ಸಾಕು ಸಾರ್ಥಕವಾಯಿತು ಪಡೆದ ಆಯುಷ್ಯ…ಇನ್ನು ನನ್ನಿರುವು ಅನಗತ್ಯ…ನನ್ನುಳಿದ ಆಯುಷ್ಯವೂ ನಿಮಗಿರಲಿ..ಕವಿ ಹಾಗೂ ಕಾದಂಬರಿಕಾರರಾದ ಡಾ.ಲಕ್ಷ್ಮಣ ಕೌಂಟೆ ಅವರ ಭಾವನಾತ್ಮಕ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನಾನು ಹಾಗೆ ಹೇಳುವುದಿಲ್ಲ
ಎತ್ತಿನಂತೆ ದುಡಿದೆ
ಕತ್ತೆಯಂತೆ ದುಡಿದೆ
ಕುದುರೆಯಂತೆ ಓಡಿದೆ
ಅದಾದೆ ಇದಾದೆ ಎಂದು..
ಪತಿಯಾಗಿ ಪಥವನರಸಿ
ಕುಟುಂಬ ಕಟ್ಟಿಕೊಂಡೆ
ತಂದೆಯಾಗಿ
ಮಕ್ಕಳ ಜನನಕ್ಕೆ ಕಾರಣನಾದೆ
ಹಡೆದವರಿಗಾಗಿ
ಹುಟ್ಟಿದವರಿಗಾಗಿ ದುಡಿದೆ..
ಸಂಸಾರ ಬಂಡಿ ಬಲುಭಾರ
ಎಳೆದೊಯ್ಯುವ ಸಾಹಸ ಮಾಡಿದೆ
ಅದೆಷ್ಟೇ ಕಷ್ಟವಾದರೂ
ನೋವಾದರೂ
ದುಃಖ ಒತ್ತರಿಸಿ ಬಂದು
ಕುತ್ತಿಗೆ ಬಿಗಿದರೂ
ನುಂಗಿಕೊಂಡು
ಉಸಿರು ಉಳಿಸಿಕೊಂಡೆ
ಮಿತ ಗಳಿಕೆಯಲ್ಲಿ
ನಿಮಗೆ ಏನೇನೋ
ಅಗತ್ಯವಿರುವಷ್ಟು ಕೊಟ್ಟೆ..
ಬಹುಶಃ
ನೋಡಿಕೊಳ್ಳಲಿಲ್ಲವೇನೋ
ಸರಿಯಾಗಿ!
ಆ ಕೊರಗು ನನಗೂ ಇದೆ..
ಕ್ಷಮೆ ಇರಲಿ ಮಕ್ಕಳೇ
ದೊರೆತ
ಆಯುಷ್ಯ ಅರ್ಥಪೂರ್ಣವಾಗಿರಲೆಂದು
ಬಹಳ ಹೆಣಗಾಡಿದೆ..
ನೀವೆಲ್ಲ ದೊಡ್ಡವರಾಗಿರುವಿರಲ್ಲ ಈಗ!!
ದುಡಿಮೆಯನ್ನೂ ಕಲಿಸಿರುವೆ
ಅಥವಾ
ನೀವೇ ಕಲಿತುಕೊಂಡಿರಿ…
ನಿಮ್ಮ ಬದುಕು ಅರ್ಥಪೂರ್ಣವಾಗಿಸಲು
ಜೊತೆಗಾರರ
ಒದಗಿಸಿಕೊಟ್ಟು
ನನ್ನ ಕರ್ತವ್ಯ ಮುಗಿಸಿದೆ
ನೀವು ಮುದ್ದುಮರಿಗಳ
ಹೆತ್ತು ನನ್ನ ಅಜ್ಜನ ಮಾಡಿದಿರಿ
ಸಮಾಜಕ್ಕೇನು ಕೊಟ್ಟೆ
ನನ್ನ ಹೆತ್ತವರಿಗೆ
ಕಲಿಸಿದವರಿಗೆ
ಅದೇನು ಕೊಟ್ಟೆನೋ ನಾನರಿಯೆ
ಸಾಕು ಸಾರ್ಥಕವಾಯಿತು
ಪಡೆದ ಆಯುಷ್ಯ..
ಇನ್ನು ನನ್ನಿರುವು ಅನಗತ್ಯ..
ಬೇಡ ಇನ್ನೇನು ನನಗೆ
ನನ್ನುಳಿದ ಆಯುಷ್ಯವೂ ನಿಮಗಿರಲಿ..
ವಿದಾಯವೊಂದೇ ನನಗಿರಲಿ
- ಡಾ. ಲಕ್ಷ್ಮಣ ಕೌಂಟೆ
