಣ… ಇದು ನಿಜವಾದ ಕನ್ನಡ ಪ್ರೇಮ ಮತ್ತು ಅಭಿವೃದ್ಧಿಯೇ…?

ಈ ನಮ್ಮ ಕನ್ನಡ ಭಾಷೆಯನ್ನು ಬೆಳೆಸಿ ಉದ್ಧಾರ ಮಾಡುವ ನಮ್ಮ ಪ್ರಯತ್ನ ಎತ್ತ ಸಾಗುತ್ತಿದೆ ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಒಂದಂತೂ ನಿಜ… ಅದೆಂದರೆ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಪರಭಾಷಾ ಪ್ರೇಮ ಹೆಚ್ಚಾಗುತ್ತಿರುವುದು ಮತ್ತು ಕೀಳು ದರ್ಜೆಯ ಸಾಹಿತ್ಯ ಮತ್ತು ಹಾಸ್ಯಕ್ಕೆ ಬೇಡಿಕೆ ಹೆಚ್ಚುತ್ತಿರುವುದು. ಇದಕ್ಕೆ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಒಂದು ಚಿತ್ರದ ಹಾಡು… “ಪ್ಯಾರ್ ಗೇ…” ಅದೇನೋ ಆಗ್ಬಿಟ್ಟೈತಂತೆ…. ಮುಂದೆ ಹೇಳಲೂ ಅಸಹ್ಯವಾಗುವಷ್ಟರ ಮಟ್ಟಿಗೆ ಕೆಟ್ಟ ಸಾಹಿತ್ಯ ಬರೆದು ಹಾಸ್ಯದ ಹೆಸರಿನಲ್ಲಿ ಒಂದು ಜನಾಂಗದ ಆಡು ಭಾಷೆಯನ್ನು ಸಾಧ್ಯವಾದಷ್ಟೂ ತೆಗಳಿ ಹೀಯಾಳಿಸಿ ಅಪಮಾನ ಮಾಡುವ ರೀತಿಯಲ್ಲಿ ಹಾಡಿಸಲಾಗಿದೆ ಆ ಹಾಡನ್ನು. ಈ ರೀತಿ ನಮ್ಮದೇ ಭಾಷೆಯನ್ನು ಯಾರಾದರೂ ಅವಹೇಳನಕಾರೀ ರೀತಿಯಲ್ಲಿ ಹೀಯಾಳಿಸಿ ಮಾತಾಡಿದರೆ ನಮಗೆ ಎಷ್ಟು ಸಹಿಲಾಗದೋ ಅಷ್ಟೇ ಕೋಪ ಅವರಿಗೂ ಬರುತ್ತದೆ ಎಂದು ಅರಿತಿರಲಿಲ್ಲ ಎಂದು ಕಾಣುತ್ತದೆ. ಆ ಹಾಡಿನ ಕರ್ತರು.

ಇಂತಹ ವಿದ್ಯಮಾನಗಳಿಂದ ಒಂದು ಕೋಮಿನ ಜನರ ಮನಸ್ಸು ಕೆಟ್ಟಲ್ಲಿ ಕೋಮು ಗಲಭೆ ಆಗಿ ಜನ ಸಾಮಾನ್ಯರ ಶಾಂತಿಗೆ ಭಂಗ ಬಂದರೂ ಆಶ್ಚರ್ಯವಿಲ್ಲ. ಅವರು ಈ ಹಾಡನ್ನು ಕೇಳಿಸಿಕೊಂಡು ಕೇಳದವರಂತೆ ಕಿವಿ ಮುಚ್ಚಿಕೊಂಡು ಸಹಿಸಿಕೊಂಡಿರುವುದರಿಂದ ಸಧ್ಯ ಆ ರೀತಿಯ ವಾತಾವರಣ ಉಂಟಾಗಲಿಲ್ಲ…! ಹಾಗೆ ಆಗುವುದೂ ಬೇಡ. ಇಂತಹಾ ಕೆಟ್ಟ ಗೀತೆಗಳನ್ನು ಮೆಚ್ಚಿ ಸಹಬ್ಬಾಸ್ ಎಂದು ಹೊಗಳಿ ಹಾಡಿದ್ದೇ ಹಾಡಿದ್ದು ನಮ್ಮ ಕನ್ನಡ ಜನ…! ಇದು ನಮ್ಮ ಸಹೃದಯೀ ಮತ್ತು ಸಹಬಾಳ್ವೆಯನ್ನು ಆಧರಿಸುವ ಕನ್ನಡಿಗರ ಮನಸ್ಸಿಗೆ ನಿಜವಾಗಿ ಒಪ್ಪುವುದೇ ಒಮ್ಮೆ ಯೋಚಿಸಿನೋಡಿ…! ಖಂಡಿತಾ ಸಲ್ಲದು. ನಿಜವಾದ ಅಂತಹ ಸಧ್ಭಾವನೆ, ಬ್ರಾಥೃ ಪ್ರೇಮ ಇರುವವರು ಇಂತಹ ಹಾಡುಗಳನ್ನು ಕೇಳಿಯೂ ಕೇಳದವರಂತೆ ಅಥವಾ ಅರ್ಥವಾದರೂ ಅರ್ಥವಾಗದವರಂತೆ ಕಿವಿ ಮುಚ್ಚಿ ಸುಮ್ಮನೆ ಕೂರುವ ಬದಲು ಅವುಗಳನ್ನು ಧಿಕ್ಕರಿಸಬೇಕು. ಆಗಲೇ ಇಂತಹ ಸಾಹಿತ್ಯ ಸಂಗೀತಗಳನ್ನು ಹುಟ್ಟು ಹಾಕುವವರಿಗೆ ಸ್ವಲ್ಪ ಬಿಸಿ ಮುಟ್ಟಿ ಪರಿಸ್ಥಿತಿ ಹದಗೆಡುವ ಮುನ್ನವೇ ಎಚ್ಚೆತ್ತುಕೊಳ್ಳುವಂತಾಗುವುದು. ಇಲ್ಲವಾದರೆ ಮೊದಲೇ ಹೇಳಿದಂತೆ ಈ ಚಿತ್ರರಂಗದಲ್ಲಿ ಕನ್ನಡವನ್ನು ಆ ದೇವರೇ ಕಾಪಾಡಬೇಕು…!

ಒಬ್ಬರಿಗೆ ತಪ್ಪಾಗಿ ಕಾಣುವುದು ಮತ್ತೊಬ್ಬರಿಗೆ ಸರಿಯಾಗಿರಬಹುದು, ನಮಗೆ ಅಸಹ್ಯವಾಗಿ ಕರ್ಣ ಕಠೋರವೆನ್ನಿಸಿರುವ ಇಂತಹಾ ಹಾಡುಗಳನ್ನು ಮೆಚ್ಚಿ ಹೊಗಳಿರುವ ಲಕ್ಷಾಂತರ ನಮ್ಮದೇ ಕನ್ನಡಿಗರಿಗೆ ಕರ್ಣ ಮಧುರವೆನ್ನಿಸುತ್ತಿರಬಹುದು. ಸರಿಯಾಗಿ ಕನ್ನಡವನ್ನು ಓದಿ, ಬರೆಯಲು ಅರ್ಥ ಮಾಡಿಕೊಳ್ಳಲೂ ಬಾರದ ನಮ್ಮ ಅದೆಷ್ಟೋ ಕನ್ನಡಿಗರು ಕೆಲವು ವರ್ಷಗಳ ಹಿಂದೆ ಆ ಪರಭಾಷಾ ಹಾಡುಗಳಾದ “ರಾ.. ರಾ…” ಎನ್ನುತ್ತಾ ಕುಣಿದು ಕುಪ್ಪಳಿಸುತ್ತಿದ್ದ ಜನ ನಂತರ “ಕೊಲವೆರಿ…ಕೊಲವೆರಿ…” ಎನ್ನುತ್ತಿದ್ದರು. ಈಗ ಯಾವ ಹಾಡನ್ನು ಗುಂಗುನಿಸುತ್ತಿದ್ದಾರೋ ಗೊತ್ತಿಲ್ಲ…! ಈ ಹಾಡುಗಳ ಅರ್ಥ ಅದೆಷ್ಟು ಜನರಿಗೆ ಆಗಿರುವುದೋ ನನಗಂತೂ ತಿಳಿಯದು ಆದರೂ ಯಾರೋ ಹಾಡಿದರೆಂದು ತಾವೂ ಕಾಲು ಕುಣಿಸುತ್ತಾ ತಾಳ ಹಾಕುತ್ತಾ ಅದರ ಪ್ರಚಂಡ ಯಶಸ್ಸಿಗೆ ನಮ್ಮದೂ ಒಂದು ಓಟು ಎಂಬಂತೆ ಬಹಳಷ್ಟು ಕನ್ನಡಿಗರು ಆ ಹಾಡುಗಳ ಸೀಡೀ ಕೊಂಡು ಅವರ ಅಭಿವೃದ್ಧಿಗೆ ಸಹಕರಿಸುತ್ತಾ ತಮ್ಮ ಮನೆಯಲ್ಲೂ ಹಾಡಿಸುತ್ತಿದ್ದರು, ಗುಂಗುನಿಸುತ್ತಿದ್ದರು.

ಫೋಟೋ ಕೃಪೆ : google

ಇಂತಹ ಕೃತ್ರಿಮ ಕನ್ನಡ ಪ್ರೇಮಿಗಳಿರುವುದರಿಂದಲೇ ಶ್ರೇಯಾ ಘೋಶಾಲ್, ಸೋನು ನಿಗಂ ಇತ್ಯಾದಿ ಪರಭಾಷಾ ಗಾಯಕರು ಹುಟ್ಟು ಕನ್ನಡ ದವರಲ್ಲದಿದ್ದರೂ ತಮ್ಮ ಜೀವನಕ್ಕಾಗಿ ಕನ್ನಡವನ್ನು ಅಲ್ಪ ಸ್ವಲ್ಪ ಕಲಿತು ಕನ್ನಡದವರಿಗಿಂತಾ ಸ್ಪಷ್ಟವಾಗಿ ಉಚ್ಛಾರಣೆ ಮಾಡಲು ಕಲಿತು ಹಾಡುತ್ತಾ ನಮ್ಮ ಕನ್ನಡಿಗರ ಮನ ಮತ್ತು ಹೃದಯಗಳನ್ನು ಸೂರೆಗೊಂಡು ಹುಚ್ಚು ಹಿಡಿಸುತ್ತಿರುವುದು ಅಲ್ಲವೇ…? ಹಾಗೊಂದು ವೇಳೆ ನಿಜವಾಗಿ ನಮ್ಮ ಕನ್ನಡ ನಾಡಿನಲ್ಲಿ ಸೂಕ್ತ ಪ್ರತಿಭೆಗಳಿಲ್ಲ ಎನ್ನುವವರು ಈಟಿವಿಯವರು ಎಸ್.ಪಿ. ಬಾಲಸುಭ್ರಮಣ್ಯಂ ಅವರ ಸಾರಥ್ಯದಲ್ಲಿ ನಡೆಸಿಕೊಡುತ್ತಿದ್ದ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮವನ್ನು ಒಮ್ಮೆಯಾದರೂ ನೋಡಿದ್ದಲ್ಲಿ ತಿಳಿಯುತ್ತಿತ್ತು. ನಮ್ಮಲ್ಲಿ ಎಂತೆಂತಹಾ ಪ್ರತಿಭೆಗಳಿವೆ ಎಂದು…! ಅದಲ್ಲದೇ ಬಹಳಷ್ಟು ಟಿವಿ ಚಾನೆಲ್ ಗಳಲ್ಲಿ ಹಾಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಸಣ್ಣ ಸಣ್ಣ ಮಕ್ಕಳೂ ಪ್ರಭುದ್ಧ ವಯಸ್ಕರನ್ನೂ ಮೀರಿಸುವಂತಾ ಕಂಠಸಿರಿ ಹೊಂದಿದ್ದಾರೆ.

ನಮ್ಮ ಕನ್ನಡ ಸಿನಿಮಾದಲ್ಲಿ ಬೇರೆ ಭಾಷೆಯ ಹಾಡುಗಳನ್ನು ಹಾಕಿ ಹಾಡಿಸುವಂತೆ ನಮ್ಮ ಯಾವ ನೆರೆ ರಾಜ್ಯದವರು ತಮ್ಮ ಚಿತ್ರಗಳಲ್ಲಿ ಕನ್ನಡ ಹಾಡು ಹೇಳಿಸಿ, ಕೇಳಿ ಮೆಚ್ಚುತ್ತಾರೆ ಎಂಬುದು ಕನ್ನಡಿಗರಿಗೆ ತಿಳಿಯದ ವಿಚಾರವೇನಲ್ಲ….! ಸಂಗೀತಕ್ಕೆ ಭಾಷೆಯ ತಾರತಮ್ಯ ಇರಬಾರದು ನಿಜ, ಆದರೆ “ನಮ್ಮ ಭಾಷೆ-ನಮ್ಮ ನಾಡು-ನಮ್ಮ ಉದ್ಧಾರ” ಕ್ಕೆ ಮೊದಲ ಆಧ್ಯತೆ ಇರಬೇಕು ಎಂಬುದನ್ನು ಮರೆತು ಪರಭಾಷಾ ವ್ಯಾಮೋಹದಿಂದ ಬೇರಾವುದೋ ಭಾಷೆಯನ್ನು ಉದ್ಧರಿಸ ಹೊರಡುವುದು ಸ್ವಜನ ಪಕ್ಷಪಾತ, ಸ್ವ-ಭಾಷಾ ದ್ರೋಹವಾಗುತ್ತೆ. ಅವರವರ ಭಾವಕ್ಕೆ ಅವರವರ ಬಕುತಿಗೆ.. ಎಂಬಂತೆ ಮೆಚ್ಚುವುದು ಬಿಡುವುದು ಅವರವರ ಇಚ್ಛೆಗೆ ಬಿಟ್ಟಿದ್ದು. ತಪ್ಪಾಗಿದ್ದರೂ ಅದು ಸರಿಯೆಂದು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಈ ಪರಿಸ್ಥಿತಿ ಬಂದೊದಗಿರುವುದು ಕನ್ನಡ ನಾಡಿಗೆ ಕನ್ನಡ ಭಾಷೆಯ ಪ್ರಗತಿ ಮತ್ತು ಶ್ರೇಯೋಭಿವೃದ್ಧಿಗೆ ಬಂದಿರುವ ದೌರ್ಭಾಗ್ಯ….!

ಕೇವಲ ನಮ್ಮ ಕನ್ನಡ ಸಿನಿಮಾ, ರಂಗಭೂಮಿ ಮತ್ತು ಆಲ್ಬಮ್ ನಿರ್ಮಾಪಕರು. ನಿರ್ಧೇಶಕರು, ಗೀತ ರಚನಾಕಾರರು, ಸಂಗೀತ ಸಂಯೋಜಕರು ಇಂತಹಾ ನವ ಉಧಯೋನ್ಮುಖ ಕಲಾವಿಧರಿಗೆ ಪ್ರೋತ್ಸಾಹ ನೀಡಿ ಮುಂದೆ ತರಬೇಕಷ್ಟೇ. ಸುಮಧುರ ಸಾಹಿತ್ಯ ಬರೆಯುತ್ತಿದ್ದ ಅಂದಿನ ಕಾಲ ಹೋಗಿ “ಹಳೇ ಪೇಪರ್.. ಖಾಲಿ ಶೀಸಾ”, “ನಂಗೂ ನಿಂಗೂ ಏನಾಯ್ತು..” ಅನ್ನೋ ಕೆಟ್ಟ ಕೆಟ್ಟ ಬೈಗುಳಗಳ ರೀತಿಯ ಅಸಹ್ಯ, ಅಸಭ್ಯ ಭಾಷಾ ಪ್ರಯೋಗ ಮತ್ತು ಕರ್ಣಾನಂದ ನೀಡುತ್ತಿದ್ದ ಸಾಹಿತ್ಯ ಹೋಗಿ ಸಂಗೀತ ವೈವಿಧ್ಯತೆಯ ಹೆಸರಿನಲ್ಲಿ ಕಿವಿಗಡಚಿಕ್ಕುವ ಸಂಗೀತ ಪ್ರವೇಶಿಸಿದೆ.

ಅದು ಹೇಗೇ ಇರಲಿ ‘ನೆರೆಮನೆಯ ಬೇಳೆ ಸಾರೇ ಆದರೂ ಕೋಳೀ ಸಾರಿಗೆ ಸಮಾನ’ ಎನ್ನುವ ಮನೋಭಾವದಿಂದ ಹೀಗೇ ಮುಂದುವರೆದಲ್ಲಿ ನಮ್ಮ ಕನ್ನಡ ಖ0ಡಿತಾ ಬೆಳೆಯುವುದಿಲ್ಲ ಉದ್ಧಾರವಾಗುವುದಿಲ್ಲ…!

ಇನ್ನು ಕನ್ನಡ ಚಿತ್ರಗಳಲ್ಲಿ ಹಾಸ್ಯದ ವಿಚಾರಕ್ಕೆ ಬಂದರೆ ಅದು ನಿಜವಾಗಿಯೂ ಹಾಸ್ಯವಲ್ಲ, ಅಪಹಾಸ್ಯ ಎನ್ನಿಸುತ್ತದೆ. ಕೆಲವು ಚಿತ್ರಗಳಲ್ಲಿ ಅದ್ಯಾವುದೋ ಕೋಕಿಲಾ… ಎಂಬುವರು ಮತ್ತು ರಂಗಾಯಣದಂತಹಾ ಪ್ರತಿಷ್ಠಿತ ಭೂಮಿಕೆಯಿಂದ ಬಂದಿರುವಂತಾ ಮತ್ತೊಬ್ಬ ಹಾಸ್ಯ ಕಲಾವಿಧರೂ ಹುಚ್ಚರಂತೆ ಮೇಕಪ್ ಹಾಕಿಸಿಕೊಂಡು ಕೆಟ್ಟದಾಗಿ ಕನ್ನಡ ಮಾತಾಡುತ್ತಾ ಕೃತ್ರಿಮ, ಅತೀ ಓವರ್ ಎನ್ನುವಂತಾ ನಟನೆ ಪ್ರಧರ್ಶಿಸುತ್ತಾ ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತಾ ಅದನ್ನೇ ಹಾಸ್ಯವೇನೋ ಎಂದು ಸ್ವೀಕರಿಸಿ ಒಪ್ಪಿಕೊಳ್ಳುವಂತೆ ಮಾಡುತ್ತಿದ್ದಾರೆ. ಅಂತಹ ಕೀಳು ದರ್ಜೆಯ ಹಾಸ್ಯ ಕೇವಲ ಒಂದು ವರ್ಗದ ಜನರಿಗೆ ಮಾತ್ರ ಮೆಚ್ಚುಗೆಯಾಗುವುದೆಂದು ನಮ್ಮ ನಿರ್ಮಾಪಕ ಸಹೋದಯರಿಗೆ ಚೆನ್ನಾಗಿ ತಿಳಿದಿದ್ದು ಅತೀ ಹೆಚ್ಚು ಪ್ರೇಕ್ಷಕರಾಗಿರುವ ಅಂತಹ ವರ್ಗದವರನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲವಾದ್ದರಿಂದ ಇಂತಹ ಸಾಹಿತ್ಯ, ಹಾಡು ಮತ್ತು ಹಾಸ್ಯ ಸನ್ನಿವೇಶಗಳು ಚಿತ್ರದಿಂದ ಚಿತ್ರಗಳಿಗೆ ಪುನರಾವೃತ್ತಿ ಆಗುತ್ತಲೇ ಇರುತ್ತವೆ. ಆದರೆ ನಮ್ಮ ನಿಮ್ಮಂತ ಬಹಳಷ್ಟು ಜನ ಸಾಮಾನ್ಯರಿಗೆ ಅವೆಲ್ಲಾ ಒಪ್ಪಿಗೆಯಾಗುವುದಿಲ್ಲ. ಹಿಂದಿನ ಸಿನಿಮಾಗಳಲ್ಲಿ ನಿಜವಾದ ಹಾಸ್ಯ ಎಂದರೇನು ಎಂದು ಅವರ ಭಾವ ಭಂಗಿ ಮತ್ತು ಭಾಷೆಗಳಲ್ಲೇ ತೋರಿಸುತ್ತಿದ್ದ ನರಸಿಂಹರಾಜು, ಬಾಲಕೃಷ್ಣ ರಂತಾವರು ಇಂದು ಇಲ್ಲವೇ ಇಲ್ಲ.

ತಪ್ಪು ಮಾಡಿ ಅದು ತಪ್ಪೆಂದು ಬೇರೆಯವರಿಂದ ತಿಳಿದ ಮೇಲೆ ಅಯ್ಯೋ ತಪ್ಪಾಗಿ ಹೋಯಿತಲ್ಲಾ ಎಂದು ಕೊರಗುವುದರ ಬದಲು ತಪ್ಪು ಎಂದು ಅರಿತಮೇಲಾದರೂ ಅದನ್ನು ತಿದ್ದಿಕೊಂಡು ನಡೆದಲ್ಲಿ ಅದಕ್ಕಿಂತಾ ಉತ್ತಮ ಯಾವುದೂ ಇಲ್ಲ ಎನ್ನುವುದು ನನ್ನ ಅನಿಸಿಕೆ. ಎಲ್ಲಾ ರಂಗದಲ್ಲೂ ಪ್ರತಿಯೊಬ್ಬರೂ ಕನ್ನಡ ಬೆಳೆಸಿ ಪ್ರೋತ್ಸಾಹಿಸುವಲ್ಲಿ ಅವರವರ ಪ್ರಯತ್ನ ಅವರು ಮಾಡುತ್ತಿದ್ದಾರೆ ಆದರೆ ಕನ್ನಡ ಕನ್ನಡ ಎಂದು ಬಾಯಲ್ಲಿ ಜಪಿಸುತ್ತಾ ಒಳಗೆ ಮಾತ್ರಾ ಬೇರೆ ಭಾಷೆಗಳ ಚಿತ್ರಗಳು ಮತ್ತು ಸಂಗೀತ ಉತ್ತಮ ಎನ್ನಿಸಿ ಅವುಗಳನ್ನು ಯಥಾವತ್ ಬಟ್ಟಿ ಇಳಿಸುವ ಇಂತಹಾ ಪರಭಾಷಾ ವ್ಯಾಮೋಹಿಗಳು ನಿಜವಾದ ಮಾತೃಭಾಷಾ ಪ್ರೇಮವಿದ್ದರೆ ಈ ಕನ್ನಡ ಮಣ್ಣಿನಲ್ಲಿ ಹುಟ್ಟಿ ಕನ್ನಡ ನೆಲದ ಅನ್ನ ತಿಂದು ನೀರು ಕುಡಿದು ಬೆಳೆದಿರುವುದನ್ನು ಅರಿತು ಇನ್ನು ಮುಂದೆಯಾದರೂ ತಮ್ಮನ್ನು ತಾವೇ ತಿದ್ದಿಕೊಂಡು ನಡೆದಲ್ಲಿ ಈ ಕನ್ನಡ ತಾಯಿಯ ಋಣ ಅಲ್ಪ ಸ್ವಲ್ಪವಾದರೂ ತೀರಿಸಿ ಕನ್ನಡದ ನಿಜವಾದ ಬೆಳವಣಿಗೆಗೆ ಸಹಕರಿಸಿದಂತಾಗುತ್ತದೆ.

ಫೋಟೋ ಕೃಪೆ : google

ಇನ್ನೊಂದು ಮಹಾ ಆಘಾತಕಾರೀ ಬೆಳವಣಿಗೆ ಎಂದರೆ ಮೊಬೈಲ್ ಫೋನ್ ಗಳಲ್ಲಿ ದಿನನಿತ್ಯದ ಸಂಪರ್ಕ, ಸಾಮಾನ್ಯ ವ್ಯವಹಾರ, ಮಾತುಕತೆ, ಬರಹ, ಸಂದೇಶ ಇತ್ಯಾದಿಗಳಿಗಾಗಿ ಯಾವುದೇ ಬರಹ ಬರೆದು ಹಾಕುವಾಗ ಕನ್ನಡವನ್ನು ಆಂಗ್ಲ ಭಾಷೆಯಲ್ಲಿ ಬರೆಯುವ “ಬೆರಕೆ ಭಾಷೆ” ಅಂದರೆ “ಕಂಗ್ಲೀಷ್” ನಲ್ಲಿ ಬರೆದು ಹಾಕುವುದು ಬಹಳ ವಾಡಿಕೆ ಆಗಿಬಿಟ್ಟಿದೆ. ಅದನ್ನು ಓದಲು, ಕೆಲವೊಮ್ಮೆ ಅರ್ಥ ಮಾಡಿಕೊಳ್ಳಲು ಚಿತ್ರಹಿಂಸೆ ನೀಡುವಂತಹಾ ಅನುಭವ ಆಗುತ್ತದೆ. ಪೂರ್ತಿ ಆಂಗ್ಲದಲ್ಲಿ ಬರೆದರೂ ಪರವಾಗಿಲ್ಲ.. ಭಾಷೆ ಕಲಿಯುವ ಒಂದು ಮಾರ್ಗ ಆಗುತ್ತದೆ.. ಆದರೆ ಈ ಬೆರಕೆ ಭಾಷೆಯಲ್ಲಿ ಬರೆಯುವುದಕ್ಕಿಂತ ಅಚ್ಚುಕಟ್ಟಾಗಿ ನಮ್ಮ ಮಾತೃಭಾಷೆ ಕನ್ನಡ ಲಿಪಿಯಲ್ಲಿ ಬರೆವುದು (ಟೈಪ್ ಮಾಡಿ) ಉತ್ತಮ ಅಲ್ಲವೇ ಸ್ವಲ್ಪ ಯೋಚಿಸಿ….!

ಕನ್ನಡಿಗರೇ ಆಗಿ ಆ ಲಿಪಿಯಲ್ಲಿ ಟೈಪಿಸುವುದು ಬಹಳ ಕಷ್ಟದ ಕೆಲಸ, ದೀರ್ಘ, ವಟ್ರಸುಳಿ, ಕೊಂಬು ಅಂತ ಏನೇನೋ ಇವೆ. ಅಷ್ಟೆಲ್ಲಾ ಯಾಕೆ ಕಷ್ಟ ಪಡಬೇಕು ಅಂತ ಈ ಅತೀ ಸುಲಭದ ಬೆರಕೆ ಭಾಷೆಯ ಮಾರ್ಗ ಅನುಸರಿಸುವುದು ಅದೆಷ್ಟು ಸರಿ ಯೋಚಿಸಿ..!

ಅದರಲ್ಲೂ ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆ ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇನ್ನಾದರೂ ಸರ್ವ ರೀತಿಯ ಪ್ರಯತ್ನ ಮಾಡಬೇಕಾಗಿದೆ. ನಾವೇ ನಮ್ಮ ಮಾತೃ ಭಾಷೆಯ ಉಳಿವು ಮತ್ತು ಬೆಳವಣಿಗೆ ಪ್ರಯತ್ನ ಮಾಡದೇ ಕೇವಲ ನವೆಂಬರ್ ಒಂದರಂದು ಮಾತ್ರ ರಾಜ್ಯೋತ್ಸವ ಆಚರಿಸುತ್ತೇವೆ ಕನ್ನಡ ಉಳಿಸಿ ಬೆಳೆಸುತ್ತೇವೆ ಎಂದು ಮೇಲೆ ಮಾತ್ರ ಹೇಳಿಕೊಳ್ಳುವುದು ಬರೀ ತೋರಿಕೆಗೆ ಅನ್ನಿಸುವುದಿಲ್ಲವೇ..?

ಬಹಳ ಮಂದಿ ತಿಳಿದಿರುವಂತೆ ಮೊಬೈಲ್ ಫೋನ್ ಗಳಲ್ಲಿ ಕನ್ನಡ ಲಿಪಿಯಲ್ಲಿ ಟೈಪ್ ಮಾಡುವ ಸೌಲಭ್ಯಗಳಿದ್ದು ಅದನ್ನು ಕಲಿತು ಉಪಯೋಗಿಸುವುದು ಅಂತಾ ಕಷ್ಟವೇನಲ್ಲ, ತುಂಬಾ ಸುಲಭ. ಶುರುವಿನಲ್ಲಿ ಸ್ವಲ್ಪ ಕಷ್ಟ ಅನ್ನಿಸುತ್ತದೆ ಆದರೆ ಬರಬರುತ್ತ ಕೈಗೆ ಹೊಂದಿಕೊಳ್ಳುತ್ತದೆ. ಇತ್ತೀಚಿನ ಬಹುತೇಕ ಮೊಬೈಲ್ ಫೋನ್ ಗಳಲ್ಲಿ ವಿವಿಧ ಭಾರತೀಯ ಭಾಷೆಗಳಲ್ಲಿ ಬರೆಯಲು ಕೀಪ್ಯಾಡ್ ಸೌಲಭ್ಯ ಇರುತ್ತದೆ. ಅದನ್ನು ಸೆಟ್ ಮಾಡಿಕೊಂಡು ಟೈಪ್ ಮಾಡಲು ಶುರು ಮಾಡಬಹುದು..! ಇನ್ನೂ ಮುಂದುವರೆದು ಕೇವಲ ಮಾತನಾಡಿದರೂ ಬೇಕಾದ ಭಾಷೆಯಲ್ಲಿ ತಂತಾನೇ ಟೈಪ್ ಮಾಡಿಕೊಳ್ಳುವ ಸೌಲಭ್ಯ ಕೂಡಾ ಮೊಬೈಲ್ ಆಪ್ಪ್ ಗಳಲ್ಲಿ ಇದ್ದು ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಲೂ ಬಹುದಾಗಿದೆ.

ಫೋಟೋ ಕೃಪೆ : google

ಅಂತರ್ಜಾಲ ತಾಣಗಳಲ್ಲಿ ಹಲವಾರು ಕೀ ಪ್ಯಾಡ್ ಆಪ್ ಗಳು ಲಭ್ಯವಿದ್ದು ಉಪಯೋಗಿಸಲು ಸುಲಭ /ಸೂಕ್ತ ಎನಿಸಿದವನ್ನು ಡೌನ್‌ಲೋಡ್ ಮಾಡಿಕೊಂಡು ಕೈ ಆಡಿಸಿ ಪ್ರಯತ್ನಿಸಬಹುದು. ಅವುಗಳಲ್ಲಿ ಅತೀ ಸುಲಭದ ಮಾರ್ಗ ಎಂದರೆ ” ಶ್ವಿಫ್ಟ್ ಕೀ ಪ್ಯಾಡ್ “, ” ಗೂಗಲ್ ಇಂಡಿಕ್ ಕೀ ಬೋರ್ಡ್ ” ಅಥವಾ ಇತರೇ ಸಮಾನ ಆಪ್ಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಯತ್ನಿಸಿದರೆ ಖಂಡಿತಾ ಅಸಾಧ್ಯವೇನಲ್ಲ. ಒಂದು ವೇಳೆ ಅದೂ ಮಹಾ ಕಷ್ಟದ ಕೆಲಸ ಎನ್ನುವ ಸೋಮಾರಿಗಳಿಗೆ ಆಂಗ್ಲ ಭಾಷೆಯಲ್ಲಿ ಕನ್ನಡ ಪದಗಳನ್ನು ಟೈಪ್ ಮಾಡಿದರೆ (ಕಂಗ್ಲೀಷ್ ನಲ್ಲಿ) ತಾನಾಗೇ ಕನ್ನಡ ಲಿಪಿಯಾಗಿ ಮಾರ್ಪಾಡಾಗುವ ಸೌಲಭ್ಯ ಕೂಡಾ ಇರುತ್ತದೆ, ಅದನ್ನಾದರೂ ಉಪಯೋಗಿಸಲು ಕಲಿತು ಇತರರಿಗೂ ಕಲಿಸಿದರೆ ಕನ್ನಡದ ಬೆಳವಣಿಗೆಗೆ ಸಹಕರಿಸಿದಂತಾಗುವುದಿಲ್ಲವೇ..?

ಈ ನನ್ನ ಅಭಿಪ್ರಾಯಗಳನ್ನು ಯಾರನ್ನೂ ನಿಂದಿಸಲು ಬರೆದಿಲ್ಲ. ನನ್ನ ಮತ್ತು ನನ್ನಂತ ಸಹ ಮನಸ್ಕ ಮಿತ್ರರ ಅನಿಸಿಕೆಗಳನ್ನೇ ಇಲ್ಲಿ ಪ್ರತಿಬಿಂಬಿಸಿದ್ದೇನೆ. ಆದ್ದರಿಂದ ಅನ್ಯತಾ ಭಾವಿಸಿ ಯಾರೂ ಯಾವುದೇ ರೀತಿಯಲ್ಲೂ ಮನಸ್ಸಿಗೆ ಘಾಸಿ ಮಾಡಿಕೊಳ್ಳಬಾರದಾಗಿ ವಿನಂತಿ.

“ಕನ್ನಡ ಬಳಸೋಣಾ… ಕನ್ನಡ ಬೆಳೆಸೋಣಾ…”


  • ಎಚ್ ವಿ ಶಿವರುದ್ರಪ್ಪ

1.5 2 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW