‘ಖ್ಯಾತ ಕಾದಂಬರಿಗಾರ್ತಿ ಆಶಾ ಅಧ್ಯಯನಶೀಲ ಕಾದಂಬರಿಗಳನ್ನು ಬರೆದಿದ್ದರು. ಅವರ ಅಧ್ಯಯನ ಮತ್ತು ಮಾಡಿ ಕೊಳ್ಳುತ್ತಿದ್ದ ಸಿದ್ದತೆ ಎಸ್.ಎಲ್.ಭೈರಪ್ಪನವರನ್ನು ನೆನಪು ಮಾಡುತ್ತಿತ್ತು’ – ಎನ್.ಎಸ್.ಶ್ರೀಧರ ಮೂರ್ತಿ, ಆಶಾ ರಘುವರಿಗೆ ಅಕ್ಷರ ನಮನಗಳು…
1999, ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಎಸ್.ಎಲ್.ಭೈರಪ್ಪನವರ ಅಧ್ಯಕ್ಷತೆ. ಬೆಂಗಳೂರು ಮುದ್ರಣಾಲಯದಿಂದ ʼಕನ್ನಡ ಸಾಹಿತ್ಯ ದರ್ಶನಿʼ ರೂಪಿಸಿದೆವು. ಕೊನೆ ಗಳಿಗೆ ಯೋಜನೆ ಬಹಳ ಒತ್ತಡವಿತ್ತು. ಡಾ.ಮಂಗಳ ಪ್ರಿಯದರ್ಶಿನಿ ನಮಗೆ ಮಾರ್ಗದರ್ಶಕರು. ಹಲವು ಸಲಹೆ ಜೊತೆಗೆ ಸಹಾಯಕ್ಕೆ ಎಂದು ತಮ್ಮ ನೆಚ್ಚಿನ ಶಿಷ್ಯೆಯನ್ನು ಕಳುಹಿಸಿದರು. ಎರಡನೆಯ ಬಿ.ಎ ಓದುತ್ತಿದ್ದ ಅವರ ಹೆಸರು ಆಶಾ.ಕೆ.ಎಸ್. ಬಹಳ ಉತ್ಸಾಹಿ.. ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದರು. ಸಮ್ಮೇಳನ ಮುಗಿದ ಮೇಲೆಯೂ ಆಗಾಗ ಮಲ್ಲಿಗೆ ಕಚೇರಿಗೆ ಬರುತ್ತಿದ್ದರು. ಒಂದು ದಿವಸ ಕಥೆ ಬರೆದಿದ್ದೇನೆ ಎಂದು ತಂದಾಗ ಅಚ್ಚರಿ ʼಸಿದ್ದʼ ಎಂದು ಹೆಸರು. ಸ್ವಲ್ಪ ಬದಲಾಯಿಸಿ ಪ್ರಕಟಿಸಿದೆ. ಅವರ ಸಂತೋಷಕ್ಕೆ ಪಾರವೇ ಇಲ್ಲ. ಮುಂದೆ ಸ್ನಾತಕೊತ್ತರ ಪದವಿ ಪಡೆದರು. ಉಪನ್ಯಾಸಕಿ ಆದರು, ಸೀರಿಯಲ್‌ಗಳಿಗೆ ಸಂಭಾಷಣೆ ಬರೆದರು. ನಿರಂತರ ಸಂಪರ್ಕದಲ್ಲಿದ್ದರು. ರಘು ಅವರ ಕೈ ಹಿಡಿದು ಆಶಾರಘು ಆದರು. ಗಂಡ ಮತ್ತು ಹೆಂಡತಿ ಇಬ್ಬರಿಗೂ ಹಲವು ಕ್ಷೇತ್ರಗಳಲ್ಲಿ ಆಸಕ್ತಿ. ನಿಮ್ಮ ಮನೆಗೆ ಬಂದರೆ ಹೊಸ ಲೋಕವನ್ನು ಹೊಕ್ಕಂತೆ ಆಗುತ್ತದೆ ಎನ್ನುತ್ತಿದ್ದೆ.

ಆಶಾ ಅಧ್ಯಯನಶೀಲ ಕಾದಂಬರಿಗಳನ್ನು ಬರೆದರು. ಅವರ ಅಧ್ಯಯನ ಮತ್ತು ಮಾಡಿ ಕೊಳ್ಳುತ್ತಿದ್ದ ಸಿದ್ದತೆ ಎಸ್.ಎಲ್.ಭೈರಪ್ಪನವರನ್ನು ನೆನಪು ಮಾಡುತ್ತಿತ್ತು (ಅವರು ಭೈರಪ್ಪನವರಿಗೆ ಪ್ರಿಯವಾದವರು ಮತ್ತು ಹತ್ತಿರದವರು) ರಘು ಅಕಾಲಿಕ ಅಗಲುವಿಕೆ ಆಶಾ ಬದುಕಿಗೆ ಬಿದ್ದ ದೊಡ್ಡ ಹೊಡೆತ. ಪ್ರಕಾಶನ ಮಾಡಿದರು, ಯೂ ಟ್ಯೂಬ್ ಮಾಡಿದರು, ಉತ್ಸಾಹ ಉಳಿಸಿ ಕೊಳ್ಳಲು ಶ್ರಮಿಸಿದರು. ಮಗಳು ಬರೆಯುತ್ತಾಳೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಪುಸ್ತಕವೂ ಪ್ರಕಟವಾಯಿತು. ಆರು ತಿಂಗಳ ಕೆಳಗೆ ʼಸರ್ ನಿಮ್ಮನ್ನು ನೋಡ ಬೇಕುʼ ಎಂದರು. ಮನೆಗೆ ಹೋದರೆ ಹತ್ತಾರು ವಿಷಯ ಮಾತನಾಡಿದರು, ಹಾಗಿದ್ದರೂ ಮಾನಸಿಕವಾಗಿ ಕುಸಿದಿದ್ದಾರೆ ಎನ್ನಿಸಿತು. ಕೇಳಿದರೆ ಹಾಗೇನೂ ಇಲ್ಲ ಎಂದರು. ʼಸರ್ ನಮ್ಮ ಪ್ರಕಾಶನಕ್ಕೆ ಒಂದು ಪುಸ್ತಕ ಕೊಡಿ, ನಿಮ್ಮಂತಹವರ ಪುಸ್ತಕ ಪ್ರಕಟಿಸುವುದು ಹೆಮ್ಮೆʼ ಎಂದರು. ʼಒಪ್ಪಿಕೊಂಡ ಪುಸ್ತಕಗಳೇ ಮುಗಿಸಲು ಆಗಿಲ್ಲ, ಮನಸ್ಸಿನಿಲ್ಲಿ ಒಂದು ಕಾದಂಬರಿ ಇದೆ, ಎಂದಾದರೂ ಬರೆದರೆ ನಿಮಗೇ ಕೊಡುವೆʼ ಎಂದೆ. ಈಗ ಕೆಲವು ದಿನಗಳ ಕೆಳಗೆ ರಘು ಕನಸಿನಲ್ಲಿ ಬಂದಿದ್ದರು ಎಂದು ಫೇಸ್ ಬುಕ್‌ನಲ್ಲಿ ಬರೆದು ಕೊಂಡಿದ್ದರು. ಬರೆದ ಕ್ರಮ ಆತಂಕ ಎನ್ನಿಸಿ ಪೋನ್ ಮಾಡಿದೆ. ʼಸರ್, ಅದೆಲ್ಲ ನಿಜʼ ಎಂದರು. ʼಆದರೂ ನೀವು ಅದಲ್ಲದರಿಂದ ಹೊರ ಬರಬೇಕುʼ ಎಂದೆ. ʼಕಾದಂಬರಿ ಬರೆದಿರಾ.. ಮುಂದಿನ ಪ್ರಕಟಣೆ ಎಂದು ಹಾಕಿ ಕೊಳ್ಳಲಾʼ ಎಂದರು. ʼಒಂದಕ್ಷರವೂ ಬರೆದಿಲ್ಲ. ಏಕೋ ಏನೂ ಬರೆಯುವ ಮನಸ್ಸಿಲ್ಲʼ ಎಂದೆ. ʼನನ್ನ ಸ್ಥಿತಿ ಕೂಡ ಹಾಗೆ ಆಗಿದೆ ಸರ್ʼ ಎಂದರು. ಅದೇ ಅವರ ಜೊತೆಗೆ ಆಡಿದ ಕೊನೆಯ ಮಾತಾಯಿತು.
ವೀರಲೋಕ ಪುಸ್ತಕ ಸಂತೆಯಲ್ಲಿ ಸಿಕ್ಕಿದ್ದರು. ಹಲವು ಮಾತಿನ ನಡುವೆ ನಿಮ್ಮ ಜೊತೆ ಪೋಟೋ ಎಂದು ಉತ್ಸಾಹ ತೋರಿದರು. ʼಎಷ್ಟೊಂದು ಪೋಟೋ ಇದೆಯಲ್ಲಮ್ಮʼ ಎಂದರೆ ʼಸರ್, ನಿಮ್ಮ ಬಗ್ಗೆ ನಾನು ಬರೆಯ ಬೇಕುʼ ಎಂದರು. ʼನಾನೂ ನನ್ನ ಶಿಷ್ಯೆ ಏನಲ್ಲ ಸಾಧಿಸಿದ್ದಾಳೆʼ ಎಂದು ಬರೆಯ ಬೇಕು ಎಂದು ನಕ್ಕೆ. ಇಬ್ಬರೂ ಬರೆಯಲಿಲ್ಲ. ಮುಗಿಯದ ಮಾತುಗಳಿಗೆ ಸಾಕ್ಷಿಯಾಗಿ ಈ ಪೋಟೋ ಉಳಿದು ಕೊಂಡಿದೆ.
- ಎನ್.ಎಸ್.ಶ್ರೀಧರ ಮೂರ್ತಿ – ಪತ್ರಕರ್ತರು, ಬೆಂಗಳೂರು
