ಶಬರಿಯಂತೆ ಕಾದಿದ್ದಕ್ಕೂ ಊರಿಗೆ ಕರೆಂಟ್ ತರಿಸುವಲ್ಲಿ ಯಶಸ್ವಿಯಾದರು ಲೇಖಕರಾದ ಡಾ.ಎನ್.ಬಿ. ಶ್ರೀಧರ ಅವರು. ಅವರ ಅನುಭವದ ಸುರಳಿಯ ಭಾಗ ೧ ರ ಮುಂದೊರೆದ ಭಾಗ ಇಲ್ಲಿದೆ. ಮುಂದೆ ಓದಿ…
ನಿಜ. ೧೧ ಕೆವಿ ( ೧೧,೦೦೦ ವೋಲ್ಟ್) ಲೈನಿನಿಂದ ಸೀದಾ ಮನೆಗೆ ವೈರುಗಳನ್ನು ಎಳೆದು ಕರೆಂಟು ಕೊಟ್ಟರೆ ಸುಟ್ಟು ಭಸ್ಮವಾಗುತ್ತೇವೆ ಎನ್ನುವುದು ಗೊತ್ತಾಗಿದ್ದು ಮಳೆಗಾಲದಲ್ಲೊಮ್ಮೆ. ಜಿಟಿ ಜಿಟಿ ಹೊಡೆಯುವ ಭಯಂಕರ ಮಳೆಯಲ್ಲಿ ಯೆಲ್ಲಾಪುರ-ಆನಗೋಡ ಮಧ್ಯೆ ಈ ೧೧ ಕೆವಿ ಲೈನಿನ ಮೇಲೆ ಪಕ್ಕದಲ್ಲಿಯೇ ಹೋದ ಗಿಡದ ಕೊಂಬೆ ಬಿತ್ತು. ಆಗ “ಬೊಂ” ಎಂದು ಹೊರಟ ಭಾರೀ ಶಬ್ಧ ಶಿಸ್ತಮುಡಿವರೆಗೂ ಕೇಳಿಸಿತ್ತು. ಲೈನುಮೆನ್ನು ಪದೇ ಪದೇ ಕರೆಂಟು ಹೋಗುತ್ತದೆಯೆಂದು ಹೆಬ್ಬೆಟ್ಟು ಗಾತ್ರದ ಕಬ್ಬಿಣದ ತಂತಿಯನ್ನು ಹಾಕಿದ್ದರಿಂದಲೋ ಏನೋ ಲೈನು ಟ್ರಿಪ್ಪಾಗದೇ ನೆಲದ ಮೇಲೆ ವೈರು ಬಿದ್ದು ಹಸಿಯಾದ ಮರವನ್ನು ಚರ್ರನೇ ಶಬ್ಧ ಮಾಡುತ್ತಾ ಸುಟ್ಟು ಹಾಕಿತ್ತು. ಅರ್ಧ ಫರ್ಲಾಂಗು ದೂರದ ವರೆಗೂ ಕರೆಂಟು ಹರಿದು ಜುಮು ಜುಮು ಫೀಲಿಂಗು ಬರುತ್ತಿತ್ತು.

ಫೋಟೋ ಕೃಪೆ : Youtube
ಈ ೧೧ ಕೆವಿಯನ್ನು ೪೪೦ ವೋಳ್ಟಿಗೆ ಕಡಿಮೆಗೊಳಿಸಿ ಅದರಿಂದ ನಮ್ಮ ಮನೆಯ ದೀಪ ಬೆಳಗಬೇಕಿತ್ತು. ಇದಕ್ಕಾಗಿ ಪ್ರತ್ಯೇಕ ಟ್ರಾನ್ಸ್ಫಾರ್ಮರನ್ನು ಹಾಕಿ ಅದರಿಂದ ಕರೆಂಟಿನ ಆರ್ಭಟ ಕಡಿಮೆ ಮಾಡಿ ಶಾಂತಗೊಳಿಸಿ ಎಲ್ಲರ ಮನೆಯೊಳಗೆ ನುಗ್ಗಿಸಬೇಕಿತ್ತು. ನಮ್ಮ ಒಂದೇ ಮನೆಗಾದರೆ ಲಕ್ಷಾಂತರ ರೂಪಾಯಿಗಳ ವೆಚ್ಚ ಮಾಡುವುದು ಅಸಾಧ್ಯವಾದ ಮಾತಾಗಿತ್ತು ಅಷ್ಟೇ ಅಲ್ಲ ವೋಳ್ಟೇಜೇ ಇಲ್ಲದೆ ತೊಂದರೆ ಪಡಬೇಕಿತ್ತು. ಟ್ರಾನ್ಸ್ಫಾರ್ ಹಾಕಿದರೂ ಅದಕ್ಕೆ ಕನೀಷ್ಟ ಲೋಡು ಬೇಕಲ್ಲ? ಎಲ್ಲಿಂದ ತರುವುದು. ಆಗಲೇ ಪ್ರತ್ಯೇಕ ಟ್ರಾನ್ಸ್ಫಾರ್ಮರು ಹಾಕಲು ಒಂದಷ್ಟು ಜನ ಐಪಿ ಸೆಟ್ಟುಗಳು (ಇರಿಗೇಶನ್ ಪಂಪ್ಸೆಟ್) ಹಾಕಿಸಿಕೊಂಡರೆ ಟ್ರಾನ್ಸ್ಫಾರ್ಮರನ್ನು ಹಾಕಲು ಸಾಧ್ಯ ಎಂಬ ಸಲಹೆ ಬಂದಿದ್ದು. ಅದರಲ್ಲೂ ಸೆಕ್ಷನಾಫೀಸರು ೨೫ ಹೆಚ್ಪಿದಯಷ್ಟಾದರೂ ಲೋಡು ಕೊಡದಿದ್ದರೆ ಎಸ್ಟಿಮೇಟೇ ಮಾಡಲ್ಲ ಅಂದು ಬಿಟ್ಟ. ನಮ್ಮೂರಲ್ಲಿ ದಟ್ಟ ಅರಣ್ಯದ ಮಧ್ಯೆ ಒಂಟಿ ಮನೆಗಳೇ ಇರುವದರಿಂದ ಮತ್ತು ಒಂದರಿಂದ ಮತ್ತೊಂದು ಮನೆಗೆ ಐದಾರು ಕಿಲೋಮೀಟರು ದೂರವಿರುವ ಕಾರಣ ಒಂದು ಮನೆಗೆ ೩ ಹೆಚ್ ಪಿ ಪಂಪು ಸೆಟ್ಟು ಅಂದರೂ ೮ ಮನೆಯವರಾದರೂ ಪಂಪು ಸೆಟ್ಟು ಹಾಕಿಸಿಕೊಂಡರೆ ಮಾತ್ರ ಅವರ ಮನೆಗೆ ಕರೆಂಟು ಅಂದು ಕಡ್ಡಿ ಮುರಿದಂತೆ ಹೇಳಿಬಿಟ್ಟ ಸೆಕ್ಷನಾಫೀಸರು.

ಫೋಟೋ ಕೃಪೆ : United nations university
ಹತ್ತು ಕಿಲೋಮೀಟರು ಸುತ್ತಳತೆಯಲ್ಲಿರುವ ಎಲ್ಲರ ಮನೆಗೆ ನನ್ನ ದಂಡಯಾತ್ರೆ ಪ್ರಾರಂಭವಾಯ್ತು. “ಪಂಪುಸೆಟ್ಟು ಹಾಕಿಸಿಕೊಳ್ಳಿ.. ನಿಮ್ಮನೆಗೆ ಕರೆಂಟು ಬರುತ್ತೆ” ಎಂದು ಎಷ್ಟು ಗೋಗೆರೆದರೂ ಸಹ ಯಾರೂ ಹಾಕಿಸಿಕೊಳ್ಳಲು ಇಷ್ಟ ಪಡಲೇ ಇಲ್ಲ. ಅನೇಕರಿಗೆ ಈ ಪಂಪುಸೆಟ್ಟೆಂಬ ಯಂತ್ರದ ಅವಶ್ಯಕತೆಯೇ ಇರಲಿಲ್ಲ. ಮನೆಯ ತಲೆಯ ಮೇಲೆಯೇ ದಬ .ದಬ ಎಂದು ಸುರಿಯುವ ಅಬ್ಬಿಯ ನೈಸರ್ಗಿಕ ನೀರಿರುವಾಗ ನನ್ನ ತೆವಲಿಗೆ ಯಾಕೆ ಕರೆಂಟು ಪಂಪಸೆಟ್ಟು ಹಾಕಿಸಿ ಸುಮ್ಮನೇ ಅದರ ಖರ್ಚು ಮೈಮೇಲೆಳೆದುಕೊಳ್ಳುತ್ತಾರೆ? ಅಲ್ವೇ? ಪ್ರತಿಯೊಬ್ಬರ ಮನೆಗೂ ಹೋಗಿ ಅವರ ಮನವೊಲಿಸುವುದೇ ದೊಡ್ಡ ಕೆಲಸವಾಯ್ತು. ಅಲ್ಲೊಬ್ಬ ಹಳಬ ಯಜಮಾನ್ರು ಮಾತ್ರ “ಅಯ್ಯಯ್ಯೋ.ಕರೆಂಟಾ…ನಮ್ ಮನೇಗಂತೂ ಬ್ಯಾಡವೇ ಬ್ಯಾಡ… ಸ್ವಿಚ್ ಆಫ಼್ ಮಾಡದೇ ಮುಟ್ಟಿದ್ದ್ರೆ …ಸರ್.. ಸರ್…ಅಂತ ಮೈಯಲ್ಲಿನ ರಕ್ತ ಎಲ್ಲಾ ಎಳ್ಕಳತ್ತೆ..ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಮೈಯಲ್ಲಿನ ನರಗಳಲ್ಲಿ ಹರಿದು ಶಕ್ತಿಯನ್ನೆಲ್ಲಾ ಹಿಂಡಿ ಹಿಪ್ಪೆ ಮಾಡುತ್ತೆ.. ಪಂಪಿನಿಂದ ಎತ್ತಿದ ನೀರಲ್ಲಿ ಸತ್ವಾನೇ ಇರಲ್ಲ.. ಬರಿ ಸೌಳು ಸಪ್ಪೆ…. ಅದರ ಸಹವಾಸ ಸಾಕು”… ಎಂದು ನನ್ನನ್ನು ವಾಪಸ್ಸು ಹಾಕಿ ಬಂದ ದಾರಿಗೆ ಸುಂಕವಿಲ್ಲದಂತೆ ಮಾಡಿದ್ದು. ಇವರೆನ್ನೆಲ್ಲಾ ಒಪ್ಪಿಸಲು ಯೆಲ್ಲಾಪುರದಲ್ಲೇ ಫೇಮಸ್ಸು ಇರುವ ಕರೆಂಟು ಕಂತ್ರಾಟುದಾರರನ್ನು ಕರೆದು ಮನೆ ಮನೆಗೆ ಕರೆದೊಯ್ದು ಉಪದೇಶ ಮಾಡಿಸಿಯೂ ಆಯ್ತು. ಕರೆಂಟು ಖಾತೆಯವರು ಆತನಿಗೂ ನನಗೂ ಏನೋ ಕಮೀಷನ್ನು ಕೊಡಬಹುದು ಎಂದು ಸುಖಾ ಸುಮ್ಮನೇ ನಮ್ಮ ಮೇಲೆಯೇ ಸಂಶಯ ಪಟ್ಟರು. ಮೇಲಿನ ಮನೆ ಮತ್ತು ಕೆಳಗಿನ ಮನೆಯೆಂದು ಅಣ್ಣ ತಮ್ಮಂದಿರಾದರೂ “ಅವ ತೆಗೆದುಕೊಂಡರೆ ನಾನು ತೆಗೆದುಕೊಂಡೇನು” ಎಂದು ಜಿದ್ದು ಸಾಧಿಸುವವರನ್ನು ಅಳೆದು ಕೊಳಗಕ್ಕೆ ಹಾಕುವಾಗ ಏಳು ಸಮುದ್ರದ ನೀರು ಕುಡಿದಷ್ಟು ಪ್ರಯತ್ನ ಬೇಕಾಯಿತು. ಅಂತೂ ಇಂತೂ ೨೦ ಹೆಚ್ಪಿಕ ಒಟ್ಟು ಗೂಡಿಸಿ ಸೆಕ್ಷನಾಫೀಸರ ಹತ್ತಿರ ಹೋಗಿ ದಮ್ಮಯ್ಯ ಗುಡ್ಡೆ ಹಾಕಿದ ಮೇಲೆ ಎಸ್ಟಿಮೇಟು ಮಾಡಲು ಸಿದ್ಧವಾದರು. ಎಸ್ಟಿಮೇಟೇನೋ ಸಿದ್ದವಾಯ್ತು. ಎಷ್ಟಕ್ಕೆ ಅಂತೀರಿ? ೧೦ ಲಕ್ಷಕ್ಕೆ!!. ಅದು ದೊಡ್ಡ ಮೊತ್ತ ಆಗ!.ಇದರ ಮಂಜೂರಾತಿಗೆ ಓಡಾಟ ಪ್ರಾರಂಭವಾಯ್ತು. ದೊಡ್ಡ ಯೋಜನೆಯಾಗಿದ್ದರಿಂದ ಇದರ ಪ್ರಾಥಮಿಕ ಮಂಜೂರಾತಿ ದಾಂಡೇಲಿಯ ಉಪವಿಭಾಗದಲ್ಲಾದರೆ, ಮುಂದಿನ ಮಂಜೂರಾತಿ ಸಿರ್ಸಿಯ ವಿಭಾಗೀಯ ಕಚೇರಿಯಲ್ಲಾಗಿ, ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಆಗಬೇಕಿತ್ತು. ಈ ಕರೆಂಟು ಕಚೇರಿಗಳೋ ಲಂಚದ ಪಾಪ ಕೂಪಗಳು. ವಿಳಂಭ ಮತ್ತು ಕೆಂಪು ಪಟ್ಟಿಗೆ ಹೆಸರು ವಾಸಿ. ಅರ್ಜಿ ಕೊಟ್ಟವರೆಲ್ಲರಿಗೂ ಈಗ ಒಂದಿಷ್ಟು ಆಸೆ ಚಿಗುರಿತ್ತು ಅಂತ ಅನಿಸುತ್ತೆ. ಕರೆಂಟು ಯಾವಾಗ ಬರುತ್ತೆ ಎಂದು ಪದೇ ಪದೇ ಕೇಳಿ ಸಾಕು ಮಾಡಿದರು. ಪ್ರತಿ ಕಚೇರಿಯಲ್ಲಿ ಯಾರ್ಯಾರಿಗೆ ಏನೇನು ಬೇಕೋ ಅದೆಲ್ಲವನ್ನೂ ಸಹ ಸಂದಾಯ ಮಾಡಿದರೂ ಸಹ ನಾವೆಣಿಸಿದ ವೇಗಕ್ಕೆ ಕೆಲಸವಾಗುತ್ತಲೇ ಇರಲಿಲ್ಲ. ಅನೇಕ ಸಲ ದಾಂಡೇಲಿ, ಸಿರ್ಸಿ ಮತ್ತು ಹುಬ್ಬಳ್ಳಿ ದಂಡಯಾತ್ರೆ ಮಾಡಿದ್ದಾಯ್ತು. ಕೊನೆಗೂ ಒಂದು ದಿನ ಮಂಜೂರಿ ಬಂದೇ ಬಿಡ್ತು. ಇದಾದ ಮೇಲೆ ವರ್ಕ್ ಆರ್ಡರ್ ಬರಬೇಕಂತೆ. ಅದಕ್ಕೂ ಮಣ್ಣು ಹೊತ್ತಿದ್ದಾಯ್ತು. ಅದೂ ಬಂದು ಕಂಬ ನೆಡುವ ಕಾರ್ಯ ಪ್ರಾರಂಭವಾಗಬೇಕು, ದುತ್ತೆಂದು ಮತ್ತೊಂದು ಸಮಸ್ಯೆ ಎದುರಾಯ್ತು. ಅದೇ ಸಿಮೆಂಟ್ ಕಂಬಗಳ ಕೊರತೆ. ಮತ್ತೆ ಅದಕ್ಕಾಗಿ ಓಡಾಟ.
ಈ ಮಧ್ಯೆ ಜಠಿಲವಾದ ಮತ್ತೊಂದು ಸಮಸ್ಯೆ ಎದುರಾಯ್ತು. ಸುಮಾರು ೧೦ ಕಿಲೋಮೀಟರ್ ಸುತ್ತಳತೆಯ ಅನೇಕ ಮನೆಗಳ ವರೆಗೆ ವೈರು ಎಳೆದುಕೊಂಡು ಹೋಗಲು ಅನೇಕ ಕಿಲೋಮೀಟರುಗಳ ಜಂಗಲ್ ಕಟಿಂಗಿಗೆ ಅರಣ್ಯ ಇಲಾಖೆಯ ಅನುಮತಿ ಬೇಕು. ಸುಮಾರು ೪೦ ಕಿಲೋ ಮೀಟರ್ ಜಂಗಲ್ ಕಟಿಂಗ್ ಅಂದರೆ ಹುಡುಗಾಟವೇ? ತುಂಬಾ ಅರಣ್ಯ ನಾಶವಾಗುತ್ತೆ? ಅದಕ್ಕೆ ಅನುಮತಿ ನೀಡಲಾಗಲ್ಲ. ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂಬ ಕ್ಯಾತೆ ಅವರದು. ಅಭಿವೃದ್ಧಿಯ ಜೊತೆ ಒಂದಿಷ್ಟು ಪ್ರಕೃತಿ ನಾಶವೂ ಸಹಜವಾದರೂ ಇವರ ಅನುಮತಿ ಪಡೆಯಲು ಅನೇಕ ದಂಡಯಾತ್ರೆಗಳಾದವು. ಆಗ ಸಚಿವರಾದ ದೇಶಪಾಂಡೆಯವರು ಸಹಾಯದಿಂದ ಕೊನೆಗೂ ಅದರ ಪರ್ಮಿಶನ್ನು ಸಿಕ್ತು. ಅಷ್ಟು ಹೊತ್ತಿಗೆ ಜೂನ್ ತಿಂಗಳು ಬಂದು ಮಳೆ ರಫ, ರಫ ಎಂದು ಭಾರಿಸತೊಡಗಿತು. ಎಲ್ಲರ ಮನೆಯಲ್ಲಿ ವೈರಿಂಗ್ ಇತ್ಯಾದಿಗಳು ಬಾಕಿ ಇದ್ದವು.ಇನ್ನೇನಿದ್ದರೂ ಅಗಸ್ಟ್ ತಿಂಗಳೇ ಸರಿ. ಅಷ್ಟು ಹೊತ್ತಿಗೆ ಕರೆಂಟು ಖಾತೆಯವರು ನಮ್ಮ ಹೆಸರನ್ನೇ ಮರೆತು ಬಿಟ್ಟಿದ್ದರು ಅನಿಸುತ್ತದೆ. ಎಲ್ಲವನ್ನು ನೆನಪಿಸಿ ಕಂಬಗಳನ್ನು ಹುಗಿಯಲು ಗುರುತು ತೆಗೆಯಲು ಹೇಳಿಯಾಯ್ತು. ಅನೇಕ ಜನ ನಮ್ಮ ಹೊಲದ ಮೇಲೆ ತಂತಿಗಳು ಹೋಗಬಾರದು, ಗದ್ದೆ ಮೇಲೆ ಹೋಗಬಾರದು ಎಂದೆಲ್ಲಾ ತಕರಾರು ತೆಗೆದರೂ ಅವುಗಳನ್ನೆಲ್ಲಾ ಬಗೆಹರಿಸಿ ಆಯ್ತು. ಕಂಬ ನೆಡುವ ಕಂಟ್ರಾಕ್ಟನ್ನು ನಾನೇ ವಹಿಸಿಕೊಂಡೆ. ಕಂಬ ಹುಗಿಯುವುದು, ತಂತಿ ಎಳೆಯುವುದು ಇತ್ಯಾದಿ ಕೆಲಸ ಗಳಲ್ಲಿ ಅವರದೇ ಮನೆಯ ಕೆಲಸವೇನೋ ಎಂಬಂತೆ ನಮ್ಮೂರ ಜನ ಅತ್ಯದ್ಭುತವಾಗಿ ಅವರನ್ನು ತೊಡಗಿಸಿಕೊಂಡರು. ನೋಡ ನೋಡುತ್ತಿದ್ದಂತೆ ೧೦ ಕಿಲೋಮೀಟರುಗಳ ದೊಡ್ಡ ಯೋಜನೆ ಸಿದ್ದವಾಗಿ ನಿಂತಿತ್ತು. ತಲೆಯ ಮೇಲೆ ಹೊಳೆಯುವ ಅಲ್ಯುಮಿನಿಯಂ ವೈರುಗಳನ್ನು ಹೊತ್ತು ಸಿಮೆಂಟಿನ ಹೊಚ್ಚ ಹೊಸ ಕರೆಂಟು ಕಂಬಗಳು ಮದುಮಗಳನ್ನು ನಾಚಿಸುವಂತೆ ಶೃಂಗಾರಗೊಂಡು ನಿಂತು ಲಕ ಲಕ ಎಂದು ಹೊಳೆಯತೊಡಗಿದವು. ಇಲ್ಲಿ ಮತ್ತೊಂದು ಸಮಸ್ಯೆ. ಹೊಸ ಟ್ರಾನ್ಸ್ಫಾರಿನ ಕೊರತೆಯಂತೆ. ಇಷ್ಟೆಲ್ಲಾ ಭಗಿರತ ಪ್ರಯತ್ನ ಮಾಡಿದ ನನಗೆ ಹುಬ್ಬಳ್ಳಿಯ ಮುಖ್ಯ ಗೋದಾಮಿನಲ್ಲಿರುವ ಒಂದನ್ನು ತರಿಸಿಕೊಳ್ಳುವುದೇನೂ ಕಷ್ಟವಾಗಲಿಲ್ಲ.

ಫೋಟೋ ಕೃಪೆ : smart energy international
ಕರೆಂಟು ಇಲಾಖೆಯವ ಸೇಫ್ಟಿ ಟೆಸ್ಟು ಅಂತ ಏನೇನೋ ಹಾಳು ಮೂಳು ತರಹೇವಾರಿ ಕಾರ್ಯಗಳು ನಡೆದು ಒಂದು ದಿನ ಒಂದು ದಿನ ಕರೆಂಟಾಫಿಸಿನ ದೊಡ್ಡ ದೊಡ್ಡ ಅಧಿಕಾರಿಗಳೆಲ್ಲ ಬಂದು ಟ್ರಾನ್ಸಫಾರ್ಮಿಗೆ ಕರೆಂಟ್ ಚಾರ್ಜ್ ಮಾಡಿದರು. ಎಲ್ಲರ ಮನೆಗೂ ಹೋಗಿ ವಿದ್ಯುತ್ ಮಶೀನ್ ಚಾಲೂ ಮಾಡಿ ನೀರು ಉಕ್ಕಿಸಿ ಖುಷಿ ಪಟ್ಟೆವು. ಊರೆಲ್ಲಾ ಹಬ್ಬದಿಂದ ನಲಿಯಿತು. ಮುಂದೆಲ್ಲಾ ಜನ ಯಾರ ಒತ್ತಾಯವೂ ಇಲ್ಲದೇ ಇನ್ನೂ ಜಾಸ್ತಿ ಪಂಪುಸೆಟ್ಟುಗಳು ಮತ್ತು ಮನೆಗೆಲ್ಲಾ ತರತರದ ದೀಪಗಳನ್ನು ಹಾಕಿ ಜಗಮಗಿಸಿ ಸಂತೋಷ ಪಟ್ಟರು. ಎಲ್ಲೆಲ್ಲೋ ಹೋದ ತಂತಿಯ ಮೇಲೆ ೧೦ ಕಿಲೋ ಮೀಟರ್ ದೂರದಲ್ಲಿ ಎಲ್ಲಿಯಾದರೂ ಅದರ ಮೇಲೆ ಗಿಡ ಮರದ ಹೆಣೆ ಮುರಿದು ಬಿದ್ದಾಗ ಕರೆಂಟು ನಾಪತ್ತೆಯಾಗುತ್ತಿತ್ತು. ಮಳೆಗಾಲದಲ್ಲಂತೂ ತಿಂಗಳುಗಟ್ಟಲೇ ಇರದೇ ಕಣ್ಣು ಮುಚ್ಚಾಲೆಯಾಡಿಸುತ್ತಲೇ ಇತ್ತು.
- ಡಾ.ಎನ್.ಬಿ. ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ.
