ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ …ಅನ್ನಿಸ್ತಾನೇ ಇರುತ್ತೆ. ಅಪ್ಪನೊಂದಿಗಿನ ಒಡನಾಟವನ್ನು ಅಪ್ಪಂದಿರ ದಿನದಂದು ಸುಜಾತಾ ರವೀಶ್ ಅವರು ನೆನಪಿಸಿಕೊಂಡಿದ್ದಾರೆ, ಅಪ್ಪನ ಮೇಲಿನ ಪ್ರೀತಿಯ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಹೆಂಗರುಳಿನ ಮಮತಾಮೂರ್ತಿ
ಸಾಮಾನ್ಯ ಭಾವನೆ ಏನಪ್ಪಾ ಅಂದರೆ ಅಮ್ಮನೆಂದರೆ ವಾತ್ಸಲ್ಯದ ಕಡಲು. ಅಪ್ಪ ಶಿಸ್ತು ಜಾಸ್ತಿ ಸಲಿಗೆ ಕಡಿಮೆ ಅಂತ. ಆದರೆ ನನ್ನಪ್ಪನೊಡನೆ ಒಡನಾಟ ಜಾಸ್ತಿ ನನಗೆ. ಭಯವಿತ್ತು ಆದರೆ ತಪ್ಪು ಮಾಡಿದಾಗ ಮಾತ್ರ . ಕೋಪ ಬಂದಾಗ ಎಷ್ಟು ಕಠಿಣವಾಗಿ ವರ್ತಿಸುತ್ತಿದ್ದರೋ ಅಷ್ಟೇ ನಂತರ ಕಾರುಣ್ಯದ ಮೂರ್ತಿ ಸಹ. ಹೆಚ್ಚು ಸಿಟ್ಟು ಬರಿಸದೇ ವಿಧೇಯಳಾಗಿರುತ್ತಿದ್ದ ನನಗೆ ಹೆದರುವ ಪ್ರಸಂಗಾನೂ ಕಮ್ಮಿ ಮತ್ತೆ ತುಂಬಾ ಸೂಕ್ಷ್ಮ ಸಂವೇದಿ ನನ್ನ ಅಣ್ಣ. ಹೆಂಗರಳು ಸಹ .ಅದಕ್ಕೆ ಪೂರಕವಾಗಿ ಈ ಸಂದರ್ಭಗಳನ್ನು ನೆನಪಿಸಿಕೊಳ್ಳಬೇಕು.
ನಾನು ಐದಾರು ವರ್ಷದವಳು. ಅಣ್ಣಾ ಮದರಾಸಿಗೆ ಆಗಾಗ ಕೆಲಸದ ಪ್ರಯುಕ್ತ ಹೋಗುತ್ತಿದ್ದರು. ಅಲ್ಲಿ ಚಿಕ್ಕ ಮಕ್ಕಳು ಉಡುವ ಪುಟ್ಟ ಸೀರೆ ದೊರೆಯುತ್ತಿತ್ತು. ಪಕ್ಕದ ಮನೆಯವರ ನನ್ನದೇ ವಯಸ್ಸಿನ ಅವರ ಮಗಳಿಗೆ ಅದನ್ನು ತಂದು ಕೊಡಿ ಎಂದಾಗ ಈ ಬಾರಿ ಆ ಕಡೆ ಹೋಗಲ್ಲ ಮುಂದಿನ ಸಾರಿ ತಂದು ಕೊಡುವೆ ಎಂದರು. ಯಾಕೆ ಹೀಗೆ ನೆಪ ಹೇಳಿದರು ಎಂದು ಅಮ್ಮನಿಗೆ ಅರ್ಥವಾಗಲಿಲ್ಲ. ಅಣ್ಣನ ಕೇಳಿದಾಗ “ಅವರ ಮಗಳಿಗೆ ತಂದುಕೊಟ್ಟು ಸುಜಾತಂಗೆ ತರದಿದ್ರೆ ಪಾಪ ಅವಳಿಗೆ ಎಷ್ಟು ಬೇಸರವಾಗಬಹುದು ಊಹಿಸಿದ್ದೀಯಾ? ಮುಂದಿನ ಬಾರಿಯಷ್ಟು ಹೊತ್ತಿಗೆ ದುಡ್ಡು ಹೊಂದಿಸಿಕೊಂಡು ಇಬ್ಬರಿಗೂ ತರ್ತೀನಿ” ಅಂದಿದ್ದನ್ನ ನಾನೇ ಕೇಳಿಸಿಕೊಂಡಿದ್ದೆ. ಅವರು ದುಡ್ಡು ಕೊಟ್ಟು ತರಿಸಿಕೊಂಡರು ನಮ್ಮ ಅಣ್ಣನ ಬಳಿ ದುಡ್ಡಿಲ್ಲ ಅದಕ್ಕೆ ತರಲಿಲ್ಲ ಎಂದು ಅರ್ಥ ಮಾಡಿಕೊಳ್ಳುವ ವಯಸ್ಸು ಖಂಡಿತ ಅದಾಗಿರಲಿಲ್ಲ. ನಂತರ ಸ್ವಲ್ಪ ದೊಡ್ಡವಳಾದ ಮೇಲೆ ಅವರ ಆ ಸೂಕ್ಷ್ಮ ಅರ್ಥೈಸುವಿಕೆ ಪರಾನುಭೂತಿ ಮತ್ತು ಅದರ ಹಿಂದಿನ ನನ್ನ ಬಗೆಯ ಪ್ರೀತಿಯ ಆಳ ಅರ್ಥವಾಗಿತ್ತು. ಅದಕ್ಕೇ ನನ್ನ ಅಣ್ಣ ಯಾವಾಗಲೂ ಗ್ರೇಟ್ ಅನ್ನೋದು ನಾನು.

ಮತ್ತೊಂದು ಸಂದರ್ಭ ನನ್ನ ಮೊದಲನೆಯ ತಂಗಿಯ ಮದುವೆ ಆಗಷ್ಟೇ ಮುಗಿದಿತ್ತು. ನಾವಾಗ ಸಕಲೇಶಪುರದಲ್ಲಿ ಉದ್ಯೋಗನಿಮಿತ್ತ ಇದ್ದೆವು. ಮದುವೆಯಾಗಿ ೪ ಅಥವಾ ೫ ದಿನಗಳ ನಂತರ ಹಿಂದಿರುಗಿದ್ದು. ಮದುವೆಯ ತಿಂಡಿಗಳ ಒಂದು ದೊಡ್ಡ ಬ್ಯಾಗ್ ಅಣ್ಣನೇ ಪ್ಯಾಕ್ ಮಾಡಿದ್ದರು. ಬೆಳಗಿನ ಜಾವ ಹೊರಡುವಾಗ ಆ ಬ್ಯಾಗ್ ಮರೆತುಹೋಯಿತು. ಕಚೇರಿಯಿಂದ ಸಂಜೆ ಮನೆಗೆ ಹಿಂದಿರುಗಿದಾಗಲೇನಮಗೆ ಇದು ತಿಳಿದದ್ದು. ತಕ್ಷಣ ಮನೆಗೆ ಮೈಸೂರಿಗೆ ಫೋನಾಯಿಸಿ “ಇನ್ನೆರಡು ದಿನದಲ್ಲಿ ಮತ್ತೆ ಬರಬೇಕು ಆಗ ಕೊಂಡೊಯ್ಯುವೆ “ಎಂದರೆ ಅಷ್ಟರಲ್ಲಾಗಲೇ ಬ್ಯಾಗ್ ನನಗೆ ತಲುಪಿಸಲು ಅಣ್ಣ ಸಕಲೇಶಪುರಕ್ಕೆ ಹೊರಟಾಗಿತ್ತು . ಮದುವೆಯ ಆಯಾಸ ಇನ್ನೂ ಕಡಿಮೆಯಾಗಿರಲಿಲ್ಲ. ಆದರೂ ನಾನು ತಿನ್ನಲಿ ಎಂಬ ಮಮತೆ ಈ ಕಾಳಜಿ ಕಕ್ಕುಲಾತಿ ಹೆಂಗರುಳಿನ ನನ್ನ ಅಣ್ಣನಿಗಲ್ಲದೆ ಇನ್ನಾರಿಗೆ ಇರಲು ಸಾಧ್ಯ? ಅದಕ್ಕೆ ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ ಅನ್ನಿಸ್ತಾನೇ ಇರೋದು.
ಮೊಗೆಯುತ್ತಾ ಹೋದರೆ ಬತ್ತದ ಒರತೆ ಅಣ್ಣನೊಡನಿನ ಆ ಸವಿ ಮಧುರ ಗಳಿಗೆಗಳು. ಈಗ ಬರೀ ಮೆಲಕು ಹಾಕುವುದಷ್ಟೇ ನನಗೆ ಉಳಿದಿರುವುದು.
- ಸುಜಾತಾ ರವೀಶ್
