ನೋವಾದಾಗ, ದುಃಖವಾದಾಗ ಅಪ್ಪನ ನೆನಪು ಕಾಡಿದಷ್ಟು ಅಮ್ಮನ ನೆನಪು ಕಾಡಲಿಲ್ಲ. ಅದಕ್ಕೆ ಕಾರಣಗಳಿದ್ದವು. ಶಕುಂತಲಾ ಸವಿ ಅವರ ನೆನಪಿನಂಗಳದಲ್ಲಿ ಅಪ್ಪನ ಪ್ರೀತಿ…
ಜನ್ಮಕ್ಕೆ ಕಾರಣರಾದ ಅಪ್ಪನಿಗೂ, ಅಪ್ಪನಂತೆ ಸಲಹಿದ ಸೋದರ ಮಾವನೀಗೂ, ಅಪ್ಪನಷ್ಟೆ ಪ್ರೀತಿ ಕೊಟ್ಟ ಗಂಡನ ಅಪ್ಪನಿಗೂ ಅಪ್ಪಂದಿರ ದಿನದ ಶುಭಾಶಯಗಳು.
ಶಾಲೆಯಲ್ಲಿ ವಿಷಯ ಕೊಟ್ಟು ಪ್ರಬಂಧ ಬರೆಯಿರಿ ಎಂದರೆ ಮಾರ್ಕ್ಸಿಗೋಸ್ಕರವಾದರೂ ಬೇಕಾದದ್ದು ಬೇಡವಾದದ್ದು ಎಲ್ಲವನ್ನು ಬರೆದು ತುಂಬುವ ನಾವು….ಇಲ್ಲಿ ಕೈ ಓಡುವುದೇ ಇಲ್ಲ…
ಅಕ್ಕರೆಯಿಂದ ಆಸ್ತೆಯಿಂದ ಬರೆಯಲು ಅಣಿ ಯಾಗುತ್ತೇವೆ ಎನ್ನುವುದಕ್ಕಿಂತ ಕಣ್ಣಿರಿಂದ ಕಣ್ಣು ಮಂಜಾಗುವುದೇ ಜಾಸ್ತಿ.
ಅಪ್ಪ…ಅಪ್ಪ… ಏನೆಂದು ಬರೆಯುವುದು …ಎಲ್ಲಿ ತಪ್ಪಾಗುತ್ತದೋ ಬರೆದರೆ, ಅವರ ಪ್ರೀತಿ ಅವಮಾನಿಸಿದಂತಾಗುತ್ತದೋ….ಎಂಬ ಚಿಕ್ಕ ಕಳವಳ ಮನದ ಮೂಲೆಯಲ್ಲಿದೆ.
ನಾನು 5 ವರ್ಷವಿರುವಾಗಲೇ ಅಮ್ಮನನ್ನು ಕಳೆದುಕೊಂಡು ಅಪ್ಪನ ಮಡಿಲಿಗೆ ಬಿದ್ದವಳು. ಅಕ್ಕ, ತಮ್ಮ ಇದ್ದರೂ ಅಪ್ಪನನ್ನು ಮಿಸ್ಸ್ ಮಾಡಿಕೊಂಡಷ್ಟು ಅಕ್ಕ ತಮ್ಮರ ಪ್ರೀತಿಬೇಕು ಅನ್ನಿಸುವುದಿಲ್ಲ. ನಾವು ಮಕ್ಕಳೆಲ್ಲ ಚಿಕ್ಕವರಿದ್ದರೂ ಯಾರು ಎಷ್ಟ್ ಹೇಳಿದರೂ ಯಾಕೋ ಏನೋ ಅಪ್ಪ 2 ನೆ ಮದುವೆಗೆ ಮನಸ್ಸೇ ಮಾಡಲಿಲ್ಲ. ಅಮ್ಮ ಜಾಸ್ತಿ ದಿನ ಬದುಕುವುದಿಲ್ಲ ಯಾವಾಗ ಬೇಕಾದರೂ ನಮ್ಮನ್ನೆಲ್ಲ ಆಗಲಿ ಹೋಗಬಹುದು ಅಂಥ ಅಪ್ಪ ಮೊದಲೇ ನಮ್ಮನ್ನು ಪ್ರಿಪೇರ್ ಮಾಡಿದ್ದರು ಅಂದರೆ ತಪ್ಪಾಗಲಿಕ್ಕಿಲ್ಲ. ಹಾಗಾಗಿ ಅಮ್ಮ ಹೋದಾಗ ನನಗೆ ಅಳು ಬರಲೇ ಇಲ್ಲ. ಆದರೆ ಹೆಣ ತೆಗೆದುಕೊಂಡು ಹೋಗುವಾಗ ಅಪ್ಪ ಕಣ್ಣೀರಿಟ್ಟರಲ್ಲ ಆಗ ನನಗೆ ಅಳು ತಡೆಯಲು ಆಗಲಿಲ್ಲ. ನಾನು ನೋಡಿದಾಗಿನಿಂದ ಅಮ್ಮ ಪಾರ್ಶ್ವವಾಯು ಆಗಿ ಬೆಡ್ ನಲ್ಲೇ ಇದ್ದರು. ಹಾಗಾಗಿ ನಮ್ಮ ದೈನಂದಿನ ಕೆಲಸಗಳನ್ನು ಅಪ್ಪನೆ ಮಾಡುತ್ತಿದ್ದರು. ಯಾವತ್ತೂ ಅವರು ಮನೆ ಕೆಲಸ, ಅಡುಗೆ ಕೆಲ್ಸ ಮಕ್ಕಳು ನೋಡಿಕೊಳ್ಳಬೇಕು ಅಂಥ ಒಂದು ದಿನವೂ ಸಿಡುಕಿದವರಲ್ಲ, ಬೇಜಾರು ಮಾಡಿಕೊಂಡವರು ಅಲ್ಲ. ನನಗೆ ಆಗೋಲ್ಲ ಏನಾದ್ರು ಮಾಡಿಕೊಳ್ಳಿ ಅಂಥ ಹೇಳಿದವರು ಅಲ್ಲ.

ಅಮ್ಮ ಹೋದಮೇಲೂ ಯಾರ್ ಎಷ್ಟ್ ಹೇಳುದರು ಮರು ಮದುವೆ ಗೆ ಸಿದ್ಧವಾಗಲಿಲ್ಲ. ಆಗಿ ಅಂಥ ಹೇಳುವ ವಯಸ್ಸು ನಮ್ಮದಲ್ಲ. ಅದರ ಬಗ್ಗೆ ಏನು ಗೊತ್ತಿಲ್ವೆ ನಮಗೆ. ಅಪ್ಪ ಮೈಸೂರು ಅರಮನೆ ಆಸ್ಥಾನ ಪುರೋಹಿತರಾಗಿದ್ದರು. ಜಯಚಾಮರಾಜ ಒಡೆಯರ್ ತೀರಿ ಹೋದಮೇಲೆ 6 ತಿಂಗಳು ಅರಮನೆ ಒಳಗಿನ ಗಾಯತ್ರಿ ದೇವಸ್ಥಾನದಲ್ಲಿ ಪೌರೋಹಿತ್ಯ ವಹಿಸಿಕೊಂಡಿದ್ದರು. ಯಾಕೋ ಮತ್ತೆ ನಡೆದ ವಿಧ್ಯಮಾನಗಳಿಂದ ಬೇಸತ್ತು ಶ್ರೀಕಂಠ ದತ್ತ ಮಹಾರಾಜರು ಎಷ್ಟ್ ಹೇಳಿದರೂ ಕೇಳದೆ ಬೇಕಾದಾಗ ಹೇಳಿ ಕಳುಹಿಸಿ ಬರುತ್ತೇನೆ ಎಂದು .ಆ ಕೆಲಸಕ್ಕೂ ರಾಜಿನಾಮೇ ಕೊಟ್ಟು ಕೆಲವೊಂದು ಮನೆಗಳ ಫ್ಯಾಮಿಲಿ ಪುರೋಹಿತರಾದರು. ಯಾವಾಗಲೂ ತಿರುಗಾಟದಲ್ಲೇ ಜಾಸ್ತಿ ಇರುತ್ತಿದ್ದರು. ಹಾಗಾಗಿ ಸ್ವಲ್ಪ ವರ್ಷ ನಮ್ಮನ್ನು ಹಾಸ್ಟೆಲ್, ಅಮ್ಮನ ಅಮ್ಮನ (ಅಜ್ಜಿ) ಮನೆ ಅಂಥ ಬೆಳೆಯಲು ಬಿಟ್ಟರು. ಆಗಲೇ ಹೊರಗಿನ ಪ್ರಪಂಚ ಹೇಗಿದೆ ಎಂದು ತಿಳಿದದ್ದು.
ಅಜ್ಜಿ ತಾತ ಇಬ್ಬರೂ ಇಲ್ಲದಿದ್ದರೂ ಸೋದರ ಮಾವಂದಿರು ಇಬ್ಬರು ನಿಜವಾಗ್ಲೂ ಚೆನ್ನಾಗಿ ಅಪ್ಪನ ಪ್ರೀತಿ ತೋರಿಸಿದರು. ಅಪ್ಪ ಅಮ್ಮ ಮತ್ತು ಮಕ್ಕಳ ನಡುವಿನ ಪ್ರೀತಿ ಹೇಗಿರುತ್ತದೆ ಎಂದು ಕಲಿತದ್ದೇ ಅಲ್ಲಿ ನಾನು. ಅಲ್ಲೂ ಕೂಡ ಮಾವಂದಿರು ಒಬ್ಬೊಬ್ಬರಾಗಿ ನಮ್ಮನ್ನು ಬಿಟ್ಟು ಅಗಲಿದಾಗ ಅತ್ತೆಯರ ಮಾತು ಕೇಳದೆ ಹಠ ಮಾಡಿ ವಾಪಸ್ ಮೈಸೂರಿಗೆ ಅಪ್ಪನ ಮನೆಗೆ ಬಂದೆ. ಮನೆಯಲ್ಲಿ ಅಪ್ಪ ಮಗಳು ಇಬ್ಬರೇ ಇದ್ದೆವು. ನಾವೆಲ್ಲ ಅಜ್ಜಿ ಮನೆ, ಹಾಸ್ಟೆಲ್ ಅಂಥ ಇದ್ವಿ ಅವರು ಮದುವೆ ಆಗಿ ಸಂಸಾರಸ್ಥರು ಅಗಬಹುದಿತ್ತು. ಅಪ್ಪನ ವಿದ್ವತ್ ಗೆ , ರೂಪಕ್ಕೆ, ಹಣ ಅಂತಸ್ತಿಗೆ ಹೆಣ್ಣು ಕೊಡುವವರು ಎಷ್ಟೊಂದು ಜನ ಇದ್ದರೂ ಅಪ್ಪ ಯಾಕೆ ಮದುವೆ ಆಗಲಿಲ್ಲ? ಎಂದು ಮನಸ್ಸಲ್ಲೇ ಸಾಕಷ್ಟು ಬಾರಿ ಅನಿಸಿದ್ದು ಇತ್ತು.
ನಾನು ದೊಡ್ಡವಳಾದರೂ ಅಪ್ಪ ಈಗಲೂ ಮಗಳು ಕಾಲೇಜ್, ಟೈಪಿಂಗ್ ಅಂತೆಲ್ಲ ಹೋಗ್ತಾಳೆ ಅಂಥ ಅವರೇ ಮನೆ ಕೆಲಸ, ಅಡುಗೆ ಕೆಲಸ ಎಲ್ಲ ಮಾಡುತ್ತಿದ್ದರು. ಅಪ್ಪನ ಮಡಿಲಲ್ಲಿ ಮಲಗುತಿದ್ದೆ. ಒಂದು ಕೆಲಸ ಕೂಡ ಮಾಡಿಸುತ್ತಿರಲಿಲ್ಲ. ಒಂದು ದಿನವೂ ಗದರಿಸಿದವರಲ್ಲ. ತಿಂಗಳ ದಿನಗಳಲ್ಲಂತೂ ಜೋಪಾನ ಮಾಡಿದ್ದು ನೆನೆಸಿಕೊಂಡರೆ ಈಗಲೂ ಕಣ್ಣು ತುಂಬುತ್ತದೆ.

ಅಕ್ಕನಿಗೆ ಮದುವೆ ಆಗಿ ಮೂರೂ ಮಕ್ಕಳು ಕೂಡ ಆಗಿತ್ತು. ಆಕೆ ಮನೆಗೆ ಬರುತ್ತಿದ್ದದ್ದೇ ಅಪರೂಪವಾಗಿತ್ತು.
ಅಪ್ಪ ಅಷ್ಟು ದೊಡ್ಡ ಜ್ಯೋತಿಷ್ಯವಿದ್ವಾನ್ ಆಗಿದ್ದರಿಂದ ಮನೆ ಮುಂದೆ ಜನರ ಕ್ಯೂ ಇರುತ್ತಿತ್ತು. ಈಗಿನ ಟಿವಿಯಲ್ಲಿ ಬರುವ ಜ್ಯೋತಿಷ್ಯರನ್ನು ಅಪ್ಪನ ನೆನಪಾಗುತ್ತದೆ. ನಾವು ಜೋತಿಷ್ಯ ಕಲಿಯಬೇಕಿತ್ತು ಎನ್ನುವ ಅಳುಕು ಇದೆ. ಆದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು? ಅಮ್ಮ ಇಲ್ಲದೆ ಇಲ್ಲದ್ದರಿಂದ ಚಿಕ್ಕ ವಯಸ್ಸಿಗೇ ಎಷ್ಟೆಲ್ಲ ಊರು, ಜನ, ಜೀವನ , ನಡವಳಿಕೆ, ಸಂಬಂಧಗಳ ಮೌಲ್ಯ ಎಲ್ಲವನ್ನು ಕಂಡುಕೊಂಡೇ.
ಆದರೆ ಅಪ್ಪನೊಡನೆ ತುಂಬಾ ವರ್ಷ ಇರುವ ಭಾಗ್ಯ ನನಗಿರಲಿಲ್ಲ. ಜೀವನದ ಮೊದಲ 5 ವರ್ಷ ಯೌವನ್ನಾವಸ್ಥೆಯ ಕೊನೆಯ 3 ವರ್ಷ ವಷ್ಟೇ ನಾನು ಅಪ್ಪನ ಪ್ರೀತಿಯನ್ನು ಪಡೆಯುವಂತಾಯಿತು. ಅಪ್ಪನ ಬಗ್ಗೆ ಎಷ್ಟೇ ಬರೆದರೂ ಕಮ್ಮಿ. ಅವನೊಂದು ಆಕಾಶ, ನಿರಂತರ ಪ್ರವಹಿಸುವ ನದಿ. ತನ್ನೊಳಗೆ ಎಲ್ಲವನ್ನು ಬಚ್ಚಿಟ್ಟು ಕೊಂಡು ಮೇಲೆ ಏನೂ ಆಗದಿರುವಂತೆ ಮುಖವಾಡ ಹಾಕಿ ಸ್ಥಬ್ಧನಾಗಿರುತ್ತಾನೆ. ಸಾಗರದ ಒಳ ಹೊಕ್ಕರೆ ಹೇಗೆ ಮುತ್ತು ಗಳು ಸಿಗುತ್ತವೆಯೋ ಹಾಗೆ ಅಪ್ಪನನ್ನು ಅರಿಯಲು ಪ್ರಯತ್ನಿಸಿದಷ್ಟು ಅವನು ಅರ್ಥವಾಗುವುದಿಲ್ಲ.
ಆಪ್ಪನನ್ನು ಮಿಸ್ಸ್ ಮಾಡಿಕೊಂಡಷ್ಟು ನಾನು ಅಮ್ಮನನ್ನು ಮಿಸ್ಸ್ ಮಾಡಿಕೊಂಡಿಲ್ಲ. ನೋವಾದಾಗ, ತಾಳಿ ಕಟ್ಟಿಸಿಕೊಳ್ಳುವಾಗ, ಲೇಬರ್ ವಾರ್ಡ್ ನಲ್ಲಿ, ಮಗನ ಉಪನಯನದಲ್ಲಿ, ಮಕ್ಕಳು ಡಿಸ್ಟಿಂಕ್ಷನ್ ಪಾಸ್ ಆಗಿ ಪೇಪರ್ ನಲ್ಲಿ ಫೋಟೋ ಬಂದಾಗ, ಮಗಳ ಮದುವೆ ಸಂಭ್ರಮದಲ್ಲಿ ಹೀಗೆ ಎಲ್ಲ ನೋವು ನಲಿವಿನಲ್ಲೂ ಅಪ್ಪ ನೀನಿರಬೇಕಿತ್ತು ಈಗ …ನಿನ್ನಿದ್ದಿದ್ದರೆ ನನ್ನ ಜೀವನ ಹೀಗೆ ಇರುತ್ತಿತ್ತಾ ಅಂಥ ಅಂದು ಕೊಳ್ಳುತ್ತೇನೆ ಹೊರತು ಅಮ್ಮ ನನ್ನು ಕರೆಯುವುದು ಕಮ್ಮಿ.
ಅವರ ಕೊನೆಯ ದಿನಗಳಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾಗ ಅವರ ಸೇವೆ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ಈ ಮಾರ್ಚ್ ಗೆ ಅಪ್ಪನಿಲ್ಲದೆ 30 ವರ್ಷಗಳು ಕಳೆದು ಹೋದವು. ಆದರೆ ಹಾಗೆ ಅನ್ನಿಸುವುದೇ ಇಲ್ಲ. ಮೊನ್ನೆ ಮೊನ್ನೆ ಇನ್ನು ಅಪ್ಪನ ಕೈತುತ್ತು ತಿಂದ ಅನುಭವ.
ಅಪ್ಪ ಮಗಳ ಅವಿನಾಭಾವ ಸಂಬಂಧದ ಬಗ್ಗೆ ಎಷ್ಟು ಬರೆದರೂ ಹೇಳಿದರು ಕಮ್ಮಿಯೇ. ಕಣ್ತುಂಬಿ ಬರಲು ಏನು ಬರೆಯಲು ಆಗುತ್ತಿಲ್ಲ. ಲವ್ ಯೂ ಅಪ್ಪ …
ಇನ್ನೊಂದು ಜನ್ಮ ಇದ್ದರೆ ನಿನ್ನ ಮಗಳಾಗಿಯೇ ಹುಟ್ಟಿ ಋಣ ತೀರಿಸಲು ಇಚ್ಛಿಸುತ್ತೇನೆ ಅಪ್ಪಾ ..
- ಶಕುಂತಲಾ ಸವಿ
