ಅಪ್ಪ ನನಗೆ ಕೊಟ್ಟಿದ್ದೇನು ? ಅಪ್ಪ ಯಾಕೆ ಹಿಂದುಳಿದು ಬಿಟ್ಟ. ಯಾಕೆ? ಕೆಪಿಸಿಎಲ್ ನಿವೃತ್ತ ಅಧಿಕಾರಿ ದೇವರಾಜ ಚಾರ್ ಅವರ ಲೇಖನಿಯಲ್ಲಿ ಅಪ್ಪನ ವೈಶಿಷ್ಟ, ತಪ್ಪದೆ ಮುಂದೆ ಓದಿ…
ಎಲ್ಲಾ ಅಪ್ಪಂದಿರಿಗೂ ಅಪ್ಪ…ಎಂದಾಗ ಖುಷಿ ಪಡುತ್ತಾರೆ. ಮಗು ಬಂದಾಗ ಅಪ್ಪನ ಜವಾಬ್ದಾರಿ ಹೆಚ್ಚಾಗುತ್ತದೆ ಜೊತೆಗೆ ಗಂಡ ಹೆಂಡತಿ ಮಧ್ಯೆ ಪ್ರೀತಿ ಕೂಡಾ ಹೆಚ್ಚಾಗುತ್ತದೆ. ತಂದೆಗಿಂತ ಅಮ್ಮ ಮಕ್ಕಳ ಜೊತೆಗೆ ಹೆಚ್ಚಾಗಿ ಸಮಯ ಕಳೆಯುವುದರಿಂದ ಅಮ್ಮ ಹತ್ತಿರವಾಗುತ್ತಾಳೆ. ಮಕ್ಕಳಿಗೆ ಅಮ್ಮನೇ ದೇವರಾಗುತ್ತಾಳೆ. ಹೀಗಾಗಿ ಅಮ್ಮನ ಕುರಿತು ಸಾಕಷ್ಟು ಕವನ, ಪದ್ಯ, ಸಿನಿಮಾಗಳು ಸಾಕಷ್ಟು ಬಂದಿದೆ.ಆದರೆ ಅಪ್ಪನ ಕುರಿತು ಬೆರಳಿಕೆಯಷ್ಟೇ ಹಾಡು, ಕತೆಗಳು ಬಂದಿವೆ
ಅಮ್ಮನ ಕುರಿತಾದ ಹಾಡುಗಳು ಕೇಳಿದರೆ ಮನಸ್ಸಿಗೆ ಹತ್ತಿರವಾಗುತ್ತೆ. ಹೃದಯ ತುಂಬಿ ಬರುತ್ತೆ.ಕಣ್ಣಾಲೆ ತುಂಬಿಕೊಳ್ಳುತ್ತವೆ. ಅಮ್ಮನಿಲ್ಲದಿದ್ದರೆ ಏನು ಇಲ್ಲ,ಅಮ್ಮ ಆದವಳಿಂದ ಮಗು ಭೂಮಿಗೆ ಬರುತ್ತೆ. ನಿಜ ಇಲ್ಲಿ ನಾವು ಮರೆಯುವುದು ಅಪ್ಪನನ್ನು ಅಪ್ಪನೂ ಕೈಗೂಡಿಸಿದರೆ ತಾನೇ ಇದೆಲ್ಲಾ ಆಗುವುದು. ಅಪ್ಪನ ಕುರಿತು ಹಾಡುಗಳನ್ನು ಬರೆದಿದ್ದಾರೆ.
ಎಷ್ಟು ಚಿತ್ರಗಳು ಮೂಡಿಬಂದಿವೆ. “ಅಪ್ಪ, ಐ ಲವ್ ಯು ಪಾ…” ಹಾಡು ನೆನಪಿಗೆ ಬರುತ್ತೆ. ಕವಿಯತ್ರಿ ಒಬ್ಬರು ಅಪ್ಪನೆಂದರೆ ಆಕಾಶ ಎಂದು ಹೇಳುತ್ತಾರೆ. ಇನ್ನೊಬ್ಬ ಕವಿ ಅಪ್ಪನನ್ನು ಕುರಿತು ಹೀಗೆ ಹೇಳುತ್ತಾರೆ. ಅಪ್ಪ ಯಾಕೋ ಹಿಂದುಳಿದು ಬಿಟ್ಟ, ಅಮ್ಮ 9 ತಿಂಗಳು ಸಾಕುತ್ತಾಳೆ, ಅಪ್ಪ ೨೫ ವರ್ಷ ಸಾಕುತ್ತಾನೆ. ಶ್ರಮ ಇಬ್ಬರದು ಒಂದೇ ಆದರೂ ಅಪ್ಪ ಯಾಕೋ ಹಿಂದುಳಿದು ಬಿಟ್ಟ… ಎಲ್ಲದರಲ್ಲೂ ಅಮ್ಮ ಅನ್ನುವ ಕೂಗು ನನ್ನನ್ನು ಕೂಗಲಿಲ್ಲ ಅಂತ ಅಪ್ಪ ಕೊರಗಲಿಲ್ಲ.
ಹೆಂಡತಿ ತನ್ನ ಮಗುವಿಗೆ ಬಟ್ಟೆ ಕೊಡಿಸುತ್ತಾನೆ. ಆದರೆ ತನಗೆ ಅಂತ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಅಪ್ಪ ನೆನಪು ಆಗುವುದಿಲ್ಲ. ಚೆನ್ನಾಗಿ ವರ್ಣಿಸಿದ್ದಾರೆ. ಅಮ್ಮ ಮಗುವಿನ ಒಡನಾಟ ಜಾಸ್ತಿ. ಇದರಿಂದ ಅಪ್ಪನ ಮೇಲೆ ಒಂದಷ್ಟು ಕಾಳಜಿ ಕಡಿಮೆ ಆಗುತ್ತಾ ಹೋಗುತ್ತದೆ. ಮೊದಮೊದಲಿಗೆ ಅದು ತಿಳಿಯುವುದಿಲ್ಲ. ಮಗುವಿನ ಮಾತು, ಆಟ, ಮುಗ್ದತೆಯಲ್ಲಿ ತಲ್ಲೀಣರಾಗಿ ಎಲ್ಲವನ್ನು ಮರೆತ್ತಾ ಹೋಗುತ್ತಾರೆ. ಅಮ್ಮ ಹೆಚ್ಚೆಚ್ಚು ಮಗುವಿನ ಪಾಲನೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಅಪ್ಪನ ಮೇಲಿದ್ದ ಕಾಳಜಿ ಸ್ವಲ್ಪ ಸ್ವಲ್ಪವೇ ಕಳಚಿಕೊಳ್ಳುತ್ತೆ. ಮಗು ಇನ್ನೂ ಮಲಗಿಲ್ಲ, ಅದೊಂದು ಕೆಲಸ ನೀವೇ ಮಾಡಿಕೊಂಡು ಬಿಡಿ, ಮೊಬೈಲ್ನಲ್ಲಿ ಹೆಚ್ಚು ಮಾತನಾಡಬೇಡಿ, ಮಗುವಿಗೆ ತೊಂದರೆ ಆಗುತ್ತೆ. ಟಿವಿ ಸ್ವಲ್ಪ ಕಡಿಮೆ ಸೌಂಡ್ ಮಾಡಿ ಅಂತ, ದಿನೇ ದಿನೇ ಬೇಡಗಳು ಹೆಚ್ಚಾಗುತ್ತ ಹೋಗುತ್ತವೆ.
ಅಪ್ಪನಾದವನಿಗೆ ಅಮ್ಮನ ಸಹಚರ್ಯ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಅಪ್ಪ ಯಾವುದನ್ನು ತಲೆಗೆ ಹಾಕಿಕೊಳ್ಳದೆ,ಮಗುವಿನ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಮಕ್ಕಳ ಭವಿಷ್ಯವೇ ತನ್ನ ಭವಿಷ್ಯ ಅಂತ ಮಕ್ಕಳ ಓದು,ಅವರ ಆರೋಗ್ಯ, ಖುಷಿಯಲ್ಲಿ ಪಾಲ್ಗೊಳ್ಳುತ್ತಾ ಹೋಗುತ್ತಾನೆ. ಮಧ್ಯ ಮಧ್ಯ ಮಕ್ಕಳ ಅಮ್ಮನ ಒತ್ತಾಯ.ಮಕ್ಕಳು ಹೀಗೆ ಬೆಳೆಯಬೇಕು, ಬೆಳೆಸಬೇಕು.
ಒಳ್ಳೆಯ ಬಟ್ಟೆ ಹಾಕಬೇಕು. ಹೆಣ್ಣು ಮಕ್ಕಳಿಗೆ ಒಡವೆ ಮಾಡಿಸಬೇಕು ಇತ್ಯಾದಿ ಒತ್ತಡ ಬೀಳುತ್ತವೆ. ಸ್ವಂತ ಮನೆ ಮಾಡಿಕೊಳ್ಳಬೇಕು, ಮಕ್ಕಳು ದೊಡ್ಡವು ಆಗುತ್ತಾ ಬಂದಿದ್ದಾರೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ ಹೆಂಡತಿಯ ಸಹಚ್ಚರ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಮಗಳು/ ಮಗ ಮಲಗಿಲ್ಲ.ಅವರಿಗೆ ಓದಿಸಬೇಕು. ನನಗೆ ಅಡಿಗೆ ಮನೆಯಲ್ಲಿ ಕೆಲಸ ಇದೆ.ಹಾಗೆ ಹೀಗೆ ಅಂತ ತನ್ನ ಕೆಲಸದಲ್ಲಿ ನಿರತಳಾಗುತ್ತಾಳೆ.
ಈ ರೀತಿ ಹೆಂಡತಿಯ ಸಹಚ್ಚರ್ಯ, ಸಹಭಾಗಿತ್ವ ಕಡಿಮೆಯಾಗುತ್ತ ಹೋಗುತ್ತದೆ. ತಡವಾಗಿ ಬಂದ ಹೆಂಡತಿ,ನೀವು ಮಲಗಿದ್ದರಲ್ಲ ಅದಕ್ಕಾಗಿ ಎಚ್ಚರಿಸಲಿಲ್ಲ ಅಂತಹೇಳುತ್ತಾಳೆ. ಆಫೀಸಿನ ಕೆಲಸದಿಂದ, ಅಲ್ಲಿಯ ಸಹೋದ್ಯೋಗಿಗಳ ಕಿರಿಕಿರಿಗೆ ಬೇಸತ್ತು ಮನೆಗೆ ಬರುತ್ತಾನೆ.ಹೆಣ್ಣು ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸ ಅದಕ್ಕೆ ಬೇಕಾಗುವ ಹಣಕಾಸು ಇತ್ಯಾದಿ ಒತ್ತಡ ಹೆಚ್ಚಾಗುತ್ತಾ ಬರುತ್ತದೆ.ತನ್ನ ತಂದೆ ತಾಯಿ ಬಂಧು ಬಳಗ ಅಂತ ಅದರಲ್ಲೂ ತಾನು ತೊಡಗಿಕೊಂಡು ಅವರ ಆಸೆಗಳನ್ನು ನೆರವೇರಿಸಲು ಕೈಜೊಡಿಸುತ್ತಾನೆ.
ಹೆಣ್ಣು ಮಕ್ಕಳ ಮದುವೆ ಮಾಡಲು ವರನ ಹುಡುಕಾಟ ಪ್ರಾರಂಭವಾಗುತ್ತದೆ.ಮನೆತನ, ಒಳ್ಳೆಯ ವರನಿಗಾಗಿ ತಾನು ಹುಡುಕಾಟ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತಾನೆ.ತನ್ನ ಕರ್ತವ್ಯ ಎಂದರೆ ಮದುವೆ ಸಮಾರಂಭಗಳಿಗೆ ಹಣ ಸರಿದೂಗಿಸುವುದು.ಅವನ ಹಿತೈಷಿಗಳು ಸರಿ ಅನ್ನುವಂತ ಮದುವೆ ಮಾಡಿಕೊಡುವುದು.
ಅಪ್ಪನಿಗೆ ಇಷ್ಟರಲ್ಲಿ ನಿವೃತ್ತಿ ಅಂತ ತಲುಪಿರುತ್ತದೆ.ಈ ಕಾಲಘಟ್ಟದಲ್ಲಿ ಗಂಡ ಹೆಂಡತಿಯರ ಬಾಂಧವ್ಯ ಕೇವಲ ವ್ಯವಹಾರಿಕವಾಗಿರುತ್ತೆ. ತಪ್ಪುಗಳನ್ನು ಹುಡುಕುವ ಹಂತ ತಲುಪಿರುತ್ತೆ.ಗಂಡ ಹೆಂಡತಿಯರ ಜಗಳ ಉಂಡು ಮಲಗುವ ತನಕ ಅಂತ ಗಾದೆ ಮಾತು ಇದೆ,ಆದರೆ ಈ ಗಾದೆ ಮಕ್ಕಳಾಗುವ ತನಕ ಸರಿ.
ನಿವೃತ್ತಿಯ ಹಂತ ತಲುಪಿದ ಮೇಲೆ ಸಣ್ಣಪುಟ್ಟ ಮನಸ್ತಾಪ ಪ್ರಾರಂಭವಾಗುತ್ತದೆ.ಜಗಳ ಪ್ರಾರಂಭ ವಾಗುವುದೇ ಉಂಡು ಮಲಗಿದ ಮೇಲೆ ಹೇಗೋ ರಾತ್ರಿ ಕಳೆದು ಬೆಳಕಾಗುತ್ತೆ. ಅಳಿಯ ಅಥವಾ ಸೊಸೆ ಬಂದ ಮೇಲೆ ಜೀವನದ ಚಕ್ರ ಬದಲಾಗುತ್ತ ಹೋಗುತ್ತದೆ. ಅಳಿಯನಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವುದರಿಂದ,ಅಪ್ಪನ ಸ್ಥಾನ ಎರಡನೇ ಸ್ಥಾನಕ್ಕೆ ಹೋಗುತ್ತದೆ. ಗೊತ್ತಾಗದ0ತೆ ಇವೆಲ್ಲ ಆಗಿ ಹೋಗುತ್ತೆ.ವೃತ್ತಿಯಲ್ಲಿರುವವರಿಗೆ ಇದ್ದ ಸ್ಥಾನಮಾನ ನಿವೃತ್ತಿಯ ನಂತರ ಬದಲಾಗುವಂತೆ,ಸಂಸಾರದಲ್ಲೂ ಬದಲಾಗುತ್ತೆ.ಇದು ಜಗದ ನಿಯಮ.
ವಿವಿಧ ವೃತ್ತಿಯಲ್ಲಿರುವ ಅಪ್ಪಂದಿರು ಒಂದು ರೀತಿ ಬದಲಾಗುತ್ತಾರೆ. ಅಂತಹವರು ಹೆಂಡತಿಯಾದವಳಗೆ ಸಮಯ ಕೊಡಲಾರರು. ಉದಾಹರಣೆಗೆ ರಾಜಕೀಯದಲ್ಲಿರುವವರು, ಸಿನಿಮಾ ಕ್ಷೇತ್ರದಲ್ಲಿರುವವರು, ಡಾಕ್ಟರ್ ಗಳು, ಉದ್ದಿಮೆದಾರರು, ದೊಡ್ಡ ದೊಡ್ಡ ಜಮೀನುದಾರರು, ಯಜಮಾನರುಗಳು ಮನೆಗೆ ಬಂದರೆ ಸಾಕಪ್ಪ ಅನಿಸುತ್ತದೆ,ಅವರವರ ಹೆಂಡತಿಯರಿಗೆ. ಮನೆಯ ಪರಿಸ್ಥಿತಿ ನಿಭಾಯಿಸಿ ಸಾಕಾಗಿರುತ್ತೆ.
ಮಾಮೂಲಿ ಉದ್ಯೋಗಿಯಾಗಿದ್ದು ನಿವೃತ್ತಿಯಾದವನ ಕಥೆನೇ ಬೇರೆ ಆಗಿರುತ್ತೆ. ಅದರಲ್ಲೂ ಇಸ್ಪೀಟ್ ಆಡದ, ಕ್ಲಬ್ ಗೆ ಹೋಗದ, ಹರಟೆ ಹೊಡೆಯುವ ಸ್ನೇಹಿತರಿಲ್ಲದ, ಅಪ್ಪನ ಕಥೆಯೇ ಬೇರೆ. ಇಂತಹವರು ಸುಮಾರು 65 ವರ್ಷ ಆಗುವ ತನಕ ಮದುವೆ, ಬಾಣಂತನ, ನಾಮಕರಣ ಅಂತ ಕಾಲ ಕಳೆದು ಹೋಗುತ್ತೆ. ನಂತರದಲ್ಲಿ ಧರ್ಮಪತ್ನಿಯ ಸಹಭಾಗಿತ್ವ ಅಲ್ಲಲ್ಲಿ ಬೇಕಾಗುತ್ತದೆ. ಆದರೆ ಅದು ಸಿಗುವುದಿಲ್ಲ. ಮೊಮ್ಮಕ್ಕಳು ಬಂದ ಮೇಲೆ ಅಪ್ಪನ ಸ್ಥಿತಿ ಇನ್ನೂ ಅಯುಮಯ. ಮೊಮ್ಮಕ್ಕಳ ಜೊತೆ ಆಟ ಆಡಿಕೊಂಡು ಕಾಲ ಕಳೆಬೇಕು ಅಲ್ಲವಾ ಅಂತ ಆಡಿಕೊಳ್ಳುವವರಿದ್ದಾರೆ.ಈಗಿನ ಮೊಮ್ಮಕ್ಕಳು ತಾತಂದಿರ ಕೈ ಗೊಂಬೆ ಆಗಿರುತ್ತಾರ?ಅವರ ವಿವೇಚನಾ ಶಕ್ತಿಯೇ ಬೇರೆ.
ಮಗಳು, ಮಗ, ಅಳಿಯ, ಸೊಸೆ, ಮಕ್ಕಳ ಯೋಗ ಕ್ಷೇಮ ವಿಚಾರಿಸುದ್ರಲ್ಲಿ ಅಮ್ಮನು ಸಹ ಸಾಕಾಗುತ್ತಾಳೆ. ಅಲ್ಲದೆ ಭೌತಿಕವಾದ ನೋವುಗಳು ಸಹ ಕಾಡುತ್ತವೆ. ಅಪ್ಪಂದಿರು ಇದನ್ನು ಸಹ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಈಗಿನ ಅಜ್ಜಿ ತಾತಂದಿರ ವಯಸ್ಸಿನ ಅಂತರ 8 ರಿಂದ 10 ವರ್ಷಗಳದ್ದಾಗಿರುತ್ತೆ. ಆದ್ದರಿಂದ ಮಕ್ಕಳು ಮೊಮ್ಮಕ್ಕಳ ಮುಂದೆ ಸರಸ ಸಲ್ಲಾಫ, ಮಾತುಗಳಿರುವುದಿಲ್ಲ. ಮಕ್ಕಳು ಏನು ತಿಳಿದುಕೊಳ್ಳುತ್ತಾರೆ ಅನ್ನುವ ನಾಚಿಕೆ. ಅಪ್ಪ ಅಮ್ಮ ಒಟ್ಟಾಗಿ ಹೋಗಲು ಹಿಂಜರಿಯುತ್ತಾರೆ. ಗಂಡ ಹೆಂಡತಿಯರು ಇಬ್ಬರೇ ಇರುವ ಸಂದರ್ಭಗಳೇ ಕಡಿಮೆಯಾಗುತ್ತ ಹೋಗುತ್ತದೆ.
ಅಪ್ಪನ ಇನ್ನೂ ಒಂದು ಗುಣ ಗಮನಿಸಬೇಕು ಮಗಳನ್ನು ಮದುವೆ ಮಾಡಿಕೊಟ್ಟ ಮೇಲೆ ಮಗಳನ್ನು ಅಳಿಯನ ಮನೆಗೆ ಕಳುಹಿಸಿಕೊಡುವಾಗ ಅಪ್ಪ ಕಣ್ಣು ತುಂಬಿಕೊಳ್ಳುತ್ತಾನೆ. ಗಂಟಲು ಉಬ್ಬಿ ಬರುತ್ತೆ. ಆದರೆ ಆತ ತೋರಗೊಡದೆ ಅಪ್ಪ ಕರ್ತವ್ಯದಲ್ಲಿ ತಲ್ಲೀನನಾಗುತ್ತಾನೆ. ಮದುವೆಗೆ ಬೇಕಾದ ಸಿದ್ದತೆಯನ್ನು ಮಾಡಿಕೊಳ್ಳುತ್ತಾನೆ. ಅಪ್ಪನ ಹಿಂದಿನ ಶ್ರಮ, ನೋವು ಯಾರಿಗೂ ತೋರಕೊಡದೆ ಸಂತೋಷದಿಂದ ಮದುವೆ ಮಾಡಿಕೊಡುತ್ತಾನೆ. ಮಗಳಿಗೆ ಸ್ವಲ್ಪೇ ಸ್ವಲ್ಪ ವ್ಯತ್ಯಾಸವಾದರೂ ನೊಂದುಕೊಂಡು ಕಣ್ಣೀರು ಹಾಕುವ ಮಗು ಮನಸ್ಸಿನ ಅಪ್ಪ.
ವಯಸ್ಸಾದಮೇಲೆ ಗಂಡ ಹೆಂಡತಿ ಜೊತೆಗೆ ಓಡಾಡೋದು, ಹರಟೆ ಹೊಡೆಯುವುದು ಕಮ್ಮಿಯಾಗುತ್ತಾ ಹೋಗುತ್ತೇವೆ. ವಯಸ್ಸಿನ ದಂಪತಿಗಳು ಅಲ್ಲಲ್ಲಿ ಅಂದರೆ ಕಲಾಮಂದಿರದಲ್ಲಿ, ಸಿನಿಮಾ ಥಿಯೇಟರ್ ಗಳಲ್ಲಿ, ಹೋಟೇಲಗಳಲ್ಲಿ ಅವರ ಒಡನಾಟ, ಉತ್ಸಾಹ ನೋಡಿದಾಗ ಖುಷಿಯಾಗುತ್ತೆ.
ಆದರೆ ಕೆಲವು ದಂಪತಿಗಳು ಎಲ್ಲೂ ಹೋಗದೆ, ಮಾತುಕತೆ ಇಲ್ಲದೆ, ಮಕ್ಕಳಿಗೆ ಏನು ಮಾಡ್ಲಿಲ್ಲ, ಆದರೆ ಇತ್ತೀಚಿಗೆ ಗಂಡ ಹೆಂಡತಿಯರು ತಮ್ಮಗಾಗಿ ಸಮಯ… ಇನ್ನೂ ಆಸ್ತಿ ಮಾಡಬೇಕಾಗಿತ್ತು ಅನ್ನುವ ಯೋಚನೆಯಲ್ಲಿ ಕಾಲಕಳೆಯುವ ದಂಪತಿಗಳಿಗೆ ಏನನ್ನಬೇಕು?.
ಅನಾರೋಗ್ಯ, ಒಂಟಿತನ,ಮಾನಸಿಕ ತಳಮಳ ಇತ್ಯಾದಿ ಕಾಣಿಸಿಕೊಳ್ಳುವುದು, ಈ ಇಳಿ ವಯಸ್ಸಿನ ದಂಪತಿಗಳಲ್ಲಿ.
- ದೇವರಾಜ ಚಾರ್
