“ಅಪ್ಪನೆಂಬ ಅದ್ಭುತ” ಕವನ

ಅಪ್ಪನೆಂಬ ಅದ್ಭುತವೇ ಹಾಗೆ ಅವ್ಯಕ್ತ, ಅವರ್ಣನೀಯ. ಅದೇಕೋ ಅಮ್ಮನ ಪ್ರೀತಿ, ಮಮತೆ ಕಂಡಷ್ಟು ನಮಗೆ ಅಪ್ಪನ ತ್ಯಾಗ, ಪರಿಶ್ರಮ ಕಾಣುವುದೇ ಇಲ್ಲ, ಅಮ್ಮನ ಕಂಬನಿ ಮಿಡಿಯುವಷ್ಟು ಅಪ್ಪನ ಬೆವರಹನಿ ಗಮನಿಸುವುದೇ ಇಲ್ಲ, ಎಲ್ಲರ ನಲಿವಿನಲೆಯಡಿಯಲಿ ಅಪ್ಪನ ನೋವಿನಲೆಗಳು ನಮಗೆ ಅಪ್ಪಳಿಸುವುದೇ ಇಲ್ಲ. ಒಳಗೆ ಅದೆಷ್ಟೇ ತಲ್ಲಣಗಳಿದ್ದರೂ ಅವನು ಜಗದೆದುರು ಹೇಳಿಕೊಳ್ಳುವುದೇ ಇಲ್ಲ. ತನ್ನ ಇಡೀ ಬದುಕನ್ನೇ ನಮಗಾಗಿ ಮೀಸಲಿಟ್ಟು ಕಾಯ್ವ ಅಪ್ಪ ನಮಗೆಂದೂ ಅರ್ಥೈಸಲೇ ಇಲ್ಲ,ಇಂದಿಗೂ ಅರ್ಥವಾಗುತ್ತಲೇ ಇಲ್ಲ.
“ವಿಶ್ವದೆಲ್ಲರಿಗೂ ಅಪ್ಪಂದಿರ ದಿನದ ಶುಭಕಾಮನೆಗಳು”

ಬೆರಳಿಡಿದು ಹೆಜ್ಜೆ ಹಾಕುತ್ತಿದ್ದ
ಕೈಗಳಿಂದೇಕೋ ನಡುಗುತ್ತಿದೆ
ಹಿಡಿಯಲು ಶಕ್ತಿಯಿಲ್ಲದಂತಾಗಿದೆ
ಅದೇಕೋ ಅಪ್ಪಾ ಮೊದಲಿನಂತಿಲ್ಲ.!

ಕೂಸುಮರಿ ಮಾಡುತ್ತಿದ್ದ
ಹೆಗಲಿಂದೇಕೋ ಬಾಗುತ್ತಿದೆ
ಹೊರಲು ನಿತ್ರಾಣವಾಗುತ್ತಿದೆ
ಅದೇಕೋ ಅಪ್ಪಾ ಮೊದಲಿನಂತಿಲ್ಲ.!

ಮುದ್ಧು ಮಾಡಿ ಆಡುತ್ತಿದ್ದ
ಮಾತುಗಳಿಂದೇಕೋ ತೊದಲುತ್ತಿದೆ
ತುಟಿಗಳು ಅದರುತ್ತಿವೆ
ಅದೇಕೋ ಅಪ್ಪಾ ಮೊದಲಿನಂತಿಲ್ಲ.!

ಅಕ್ಕರೆಯಲಿ ಚೆಲ್ಲುತ್ತಿದ್ದ
ನಗುವಿನಲ್ಲಿಂದೇಕೋ ಚೈತನ್ಯವಿಲ್ಲ
ನಗುವು ಮಾಸಿ ಹೋಗುತಿದೆ
ಅದೇಕೋ ಅಪ್ಪಾ ಮೊದಲಿನಂತಿಲ್ಲ.!

ಇಡೀ ಜಗತ್ತನ್ನೇ ತೋರುತ್ತಿದ್ದ
ಕಂಗಳಕಾಂತಿಯಿಂದೇಕೋ ಕುಗ್ಗುತ್ತಿದೆ
ನೋಟವು ಕ್ಷೀಣಿಸುತ್ತಿದೆ
ಅದೇಕೋ ಅಪ್ಪಾ ಮೊದಲಿನಂತಿಲ್ಲ.!

ಅವನಿಗೂ ವಯಸ್ಸು ಮಾಗುತಿದೆ
ಅವನಿಗೂ ಸಮಯ ಸರಿಯುತಿದೆ
ಅವನಿಗೂ ದಿನಗಳು ಕಳೆಯುತಿವೆ
ಆದರೆಂದೂ ಜಗಕೆ ತೋರ್ಪಡಿಸಲಿಲ್ಲ.!

ಹೊತ್ತ ಹೊರೆಭಾರವ ಕೆಳಗಿಳಿಸಲಿಲ್ಲ
ಹೊದ್ದ ಎದೆಭಾರವ ಹೇಳಿಕೊಳ್ಳಲಿಲ್ಲ
ಸ್ವಾಭಿಮಾನದ ಗಂಟು ಸಡಿಸಲಿಲ್ಲ
ಬಿಗುಮಾನವ ಬಿಟ್ಟು ಬದುಕಲಿಲ್ಲ.!

ಈಗಲೂ ಇಂದಿಗೂ ನಮ್ಮೆಲ್ಲರಿಗಾಗಿ
ತನ್ನ ಜೀವ ಸವೆಸುತ್ತಲೇ ಇದ್ದಾನೆ.!
ನಿತ್ಯನಿರಂತರ ನಮ್ಮೆಲ್ಲರ ಒಳಿತಿಗಾಗಿ
ತನ್ನ ಬದುಕನ್ನೇ ಪಣವಾಗಿಸಿದ್ದಾನೆ.!!


  • ರಶ್ಮಿಪ್ರಸಾದ್ (ರಾಶಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading