ಸೀರೆಯ ಆಸೆ ( ಭಾಗ 2) – ನಾಗಮಣಿ ಎಚ್ ಆರ್ಆಗೊಮ್ಮೆ ಈಗೊಮ್ಮೆ , ಜೋಡಿಸಿದ ಸೀರೆಯ ಮುಂದೆ ನಿಂತು ಅದರ ಮೇಲೆ ಕೈಯ್ಯಾಡಿಸಿ ಅದರ ಹಿಂದಿನ ಸವಿ ಸವಿ ನೆನಪುಗಳನ್ನು ಮೆಲುಕು ಹಾಕುವಾಗ ಮನದ ಸಂತಸವನ್ನು, ಭಾವನೆಗಳನ್ನು ಹೇಳಲು ಪದವಿಲ್ಲ. ಸೀರೆಯ ಹಿಂದಿನ ಭಾವನಾತ್ಮಕ ನಂಟಿನ ಬಗ್ಗೆ ಲೇಖಕಿ ನಾಗಮಣಿ ಎಚ್ ಆರ್ ಅವರು ಬರೆದ ಲೇಖನ, ಮುಂದೆ ಓದಿ…

‘ಸೀರೆ… ಸೀರೆ… ಸೀರೆ… ಎಲ್ಲೆಲ್ಲೂ ಹಾರೈತೆ, ಸೂರೆ…. ಸೂರೆ… ಸೂರೆ… ಮನಸೂರೆ ಮಾಡೈತೆ’. ಈ ಹಾಡು ಜನುಮದ ಜೋಡಿ ಫಿಲ್ಮ್ ನದ್ದು. ನನಗೆ ಸೀರೆ ಎಷ್ಟು ಇಷ್ಟವೋ ಅಷ್ಟೇ ಈ ಹಾಡು ಇಷ್ಟ. ನಾನು ಕಾಲೇಜು ದಿನಗಳಲ್ಲಿ ರವಿಚಂದ್ರನ್ ರವರ ಸ್ವಾಭಿಮಾನ ಫಿಲ್ಮ್ ಲ್ಲಿ ದೂರದ ಊರಿಂದ ಹಮ್ಮೀರ ಬಂದ, ಜರತಾರಿ ಸೀರೆ ತಂದ.  ಇದರಲ್ಲಿ ಇಟ್ಟೀವ್ನಿ ಈ ನನ್ನ ಮನಸನ್ನ ಜೋಪಾನ ಜಾಣೆ ಎಂದ . ಈ ಹಾಡು ಯಾವಾಗ್ಲೂ ಗುನುಗುತ್ತಿದ್ದೆ. ಆ ಹಾಡಿನಲ್ಲಿ ನಾಯಕಿ ಮಹಾಲಕ್ಷ್ಮಿ ಉಟ್ಟಿದ್ದ ಸೀರೆಯನ್ನು ಅಮ್ಮನ ಬಳಿ ಹಟಮಾಡಿ ತೆಗೆಸಿ ಕೊಂಡಿದ್ದೆ. ಆಗ ಅದರ ಬೆಲೆ ಬರಿಯ ಮುನ್ನೂರು ರೂಪಾಯಿಗಳಾದರೂ, ಇಂದ್ರಮ್ಮ ಬೈದದ್ದು ಮೂರು ಸಾವಿರ ಪದಗಳು ದಾಟಿತ್ತು . ಉಡಲ್ಲ ಮಾಡಲ್ಲ ಸುಮ್ನೆ ನನ್ ಜೀವ ತಿಂತ್ಯಾ, ಯಾವೋಳೋ ಫಿಲ್ಮಲ್ಲಿ ಉಟ್ಟಿದ್ಲು ಅಂತಾ ನನಗೆ ಬರೆ ಹಾಕ್ತಾಳೆ. ಅಷ್ಟಕ್ಕೂ ಅದೇನು ಚೆನ್ನಾಗಿದೆ ? ಸೆರಗಿಲ್ಲ ಬಾರ್ಡರ್ ಇಲ್ಲ. ಇನ್ನೂ ಅದಕ್ಕೆ ಫಾಲ್ ಹಾಕಬೇಕು , ಬ್ಲೌಸ್ ಹೊಲಿಸಬೇಕು. ( ಆಗಿನ್ನೂ ಸ್ಯಾರಿ ವಿಥ್ ಬ್ಲೌಸ್ ಇರಲಿಲ್ಲ ) ಇನ್ನೆಷ್ಟು ಹಣ ಕೊಡಬೇಕೋ ಇವಳಿಗೆ ? ಇನ್ಮುಂದೆ ಎನಾದ್ರೂ ಪಿಚ್ಚರ್ ನೋಡ್ಕೊಂಡು ಬಂದು ನನ್ ಪ್ರಾಣ ತಿನ್ಬೇಡಾ ಫಿಲ್ಮ್ ಗೂ ಹೋಗ್ ಬೇಡಾ, ಯಾವೋಳೋ ಕುಣೀತಾಳೆ. ನನಗೆ ಇಲ್ಲಿ ಪರ್ಸಿಗೆ ಕತ್ತರಿ ಅಂತಾ ಅರ್ಚನೆ ಸಹಸ್ರನಾಮ ಮುಖಕ್ಕೆ ಮಂಗಳಾರತಿ ಮಾಡಿಟ್ಟರು.

 

ಇಂತಹ ಕ್ರಿಟಿಕಲ್ ಸಮಯದಲ್ಲಿಯೂ ನನ್ನ ಸೀರೆ ಕೊಳ್ಳುವ ಅಸೆ ಹೆಚ್ಚುತ್ತಾ ಹೋಯಿತೇ ಹೊರತು ಇಂದಿಗೂ ಕಡಿಮೆಯಾಗಿಲ್ಲ. ಅಂದು ಅಮ್ಮಾ ತೆಗೆಸಿ ಕೊಟ್ಟ ಸೀರೆ ಬಹಳ ವರ್ಷ ಇಟ್ಟಿದ್ದೆನಾದರೂ ಒಂದೇ ಒಂದು ಸಲ ಉಟ್ಟಿದ್ದು . ಮೊದಲನೆಯ ಭಾರಿ ಸೀರೆ ಉಟ್ಟಿದ್ದು ಎಸ್.ಎಸ್.ಎಲ್.ಸಿ ಯ ಸೆಂಡ್ ಆಫ್ ಡೇ ದಿನ . ಅಮ್ಮನ ಮೈಸೂರು ಸಿಲ್ಕ್ ಸೀರೆ ಇಸ್ಕೊಳ್ಳಿಕ್ಕೆ ನಾ ಪಟ್ಟ ಶ್ರಮ, ಅಯ್ಯಪ್ಪಾ ಸಾಕಪ್ಪಾ ಸಾಕು. ನಾಗಾ ನನ್ನ ಸೀರೆಗೆ ಪಿನ್ ಚುಚ್ಚಬಾರದು , ನೆಲಕ್ಕೆ ತಾಗುವಂತೆ ಉಡಬೇಡಾ , ತಿನ್ನುವಾಗ ಜಿಡ್ಡಾಗಿರೋದು ಬಿದ್ದರೆ ಎಣ್ಣೆ ಕರೆ ಅಗುತ್ತೆ ಜೋಪಾನ , ಐಸ್ ಕ್ರೀಂ , ಹಾಲು ಕಾಫೀ ಚೆಲ್ಲದರೆ ನಾ ಸುಮ್ಮನಿರಲ್ಲ . ಚಪ್ಪಲಿಯಲ್ಲಿ ಮೆಟ್ಟಬೇಡಾ , ಎಲ್ಲೆಂದರಲ್ಲಿ ಕೂರಬೇಡಾ ಕೊಳೆಯಾಗುತ್ತೆ, ಅಮ್ಮಾ ನೀನೂ ನಿನ್ ಮಾತು, ಸೀರೆ ಯಾವ್ದೂ ಬೇಡಾ ನಂಗೆ. ಕೋಪಗೊಂಡಾಗ ಮೆತ್ತಗಾಗಿದ್ದಳು ಅಮ್ಮಾ. ಅದೇ ಈಗ ನಾಗ ನಿನಗೆ ನನ್ನ ಬೀರೂಲಿರೋ ಸೀರೆಗಳಲ್ಲಿ ಯಾವುದು ಬೇಕೋ ಅದೆಲ್ಲಾ ತಗೊಂಡು ಹೋಗೂಂತಾರೆ . ಅಯ್ಯೋ ಹೋಗಮ್ಮಾ. ನನ್ ಬಳಿ
ಇರೋ ಸೀರೇನೇ ಉಡಲ್ಲ. ಇದನ್ನೆಲ್ಲಿಡ್ಲಿ? ಅಮ್ಮಾ ಮೌನವಾಗುತ್ತಾರೆ. ಮಾಮೂಲಿ ಸೀರೆಗಿಂತಾ ರೇಷ್ಮೆ ಸೀರೆಗಳೇ ಹೆಚ್ಚು ಅಮ್ಮನ ಬಳಿ. ಅಲ್ಲಾ ಕಣಮ್ಮಾ ಅಗ ಕೊಡೂಂದ್ರೆ ಕೊಡ್ತಿರಲಿಲ್ಲ .
ಈಗ ಯಾರಿಗೆ ಬೇಕು ? ಹಾಗಾದ್ರೇ ನನ್ನ ಸೀರೆಗಳು ಬೇರೆ ಯಾರದೋ ಪಾಲಾಗುತ್ತೆ ದುಃಖಿತರಾಗುತ್ತಾರೆ. ಅಮ್ಮಾ ನಾನುಡ್ತೀನಿ ಬಿಡಮ್ಮಾ ಬೇಸರ ಮಾಡ್ಕೋ ಬೇಡಾಂತಾ ಸಮಾಧಾನ ಮಾಡೋದು .
ಮದುವೆಯಲ್ಲಿ ಐದು ರೇಷ್ಮೇಸೀರೆ, ಹತ್ತು ತರಹೇ ವಾರಿ ಸೀರೆಗಳು, ಒಂದು ಮೈಸೂರು ಸಿಲ್ಕ್ ಸೀರೆ ಇಷ್ಟೇ . ನಂತರದ ದಿನಗಳಲ್ಲಿ ಒಂದೊಂದು ಹಬ್ಬಕ್ಕೆರಡ ರಂತೆ ತಗೋತಿದ್ದೆ. ಕ್ರಿಕೆಟ್ ಮ್ಯಾಚ್ ಬೆಟ್ಸ್ ಕಟ್ಟಿ ಅಪ್ಪಾ ಹಾಗೂ ಸೋದರಮಾವಂದಿರ ಬಳಿ ಸೀರೆ ತೆಗೆಸಿಕೊಳ್ಳುತ್ತಿದ್ದೆ. ಅಣ್ಣಾ ( ಅಪ್ಪಾ) ಪ್ರತೀ ವರ್ಷ ನನ್ನ ಹುಟ್ಟಿದ ಹಬ್ಬ ಬಂತೆಂದರೆ ನನಗೆ ದುಡ್ಡು ಕೊಡೋರು . ನಾಗಾ ಸೀರೆ
ತಗೋ ಮನಿ. ಪ್ರೀತಿ ಹೆಚ್ಚಾದಾಗ ಹೀಗೇ ಹೇಳೋರು.

ಫೋಟೋ ಕೃಪೆ : udaipurian

ತಂಗಿಗೆ ಕಾಣದಂತೆ ನನಗೆ ಅಮ್ಮಾ ದುಡ್ಡು ಕೊಟ್ಟು , ನಾ ಸೀರೆ ತಂದ್ರೇ ನೀನೊಪ್ಪಲ್ಲ . ನಿನಗ್ಯಾವುದು ಬೇಕೋ ಆ ಸೀರೆ ತಂದುಬಿಡು ಅನ್ನೋರು . ಈಗಲೂ ಹಾಗೇ ನನ್ನಮ್ಮ . ನಾ ಸೀರೆಯುಟ್ಟು ಅಮ್ಮನ ಮುಂದೆ ನಿಂತರೆ ಸಾಕು ಸಂತಸದ ಮುಗುಳ್ನಗು ಅವಳಲ್ಲಿ. ನೋಡು ಅ ನೈಟಿ , ಚೂಡಿದಾರ್ ಗಿಂತಲೂ ಸೀರೇಲಿ ಲಕ್ಷಣವಾಗಿ ಕಾಣ್ತಿದ್ದೀಯಾ ಅಂತಾರೆ. ಬೀರೂ ತುಂಬಾ ಸೀರೆ ಇದ್ರೂ , ಅಮ್ಮಾ ಅಪ್ಪಾ ನನ್ನ ಕನಸಿನ ಗರ್ಭಿಣಿಯಾದಾಗ , ಪ್ರೀತಿಯಿಂದ ತಂದಿತ್ತಿದ್ದ ಹಸಿರು ಮೈಸೂರು ಸಿಲ್ಕ್ ಸೀರೆ , ಬಾಣಂತನ ಮುಗಿಸಿ ಪತಿಯ ಮನೆಗೆ ಬರುವಾಗೊಂದು ರೇಷ್ಮೆ ಸೀರೆ, ಪುನಃ ಮಗನ ಗರ್ಭಿಣಿಯಾದಾಗಲೂ ಹಳದಿ ಬಣ್ಣದ ಸೀರೆಗೆ ಹಸಿರು ಬಣ್ಣದ ಬಾರ್ಡರ್ ಸೆರಗಿನ ಸೀರೆ ಈಗಲೂ ಬೆಚ್ಚಗೆ ಬೀರೂಲಡಗಿದೆ.ಅಪ್ಪಾ ಸತ್ತು ವರ್ಷದ ನಂತರ ನನಗೆ ತಂಗಿಗೆ ಅಮ್ಮ ಸೀರೇ ತಗೋಳಿ ಅಂದಾಗ ಕಣ್ಣೀರು ಸುರಿದಿತ್ತು. ಸೀರೆ ಅಂದ್ರೇ ಪ್ರಾಣ ಬಿಡ್ತಿದ್ದ ನನಗೆ ಬೇಡವೆನಿಸಿತ್ತು .ಈಗ ಎಲ್ಲಿ ಹೋದರಲ್ಲಿ ಸೀರೆ ಬಂದು ಸೇರುತ್ತೆ. ಗೆಳತಿಯ ಮಗನ ಮದುವೆಗೆ ಸೀರೆ, ಸಂಬಂಧಿಕರ ಮನೆಯ ಸಮಾರಂಭ ಆದರೆ ಸೀರೆ , ಸೀರೆ .ಸೀರೆ. ಬೇಡಪ್ಪಾ ಸಾಕು ಸಾಕೆನಿಸುವಷ್ಟು ಸೀರೆ. ಮಗಳು ಅಳಿಯ ತಂದ ಸೀರೆ , ಮಗರಾಯ ತಂದ ಸೀರೆ , ಅಳಿಯನ ಅಣ್ಣಾ ಅತ್ತಿಗೆ ತೆಗೆಸಿಕೊಟ್ಟ ಸೀರೆ, ಆತ್ಮೀಯರು ದೂರದೂರಿನಿಂದ ಕೊರಿಯರ್ ಮಾಡಿ ಕಳಿಸಿದ ಸೀರೆ , ಹೀಗೆ ಮೂರು ಬೀರೂ ತುಂಬಾ ಸೀರೆ ತುಂಬಿದ್ದರೂ ತೀರದ ದಾಹ , ಉಡದಿದ್ರೂ ಪರವಾಗಿಲ್ಲ. ಸೀರೆ ತಗೋತಾ ಇರಬೇಕು . ಅದನ್ನು ಆಗೊಮ್ಮೆ ಈಗೊಮ್ಮೆ , ಜೋಡಿಸಿದ ಸೀರೆಯ ಮುಂದೆ ನಿಂತು ಅದರ ಮೇಲೆ ಕೈಯ್ಯಾಡಿಸಿ ಅದರ ಹಿಂದಿನ ಸವಿ ಸವಿ ನೆನಪುಗಳನ್ನು ಮೆಲುಕು ಹಾಕುವಾಗ ಮನದ ಸಂತಸವನ್ನು , ಭಾವನೆಗಳನ್ನು ಹೇಳಲು ಪದವಿಲ್ಲ.

ಯಾರು ಬರ್ತೀರಿ ? ಅದೇ ರೀ ಎಲ್ಲಿಗೆ ಅನ್ಬೇಡಿ . ಸೀರೆ ತಗೊಳ್ಳಿಕ್ಕೆ ಕಣ್ರೀ.

ಏನಂತೀರಿ… ????


  • ನಾಗಮಣಿ ಎಚ್ ಆರ್ (ಲೇಖಕಿ, ಸಾಹಿತ್ಯ ಪ್ರಿಯರು), ಹಾಸನ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW