ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೨)

ರಚನಾಳಿಗೆ ದಡ್ಡಿ ಎಂದು ಹೇಳುತ್ತಿದ್ದ ಸಂಬಂಧಿಕರಿಗೆ ವಿಶ್ವನಾಥ್ ಅವರು ಮುಖಕ್ಕೆ ಹೊಡೆದ ಹಾಗೆ ನೇರ ಮಾತಿನಿಂದ ಅವರ ಬಾಯಿ ಮುಚ್ಚಿಸಿ, ಮಗಳಿಗೆ ಆತ್ಮವಿಶ್ವಾಸ ಕುಂದದಂತೆ ನೋಡಿಕೊಂಡರು. ಅಂತ ಧೈರ್ಯ ತುಂಬುತ್ತಿದ್ದ ಅಪ್ಪ ಒಂದು ದಿನ ಇಲ್ಲವಾದ. ಅರ್ಚನಾ ರವಿ ಅವರ ಲೇಖನಿಯಲ್ಲಿ ಮೂಡಿದ ಇದು ಅಪ್ಪ ಮಗಳ ಬಾಂಧವ್ಯದ ಕತೆ, ತಪ್ಪದೆ ಮುಂದೆ ಓದಿ…

ಮನೆಗೆ ಬಂದ ನೆಂಟರ ಚುಚ್ಚು ಮಾತು, ಅಕ್ಕಪಕ್ಕದವರ ಕೊಂಕು ಎಲ್ಲವೂ ಕಿವಿಗೆ ಬಡಿಯುತ್ತಿತ್ತು. ಆದರೂ ಸಹಿಸಿಕೊಂಡರು. ಕೆಲವೊಬ್ಬರು ಪಟ್ಟವು ಕೊಟ್ಟುಬಿಟ್ಟರು ರಚನಾಳಿಗೆ. ದಡ್ಡಿ ಎಂಬ ದೊಡ್ಡ ಸ್ಥಾನ ಅವರ ಪ್ರಕಾರ.

ವಿಶ್ವನಾಥ್ ಅವರ ಕಿವಿಗೆ ಆ ಪದ ಬಿದ್ದಾಗ ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದರು “ದಡ್ಡತನ ಇರುವುದು ನೋಡುವ ಕಣ್ಣುಗಳಲ್ಲಿ, ಆ ರೀತಿ ಯೋಚಿಸುವ ಮನಸ್ಸುಗಳಲ್ಲಿ, ಇಲ್ಲಿ ಯಾರು ದಡ್ಡರಿಲ್ಲ, ಬುದ್ಧಿವಂತರೂ ಇಲ್ಲ. ಬುದ್ಧಿವಂತರು ಯಾರು ಇನ್ನೊಬ್ಬರನ್ನು ಹೀಯಾಳಿಸುವುದಿಲ್ಲ. ದಡ್ಡರನ್ನು ಸೃಷ್ಟಿ ಮಾಡುವುದು ತಾವೇ ಬುದ್ಧಿವಂತರು ಎಂದುಕೊಂಡ ಮಹಾನ್ ಬುದ್ಧಿವಂತರು….” ಅವರ ಆ ಮಾತಿಗೆ ಮತ್ಯಾರು ಹೀಯಾಳಿಸುವ ಕೆಲಸ ಮಾಡಲೇ ಇಲ್ಲ, ಮಾಡಿದರೂ ಇವರ ಕಿವಿಗೆ ತಾಗಲಿಲ್ಲ.

ವಿಶ್ವನಾಥ್ ಅವರದು ಎಲ್ಲಾ ರೀತಿಯ ಮಸಾಲೆಗಳನ್ನು ಮಾರುವ ಅಂಗಡಿ ಅವರೇ ತಯಾರಿಸುವ ಸಾರಿನ ಪುಡಿ, ಹುಳಿ ಪುಡಿ ಜೊತೆಗೆ ಸಣ್ಣಪುಟ್ಟ ಅಡುಗೆ ಕಾರ್ಯಕ್ರಮಗಳನ್ನು ವಹಿಸಿಕೊಂಡು. ಸುತ್ತಮುತ್ತ ಒಳ್ಳೆ ಹೆಸರೇ ಮಾಡಿದರು.

ಅಂದು ಮನೆಯಲ್ಲಿರಲು ಬೇಜಾರಾಗಿ ರಚನಾ, ಅಪ್ಪನ ಅಂಗಡಿಗೆ ಹೋಗಿದ್ದಳು. ವಿಶ್ವನಾಥ್ ಅವರು ಆರ್ಡರ್ ಬಂದಿದೆ ಎಂದು ಮಸಾಲೆ ಪದಾರ್ಥ ಕವರಿಗೆ ತುಂಬುತ್ತಾ ಇದ್ದರು. ಮೊದಲೇ ಪುಟ್ಟ ಅಂಗಡಿ ಜೊತೆಗೆ ವಿಪರೀತ ಶಕೆ, ಮಗಳು ಬಂದಿದ್ದು ನೋಡಿ ಮುದ್ದಾದ ಮುಗುಳ್ನಗೆ ನೀಡಿದರು,ಆದರೆ ರಚನಾ ಮನಸ್ಸು ಮಾತ್ರ ಅಪ್ಪ ಕಷ್ಟಪಡುವುದು ನೋಡಿ ಮನಸ್ಸು ಮರುಗಿತ್ತು.

“ಅಪ್ಪ ಕೊಡಿಲ್ಲಿ ನಾನು ಸಹಾಯ ಮಾಡ್ತೀನಿ…”

“ಏನು ಬೇಡ ಪುಟ್ಟಮ್ಮ ಕಣ್ಣಿಗೆ ತಾಗಿದ್ರೆ ತುಂಬಾ ಉರಿಯಾಗುತ್ತೆ..”ಹಠ ಮಾಡಿ ತಾನು ಅಪ್ಪನಿಗೆ ಸಹಾಯ ಮಾಡಲು ಶುರು ಮಾಡಿದಳು ಸ್ವಲ್ಪ ಹೊತ್ತಿಗೆ ತಿಳಿದುಬಿಟ್ಟಿತ್ತು ಅದೆಷ್ಟು ಕಷ್ಟ ಎಂದು…

ಹೆಚ್ಚು ಕಮ್ಮಿ ಕಾಲ್ ಕಾಲ್ ಕೆಜಿಯ 50 ಪ್ಯಾಕೆಟ್ ಮಸಾಲ ಪಾಕೆಟ್ ತುಂಬಾ ಬೇಕಿತ್ತು. ಬರಿ ಐದು ನಿಮಿಷ ಅವಳು ನೋಡಿದ್ದು ಅಪ್ಪನ ಕಷ್ಟದ ಅರಿವಾಗಿತ್ತು.

ಅಂಗಡಿಗೆ ಯಾರೋ ಬಂದವರು “ಸರಿಯಾಯ್ತು ಬಿಡಿ ಅಲ್ಲಿಗೆ ಹೇಗೂ ಇನ್ನು ಮುಂದೆ ನಿಮ್ಮ ಮಗಳು ಮನೆಯಲ್ಲೇ ಇರ್ತಾಳೆ. ನಿಮಗೆ ಸಹಾಯ ಮಾಡಿಕೊಂಡು.” ಅವರು ಹೇಳಿದ್ದು ಕೊಂಕಲೇ ಅದು ವಿಶ್ವನಾಥ್ ಅವರಿಗೆ ಅರ್ಥವಾಯಿತು ಅವರದು ಮಾಸದ ಮುಗುಳ್ನಗೆ.

“ಮಕ್ಕಳು ಅಪ್ಪ ಅಮ್ಮನಿಗೆ ಸಹಾಯ ಮಾಡಿದರೆ ಅದರಲ್ಲಿ ತೊಂದರೆ ಏನೂ ಇಲ್ಲ. ಬರಿ ಪುಸ್ತಕದ ವಿದ್ಯೆ ಒಂದೇ ಇದ್ರೆ ಸಾಲದು. ಬದುಕು ಹೇಗೆ ನಡೆಸಬೇಕು ಅನ್ನೋ ಪಾಠವು ಮಕ್ಕಳಿಗೆ ತಿಳಿಬೇಕು. ನನ್ನ ಮಗಳು ಅಷ್ಟೇ..! ಅಪ್ಪನ ಕಷ್ಟ ಅವಳ ಬದುಕಿಗೆ ಸ್ಪೂರ್ತಿ ಆಗುತ್ತೆ ಮುಂದೊಂದು ದಿನ ಕಷ್ಟ ಸುಖದ ಪಾಠ ಅವಳಿಗೆ ಗೊತ್ತಾಗುತ್ತೆ…”ಆ ವ್ಯಕ್ತಿಯ ಮಾತು ಅಲ್ಲಿ ನಿಂತು ಹೋಗಿತ್ತು. ಒಂದು ಮಾತನಾಡದೆ ತಮಗೆ ಬೇಕೇದ ಪದಾರ್ಥ ತೆಗೆದುಕೊಂಡು ಹೊರಟು ಹೋಗಿದ್ದರು.

ಆದರೆ ರಚನಾಳ ಮನಸ್ಸಲ್ಲಿ ಮಾತ್ರ ಆ ವ್ಯಕ್ತಿ ಹೇಳಿದ ಮಾತೆ ಮನಸ್ಸಿನ ತುಂಬಾ ಕೊರಿಯುತ್ತಿತ್ತು. ನನ್ನಿಂದ ಅಪ್ಪ ಪ್ರತಿದಿನ ಕೊಂಕು ಕೇಳಿಸಿಕೊಳ್ಳಬೇಕು ಅವಳ ಮನಸ್ಸು ನೊಂದಿದ್ದು ನಿಜಾ.ರಾತ್ರಿ ಎಂಟು ಗಂಟೆ ಊಟಕ್ಕೂ ಬಾರದೆ ನಕ್ಷತ್ರ ನೋಡ್ತ ಕೂತಿರುವ ಮಗಳನ್ನು ನೋಡಿ ಅವಳ ಪಕ್ಕ ಕೂತು ಅವಳ ತಲೆ ಕೂದಲ ಮೇಲೆ ಕೈ ಆಡಿದಾಗ ವಾಸ್ತವ ಅರಿವಾಗಿತ್ತು ರಚನಾಳಿಗೆ..

ನನ್ನ ಮಗಳು ಅಂತದೇನು ಯೋಚನೆ ಮಾಡ್ತಾ ಇದ್ದಾಳೆ, ಅಪ್ಪ ಬಂದು ಪಕ್ಕದಲ್ಲಿ ಕೂತ್ರು ಗಮನಿಸದಷ್ಟು.

“ಅಪ್ಪ ಯಾಕೋ ಬೇಜಾರ್ ಆಗ್ತಿದೆ. ಎಲ್ಲರೂ ಹೇಳಿದ್ದು ಸತ್ಯ ನಾನು ದಡ್ಡಿ ಏನು ಸಾಧನೆ ಮಾಡಕಾಗಲ್ಲ ಅನಿಸ್ತಿದೆ. ಎಲ್ಲರ ಬಾಯಿ ಮುಚ್ಚಿಸುವಂತ ಸಾಧನೆ ನಾನು ಮಾಡಬೇಕು ಅವರ ಹೊಟ್ಟೆ ಊರಿನ ನಾನು ನೋಡಬೇಕು ಹೀಗೆಲ್ಲ ಅನ್ಕೊಂತೀನಿ ಅಪ್ಪ ಆದರೆ ಸ್ವಲ್ಪ ಹೊತ್ತಿಗೆ ಮನಸ್ಸು ನಿನ್ನಿಂದ ಏನು ಸಾಧಿಸಲು ಸಾಧ್ಯವಿಲ್ಲ ಅಂತ ಹಂಗಿಸಿದಂತಾಗುತ್ತದೆ…”ಅವಳ ಮುಖದಲ್ಲಿದ್ದ ಬೇಸರವನ್ನು ಗುರುತಿಸಿದರು ವಿಶ್ವನಾಥ್..

ಅವಳನ್ನು ತನ್ನತ್ತ ತಿರುಗಿಸಿಕೊಂಡು “ಸಾಧನೆ ಅನ್ನೋದು ತಪಸ್ಸು ಪುಟ್ಟ. ಅಷ್ಟು ಬೇಗ ಒಲಿಯೋಲ್ಲ, ಅದಕ್ಕಾಗಿ ಪ್ರತಿದಿನ ಹೋರಾಟ ಮಾಡಲೇಬೇಕು ಸಾಧನೆ ಇನ್ನೊಬ್ಬರ ಕಣ್ಣಿಗಲ್ಲ ಅಥವಾ ಅವರ ಹೊಟ್ಟೆ ಉರಿಗೂ ಅಲ್ಲ ನಮ್ಮ ಮನಸ್ಸಿಗೆ ಸಮಾಧಾನಕ್ಕೆ ಸಾಧನೆ ಆಗಿರಬೇಕು ಹೊರತು, ಮತ್ತೊಬ್ಬರಿಗೆ ತೋರ್ಪಡಿಸೋಕೆ ಅಲ್ಲ. ಅವಮಾನ ನೋವು ಹತಾಶೆ ಇದೆಲ್ಲವೂ ಬದುಕಿನ ಅವಿಭಾಜ್ಯ ಅಂಗ ಅದನ್ನೆಲ್ಲ ಮೆಟ್ಟಿ ನಿಂತಾಗಲೇ ಏನಾದ್ರೂ ಸಾಧಿಸೋಕೆ ಸಾಧ್ಯ ಮೊದಲು ನಿನ್ನ ಮನಸ್ಸಿಗೆ ನಾನು ಏನು ಮಾಡಬೇಕು ಅನ್ನೋದನ್ನ ಕ್ಲಾರಿಟಿ ಸರಿಯಾಗಿ ತಗೋ..”ಹಾಗೆ ಅಂದವರು ಅವಳ ತಲೆ ಕೂದಲನ್ನು ಕೆದರಿ ಹೋಗಿದ್ದರು..ಸ್ವಲ್ಪ ಕಷ್ಟ ಪಟ್ಟು ಗಣಿತ ಆ ವರ್ಷ ಪಾಸಾಗಿದ್ದಳು..

ಆರ್ಟ್ಸ್ ತೆಗೆದುಕೊಂಡಾಗ ರಚನಾಳ ಅಪ್ಪ ಅಮ್ಮ ಕೋಪಗೊಳ್ಳಲಿಲ್ಲ. ಅವಳ ಆಸಕ್ತಿಯಲ್ಲಿ ಅವಳು ಮುಂದುವರೆಯಲಿ ಎಂಬ ಭಾವ.

ಆದರೆ ಅವಳ ಕನಸ್ಸುಗಳೆ ಬೇರೆ, ಪ್ರತಿದಿನ ಒಂದು ಗಂಟೆ ಕಾಲ ಅಪ್ಪನ ಜೊತೆ ಕೆಲಸಕ್ಕೆ ಕೈ ಜೋಡಿಸುತ್ತಿದ್ದಳು. ಮನೆಯಲ್ಲಿ ಅಡುಗೆ ವಹಿಸಿಕೊಂಡಾಗ ಜೊತೆಗೆ ನಿಂತು ಅಪ್ಪನಿಗೆ ಸಹಾಯ ಮಾಡುತ್ತಿದ್ದಳು. ಕಾಲೇಜ್ ರಜೆ ಸಮಯದಲ್ಲಿ ಸೆಕೆಂಡ್ ಇಯರ್ ಪಿಯುಸಿ 65% ನಿಂದ ಪಾಸಾಗಿದ್ದಳು. ವಿಶ್ವನಾಥ್ ಅವರು ತಾವೇ ಸಿಹಿ ತಯಾರಿಸಿ ಪ್ರತಿಯೊಬ್ಬರಿಗೂ ಹಂಚಿಬಿಟ್ಟಿದ್ದರು.

ಎಲ್ಲವು ಚೆನ್ನಾಗಿತ್ತು. ಅಂದು ಅಂಗಡಿಯಲ್ಲಿ ಮಗಳನ್ನು ಕೂರಿಸಿ ಪೇಟೆಗೆಂದು ಹೊರಟಿದ್ದು. ವಿಶ್ವನಾಥ್ ಅವರ ಸೈಕಲ್ಗೆ ಕಾರ್ ಒಂದು ಗುದ್ಧಿ ಕೊಂಡು ಹೋಗಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸಿದರು. ಒಂದಿಷ್ಟು ಸಮಯ ಬದುಕಿದ್ದು ಅಷ್ಟೇ…! ಹೆಂಡತಿ ಹತ್ತಿರ ತೆಗೆದುಕೊಂಡ ಭಾಷೆ ನನ್ನ ಮಗಳ ಕನಸ್ಸುಗಳಿಗೆ ಬೇಲಿ ಹಾಕಬೇಡ ಎಂದು….

ರಚನಾ ಕುಸಿದು ಹೋದಳು. ಅಪ್ಪನ ಅಗಲುವಿಕೆ ಅವಳ ಬದುಕಿಗೆ ದೊಡ್ಡ ಹೊಡೆತವೇ ಬಿದ್ದಿತ್ತು. ಮಾನಸಿಕವಾಗಿ, ದೈಹಿಕವಾಗಿ ಎರಡು ಕಡೆಯಿಂದ ಜಾನಕಿ ಅವರ ಪರಿಸ್ಥಿತಿ ಇನ್ನೂ ಶೋಚನೀಯ. ಒಂದು ಕಡೆ ತನ್ನ ಪ್ರೀತಿಯ ಪತಿ ಕಳೆದುಕೊಂಡರೆ, ಮತ್ತೊಂದು ಕಡೆ ಮಗಳ ಆರೋಗ್ಯ ಕೈಕೊಟ್ಟಿದ್ದು.

ವಿಶ್ವನಾಥ್ ಅವರು ಹೋಗಿ 15 ದಿವಸವಾಗಿತ್ತು. ಇದ್ದಕ್ಕಿದ್ದ ಹಾಗೆ ರಚನಾಳ ಎರಡು ಕಿವಿ ತನ್ನ ಶಕ್ತಿ ಕಳೆದುಕೊಂಡಿತು. ಆಮೇಲೆ ತಿಳಿದಿದ್ದು ಅವಳಿಗೆ ಸಡನ್ ಹಿಯರಿಂಗ್ ಲಾಸ್ ಆಗಿದೆ ಎಂದು. ಒಂದೊಂದು ಹೊಡೆತ ಆ ಮನೆಯಲ್ಲಿ ಇಬ್ಬರನ್ನು ನಲುಗಿಸಿತ್ತು.

ಕಷ್ಟಗಳು ಹಾಗೆ ಒಂದರ ಮೇಲೊಂದು ಬರುತ್ತಲೇ ಇರುತ್ತದೆ, ಮನುಷ್ಯನ ಮನಸ್ಸು ದೃಢತೆಯಿಂದ ಇರಬೇಕು ಅಷ್ಟೇ ಆ ಸಮಯದಲ್ಲಿ…

ಮುಂದುವರೆಯುತ್ತದೆ…


  • ಅರ್ಚನಾ ರವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading