ಮಾನವೀಯತೆ ಮತ್ತು ಒಳ್ಳೆಯತನ – ವಿವೇಕಾನಂದ ಹೆಚ್.ಕೆಅತಿಯಾದ ಮಾನವೀಯತೆ ಮತ್ತು ಒಳ್ಳೆಯತನ ಕೆಲವೊಮ್ಮೆ ವಾಸ್ತವ ಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದ ತಪ್ಪು ಪರಿಣಾಮ ಉಂಟು ಮಾಡಬಹುದು ಎಚ್ಚರವಿರಲಿ….- ವಿವೇಕಾನಂದ ಹೆಚ್.ಕೆ, ಮುಂದೆ ಓದಿ… 

ಪಾದಯಾತ್ರೆಯ ಸಮಯದಲ್ಲಿ ಗೆಳೆಯರೊಬ್ಬರು ಹೇಳಿದ ಕಥೆ ಈ ನಿಟ್ಟಿನಲ್ಲಿ ಸ್ವಾರಸ್ಯಕರವಾಗಿದೆ.

ಒಬ್ಬ ತುಂಬಾ ಒಳ್ಳೆಯ ಮತ್ತು ಜೀವಪರ ನಿಲುವುಗಳ ವ್ಯಕ್ತಿ ಇದ್ದರು. ಒಮ್ಮೆ ಒಂಟಿಯಾಗಿ ದೂರ ಪ್ರಯಾಣ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಒಂದು ದೊಡ್ಡ ನೀರಿನ ಹೊಂಡಕ್ಕೆ ಬೀಳುತ್ತಾರೆ. ಅವರಿಗೆ ಈಜು ಬರುವುದಿಲ್ಲ. ರಕ್ಷಣೆಗೆ ಕೂಗಿಕೊಂಡರು ಯಾರಿಗೂ ಕೇಳಿಸುವುದಿಲ್ಲ. ಇನ್ನೇನು ಮುಳುಗಿ ಸಾಯುವುದು ಖಚಿತವಾಗುತ್ತದೆ. ಅದೇ ಸಮಯದಲ್ಲಿ ಅವರ ಮುಂದೆ ಮೀನೊಂದು ಈಜುತ್ತಾ ಬರುತ್ತದೆ. ತುಂಬಾ ಹೃದಯವಂತ ವ್ಯಕ್ತಿಯಾದ ಇವರಿಗೆ ಗಾಬರಿಯಾಗುತ್ತದೆ. ಮೀನು ಸಹ ನನ್ನಂತೆ ಆಕಸ್ಮಿಕವಾಗಿ ನೀರಿಗೆ ಬಿದ್ದಿದೆ ಎಂದು ಭಾವಿಸಿ ಅಯ್ಯೋ ನಾನೇನೋ ಸಾಯುತ್ತಿದ್ದೇನೆ. ಪಾಪ ಈ ಮೀನು ಸಹ ನೀರಿನಲ್ಲಿ ಮುಳುಗುವುದು ಬೇಡ. ಕನಿಷ್ಠ ಅದರ ಜೀವವನ್ನಾದರೂ ಉಳಿಸೋಣ ಎಂದು ಅದನ್ನು ಹಿಡಿದು ನೀರಿನಿಂದ ಎಸೆಯುತ್ತಾರೆ. ನಂತರ ಇವರು ಮುಳುಗಿ ಸಾಯುತ್ತಾರೆ. ಸಹಜವಾಗಿ ಇವರ ದೆಸೆಯಿಂದ ನೀರಿನಿಂದ ಹೊರಗೆ ಬಿದ್ದ ಮೀನು ಸಹ ಸಾಯುತ್ತದೆ.

ಫೋಟೋ ಕೃಪೆ : stockfood

ಸಾಮಾನ್ಯ ಜ್ಞಾನದ ಕೊರತೆಯಿಂದ ಒಳ್ಳೆಯತನ ಮತ್ತು ಮಾನವೀಯತೆ ಪ್ರಾಯೋಗಿಕವಾಗಿ ಇಲ್ಲದಿದ್ದರೆ ಕೆಲವೊಮ್ಮೆ ಅನಾಹುತ ಆಗುವ ಸಾಧ್ಯತೆ ಇರುತ್ತದೆ.

ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ನಮ್ಮಲ್ಲಿ ಬಹುತೇಕ ಜನ ನಾವು ತುಂಬಾ ಒಳ್ಳೆಯವರು, ಮಾನವೀಯತೆಯುಳ್ಳವರು, ಯಾರಿಗೂ ತೊಂದರೆ ಕೊಟ್ಟಿಲ್ಲ ಮತ್ತು ಮೋಸ ಮಾಡಿಲ್ಲ ಆದರೆ ನಮ್ಮ ಒಳ್ಳೆಯತನದಿಂದ ಕಷ್ಟ ಪಟ್ಟಿರುವುದೇ ಹೆಚ್ಚು, ಎಲ್ಲರೂ ನಮಗೆ ಸುಲಭವಾಗಿ ಮೋಸ ಮಾಡುತ್ತಾರೆ ಎಂದು ಮಾತನಾಡಿಕೊಳ್ಳುವುದನ್ನು ಗಮನಿಸಿರಬಹುದು. ಇಲ್ಲಿ ಸಮಸ್ಯೆ ಇರುವುದು ಒಳ್ಳೆಯತನದಲ್ಲಿ ಅಲ್ಲ. ಅದರ ಪ್ರಾಯೋಗಿಕ ಆಚರಣೆಯಲ್ಲಿ ಎಂಬುದು ಹೆಚ್ಚು ಸೂಕ್ತ.

ಒಳ್ಳೆಯತನ ಮತ್ತು ಮಾನವೀಯತೆ ಎಂಬುದು ಒಂದು ದೌರ್ಬಲ್ಯವಲ್ಲ, ಶರಣಾಗತಿಯಲ್ಲ, ಪ್ರದರ್ಶನವಲ್ಲ, ಅಪ್ರಯೋಜಕವಲ್ಲ. ಅದೊಂದು ಧೈರ್ಯದ, ಕಠಿಣವಾದ, ಪ್ರಾಯೋಗಿಕವಾದ ಅಚಲ ಮತ್ತು ನಿರಂತರ ನಡವಳಿಕೆ. ಒಂದು ತಪಸ್ಸು ಎಂದೂ ಹೇಳಬಹುದು. ಅದನ್ನು ಸಮಾಜದಲ್ಲಿ ಅನುಸರಿಸುವುದು ಒಂದು ದೊಡ್ಡ ಸವಾಲು. ಅದರಿಂದ ನಿರಾಸೆ ನೋವು ವಂಚನೆಗಳೇ ಜಾಸ್ತಿ.

ನಾವು ಒಳ್ಳೆಯವರು ಮತ್ತು ಮಾನವೀಯ ಮೌಲ್ಯಗಳ ನೆಲೆಯಲ್ಲಿ ಬದುಕಬೇಕು ಎಂದು ನಿರ್ಧರಿಸಿದ್ದರೆ ಅದಕ್ಕಾಗಿ ಕೆಟ್ಟವರು ಮತ್ತು ಅಮಾನವೀಯ ವ್ಯಕ್ತಿಗಳಿಗಿಂತ ಎರಡು ಪಟ್ಟು ಆತ್ಮ ಶಕ್ತಿಯುಳ್ಳ ದೃಢ ಮನೋಭಾವದ ಪ್ರಜ್ಞಾವಂತ ಶ್ರಮಜೀವಿಯಾಗಿರಬೇಕು. ಯಾವುದೇ ಸಂದರ್ಭ ಸನ್ನಿವೇಶವನ್ನು ಎದುರಿಸುವ ಎದೆಗಾರಿಕೆ ಇರಬೇಕು. ಬದುಕಿನ ಗಂಭೀರ ಅಗ್ನಿ ಪರೀಕ್ಷೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಸಹಿಸಲಸಾಧ್ಯ ಆರೋಪ ಅಪನಿಂದನೆಗಳು ಬರಬಹುದು. ಏಕೆಂದರೆ ಕೆಟ್ಟವರು ತಮ್ಮ ಕೀಳರಿಮೆಯಿಂದ ಹೊರಬರಲು ಒಳ್ಳೆಯವರನ್ನೇ ಟಾರ್ಗೆಟ್ ಮಾಡುತ್ತಾರೆ.

ಒಳ್ಳೆಯತನ ಮತ್ತು ಮಾನವೀಯತೆಯಿಂದ ಜೀವನ ಸಾಗಿಸುವುದು ನೀರಿನ ವಿರುದ್ಧ ಈಜಿದಂತೆ. ಒಂದು ವೇಳೆ ಇದು ನಿಮ್ಮ ಮಾನಸಿಕ ಮತ್ತು ಕೌಟುಂಬಿಕ ಸ್ಥಿತಿಗೆ ಹೊಂದಿಕೊಳ್ಳದಿದ್ದರೆ ನಿಮ್ಮ ಮುಂದೆ ಮತ್ತೊಂದು ದಾರಿಯೂ ಇದೆ.

ಫೋಟೋ ಕೃಪೆ : ranchatdovetree

ಒಳ್ಳೆಯವರು ಆಗದ ಕೆಟ್ಟವರೂ ಆಗದ ಆ ಕ್ಷಣದ ವ್ಯಾವಹಾರಿಕ ಮತ್ತು ಕೌಟುಂಬಿಕ ಜೀವನ ನಿಭಾಯಿಸಿಕೊಂಡು ಹೋಗುವುದು ಮತ್ತು ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಬದುಕು ನಡೆಸುವುದು. ಅಂದರೆ ಸಮಯ ಸನ್ನಿವೇಶಕ್ಕೆ ತಕ್ಕಂತೆ ನಮ್ಮ ನಿಲುವುಗಳನ್ನು ಬದಲಾಯಿಸಿಕೊಂಡು ನಮ್ಮ ಅನುಕೂಲಗಳೇ ಇಲ್ಲಿ ಮುಖ್ಯವಾಗಿ ಇತರ ಯಾವುದೇ ಆದರ್ಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರುವುದು.

ಬಹುತೇಕ ಜನರು ಇದನ್ನೇ‌ ಆಯ್ಕೆ ಮಾಡಿಕೊಂಡಿರುವುದು ಭಾರತೀಯ ಸಮಾಜದಲ್ಲಿ ನಾವು ಗಮನಿಸಬಹುದು. ಆದರೆ ಮುಂದೆ ದೀರ್ಘ ಕಾಲದಲ್ಲಿ ಕೆಟ್ಟ ವರ್ತನೆಯಾಗಿ ಪರಿವರ್ತನೆ ಸಹ ಹೊಂದುತ್ತದೆ. ಇದಕ್ಕೆ ಒಂದು ಸರಳ ಉದಾಹರಣೆ….ಒಬ್ಬ ಸರ್ಕಾರಿ ನೌಕರ ತನ್ನ ಕೆಲಸ ತಾನು ಮಾಡುತ್ತಿರುತ್ತಾನೆ. ಆತ ಲಂಚಕ್ಕಾಗಿ ಒತ್ತಾಯಿಸುವುದಿಲ್ಲ. ಆದರೆ ಯಾರಾದರೂ ಈತನ ಕೆಲಸದಿಂದ ತೃಪ್ತಿ ಹೊಂದಿ ತಾವಾಗಿಯೇ ಹಣ ನೀಡಿದರೆ ಅದನ್ನು ಸ್ವೀಕರಿಸುತ್ತಾನೆ. ಇದು ಮಧ್ಯಮ ಮಾರ್ಗ. ಆದರೆ ಕ್ರಮೇಣ ಇದು ಲಂಚಕ್ಕಾಗಿ ಒತ್ತಾಯ ಮಾಡುವ ಹಂತಕ್ಕೆ ತಲುಪುತ್ತದೆ.

ಅಂತಿಮವಾಗಿ ನಾವು ಕಷ್ಟ ಪಟ್ಟು ಒಳ್ಳೆಯವರಾಗಿ ಉಳಿಯಬೇಕೆ, ಮಧ್ಯಮ ಮಾರ್ಗದಲ್ಲಿ ಬದುಕಬೇಕೇ, ಕೆಟ್ಟವರಾಗಿ ಈಗಿನ ಕಾಲದಲ್ಲಿ ಹೆಚ್ಚು ಸುಖ ಪಡಬೇಕೆ ಎಂಬ ಆಯ್ಕೆಗಳು ನಮ್ಮ ಮುಂದಿವೆ. ಒಳ್ಳೆಯವರಾಗಿ ಬದುಕಬೇಕಾದರೆ ತುಂಬಾ ಕಷ್ಟ. ಆದರೆ ನಿಜವಾಗಿಯೂ ಆತ್ಮಸಾಕ್ಷಿಗೆ ಅನುಗುಣವಾಗಿ ಒಳ್ಳೆಯವರಾಗಿ ಪ್ರಾಯೋಗಿಕ ನೆಲೆಯಲ್ಲಿ ನಮ್ಮ ಅರಿವು ಇದ್ದರೆ ಖಂಡಿತ ಬದುಕು ಹೆಚ್ಚು ಅರ್ಥಪೂರ್ಣ ಮತ್ತು ಸಾರ್ಥಕ ಎಂಬುದು ಮಾತ್ರ ಸತ್ಯ. ಇದು ಅತ್ಯಂತ ಸ್ವಾಭಾವಿಕ ಮತ್ತು ಶಾಶ್ವತ. ಮಧ್ಯಮ ಮಾರ್ಗ ಮತ್ತು ಕೆಟ್ಟ ಮಾರ್ಗ ಅನುಸರಿಸಲು ಸುಲಭ. ಆದರೆ ಅದು ಅಸ್ವಾಭಾವಿಕ ಮತ್ತು ತಾತ್ಕಾಲಿಕ. ದಯವಿಟ್ಟು ಯೋಚಿಸಿ ನಿರ್ಧಾರ ಕೈಗೊಳ್ಳಿ. ನಿಮ್ಮ ನಿರ್ಧಾರ ದೇಶ – ಸಮಾಜ ಮತ್ತು ವೈಯಕ್ತಿಕ ಬದುಕಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎಂಬುದರ‌ ಅರಿವಿರಲಿ. ಇದು ತಿಳಿವಳಿಕೆ ಅಲ್ಲ ನಡವಳಿಕೆ…….


  • ವಿವೇಕಾನಂದ ಹೆಚ್.ಕೆ (ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW