“ಬರೆಯುತ್ತಲೇ ತುಂಬಾ ಖುಷಿ ಕೊಟ್ಟ ಕವಿತೆ. ಪ್ರತಿ ಜೀವ-ಜೀವನಗಳ ಸಂಕ್ರಮಣ ಘಟ್ಟದ ಭಾವಗೀತೆ. ಓದಿ ನೋಡಿ.. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಆಳಕ್ಕಿಳಿದಷ್ಟೂ ಅರ್ಥಗಳ ವಿಸ್ತಾರವಿದೆ. ಅರ್ಥೈಸಿದಷ್ಟೂ ಅರಿವಿನ ಹರಿವಿದೆ. ಸ್ವಾರ್ಥದಿಂದ ಪರಮಾರ್ಥದೆಡೆಗೆ, ರಾಗದಿಂದ ವಿರಾಗದೆಡೆಗೆ ಹೊರಳುವ ಬದುಕುಗಳ ಬೆಳಕಿನ ಸತ್ಯಾನ್ವೇಷಣೆಯಿದು. ಯುಗಯುಗದಿಂದ ಜಗದ ಜೀವ-ಭಾವಗಳ ಅರಿವಿನ ನಿತ್ಯಾನ್ವೇಷಣೆಯಿದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಎದೆಯಂಗಳದಿ ನೆಟ್ಟ
ನೆನಪುಗಳ ಹೂಬಳ್ಳಿ
ಸುಡಬೇಕಿದೆ ನಾನು..
ಬೂದಿ ಮಾಡುವ #ಬೆಂಕಿ
ಎಲ್ಲಿದೆ ತಿಳಿಸಬಲ್ಲಿರಾ.?
ಮನದಂಗಳದಿ ಇಟ್ಟ
ಕನಸುಗಳ ರಂಗೋಲಿ
ತೊಳೆಯಬೇಕಿದೆ ನಾನು..
ಕೊಚ್ಚಿ ತೊಳೆವ ನೀರು
ಎಲ್ಲಿದೆ ಹೇಳಬಲ್ಲಿರಾ.?
ಕಂಗಳಿಂದ ಧುಮ್ಮಿಕ್ಕುವ
ಕಂಬನಿ ಜಲಪಾತಕ್ಕೆ
ತಡೆಗೋಡೆ ಕಟ್ಟಬೇಕಿದೆ
ಸದೃಢ ಇಟ್ಟಿಗೆ ಮರಳು
ಎಲ್ಲಿದೆ ನುಡಿಯಬಲ್ಲಿರಾ.?
ಚಿತ್ತಭಿತ್ತಿಯಲಿ ಚಿಗುರುವ
ನಂಬಿಕೆ ಭರವಸೆಗಳಿಗೆ
ಗೋರಿತೋಡಬೇಕಿದೆ ನಾನು
ಮುಚ್ಚಲು ಚಪ್ಪಡಿ ಕಲ್ಲು
ಎಲ್ಲಿದೆ ಅರುಹಬಲ್ಲಿರಾ.?
ಪಂಚೇಂದ್ರಿಯಗಳ ಕಾಮನೆ
ಭಾವನೆಗಳ ಪಂಚಭೂತಗಳಲಿ
ಲೀನ ವಿಲೀನವಾಗಿಸುತ ನಾನು
ನಿರ್ವಾಣದತ್ತ ಸಾಗಬೇಕಿದೆ
ದಾರಿಯ ತೋರಬಲ್ಲಿರಾ..??
ಬಂಧ ಬಂಧನ ತೊರೆದು
ಮೋಹ ಮಾಯೆ ಹರಿದು
ಬಾಳಬಯಲ ಭೈರಾಗಿಯಾಗಿ
ಬೆಳಕಿನಡೆಗೆ ನಡೆಯಬೇಕಿದೆ
ಜ್ಯೋತಿಯ ಜಾಡು ತಿಳಿಸಬಲ್ಲಿರಾ..???
- (ಲೇಖಕರು, ಕವಿಗಳು), ಕೈಗಾ
