ಅಪ್ಪ ಬದುಕನ್ನು ಕಟ್ಟಿಕೊಳ್ಳಲು ಹೋರಾಡಿದ ಕತೆಯಿದು..ಪ್ರತಿ ಅಪ್ಪನ ತ್ಯಾಗ,ಕಷ್ಟದ ಹಿಂದೆ ಹತ್ತಾರು ಕತೆಗಳಿವೆ. ನಿಮ್ಮಲ್ಲೂ ಕತೆಗಳಿದ್ದರೆ ಹಂಚಿಕೊಳ್ಳಿ… ಮುಂದೆ ಓದಿ…
ಪ್ರತಿಯೊಬ್ಬರ ಜೀವನದಲ್ಲೂ ಬದುಕು ಕಟ್ಟಿಕೊಡುವ ವ್ಯಕ್ತಿ ಎಂದರೆ ಅಪ್ಪ. ಹಾಗೆಯೇ ಬಹಳ ದಿನಗಳಿಂದ ಹೇಳಬೇಕೆಂದು ಆರಿಸಿಟ್ಟ ವಿಷಯ ನಮ್ಮ ಅಪ್ಪ ನಾಗಪ್ಪ ಹೆಗಡೆಯವರ ಹೋರಾಟದ ಬದುಕು.
ನನ್ನಜ್ಜ ತಮ್ಮಯ್ಯ ಹೆಗಡೆಯವರು ಮೇಗರವಳ್ಳಿಯ ಕೆಳಗಿನಮನೆಯವರು. ಅಜ್ಜಿ ಕಮಲಮ್ಮ, ನನ್ನಪ್ಪ ಹುಟ್ಟಿ ಎರಡು ವರ್ಷದೊಳಗೇ ಯಾವುದೋ ಕಾಯಿಲೆಯಿಂದ ಮೃತಪಟ್ಟಾಗ ಅವರ ತಂಗಿಯನ್ನು ಮದುವೆಯಾದರು ಅಜ್ಜ. ಈ ವಿಷಯ ತಿಳಿದದ್ದು ನನಗೆ ಇತ್ತೀಚೆಗೆ, ಯಾಕೆಂದರೆ ತಾಯಿ ಮೃತಪಟ್ಟ ದುಃಖ ಸ್ವಲ್ಪವೂ ಭಾದಿಸದಂತೆ ತನ್ನ ಮಕ್ಕಳಂತೆಯೇ ನನ್ನಪ್ಪನನ್ನು ಬೆಳೆಸಿದ್ದರು ಚಿಕ್ಕಮ್ಮ. ಆ ಕೇರಿಗೆ ನನ್ನಪ್ಪ ಹಿರಿಯವರಾದ ಕಾರಣ ಊರಿನವರು ಅವರನ್ನು “ಅಣ್ಣ” ಎಂದು ಕರೆಯುವುದು, ಈಗಲೂ ಕೂಡ ಆ ಊರಿನಲ್ಲಿ ಇವರ ಹೆಸರು ಅಣ್ಣ ಅಂತಲೇ.ಹಾಗಾಗಿ ನಾನೂ ಕೂಡ ಅವರನ್ನು “ಅಣ್ಣ”( ಅಪ್ಪ ಅನ್ನಲ್ಲ) ಅಂತಲೇ ಕರೆದೆ. ಒಟ್ಟು ಏಳು ಜನ ಮಕ್ಕಳಲ್ಲಿ ನಾಲ್ಕು ಗಂಡು, ಮೂರು ಹೆಣ್ಣು. ಆಗ ಮನೆಗೆ ಇದ್ದ ಜಮೀನು ಬಹುಶಃ ಒಂದೂವರೆ ಎಕರೆ, ಅದರಲ್ಲಿ ಅರ್ಧ ಎಕರೆ ತೋಟ ಉಳಿದದ್ದು ಮಳೆಯಾಶ್ರಿತ ಗದ್ದೆ. ಒಂದು ಎಕರೆ ಗದ್ದೆಯಲ್ಲಿ ಒಂಬತ್ತು ಜನರ ಜೀವನ ಅದು ಹೇಗೆ ನಡೆದಿತ್ತೋ ನನಗೆ ಈಗ ಊಹಿಸಲೂ ಅಸಾಧ್ಯ .

ಅಪ್ಪನ ಜೊತೆ ಲೇಖಕ ಡಾ. ಡಾ.ಯುವರಾಜ್ ಹೆಗಡೆ
ಅಲ್ಲಿಯೇ ಮೇಗರವಳ್ಳಿ ಶಾಲೆಯಲ್ಲಿ SSLC ಮುಗಿಸಿದ ಅಪ್ಪ ಆ ವರ್ಷ ಪಾಸಾದ ಐದು ಜನ ವಿದ್ಯಾರ್ಥಿಗಳಲ್ಲಿ ಒಬ್ಬರು. PUC ಯನ್ನು ಮೂರು ತಿಂಗಳು ತೀರ್ಥಹಳ್ಳಿಗೆ ಬಂದು ಓದಿದರೂ ಬಸ್ ಚಾರ್ಜ್ ಹೊಂದಿಸಲು ಸಾಧ್ಯವಾಗದೆ ಬಡತನದ ಕಾರಣ ಮೊಟಕುಗೊಂಡಿತು. ಆದರೆ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಅರಿತಿದ್ದ ಅಪ್ಪ ೧೭ ರ ವಯಸ್ಸಿನಲ್ಲಿ ಊರು ಬಿಟ್ಟು ಮುಂದೆ ಉದ್ಯೋಗ ಸಾಧ್ಯತೆ ಇರುವ ಕೋರ್ಸ್ ಮಾಡುವ ನಿರ್ಧಾರಕ್ಕೆ ಬಂದರಂತೆ. ಅದಕ್ಕೆ ಅವರು ಆಯ್ಕೆ ಮಾಡಿಕೊಂಡದ್ದು ಭದ್ರಾವತಿಯಲ್ಲಿ National Apprenticeship training ಕೋರ್ಸ್. ಅದನ್ನು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯವರೆ ಓದಿಸಿ ನಂತರ ಕೆಲಸಕ್ಕೆ ತೆಗೆದು ಕೊಳ್ಳುತ್ತಿದ್ದರಂತೆ. ಗ್ರಾಮೀಣ ಭಾಗದಲ್ಲಿ SSLC ಯಲ್ಲಿ ಉತ್ತಮ ಅಂಕ ಪಡೆದವರಿಗೆ ಆಗ NAT ನಲ್ಲಿ ನೀಡಲಾಗುತ್ತಿದ್ದ ಸ್ಟೈಫಂಡ್ ಸೌಲಭ್ಯವನ್ನು( ೭೦ ರೂಪಾಯಿ) ನೆಚ್ಚಿಕೊಂಡು ಊರು ಬಿಡುವ ಧೈರ್ಯ ಮಾಡಿಯೇಬಿಟ್ಟರು ಅಪ್ಪ. ಆದರೆ ಪರಿಸ್ಥಿತಿ ನೋಡಿ, ….ಅವರಿಗೆ ಕಾಲೇಜು ಹೋಗಲು ಒಂದು ಜೊತೆ ಜುಬ್ಬ- ಪೈಜಾಮ ಯಾರೋ ಹೊಲೆಸಿ ಕೊಟ್ಟಿದ್ದರಂತೆ. ಖರ್ಚಿಗೆ ಹಿಂದಿ ಪಾಠ ಮಾಡುತ್ತಿದ್ದರಂತೆ. ಹಿಂದಿ ಅವರು ಕಲಿತಿದ್ದರೋ ಅಥವಾ ಕಲಿಯ ಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತೋ ಗೊತ್ತಿಲ್ಲ. ಅಂತೂ NAT ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ ಭದ್ರಾವತಿಯಲ್ಲಿ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಿಂದ ಬುಲಾವು ಬಂತಂತೆ. ಇನ್ನೊಂದು ನಂಬಲಸಾಧ್ಯವಾದ ವಿಷಯ ಹೇಳಲೇಬೇಕು. ಆಗ ಮಂಡ್ಯ,ತುಮಕೂರು ಜಿಲ್ಲೆಗಳಲ್ಲಿ ಭೀಕರ ಬರಗಾಲ ಬಂದು ಜನ ರೈಲಿನಲ್ಲಿ ಗುಳೆ ಹೊರಟಿದ್ದರು. ಕಾರ್ಖಾನೆಯ ಅಧಿಕಾರಿಗಳು ರೈಲ್ವೇ ನಿಲ್ದಾಣಗಳಲ್ಲಿ ಹೋಗಿ ಗುಳೆ ಹೊರಟ ಜನರನ್ನು ಕಾರ್ಖಾನೆಯ ಕೆಲಸಕ್ಕೆ ಬನ್ನಿ ಎಂದು ಒತ್ತಾಯಿಸಿ ಕರೆದು ತರುವ ದೃಶ್ಯ ಸಾಮಾನ್ಯವಾಗಿತ್ತೆಂದು ಹೇಳಿದಾಗ ನಾವಿವತ್ತು ಎಂತಹ ಕಾಲದಲ್ಲಿದ್ದೇವೆ ಎಂದು ಎನಿಸದೆ ಇರದು. ಆದರೂ ಒಲ್ಲದ ಮನಸ್ಸಿನಿಂದ ಅನ್ಯ ಮಾರ್ಗವಿಲ್ಲದೆ ಭದ್ರಾವತಿ ಸೇರಿದವರು ಇಂದು ನಿವೃತ್ತರು , ಅವರ ಮಕ್ಕಳ ಭವಿಷ್ಯ ಉಜ್ವಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೆಯೇ ನಮ್ಮ ಕುಟುಂಬವೂ ಕೂಡ.
ಭದ್ರಾವತಿಗೆ ಹತ್ತಿರದಲ್ಲಿದ್ದ ಹಿರಿಯೂರು ಎಂಬಲ್ಲಿ ಅಪ್ಪ ಆಗ ಜಾಗ ಖರೀದಿಸಿ ಮನೆ ಮಾಡಿದರು. ನನಗೆ ತಿಳಿದಂತೆ ಸುಮಾರು ೨೫ ವರ್ಷಗಳ ಕಾಲ ಮನೆ ಸಾಲ ತೀರಿಸಿದರು. ಒಂದು ಎಕರೆ ಗದ್ದೆ ಖರೀದಿಸಿ ಅಡಿಕೆ ಹಾಕಿದರು.(ಈಗಲೂ ಅದೇ ತೋಟದಲ್ಲಿ ಕೆಲಸ ಮಾಡುತ್ತಾ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ ). ತನ್ನ ಕಷ್ಟ ಮಗನಿಗೆ ಬರದಂತೆ ಕಾನ್ವೆಂಟ್ ನಲ್ಲಿ ಓದಿಸಿದರು. ಅಷ್ಟೇ ಏಕೆ ಕೆಲವು ವಿಷಯಗಳಲ್ಲಿ ಮನಸ್ತಾಪ ಇದ್ದಾಗ, ಹಿತಶತ್ರುಗಳ ಮಾತನ್ನು ಕೇಳದೆ ಅದನ್ನು ಬದಿಗಿಟ್ಟು ಮಗನೊಂದಿಗೆ ಸೇರಿದರು.
ಇದನ್ನು ಈಗ ಉಲ್ಲೇಖ ಮಾಡಲು ಕಾರಣವೂ ಇದೆ.ಅಪ್ಪ ಅಂದು ಹೊಟ್ಟೆಪಾಡಿಗಾಗಿ ಊರು ಬಿಡದಿದ್ದರೆ, ನಾನು ಇಂದು ಡಾ.ಯುವರಾಜ್ ಆಗುತ್ತಿರಲಿಲ್ಲ, ಇದ್ದ ಒಂದೂವರೆ ಎಕರೆ ನಾಲ್ಕು ಪಾಲಾಗಿರುತ್ತಿತ್ತು. ಬದುಕು ಊಹಿಸಲೂ ಕಷ್ಟವಾಗಿರುತ್ತಿತ್ತು.ಇಂತಹದೇ ಕೆಲವು ಕಾರಣಗಳಿಂದ ನಾನು ನೌಕರಿ ಪಡೆದಾಗ ತೀರ್ಥಹಳ್ಳಿಯೇ ನನ್ನ ಆಯ್ಕೆಯಾಯಿತು. ಇಲ್ಲಿ ಒಂದಿಷ್ಟು ಜನಕ್ಕೆ ಆಸರೆಯಾಗಿ ನಿಲ್ಲಬೇಕೆಂಬ ಹಂಬಲ.
ಇದು ನನ್ನ ಅಪ್ಪನ ಕಥೆ ಮಾತ್ರವಲ್ಲ. ಬಹುಶಃ ನೀವು ಇದೂವರೆಗೂ ತಿಳಿದಿರದ ನಿಮ್ಮ ಅಪ್ಪನ ಹೋರಾಟದ ಬದುಕು ಇದೇ ರೀತಿಯದ್ದೇ ಇನ್ನೊಂದು ಆಗಿರುತ್ತದೆ.ಕೇಳಿ ನೋಡಿ, ಇದ್ದರೆ ಹಂಚಿಕೊಳ್ಳಿ.
- ಡಾ.ಯುವರಾಜ್ ಹೆಗಡೆ, (ವೈದ್ಯಕೀಯ ಬರಹಗಾರರು, ಪಶುವೈದ್ಯರು) ತೀರ್ಥಹಳ್ಳಿ
