ನೇರಳೆ ಹಣ್ಣಿನ ಕಾಲ – ಡಾ. ವಡ್ಡಗೆರೆ ನಾಗರಾಜಯ್ಯಜಂಬೂಫಲ ಹಾಗೂ ಪುರಾಣಕ್ಕೂ ಒಂದು ನಂಟಿದೆ ಆ ನಂಟಿನ ಸಣ್ಣ ಕತೆಯನ್ನ ಹಿರಿಯ ಚಿಂತನಕಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಸುಂದರವಾಗಿ ವರ್ಣಿಸಿದ್ದಾರೆ, ತಪ್ಪದೆ ಓದಿ…

ಇದು ನೇರಳೆ ಹಣ್ಣಿನ ಕಾಲ. (ಬೆಂಗಳೂರಿನಲ್ಲಿ ಕಾಲು ಕೆಜಿ ನೇರಳೆ ಹಣ್ಣಿಗೆ 50 ರೂಪಾಯಿ!) ಇದರ ಮತ್ತೊಂದು ಹೆಸರು ಜಂಬೂಫಲ. ಜಲಜಾಂಬವ ಮೌಖಿಕ ಪುರಾಣದ ಪ್ರಕಾರ ಭಾರತದ ಪೂರ್ವದ ಹೆಸರು ಜಂಬೂದ್ವೀಪ. ವಿಶ್ಪಸೃಷ್ಟಿಯ ಮೂಲವಸ್ತುವಾದ ಪರಾತ್ಪರ ವಸ್ತುವನ್ನು ಕುರಿತು ತಿಳಿದುಕೊಳ್ಳಲು ಮಂಟೇಸ್ವಾಮಿಯು ತನ್ನ ಗುರುದೇವನಾದ ಗುರುಬಾರಲಿಂಗಯ್ಯನ ಅನುಜ್ಞೆಯ ಮೇಲೆ ದಕ್ಷಿಣದ ದ್ರವೀಡ ದೇಶದ ಕತ್ತಲರಾಜ್ಯದಿಂದ ಉತ್ತರದೇಶಕ್ಕೆ ಪ್ರಯಾಣಿಸಿದನು. ಅಲ್ಲಿ ಗುರು ಕೊಡೇಕಲ್ ಬಸವಣ್ಣನ ಬಳಿ ಯೋಗಸಿದ್ಧಿ, ರಸಸಿದ್ಧಿ, ಕಾಯಸಿದ್ಧಿ ಮುಂತಾದ ಸಿದ್ಧಿಗಳನ್ನು ಪಡೆದು ಕಡೆಗೆ ಪರಾತ್ಪರವಸ್ತುವು ಜಂಬೂದ್ವೀಪದ ಜಾಂಬವಮುನಿಯ ಬಳಿಯಲ್ಲಿತ್ತೆಂದು ತಿಳಿದನು. ಸೃಷ್ಟಿನಿಯಾಮಕನಾದ ಜಂಬೂಮುನಿಯನ್ನು ಧ್ಯಾನಿಸಿ ಪಾತಾಳಮಾರ್ಗವಾಗಿ ಅಂತರ್ಧಾನವಾಗಿ ಹೋದ ಮಂಟೇಸ್ಯಾಮಿಯು ಚಿರಂಜೀವಿಯಾದ ಜಂಬೂಮುನಿಯಿಂದ ಪರಾತ್ಪರ ವಸ್ತುವನ್ನು ಭೂಮಿಗೆ ಮರಳಿತಂದು “ಧರೆಗೆ ದೊಡ್ಡವರು” ಎಂದು ಕರೆಸಿಕೊಂಡರೆಂದು ಈ ಮೌಖಿಕ ಪುರಾಣ ಸಾರುತ್ತದೆ.

ಫೋಟೋ ಕೃಪೆ : google

ಅದಿರಲಿ ವಿದ್ಯೆಯ ಅಧಿದೇವತೆ (ಸರಸ್ವತಿ) ಮಾತಂಗಿಯು ಜಂಬೂಫಲ ಪ್ರಿಯಳು. ಸಂಗೀತರಸಿಕೆಯೂ ಶಾಮಲವರ್ಣದವಳೂ ಆದ ಅವಳು ಕದಂಬ ವನವಾಸಿನಿಯಾಗಿರುವಂತೆಯೇ ಜಂಬೂ ನದಾದ್ರಿಯಲ್ಲಿ ಕ್ರೀಡಿಸುವವಳಾಗಿದ್ದಳು. ಕಾಳಿದಾಸ ಕವಿಯು ತನ್ನ ‘ಶಾಮಲಾದೇವಿ ದಂಡಕ’ದಲ್ಲಿ ಮಾತಂಗಕನ್ಯಾ ಮನಸಾಸ್ಮರಾಮಿ ಎಂದು ಈ ಜಂಬೂಫಲಪ್ರಿಯಳಾದ ಮಾತಂಗಿಯನ್ನು ಸ್ತುತಿಸಿದ್ದಾನೆ. ಈಗ ನಿಮಗೆ ನೇರಳೆಹಣ್ಣು ತಿನ್ನಬೇಕೆನ್ನಿಸಿದರೆ ಧರೆಗೆದೊಡ್ಡವರನ್ನೂ- ದೇವಿ ಮಾತಂಗಿಯನ್ನೂ- ಜಂಬೂಮುನಿಯನ್ನೂ- ಗುರುಬಾರಲಿಂಗಯ್ಯನನ್ನೂ- ಜಂಬೂದ್ವೀಪದ ಜಂಬೂಫಲವನ್ನು ಕುರಿತ ಈ ನೆನಪು ದಾಟಿಸಿಕೊಂಡುಬಂದಿರುವ ಮೌಖಿಕರನ್ನೂ ಸ್ಮರಣೆ ಮಾಡಿ ತಿನ್ನಿರಿ.

ಫೋಟೋ ಕೃಪೆ : google

ಜಂಬೂಫಲದ ಕೆಲವು ನೆಲೆಗಳನ್ನು ಹೀಗೆ ಗುರುತಿಸಬಹುದು : 

  • ಭಾರತ ದೇಶಕ್ಕೆ -ಜಂಬೂ ದ್ವೀಪ ಎಂದು ಹೆಸರಿಸಲು ಕಾರಣವಾದದ್ದು ಈ ಜಂಬೂ ಫಲ.
  • ಯೋಗಸಿದ್ಧಿ, ರಸಸಿದ್ಧಿ, ಕಾಯಸಿದ್ಧಿನಮ್ಮೊಳಗಿನ ಸತ್ವ ರಜಸ್ಸು ತಮಸ್ಸು ಗುಣಗಳನ್ನು ಪ್ರತಿನಿಧಿಸುತ್ತವೆ.
  • ಮತಂಗ ತನಯಳೆನಿಸಿದ ಮಾತಂಗಿ( ಆದಿ ಪರಾಶಕ್ತಿ) ಕಪ್ಪು ವರ್ಣಾತ್ಮಿಕೆ. (ಕಾಳಿದಾಸ -ಸರ್ವ ಯಂತ್ರಾತ್ಮಿಕೆ ಸರ್ವ ತಂತ್ರಾತ್ಮಿಕೆ ಸರ್ವ ವರ್ಣಾತ್ಮಿಕೆ ಸರ್ವ ರೂಪೇ ಜಗನ್ಮಾತ್ರುಕೆ )ಅದಕ್ಕಾಗಿಯೇ ಈ ನೇರಳೆ ಹಣ್ಣು ಆಕೆಯ ಸ್ವರೂಪ.
  • ಕರಿಮಣ್ಣಿನ ನೆಲ ಅಂದರೆ ಕರುನಾಡು ಕಪ್ಪು ಬಣ್ಣದ ಹಣ್ಣುಗಳಿಗೆ ಜಗತ್ಪ್ರಸಿದ್ಧಿ. ಹಾಗಾಗಿ ನೇರಳೆ ಹಣ್ಣು ಈ ಮಣ್ಣಿನ ಗುಣವನ್ನು ಹೊತ್ತುಕೊಂಡಿರುವ ಹಣ್ಣು. ಅದಕ್ಕೆ ಈ ಹಣ್ಣು ಎಲ್ಲರಿಗೂ ಇಷ್ಟ.
  • ಜಗದ್ರಕ್ಷಕನಾದ ಶ್ರೀ ಕೃಷ್ಣನು ನೀಲಾ ಮೇಘ ಶ್ಯಾಮ (ಕಪ್ಪು ಬಣ್ಣದವನು) ನೇರಳೆ ಹಣ್ಣು ಅವನಿಗೆ ಸಮರ್ಪಣೆ. ಹೀಗೆ ಗುರುತಿಸಿರುವ ನೆಲೆಗಳನ್ನು ವಿಸ್ತರಿಸಿ ನಾನು ಹೇಳುವುದೇನೆಂದರೆ-

ರಾಮ-ಕೃಷ್ಣ- ಈಶ್ವರ- ಗಣಪತಿ- ಬಾಲಾಜಿ ಮುಂತಾದ ದೇವಾನುದೇವತೆಗಳೆಲ್ಲರೂ ಕಪ್ಪುವರ್ಣೀಯರೇ ಆಗಿರುವರು. ದ್ರೌಪತಿಯೊಬ್ಬ ಕಪ್ಪು ಸುಂದರಿ. ಹೀಗೆ ಭಾರತದೇಶವೇ ಕಪ್ಪುವರ್ಣವನ್ನು ತನ್ನ ಪ್ರಜ್ಞಾ ಕೇಂದ್ರದಲ್ಲಿರಿಸಿಕೊಂಡಿದೆ. ವೈದಿಕರು ತಮ್ಮ ಮಂತ್ರಗಳಲ್ಲಿಯೂ ‘ಜಂಬೂದ್ವೀಪೇ… ಭರತಖಂಡೇ…” ಎಂದು ಸ್ತುತಿಸುತ್ತಲೇ ಈ ಕಪ್ಪುಬಣ್ಣದ ಪ್ರಜ್ಞಾಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಜಂಬೂಫಲ ತಂತ್ರಸಾಧಕರ ತಾಂತ್ರಿಕ ವಿದ್ಯೆಯಲ್ಲಿಯೂ ಬಳಕೆಯಾಗುತ್ತಿದೆ.

ಇನ್ನೊಂದು ತರ್ಕದ ಪ್ರಕಾರ ಜಂಬೂದ್ವೀಪದಲ್ಲಿದ್ದ ಆ ಮೂಲ ಪುರುಷ ಜಾಂಬವ ಅಲ್ಲ ಜಂಬೂವ. ಹೇಗೆಂದರೆ ಭಾರತಕ್ಕೆ ಮೊದಲಿದ್ದ ಹೆಸರು ಜಂಬೂದ್ವೀಪ. ಅಷ್ಟಕ್ಕೂ ಜಂಬು ಎಂದರೆ ಏನು? ಜಂಬು ಎಂದರೆ ಆನೆ ಹೌದಲ್ಲವೇ? (ಮೈಸೂರಿನ ಜಂಬೂಸವಾರಿ – ಆನೆ ಸವಾರಿ). ಹಾಗೆಯೇ ಮಾದಿಗ ಈ ಅರ್ಥವೂ ಆನೆಯ ಪಂಥದ ಹೆಸರನ್ನೇ ಸೂಚಿಸುತ್ತದೆ. ಉದಾ. : ಮಾವುತ (ಆನೆ ಪಳಗಿಸುವ ಮಾಸ್ಟೀಕ).ಶಿವನ ಉಪಾಸಕನಾದ ಘನಶರಣ ಮಾದಾರ ಚೆನ್ನಯ್ಯನು‌ ಲಿಂಗಾರ್ಚನೆ ಮಾಡಲು ಬಳಸುತ್ತಿದ್ದ ಹಣ್ಣುಗಳಲ್ಲಿ ಜಂಬೂಫಲವೂ ಒಂದೆಂಬುದು ಗಮನಾರ್ಹ ಸಂಗತಿ.

“ಹಸಿದಯ್ಯ ಎನ್ನ ಜೀವದ ಜೀವವೇ ಎಂದು
ಉಸುರಸಂತೈಸುತೋವುತ್ತೆ ಹತ್ತಿರ ಬಂದು
ಜಂಬುಫಳ ಚೂತಫಳಮುಮನೊಲವಿನಿಂ ಕರಂ
ಇಂಬಿನಿಂದಾರೋಗಿಸಲ್ಕೊಟ್ಟನಂತರಂ
ತೂಪಿರಿದು ಕಾಪಿಟ್ಟು ಕಣ್ಗೊಳೊಳಗೊತ್ತುತಂ
ಭಾಪು ಭಾಗ್ಯವೆ ಎಂದು ಮುಂಡಾಡಿ ಪೆರ್ಚುತಂ
ಕರುಣಪ್ರಸಾದಮಂ ಪ್ರೇಮದಿಂ ಕೈಗೊಂಡು
ಹರಣ ಕಾರುಣ್ಯಮಂ ತಾನೊಚ್ಚತಂಗೊಂಡು”

(ಹರಿಹರನ ರಗಳೆಗಳು, ಪುಟ 470, ‘ಮಾದಾರ ಚೆನ್ನಯ್ಯನ ರಗಳೆ’ ಹರಿಹರ).

ಶಿವನಿಗೆ ಅರ್ಪಿತವಾದ ಇಂತಪ್ಪ ಜಂಬೂದ್ವೀಪದ ಜಂಬುನೇರಳೆ ಹಣ್ಣನ್ನು ನಾವೆಲ್ಲರೂ ಹಿತವಾಗಿ ಸವಿಯೋಣ.


  • ಡಾ. ವಡ್ಡಗೆರೆ ನಾಗರಾಜಯ್ಯ  (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW