ಕರೆಂಟ್ ಇಲ್ಲದ ಕಾಲ – ಪ್ರೊ.ರೂಪೇಶ್ ಪುತ್ತೂರು”ಪೆಟ್ರೋಮಾಕ್ಸನ್ನು ಸುಮಾರು 19ನೇ ಶತಮಾನದ ಕೊನೆಯ ಭಾಗದಲ್ಲಿ Max Graetz ಎಂಬಾತನು ಆವಿಷ್ಕರಿಸಿದನೆಂದು ಚರಿತ್ರೆ. ಈ ದೀಪದಲ್ಲಿ ಮೊದಲು ಪ್ಯಾರಫಿನ್ ಮೇಣವನ್ನು ಇಂಧನವಾಗಿ ಉಪಯೋಗಿಸುತ್ತಿದ್ದರು. ನಂತರ ನನ್ನ ನೆನಪಿನವರೆಗೂ/ಇಂದೂ ಸೀಮೆ ಎಣ್ಣೆಯ ಬಳಕೆಯಾಯಿತು” – ಪ್ರೊ.ರೂಪೇಶ್ ಪುತ್ತೂರು, ಮುಂದೆ ಓದಿ…

ನಾನು ಹತ್ತನೇ ತರಗತಿ ತಲುಪುವವರೆಗೆ ನಮ್ಮ ಮನೆಯಲ್ಲಿ ಕರೆಂಟ್ ಇರಲಿಲ್ಲ, ಬದಲಾಗಿ ಚಿಮಣಿ ದೀಪ ಉರಿಸುತ್ತಿದ್ದೆವು. ಮಧ್ಯಪಾನ ಮಾಡಿ ಯಾರೋ ಎಸೆದ ಕುಪ್ಪಿಯ ಮುಚ್ಚಳಕ್ಕೆ ತೂತು ಮಾಡಿ, ಹಳೇ ಬಟ್ಟೆಯನ್ನು ತುರುಕಿಸಿ, ಸೀಮೆಎಣ್ಣೆ ಹಾಕಿ, ಉರಿಸಿದರೆ, ಹೊಗೆಯಿಂದ ಕೂಡಿದ ದೀಪ !!!!! …..

ನಂತರ SSLC ಪರೀಕ್ಷೆಗೆ ಮಧ್ಯವಾರ್ಷಿಕ ಪರೀಕ್ಷೆ ಮೊದಲು (ಸೆಪ್ಟೆಂಬರ್ ತಿಂಗಳು) ಅಪ್ಪ ಗ್ಯಾಸ್ ಲೈಟ್/ ಪೆಟ್ರೋಮ್ಯಾಕ್ಸ್ ಮನೆಗೆ ತಂದರು. ಮೊದ ಮೊದಲು ಅಪ್ಪನೇ ಅದನ್ನು ಉರಿಸುತ್ತಿದ್ದರು. ಅಪ್ಪ ಮನೆಗೆ ಬರುವಾಗ ಕತ್ತಲು ಆವರಿಸುವುದರಿಂದ, ನನಗೆ ಅಪ್ಪ ಅದು ಹೇಗೆ ಉರಿಸುವುದು, ಬಲ್ಬ್ ತರಹ ಇರುವ ಬಿಳಿ ಬಟ್ಟೆಯ ಮ್ಯಾಂಟಲ್ ಅದರೊಳಗೆ ಅಳವಡಿಸಿ, ಹೇಗೆ ಕಟ್ಟುವುದು… ಎಲ್ಲಾ ಅಪ್ಪನಿಂದ ಕಲಿತ ಮೇಲೆ, ನಾನೇ ಅದನ್ನು ನಿಧಾನವಾಗಿ ಉರಿಸಲು ಕಲಿಯತೊಡಗಿದ್ದು.

ಫೋಟೋ ಕೃಪೆ : twitter

ಬಲ್ಲ ಮೂಲಗಳ ಪ್ರಕಾರ, ಪೆಟ್ರೋಮಾಕ್ಸನ್ನು ಸುಮಾರು 19ನೇ ಶತಮಾನದ ಕೊನೆಯ ಭಾಗದಲ್ಲಿ Max Graetz ಎಂಬಾತನು ಆವಿಷ್ಕರಿಸಿದನೆಂದು ಚರಿತ್ರೆ. ಈ ದೀಪದಲ್ಲಿ ಮೊದಲು ಪ್ಯಾರಫಿನ್ ಮೇಣವನ್ನು ಇಂಧನವಾಗಿ ಉಪಯೋಗಿಸುತ್ತಿದ್ದರು. ನಂತರ ನನ್ನ ನೆನಪಿನವರೆಗೂ/ಇಂದೂ ಸೀಮೆ ಎಣ್ಣೆಯ ಬಳಕೆಯಾಯಿತು.

ಇದರಲ್ಲಿ ಉಪಯೋಗಿಸಲ್ಪಡುವ ಪೆಟ್ರೋಲಿಯಮ್ ಮೂಲದ ಇಂಧನ ಮತ್ತು ಆವಿಷ್ಕರಿಸಿದವನ ಹೆಸರಿನ ಪೂರ್ವಾರ್ಧ ಮ್ಯಾಕ್ಸ್ ಸೇರಿ ಪೆಟ್ರೊಮ್ಯಾಕ್ಸ್ ಹಾಗೂ ಇಂಧನವು ಗ್ಯಾಸ್ ರೂಪಕ್ಕೆ ಪರಿವರ್ತನೆಗೊಂಡು ಬೆಳಕನ್ನೀಯುವುದರಿಂದ ಗ್ಯಾಸ್ ಲೈಟ್ – ಎಂಬ ಹೆಸರು ಪ್ರಸಿದ್ಧಿಯಾಯಿತು.

ಇದರ ಕೆಳಗೆ ಒಂದು ಚಿಕ್ಕ ಕೈ ಪಂಪ್ ಇದ್ದು , ಆ ಕೈ ಪಂಪಿನಿಂದ ಹಾಕಿದ ಒತ್ತಡ, (pressure) ಮೂಲಕ ಟ್ಯಾಂಕಿನಲ್ಲಿರುವ ಇಂಧನ/ಸೀಮೆಎಣ್ಣೆ ಎಂಬ ದ್ರಾವಣದ ಮೇಲೆ ಉಂಟುಮಾಡುವ ಒತ್ತಡದಿಂದ ಇಂಧನ ಮೇಲೇರುತ್ತದೆ. ಆರಂಭದಲ್ಲಿ ಇಂಧನ ಮೇಲೇರುವ ಕೊಳವೆಯ ಬುಡದಲ್ಲಿ ಸ್ಪಿರಿಟನ್ನು ಉರಿಸಿ ಉಷ್ಣತೆ ಉಂಟುಮಾಡಿ ತಕ್ಷಣ ಬುಗ್ಗ್ ಎಂದು ಒಮ್ಮೆ ಉರಿಯತೊಡಗಿದ ಮೇಲೆ ತನ್ನದೇ ಉಷ್ಣತೆಯನ್ನು ಉಪಯೋಗಿಸಿ ಆ ದ್ರವ ಇಂಧನವು, – ದ್ರವದಿಂದ ಅನಿಲ/ಗ್ಯಾಸ್ ರೂಪವನ್ನು ಪಡೆದು, ಕಿರು ರಂಧ್ರದ ಮೂಲಕ ಮ್ಯಾಂಟಲಿನೊಳಗೆ ಚಿಮ್ಮಿ ಉಜ್ವಲ ಬೆಳಕು ಬೀರುತ್ತದೆ. ಈ ತಂತ್ರಜ್ಞಾನ ನನಗೆ ಅಂದು ನಿಜಕ್ಕೂ ಅದ್ಭುತವಾಗಿತ್ತು.

ಕೆಲವೊಮ್ಮೆ ಈ ಇಂಧನ ಅನಿಲ ರೂಪ ಪಡೆದು ಹೋಗುವ ರಂಧ್ರಗಳು ಮುಚ್ಚಿದ್ದರೆ, ಒಂದು ಪಿನ್ ಉಪಯೋಗಿಸಿ ಆ ತಡೆ ನಿವಾರಿಸಿ, ರಂಧ್ರ ತೆರವುಗೊಳಿಸಿ ಉರಿಸಬಹುದಿದೆ.

ವಿವಿಧ ರಾಸಾಯನಿಕಗಳನ್ನು ಲೇಪಿಸಿದ ಸಿಲ್ಕಿನ ಬಲೆಯಂಥ ರಚನೆ ಹೊಂದಿದ ಮ್ಯಾಂಟಲ್ ಪ್ರಥಮ ಉಪಯೋಗದಲ್ಲೇ ಸುಟ್ಟು ಬೂದಿಯಾದರೂ ಸೂಕ್ತ ಎಚ್ಚರಿಕೆ ವಹಿಸಿದರೆ ಆ ಬೂದಿಯೇ ಸುದೀರ್ಘ ಸಮಯ ಬಾಳಿಕೆ ಬರುತ್ತದೆ. ಮೊದ ಮೊದಲು ನನ್ನಿಂದ ಈ ಮ್ಯಾಂಟಲ್ ಬೂದಿಯಾಗಿ ಬಿದ್ದು ಅಪ್ಪ ಬರುವ ವರೆಗೆ ಕತ್ತಲಲ್ಲಿ ಕಾದು ಕುಳಿತಿದ್ದೂ ಇದೆ.

ಫೋಟೋ ಕೃಪೆ : twitter

ಗ್ಯಾಸ್ ಲೈಟಿಗೆ ಹೊಸ ಮ್ಯಾಂಟಲ್ ಅಳವಡಿಸಿ ಅದನ್ನು ಉರಿಸುವುದು ಸುಲಭದ ಕೆಲಸವೇನೂ ಅಲ್ಲ. ಆ ವಿದ್ಯೆ ಗೊತ್ತಿದ್ದವನು ದೊಡ್ಡ ಹೀರೊ ಎಂದೇ ಅನ್ನಿಸಿಕೊಳ್ಳುತ್ತಿದ್ದ. ಮ್ಯಾಂಟಲ್ ಹೊಂದಿ ಸಿದ್ಧವಾಗಿರುವ ಗ್ಯಾಸ್ ಲೈಟ್ ಉರಿಸುವುದು, ಬೆಳಕು ಮಂಕಾದಾಗ ಮತ್ತೆ ಪುನಃ ಪಿನ್ ಹೊಡೆದು ಗಾಳಿ ಪಂಪ್ ಮಾಡುವುದು – ಅಂದು ನಮ್ಮೂರಲ್ಲಿ ಬಹಳಾ ಕೆಲವೇ ಮಂದಿಗೆ ಗೊತ್ತಿತ್ತು. ಪಂಪ್ ಮಾಡುವಾಗ ಕೊಂಚ ಎಡವಟ್ಟಾದರೂ ಬೂದಿ-ಮ್ಯಾಂಟಲ್ ಬಿದ್ದು ಹೋಗುವ ಸಾಧ್ಯತೆ ಇರುತ್ತಿತ್ತು. ಅದಕ್ಕಾಗಿಯೇ ಅಂದೆಲ್ಲಾ ಮ್ಯಾಂಟಲ್ ಒಂದು ಪ್ಯಾಕ್ ಮನೆಯಲ್ಲಿತ್ತು. ಉರಿದ ಪೆಟ್ರೋಮ್ಯಾಕ್ಸಿನೊಳಗೆ ಭೂಧಿಯಾದ ಮ್ಯಾಂಟಲಿನ ಅಸ್ಥಿ, ಮಾರನೇ ದಿನಗಳಿಗೆ ಬಹಳಾ ಜಾಗರೂಕತೆಯಿಂದ ಇಡುತ್ತಿದ್ದೆ. ಕೆಲವೊಮ್ಮೆ ಮಾರನೇ ದಿನವೇ ಆ ಬೂದಿ ಕಳಚಿ ಬೀಳುತ್ತಿತ್ತು- ಕೆಲವೊಮ್ಮೆ ಹಲವು ದಿನ ಉಪಯೋಗಿಸಿದ್ದೂ ಇದೆ.

ಅದನ್ನು ಉರಿಸುವುದು ಕಲಿತ ಮೇಲೆ , ನನ್ನದೇ ಆದ ರೀತಿ ನಾನು ಅಳವಡಿಸತೊಡಗಿದೆ. ಹೆಚ್ಚಾಗಿ ಸ್ಪಿರಿಟ್ ಉಪಯೋಗಿಸಿ ಉರಿಸುತ್ತಿದ್ದರೂ, ಮನೆಯಲ್ಲಿ ಸ್ಪಿರಿಟ್ ಇಲ್ಲದ್ದರಿಂದ ನಾನು ಸೀಮೆಎಣ್ಣೆಯಲ್ಲಿ ಅದ್ದಿದ ಒಂದು ಬತ್ತಿಯ/ಪೊರಕೆ ಕಡ್ಡಿ ಸಹಾಯದಿಂದ ಅಥವಾ ಒಂದು ಬೆಂಕಿ ಕಡ್ಡಿಯ ಸಹಾಯದಿಂದ ಅಥವಾ ಪೇಪರಿಗೆ ಬೆಂಕಿ ಹೊತ್ತಿಸಿ ಕಾರ್ಯ ಸಾಧಿಸುತ್ತಿದ್ದೆ.

ಇಂಧನ ಟ್ಯಾಂಕಿನಲ್ಲಿ ಪ್ರೆಶರ್ ಗೇಜ್ ಇರುತ್ತಿದ್ದರೂ, ನಂತರದ ದಿನಗಳಲ್ಲಿ ಅಂದಾಜಿನಲ್ಲಿ ಗಾಳಿ ಪಂಪ್ ಮಾಡುತ್ತಿದ್ದೆ ಅಲ್ಲದೆ ಗೇಜನ್ನು ನೋಡುವುದೇ ಬಿಟ್ಟೆ.

ಗ್ಯಾಸ್ ಲೈಟ್ ಉರಿಸುವಾಗ ಬೀದಿಯಲ್ಲಿ ಹೋಗುವವರು, ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಹೋಗುವವರು, ಮಕ್ಕಳೆಲ್ಲ ಸುತ್ತುಗಟ್ಟಿ ನಿಲ್ಲುತ್ತಿದ್ದುದು ಕಂಡು ನನಗೆ ಏನೋ ಅಹಂಕಾರ ತುಂಬಿ ತುಳುಕಿಸುತ್ತಿತ್ತು.

ಗ್ಯಾಸ್ ಲೈಟುಗಳ ಗಾಜು ಎರಡು ರೀತಿಯದಾಗಿರುತ್ತಿತ್ತು. ಒಂದು ಇತರ ಲ್ಯಾಂಪುಗಳಂತೆ single unit ಆಗಿರುವಂಥದ್ದು ಇನ್ನೊಂದು ಅನೇಕ ಪಟ್ಟಿಗಳನ್ನು ಸೇರಿಸಿ ಮಾಡಿರುವಂಥದ್ದು.

ಮೊದಲನೆಯದ್ದು ಒಡೆದರೆ ಇಡೀ ಗಾಜು ಬದಲಾಯಿಸಬೇಕಾಗುತ್ತಿತ್ತು. ಕೆಲವೊಮ್ಮೆ ಉರಿಯುತ್ತಿದ್ದ ಮ್ಯಾಂಟಲ್ ಗೆ ತೂತು ಆದರೆ , ಅಥವಾ ಮ್ಯಾಂಟಲ್ ಸೀಳಿ ಬಾಯ್ಬಿಟ್ಟರೆ- ಆ ತೂತು/ಬಾಯ್ಬಿಟ್ಟ ಕಡೆಯಿಂದ ಬಂದ ಬೆಂಕಿಯ ಹೆಚ್ಚಿನ ನಿರಂತರ ಶಾಖದಿಂದ, single unit ಗಾಜು ಸಂಪೂರ್ಣ ಹೊಡೆದು ಹೋಗಿ ಉಪಯೋಗಿಸಲು ಅಸಾಧ್ಯವಾಗುತ್ತದೆ. ಇದು ತುಂಬಾ ಖರ್ಚು ತಗುಲುತ್ತಿದ್ದುದರಿಂದ ಪಟ್ಟಿ ಗಾಜು ಉಪಯೋಗಿಸತೊಡಗಿದೆವು. ಅಂದರೆ ಪಟ್ಟಿ ಗಾಜು, ಒಂದೋ ಎರಡೋ ಒಡೆದು ಹೋದರೆ, ಸಂಪೂರ್ಣ ಬದಲಾಯಿಸಬೇಕೆಂದಿಲ್ಲ. ಬದಲಾಗಿ ಒಡೆದ ಪಟ್ಟಿಗಳನ್ನು ಮಾತ್ರ ಬದಲಾಯಿಸಿದರೆ ಸಾಕಾಗುತ್ತಿತ್ತು.

ಮೊದಲ ಕೆಲ ದಿನ ಈ, ಮನೆಗೆ ತಂದ ಪೆಟ್ರೋಮ್ಯಾಕ್ಸ್ ನ ಕೆಳಭಾಗದ ಟ್ಯಾಂಕ್ ನಿಮ್ನ ದರ್ಪಣದಂತೆ (concave) ಸ್ಪಟಿಕದಂತೆ ಹೊಳೆಯುವಂತದಾಗಿದ್ದು ಕಂಡು , ಆ ಟ್ಯಾಂಕಲ್ಲಿ ಉದ್ದನೆಯ ಪ್ರತಿಬಿಂಬ ನೋಡುವುದು, ನನಗೂ ತಂಗಿಗೂ ಬಹಳ ಮಜಾ ಅನ್ನಿಸುತ್ತಿತ್ತು. ವಜ್ರಮುನಿ ಚಲನ ಚಿತ್ರದಲ್ಲಿ ತನ್ನ ಮುಖ ಹತ್ತಿರ ತಂದು ದೂರ ಹೋದಂತೆ ನಾನು ಆಗಾಗ ಟ್ಯಾಂಕಿನ ಮುಂದೆ ನನ್ನದೇ ವಿಚಿತ್ರತೆ ತೋರಿ ವಜ್ರಮುನಿ ಆಗುತ್ತಿದ್ದೆ.

ಫೋಟೋ ಕೃಪೆ : Flickr

ಸುಮಾರು ವರುಷ ಮನೆಗೆ ಕರೆಂಟ್ ಬರುವವರೆಗೆ, SSLC ಪರೀಕ್ಷೆಗೂ ನಾನು ಈ ಪೆಟ್ರೋಮಾಕ್ಸ್ ಉರಿಸಿ ಅದರ ಬೆಳಕಲ್ಲಿ ಓದುತ್ತಿದ್ದೆ.

ಮಳೆಯ ಚಳಿ ಜಾಸ್ತಿ ಆದಾಗ ಅದರ ಪಕ್ಕ ಹೋಗಿ ಓದುತ್ತಿದ್ದಾಗ, ಆ ಮಳೆಗೆ, ಆ ಬೆಳಕಿನ ಹತ್ತಿರ ಬಂದ ಹಾತೆಗಳು ಮುಖ- ಮೈಮೇಲೆ – ಪುಸ್ತಕದ ಒಳಗೆ ಸೇರುತ್ತಿತ್ತು. ಮಾರನೇ ದಿನ ಶಾಲೆಯಲ್ಲಿ ಪುಸ್ತಕ ತೆರೆದಾಗ ಅದರೊಳಗೆ ಹಾತೆಗಳು ಅಪ್ಪಚ್ಚಿಯಾಗಿ ಇರುತ್ತಿತ್ತು.

ಬೇಸಿಗೆ ಕಾಲದಲ್ಲಿ ಅದರಿಂದ ಎಷ್ಟೇ ದೂರದಲ್ಲಿ ಕೂತು ಓದು/ಬರೆಯುತ್ತಿದ್ದರೂ, ಅದರ ಶಾಖ ಹಾಗೂ ಬೇಸಿಗೆ ಸೆಖೆಗೆ ಬೆವರಿ ಕಂಗಾಲಾಗುತ್ತಿದ್ದೆ.

ಕೊನೆಗೆ ಆ ಪೆಟ್ರೋಮ್ಯಾಕ್ಸಿನಿಂದ ಸೀಮೆ ಎಣ್ಣೆ ನಿಧಾನ ನಿಧಾನ ಸೋರ ತೊಡಗಿದಾಗ, ಅದರ ಕೆಳಗೆ ಗೋಣಿಚೀಲ ಇಟ್ಟು ಒರಿಸುತ್ತಿದ್ದೆವು.ಗೋಣಿ ಚೀಲ ಸೀಮೆ ಎಣ್ಣೆ ಹೀರುತ್ತಿತ್ತು. ನಂತರ ಇದೇ ಗೋಣಿಚೀಲದ ತುಂಡಿಗೆ ಬೆಂಕಿ ಹಚ್ಚಿ ಗ್ಯಾಸ್ ಲೈಟ್ ಉರಿಸುತ್ತಿದ್ದೆ.

ಕೊನೆಗೊಂದು ದಿನ ತಂದೆಯವರು ಎಲ್ಲಿಂದಲೋ ಸಾಲ ಮಾಡಿ , ಕೆಇಬಿ ಗೆ ಮೂರು ಕಂಬಗಳ ದುಡ್ಡು ಸ್ವತಃ ಕಟ್ಟಿ, ಕರೆಂಟು ತರಿಸಿದರು. ಆದರೂ ಕರೆಂಟು ಹೋದಾಗ ಮ್ಯಾಂಟಲನ್ನು ಕಟ್ಟಿ ಪೆಟ್ರೋಮ್ಯಾಕ್ಸ್ ಉರಿಸುವುದು ನನಗೆ ತುಂಬಾ ಇಷ್ಟವಾಗಿತ್ತು.ಇದನ್ನು ಉರಿಸುವುದು ಕಲಿತ ಮೇಲೆ, ಕೆಲವೊಮ್ಮೆ ಮಳೆಯ ಸಂದರ್ಭದಲ್ಲಿ ಕಟ್ಟಡದ ಒಳಗೋಡೆ ಕತ್ತಲಾದಾಗ ಸಾರಣೆ ಕೆಲಸಕ್ಕೆ, ರಾತ್ರಿ ಕಾಂಕ್ರೀಟ್ ಕೆಲಸಕ್ಕೆ ನಾನೇ ಪೆಟ್ರೋಮಾಕ್ಸ್ ಉರಿಸಲು ಹೋಗುತ್ತಿದ್ದೆ ಅಲ್ಲೇ ಕೂಲಿ ಕೆಲಸನೂ ಮಾಡುತ್ತಿದ್ದೆ. ಮನೆಯಲ್ಲಿ ಯಕ್ಷಗಾನ ನೋಡಲು ಹೋಗುತ್ತೇನೆ ಎಂದು ಹೇಳಿ ಹೋಗುತ್ತಿದ್ದೆ.

ಮಳೆಯ ಚಳಿಗೆ, ಈ ಪೆಟ್ರೋಮ್ಯಾಕ್ಸ್ ನಂದಿಸಿದ ನಂತರ , ಅದರ ಬೆಚ್ಚಗಿನ ಪಕ್ಕ ಒದ್ದು ಮಲಗಲು ಬಹಳಾ ಸುಖ. ಆ ಸಮಯದಲ್ಲಿ, ಪೆಟ್ರೋಮ್ಯಾಕ್ಸ್ ಉರಿದಿರದ ಕತ್ತಲಿನಲ್ಲಿ, ಮಿಂಚು ಹುಳುಗಳು ಮನೆಯ ಮಾಡು/ಓಡಿನ ಸಂದಿನಲ್ಲಿ ಮಿನುಗುವಾಗ, ಒದ್ದಿರುವ ಬೆಡ್ ಶೀಟ್ ತೂತಿನ ಒಳಗಿಂದ ನುಗ್ಗಿದ ನುಸಿ /ಸೊಳ್ಳೆ ಕಚ್ಚುವುದು, ಅದನ್ನು ಆ ಚಳಿಗೆ ತುಸು ಹೊತ್ತಿನ ನಂತರ ತುರಿಸುವಾಗ ಸಿಗುವ ಆನಂದ… ಎಲ್ಲವೂ ನೆನಪುಗಳು …..

ಇಂದು ಎಲ್ಲವೂ ಬದಲಾಗಿದೆ. ಎಲ್ಲೆಲ್ಲೂ ವಿದ್ಯುಚ್ಚಕ್ತಿ ಆವರಿಸಿತು. ವಿವಿಧ ಬಣ್ಣದ ದೀಪಗಳು ಉರಿಯತೊಡಗಿದವು. ಸೆಖೆಗಾಲದಲ್ಲಿ ಚಳಿ ಸಿಗಲು , ಚಳಿಗಾಲದಲ್ಲಿ ಬಿಸಿ ಸಿಗಲು ಎಸಿ ಯಂತ್ರಗಳು,
ಆಹಾರ ಹಸನಾಗಿಸಲು ಫ್ರಿಡ್ಡು, ಮನರಂಜನೆಗೆ ಟಿವಿ ಪರದೆ ಉರಿಸತೊಡಗಿದರು.ಆದರೆ….. ಮಾನವೀಯ ಮೌಲ್ಯಗಳು ಎಲ್ಲೂ ಸರಿಯಾಗಿ ಉರಿಯುತ್ತಿಲ್ಲ. ಎಲ್ಲದಕ್ಕೂ ಬರೇ ದುಡ್ಡು…. ಕಾರ್ಪೊರೇಟ್ ಯುಗದಲ್ಲಿ ಯಾವುದೇ ಸಂಬಂಧವೂ ಮನಸ್ಸಿಗೆ ನಾಟದ ಕಾಲ.

ಮಾನವೀಯ ಮೌಲ್ಯವೆಂಬ ಮಿಂಚುಹುಳ ಎಲ್ಲೋ ಮಿನುಗುತ್ತಿದೆ, ಅದನ್ನು ಎಚ್ಚರಿಸಲು ಒಂದೇ ಒಂದು ಸೊಳ್ಳೆ ಸರಿಯಾಗಿ ಮನುಷ್ಯನ ಮನವನ್ನು ಕಚ್ಚಲು ಆಸ್ಪದವಿಲ್ಲವಾಗಿದೆ.

ಒಂದು ವೇಳೆ ಆ ಸೊಳ್ಳೆ ಕಚ್ಚಿದರೆ, ಮಾನವೀಯ ಸಂಬಂಧಗಳ ಮೌಲ್ಯದ ತುರಿಕೆಯ ಆನಂದ ಮತ್ತೊಮ್ಮೆ ಸವಿಯಬಹುದು….

ಎಂಬ ಆಶಯಗಳೊಂದಿಗೆ…

ನಿಮ್ಮವ ನಲ್ಲ
ರೂಪು


  • ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW