ತನ್ನ ಮಕ್ಕಳಿಗಾಗೆ ತನ್ನ ಸರ್ವಸ್ವವನ್ನೂ ಧಾರೆ ಎರೆದ ಅವ್ವ ಕೊನೆಯಲ್ಲಿ ಯಾರಿಗೂ ಸಿಗದಂತೆ ಮಾಯವಾಗುತ್ತಾಳೆ. ಕೊನೆ ಪಕ್ಷ ತನ್ನದೊಂದು ಒಂಟಿ ಫೋಟೋವನ್ನೂ ಕೂಡ ಉಳಿಸದೇ ಹೋದಾಗ ಅವ್ವನ ಏಕಾಂಗಿ ಫೋಟೋ ಹುಡುಕುವ ಅನಿವಾರ್ಯತೆ ತಂದೊಡ್ದುವ ಅವಳ ತಿಥಿ ಕಾರ್ಡು. ಡಾ.ಲಕ್ಷ್ಮಣ ವಿ.ಎ ಅವರ ‘ಸಿಂಗಲ್ ಫೋಟೋ’ ಕವಿತೆ ಬಹುವಾಗಿ ಕಾಡುತ್ತದೆ, ಪಾರ್ವತಿ ಜಗದೀಶ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ ಪರಿಚಯ : ಅಪ್ಪನ ಅಂಗಿ
ಲೇಖಕರು : ಡಾ.ಲಕ್ಷ್ಮಣ ವಿ.ಎ
ಪ್ರಕಾಶಕರು : ಬಹುರೂಪಿ ಪ್ರಕಾಶನ ಬೆಂಗಳೂರು.
ಬೆಲೆ : 100 ರೂಪಾಯಿ
ಪುಟಗಳು : 80
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾದ ಬೆಳಗಾವಿ ಜಿಲ್ಲೆಯ ಡಾ.ಲಕ್ಷ್ಮಣ ವಿ.ಎ.ಅವರ ಕವನ ಸಂಕಲನ ‘ಅಪ್ಪನ ಅಂಗಿ’
ಕೃತಿಯಲ್ಲಿ ಒಟ್ಟು 26 ಕವಿತೆಗಳು ಇದ್ದು ಎಲ್ಲ ಕವಿತೆಗಳು ಬದುಕಿನ ವಿವಿಧ ಮಜಲುಗಳನ್ನು ಕಂಡುಂಡ ಸತ್ಯಗಳನ್ನು ಅನಾವರಣ ಮಾಡಿಸುವ ನಿಟ್ಟಿನಲ್ಲಿ ರಚನೆ ಆದಂತವುಗಳು.ಪ್ರತಿ ಕವಿತೆ ಓದಿದಾಗಲೂ ಆರ್ದ್ರ ಭಾವನೆ ಆವರಿಸಿಕೊಳ್ಳುತ್ತದೆ.ಬದುಕಿನ ನೆಮ್ಮದಿಗಾಗಿ ಎಲ್ಲೆಲ್ಲೋ ಅರಸುವ ನಾವು ಅದು ನಮ್ಮೊಳಗೇ ಅಂತರ್ಗತವಾಗಿ ಇರುವುದನ್ನು ಕಂಡುಕೊಳ್ಳುವುದರಲ್ಲಿ ಸೋಲುತ್ತಿದ್ದೇವೆ ಅನ್ನುವುದು ಕವಿ ಭಾವ. ಇಲ್ಲಿ ಕವಿ ಅನುಭವಿಸಿದ ವೇದನೆಗಳನ್ನೇ ಕವಿತೆ ರೂಪಗಳಾಗಿ ಹೊರಹೊಮ್ಮಿವೆ. ಬದುಕಿನ ಕಹಿ ನೋವುಗಳನ್ನು ಅನುಭವಿಸಿದ ಕವಿ ಮುಂದೆ ನೆಡೆದಂತೆ ತನ್ನ ಗತ ಜೀವನ ಹಾದಿಯನ್ನ ಅಪ್ಪನ ಮೊಂಡು ತೋಳಿನ ಅಂಗಿ ದೋತರ,ಗಾಂಧಿ ಟೊಪ್ಪಿಗೆ ಇವುಗಳ ಮೂಲಕ ನೆನಪಿಸಿಕೊಂಡು,ತಮ್ಮ ಕವನ ಸಂಕಲನವನ್ನು

* ಅಪ್ಪನ ಕೋಟು * ಎಂದು ಸಂಭ್ರಮಿಸುತ್ತಾರೆ. ಅಪ್ಪನ ಅಂಗಿಯ ಮೇಲೆ ಕೋಟು ಒಂದಷ್ಟೂ ಹೊಂದಾಣಿಕೆ ಆಗುವುದಿಲ್ಲವೆಂದು ಗೊತ್ತಿದ್ದೂ ಅಪ್ಪನನನ್ನು ಆ ಮೂಲಕ ಜೀವಂತವಾಗಿಟ್ಟು ಕೋಟು ಹೋಲಿಸಿ ಸಂಭ್ರಮ ಪಡುವ ಕವಿ.ಅದರಲ್ಲಿಯ ಕವಿತೆ
* ಗಾಂಧಿ ಟೊಪ್ಪಿಗೆ ಮತ್ತು ಅಪ್ಪ *ಕವಿತೆ ಕಲ್ಪನೆಗಳ ನಡುವಿನ ವಾಸ್ತವ ಪ್ರಜ್ಞೆ ತಿಳಿಸುವ ಕವಿತೆ. ಕವಿತೆಯ ಮೊದಲಿಗೆ ಮೋಡವನ್ನು ಕಣ್ಣಿಗೆ ಕಟ್ಟುವಂತೆ ವರ್ಣನೆ ಮಾಡಿದ ಕವಿ ಒಮ್ಮೆಲೇ ಬಾರದ ಮಳೆ ಮತ್ತು ಅದರ ನಿರೀಕ್ಷೆಯಲ್ಲಿಯೇ ಗತಿಸಿದ ಅಪ್ಪನ ನೆನಪಿಸಿಕೊಳ್ಳುತ್ತಾರೆ. ಹಣೆಯ ಮೇಲೆ ಕೈಯಿಟ್ಟು ಆಕಾಶ ದಿಟ್ಟಿಸುವಾಗಲೆಲ್ಲ ಅಪ್ಪನ ಗಾಂಧಿ ಟೊಪ್ಪಿಗೆ ನೆಲಕೆ ಬಿದ್ದು ಮಣ್ಣು ಪಾಲಾಗುತ್ತಿತ್ತು ಅಪ್ಪ ಅದನ್ನೇ ಕೊಡವಿ ಕೊಡವಿ ಧರಿಸುತ್ತಿದ್ದ.
ಪ್ರಕೃತಿ ವಿಕೋಪದಿಂದ ಅನಾವೃಷ್ಟಿಯಾಗಿ ಪ್ರವಾಹದ ಭೀಕರತೆಯಲ್ಲಿ ತಮ್ಮದೆಲ್ಲವನ್ನೂ ಕಳೆದುಕೊಂಡ ನಿರಾಶ್ರಿತರು ಆಸರೆಗಾಗಿ ತಡಕಾಡುವ ಯಾತನಾಮಯ ಬದುಕಿನ ಚಿತ್ರಣ ಕಟ್ಟಿಕೊಡುವ ಕವಿತೆ* ಬರದ ನಾಡಿನಲ್ಲಿ ನೀರಿನಬ್ಬರ ಕೊಚ್ಚಿ ಹೋದ ಸೇತುವೆಯ ನಡುವೆ ಸೈರನ್ ಮೊಳಗಿಸುವ ಆಂಬುಲೆನ್ಸ್ ಹೇಗೋ ದಾಟಿ ದಾರಿ ಮಾಡಿಕೊಟ್ಟ ಉದ್ವಿಗ್ನ ಹೊಳೆ ಊರ ದೇವರ ಗಂಟೆಗೂ ಉಸಿರು ಕಟ್ಟಿದೆ ನೆರೆಯೊಳಗೆ!!
ಮುಂದುವರೆದು ಅದೇ ಕವಿತೆಯ ಸಾಲುಗಳಲ್ಲಿ ಪ್ರಕೃತಿಯ ಮುಂದೆ ಎಲ್ಲಾ ಧರ್ಮಗಳೂ,ಎಲ್ಲಾ ದೇವರುಗಳೂ ಒಂದೇ ಅನ್ನುವ ಅರ್ಥದಲ್ಲಿ ಪ್ರಶ್ನಿಸುತ್ತಾರೆ.
ದೇವರ ಪಟದ ಚಿತ್ರ ಧರ್ಮ ಭಾವುಟ
ಅರಿಶಿಣ ಕುಂಕುಮ ಗುಲಾಲು ಎಲ್ಲ ಮುಳುಗಿ ತೇಲುತಿರುವಾಗ ನೆರೆ ನೀರು ಯಾವ ಧರ್ಮಕ್ಕೆ
ಯಾವ ರಂಗು ಯಾರ ಹಂಗು?

ಮನುಷ್ಯ ಬರುವಾಗ ಒಂಟಿ,ಹೋಗುವಾಗಲೂ ಒಂಟಿಯೇ ಆದರೂ ಬದುಕಿನ ಪಯಣದಲ್ಲಿ ಜೊತೆಗಿದ್ದ ಸಹ ಪ್ರಯಾಣಿಕರ ಅನುಪಸ್ಥಿತಿಯಲ್ಲಿ ಕಾಡುವ ಅನಾಥ ಭಾವವನ್ನು * ಒಂಟಿ ಚಪ್ಪಲಿ* ಕವಿತೆಯ ಮೂಲಕ ಹೇಳಿದ್ದಾರೆ.ಇಲ್ಲಿ ಬದುಕಿನ ಹೋರಾಟದ ಹಾದಿಯನ್ನು ಸವೆದ ಚಪ್ಪಲಿಗಳ ಪ್ರತಿಮೆಯನ್ನಾಗಿಸಿದ್ದಾರೆ.ಬದುಕಿನ ಹಾದಿ ಸವೆದಂತೆ ಪರಿಚಿತರು ಅಪರಿಚಿತರಾಗಿಯೂ,ಅಪರಿಚಿತರು ಪರಿಚಿತರೂ ಆಗಬಹುದು.ಆದ್ರೂ ಕೊನೆಯಲ್ಲಿ ಅವರ್ಯಾರೋ,ನಾವ್ಯಾರೋ?
ಊಹು0!!
ಜೋಡಿಯಾಗುತ್ತಿಲ್ಲ ಯಾವ ಜೋಡು ಒಂಟಿ ಚಪ್ಪಲಿಯಷ್ಟು ಅನಾಥ ಯಾರೂ ಇಲ್ಲ ನಿಜ.!
ತೊಟ್ಟಿಲು ಮಳೆ ಅನ್ನುವ ಕವಿತೆಯಲ್ಲಿ ತೊಟ್ಟಿಲ ಮಗುವಿನ ಚಿತ್ರಣ ಸಾಂಕೇತಿಕ ಬಳಕೆ ಮಾಡಿಕೊಂಡ ಕವಿಗಳು ಪ್ರತಿಭೆಯಿದ್ದು ಗುರುತಿಸಲ್ಪಡದ ಅಸಹಾಯಕ ಪ್ರತಿಭೆಗಳ ಬಗ್ಗೆ ಚಿಂತಿಸುವಂತಿದೆ.ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ ಅನ್ನುವಂತೆ ತೊಟ್ಟಿಲಲ್ಲಿ ಮಲಗಿದ ಮಗು ತನ್ನ ಕಾಲ್ಗೆಜ್ಜೆಯ ಸಣ್ಣ ಫಲುಕಿನಿಂದ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಇಲ್ಲಿ ಮಗು ಅಸಹಾಯಕ ಪ್ರತಿಭೆ ಇದೆ ತೊಟ್ಟಿಲೇ ಅದರ ಜಗತ್ತು ಆದರೆ ಅದನ್ನು ಗುರುತಿಸಿದರೆ ಮಾತ್ರ ಅದರ ಅಸ್ತಿತ್ವ ಹಾಗಾಗಿ ಕವಿ ಇಲ್ಲಿ ಪ್ರತಿಭೆ ಗುರುತಿಸುವ ಮನಸ್ಸನ್ನು ಮಾನವರಿಗೆ ನೀಡು ಅನ್ನುವ ಪ್ರಾರ್ಥನೆ ಇದೆ.
ಉಸಿರು ಚೆಲ್ಲಿದ ಕೊಳಲಿನಲಿ
ಮತ್ತೆ ಎದೆಯ ಹಾಡು ತುಂಬಿಸಿ
ಮರದ ಗಾಯಗಳ ಮಾಯಿಸಿ
ಜಗದ ತೊಟ್ಟಿಲ ತೂಗುವ ಪ್ರಭುವೇ ಹಸಿದು ನಿದ್ದೆಗೆ ಜಾರಿದ ಮಗುವ ಎಚ್ಚರಿಸು.
ಕುಟುಂಬದ ಸರ್ವಸ್ವವೂ ಆಗಿದ್ದ ಅಪ್ಪ ತನ್ನ ಕುಟುಂಬಕ್ಕಾಗೆ ಜೀವ ತೇಯ್ದು ಅಪ್ಪನ ಮರಣದ ನಂತರ ಅವನಿಗೆ ಎಲ್ಲವೂ ಆಗಿದ್ದ ಆತನದ್ದೇ ಅಂಗಿಯನ್ನು ಹೊಲದಲ್ಲಿ ಬೆರ್ಚಪ್ಪನಿಗೆ ತೊಡಿಸಿದಾಗ ಹೊಲದಲ್ಲಿಯ ಜೋಳ ತಿನ್ನಲು ಬಂದ ಮುದಿ ಹಕ್ಕಿ ಕೂಡ ಬೆರ್ಚಪ್ಪನ ತೋಳಿನಲ್ಲಿ ಬಹುಕಾಲದವರೆಗೂ ಕುಳಿತು ಜೋಳ ತಿನ್ನದೇ ಮರಿ ಹಕ್ಕಿಗಳೊಂದಿಗೆ ಮರಳಿದ ಕವಿತೆಯಲ್ಲಿ ಅಪ್ಪನ ಸಾಂತ್ವನ ಹಸಿವು ಕೂಡ ನೀಗಿಸಬಲ್ಲದು ಅನ್ನುವುದು ವ್ಯಕ್ತವಾಗಿದೆ.
ಮುದಿ ಹಕ್ಕಿಯೊಂದು ಬಂದು ಕೂರುವುದು ನೋಡಿದ್ದೇನೆ ಆಗಾಗ ಬೆರ್ಚಪ್ಪನ ಭುಜದ ಮೇಲೆ ಎಷ್ಟೋ ಹೊತ್ತಿನ ತನಕ ಹಸಿದರೂ ಜೋಳ ತಿನ್ನದೇ ಮರಳುವ ಅದರ ಮರಿ ಹಕ್ಕಿಗಳ ಸಮೇತ.!!
ಅದರಂತೆ ತನ್ನ ಮಕ್ಕಳಿಗಾಗೆ ತನ್ನ ಸರ್ವಸ್ವವನ್ನೂ ಧಾರೆ ಎರೆದ ಅವ್ವ ಕೊನೆಯಲ್ಲಿ ಯಾರಿಗೂ ಸಿಗದಂತೆ ಮಾಯ.ಕೊನೆ ಪಕ್ಷ ತನ್ನದೊಂದು ಒಂಟಿ ಫೋಟೋವನ್ನೂ ಕೂಡ ಉಳಿಸದೇ ಹೋದಾಗ ಅವ್ವನ ಏಕಾಂಗಿ ಫೋಟೋ ಹುಡುಕುವ ಅನಿವಾರ್ಯತೆ ತಂದೊಡ್ದುವ ಅವಳ ತಿಥಿ ಕಾರ್ಡು.ಮಕ್ಕಳೇ ಸರ್ವಸ್ವವೆಂದು ತಮ್ಮದೆಲ್ಲವನ್ನು ಅರ್ಪಣೆ ಮಾಡಿಕೊಂಡ ತಾಯಂದಿರು ಮಕ್ಕಳು ಬೆಳೆದಂತೆ ಇಲ್ಲವಾಗೆ ಹೋಗುತ್ತಾರೆ ತಮ್ಮ ಇರುವಿಕೆಯ ಗುರುತನ್ನೂ ಉಳಿಸದೇ ವೈಯಕ್ತಿಕವಾಗಿ ಬಹುವಾಗಿ ಕಾಡಿದ ಕವಿತೆ ‘ಸಿಂಗಲ್ ಫೋಟೋ’ಅಂತಿಮ ಗಳಿಗೆಯಲ್ಲಿ ಚರಿತ್ರೆಯಲ್ಲಿ ಹೂತು ಹೋದ ಅವ್ವನ ಅಸ್ತಿತ್ವ ಅಪ್ಪನಿಗಿಂತ ಒಂದು ತೂಕ ಹೆಚ್ಚು.
ಹೀಗೆ ಸಂಕಲನದ ಕವಿತೆಗಳೆಲ್ಲವೂ ಬದುಕಿನ ನಿಜಾರ್ಥವನ್ನು ತಿಳಿಸುವ ನಿಟ್ಟಿನಲ್ಲಿ ರಚನೆಯಾದಂತವುಗಳು ಆತ್ಮದ ಕತ್ತಲನ್ನು ಹೊಕ್ಕು ಬೆಳಕು ಕಾಣಲು ನಮ್ಮ ಆತ್ಮಸಾಕ್ಷಿ, ಅಂತರಂಗದ ಒಳಗಣ್ಣ ತೆರೆಯಬೇಕಿದೆ ಎಂಬುದನ್ನು ಇಲ್ಲಿಯ ಕವಿತೆಗಳು ಹೇಳುತ್ತವೆ. ಬಿಕರಿಯಾಗದ ದೇವರ ಪಟ,ಮರದ ಟೊ0ಗೆಯಲಿ ನೇಣಿಗೆ ಬಿದ್ದ ಚಂದ್ರನೂ
ಕವಿತೆಗಳು ಅಂತರಾತ್ಮವನ್ನು ಬಡಿದೆಬ್ಬಿಸುವ ಕವಿತೆಗಳು. ಒಟ್ಟಾರೆಯಾಗಿ ಕವಿಯ ಅನುಭವದಾಳದ ಅಖಂಡ ಆತ್ಮಾನುಸಂಧಾನವೇ ಇಲ್ಲಿಯ ಕವಿತೆಗಳಾಗಿವೆ.ಓದಿನ ನಂತರವೂ ಬಹುಕಾಲ ಓದುಗರ ಮನ ಪಟಲದಲ್ಲಿ ಉಳಿಯುವ ಕವಿತೆಗಳ ಕವನ ಸಂಕಲನ ‘ ಅಪ್ಪನ ಅಂಗಿ’ ಓದಿ ಒಮ್ಮೆ.
- ಪಾರ್ವತಿ ಜಗದೀಶ್
