ಅರಿವುಳ್ಳವರಿಗೆ ಗುರುವಿನ ಹಂಗೇಕೆ? ಗುರು ಮನೋವಿಕಾಸದ ಮಾರ್ಗ. ರಾಜ್ ಆಚಾರ್ಯ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ದಾಸ್ಯತ್ವದ ಶ್ರೇಣೀಕೃತ ವ್ಯವಸ್ಥೆ ಅಲ್ಲ. ಗುರುವೆಂದರೆ ಜ್ಞಾನದ ಸಂಚಲನತೆ. ಗುರು ಎಂಬುದು ತತ್ತ್ವ, ವ್ಯಕ್ತಿಯಲ್ಲ. ಅಂತರಂಗದ ಅರಿವೇ ಅಷ್ಟಾವರಣದಲ್ಲಿನ ಗುರು ಎಂಬ ಬಲವಾದ ನಂಬಿಕೆ ನನ್ನದು ಹಾಗೆಯೆ ಅದು ನನ್ನ ಬದ್ಧತೆಯೂ ಕೂಡ. ಬದುಕಿನ ನಿರಂತರ ಪಯಣದಲಿ ಪ್ರತ್ಯಕ್ಷ ಪರೋಕ್ಷ ಗುರುವಾದ ವಸ್ತು-ವ್ಯಕ್ತಿ-ಸಮಯ-ಸಂದರ್ಭ ಎಲ್ಲದರಲ್ಲಿಯೂ ನನ್ನನೇ ನಾನು ಕಂಡುಕೊಂಡಂತೆ ನನಗೆ ನಾನೆ ಗುರುವು ನನಗೆ ನಾನೆ ಗುರಿಯು ಆಗಿ ಸಾಗಬೇಕಿದೆ ಎನ್ನುತ್ತ ಭಾವ ಯಾತ್ಮಿನಿಯಾದ ‘ಅಂತರತಮ ಗುರು’ವಿಗೆ ಅಡಿಗಡಿಗೆ ಶರಣು.
ಬದುಕೆಂಬ ಮಹದ್ಗುರುವೆ
ಇಗೋ ನಿನ್ನ ಮುಂದೆ ಮಣಿದು
ನನ್ನದೆಲ್ಲವನು ಕಳಚಿ ಈಗ ‘ಲಘು’ವಾಗಿದ್ದೇನೆ
ವಿಧೇಯ ವಿದ್ಯಾರ್ಥಿಯಂತೆ
ನೀನು ಕಲೆಸಿದ ಪಾಠಗಳನೆಲ್ಲ
ಉರುಹೊಡಿದು ಒಪ್ಪಿಸಿದ್ಧೇನೆ
ಹಾಗೆಯೆ ಅಲ್ಲಲ್ಲಿ ತಪ್ಪಿದ್ದೇನೆ
ಎಂದ ಮಾತ್ರಕ್ಕೆ ಅವಿಧೇಯನೆಂದಣಿಸದಿರು
ಕಲಿಕೆಯಲ್ಲಿ ನಾನು ಕೊಂಚ ಹಿಂದೆ
ನಂಬಿಕೆಯಿರಲಿ ಕಲಿಯುತ್ತೇನೆ ಮುಂದೆ
ಪರೀಕ್ಷೆಗಳನು ಮೊದಲೊಡ್ಡಿ
ಆಮೇಲೆ ಪಾಠ ಕಲಿಸುವ
ನಿನ್ನ ಅಪೂರ್ವ ಕಲಿಕಾ
ವಿಧಾನಕ್ಕೆ ಎಂದೋ ತಲೆಬಾಗಿದ್ಧೇನೆ
ಕಾಲಾನುಕಾಲಕ್ಕೆ ವಸ್ತುವೊ ವ್ಯಕ್ತಿಯೋ ವಿಷಯವೊ
ಯಾವುದಾದರೊಂದು ಪಠ್ಯಕ್ರಮದ ಮೂಲಕ
ಇನ್ನು ನೀನು ಕಲಿಸಲೇ ಬೇಕಾದ
ನಾನು ಕಲಿಯಲೇ ಬೇಕಾದ
ಪಾಠಗಳ ಪಟ್ಟಿ ದೊಡ್ಡದಿದೆ
ಕಲಿಯಲಾರೆ ಎನ್ನಲಾಗುವುದೆ
ಕಿವಿ ಹಿಂಡಿ ನಡು ಬಗ್ಗಿಸಿ
ಬೆನ್ನ ಮೇಲೆ ಗುದ್ದಿಯಾದರೂ
ನೀನು ಕಲಿಸದೆ ಬಿಡಲಾರೆ
ಎಂಬ ಅರಿವೂ ನನಗಿದೆ
ಕೊನೆಯಲ್ಲಿ ಗುರುದಕ್ಷಿಣೆಗೆ
ತಗೋ ಎಣೆಯಿಲ್ಲದ ಆಯುಷ್ಯವಿದೆ
- ರಾಜ್ ಆಚಾರ್ಯ
