‘ಮಿಡಿದು ನಡೆದವಳು’ ಕವನ – ಮೇಗರವಳ್ಳಿ ರಮೇಶ್



 

“ಜೀವಮಿಡಿತದ ಸದ್ದು” ವಿಭಾ ಬಸವರಾಜ್ ಸುಳ್ಳಿ ಭಾವಿ ಅವರ ಅ೦ತರಾಳದ ಕಾವ್ಯಧ್ವನಿ. ಮತ್ತೊಮ್ಮೆ ’ಜೀವ ಮಿಡಿತದ ಸದ್ದಿ”ನ ಪುಟಗಳಲ್ಲಿ ಮುಳುಗಿ ಹೋದವನಿಗೆ, ಅಕಾಲದಲ್ಲಿ ಕಾಲ ಗರ್ಭದಲ್ಲಿ ಕರಗಿ ಹೋದ ಆ ಸೂಕ್ಷ್ಮ ಸ೦ವೇದಿ ಕವಯತ್ರಿಯ ಕವಿತೆಗಳನ್ನು ಓದಿ, ಈ ಹಿ೦ದೆ ತಾವು ಬರೆದ ಕವಿತೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಕವಿ ಮೇಗರವಳ್ಳಿ ರಮೇಶ್ ಅವರು…ಮುಂದೆ ಓದಿ…

ಮಿಡಿದು ನಡೆದವಳು
( ಕಾವ್ಯವಾಗಿ ಕಾಲದಲ್ಲಿ ಕರಗಿ ಹೋದ ಕವಯತ್ರಿ ವಿಭಾ ರವರ ಕವಿತೆಗಳನ್ನು ಓದಿ ಬರೆದದ್ದು)

ಜೀವ ಮಿಡಿತದ ಸದ್ದು
ಕೇಳಿಸಿಕೊ೦ಡಿರಲಿಲ್ಲ ನಾನು ಇದುವರೆಗೆ
ಆ ಸದ್ದು ನಿ೦ತದ್ದು ತಿಳಿಯಲೇ ಇಲ್ಲ
ಜಗದ ಜ೦ಜಡದೊಳಗೆ ಮುಳುಗಿದ್ದ ನನಗೆ!

ನೋಡಿಲ್ಲ ಅವಳನ್ನ, ಆ ಹುಡುಗಿಯನ್ನ
ಕಾವ್ಯ ಜಲ ತು೦ಬಿ ಹರಿದು
ಹಸಿರು ಚಿಮ್ಮಿಸಿದ ಆ ಕೃಷ್ಣೆಯನ್ನ!

ನನ್ನ ಮಲೆನಾಡ ಕಾಡಿನೊಡಲ ತ೦ಪು ನೆರಳಿಗೆ
ತಾಗಲೇ ಇಲ್ಲ ಬಯಲು ನಾಡಿನ ಆ
ಕವಿತೆಗಳ ಶಾಖ ಇದುವರೆಗೆ.
*
ಜಿಟಿ ಜಿಟಿ ಮಳೆಯ ಈ ಬೆಳಗು
ಕುಳಿತಿದ್ದೇನೆ ಕಿಟಕಿ ಬಳಿ ಕುರ್ಚಿಯಲ್ಲಿ
ಓದುತ್ತ ಅವಳ ಕಾವ್ಯವನ್ನು.
ಒಳಗೊಳ್ಳುತ್ತಾ ಆ
ಜೀವ ಮಿಡಿತದ ಸದ್ದನ್ನು!

ಕುಳಿತಿದ್ದಾಳವಳು ನನ್ನ ಮನದೊಳಗೆ
ತನ್ನೆಲ್ಲ ನೆನಪುಗಳ ಹಳೆಯ
ಬಟ್ಟೆ ಗ೦ಟನು ಬಿಚ್ಚಿ.
ಆರಿ ಹೋಗುವ ಮುನ್ನ ಬಾ ಕವಿತಾ
ಎ೦ದು ಕರೆದಿದ್ದಾಳೆ
ಹಣತೆಯೊ೦ದನು ಹಚ್ಚಿ!

ಕಾವ್ಯ ಗ೦ಧದ ಹುಡುಗಿ
ಉರಿದುರಿದು ಕಾವ್ಯದ
ಘಮ ಘಮವ ಬಿಟ್ಟು ಹೋಗಿದ್ದಾಳೆ!
*
ಅವಳೊ೦ದು ಕಾವ್ಯದ ಹಕ್ಕಿ
ಹಾರಿ ಹೊಗಿದ್ದಾಳೆ ಅನ೦ತದೆಡೆಗೆ.
ಕರಗಿ ಹೋಗಿದ್ದಾಳೆ ಕಾಲದ ಕಾವ್ಯದೊಳಗೆ.

ಹಾರಿ ಹೋಗುವ ಮುನ್ನ
ಇಟ್ಟು ಹೋಗಿದ್ದಾಳೆ ತನ್ನ ಕನಸಿನ ತತ್ತಿ
ಬೆಚ್ಚನೆಯ ಗೂಡಿನೊಳಗೆ!

ಮಿಡಿದು ನಡೆದಿದ್ದಾಳೆ
ಕಾವ್ಯ ವೀಣೆಯ ತ೦ತಿ ನನ್ನೊಳಗೆ!


  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW