ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಅಪ್ಪುವಿಗೆ ಸಾವಿಲ್ಲ, ಅವರು ಎಂದೆಂದೂ ಅಮರ, ಕವಿಯತ್ರಿ ಪವಿತ್ರ ಗೀತಾ ಅವರಿಂದ ಅಕ್ಷರ ನಮನ…
ಮುತ್ತುರಾಜನ ಮಗ ನೀನು
ಕರುನಾಡಿನ ಕೊಹಿನೂರು ನೀನು
ಆದರು ಆಗಲಿಲ್ಲ ನಿನ್ನ ಕವಾಟ ವಜ್ರ,!!
#ದೇವತಾ_ಮನುಷ್ಯನ ಮಗ ನೀನು
ಅಂಜನಿಸುತ ಪಾತ್ರದಾರಿ ನೀನು
ಆದರೂ ಆಗಲಿಲ್ಲ ನಿನ್ನ ಹೃದಯ ವಜ್ರಕಾಯ!!!
ಭಾಗ್ಯವಂತನ ಮಗ ನೀನು
ಹರಿ ಭಕ್ತ ಪ್ರಹ್ಲಾದ ನೀನು
ಆದರೂ ಹೊತ್ತು ತರಲಿಲ್ಲ ಬದುಕಿಬಾಳುವ ಭಾಗ್ಯ!!!
ದೊಡ್ಮನೆಯ ಮಗ ನೀನು
ಆದೆ ಎಲ್ಲರ ಮನೆಮನಗಳಲ್ಲೂ ರಾಜಕುಮಾರ ನೀನು
ಆದರೂ ಆಗಲಿಲ್ಲ ಸಾವನ್ನು ಗೆಲ್ಲುವ ರಣವಿಕ್ರಮ!!!
ಬೇಡರ ಕಣ್ಣಪ್ಪನ ಮಗ ನೀನು
ಸತ್ಯ ಹರಿಶ್ಚಂದ್ರನ ಕಂದ ಲೋಹಿತಾಶ್ವ ನೀನು
ಆದರೂ ಗೆಲ್ಲಲಿಲ್ಲ ವಿಧಿಯನ್ನು!!!
ನಟಸಾರ್ವಭೌಮನ ಮಗ ನೀನು
ನರ್ತಿಸುತ್ತಿದೆ ಮಯೂರನಂತೆ ಹಾಡುತ್ತಿದ್ದೆ ಕೋಗಿಲೆಯಂತೆ
ಕೊನೆಗೂ ಕಲಿಯಲೇ ಇಲ್ಲಾ ಸಾವನ್ನು ಗೆಲ್ಲುವ ಕಲೆ!!!
ಚಂದನವನದ ಕೂಸು ನೀನು
ಅಭಿಮಾನಿಗಳು ನಮ್ಮನೆದೇವರೆಂದೆ
ಕೊನೆಗೂ ಕನ್ನಡ ಭಾವುಟ ಹಿಡಿದುರಾಜ್ಯೋತ್ಸವದಂದು ಹೊರಟುಬಿಟ್ಟೆ ಪರಮಾತ್ಮನೆಡೆಗೆ!!!
ಬಂಗಾರದ ಮನುಷ್ಯನ ಮಗ ನೀನು
ಆಕಾಶದಲ್ಲಿ ಮಿನುಗುವ ಅಶ್ವಿನಿಯ ಪತಿ ನೀನು
ಆದರೂ ನಿನ್ನ ಉಸಿರಿಗೆ ಅಶ್ವಿನಿ ದೇವತೆಗಳು ಅಸ್ತು ಅನ್ನಲೇಯಿಲ್ಲಾ!!!
ಅಜಾತ ಶತ್ರು ಎಲ್ಲರ ಪ್ರೀತಿಯ ಅಪ್ಪು ನೀನು
ನೀ ವೀರಕನ್ನಡಿಗನಾಗಿ ಮಿಲನಾವಾದೆ ಪೃಥ್ವಿಯಲಿ
ಆದರೂ ಇಷ್ಟು ಬೇಗ ಲೀನವಾಗಬಾರದಿತ್ತು ಕಾಲನಪ್ಪುಗೆಯಲಿ.
- ಪವಿತ್ರ ಗೀತಾ ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ )
