‘ಅವನು ನಿಜಕ್ಕೂ ಕವಿಯಲ್ಲ’ ಕವನ

ಅವಳೊಂದಿಗಿನ ಪ್ರೇಮ ಯುದ್ಧದಲ್ಲಿ ಸೋತು ಶರಣಾದ ನಾನು ಅವಳಿಗೆ ಎದುರಾದಾಗ, ಕಣ್ಣು ಕಲೆತಾಗ, ಕದಲದೆ ನಿಂತು ಕವಿತೆಯ ‘ಕಪ್ಪ ಕಾಣಿಕೆ’ ಕೇಳುತ್ತಾಳವಳು. ಕವಿತೆಗೆ ಕವಿತೆ ಬರೆಸಿಕೊಳ್ಳುವ ಅಭಿಲಾಷೆಯಂತೆ ಅರಿತವನಂತೆ, ಎಲ್ಲೋ ಬಿದ್ದು ಹೋದ ಹಾಳೆ, ಕಳೆದು ಹೋಗಿದ್ದ ಕಲಮು, ಚದುರಿ ಚಲ್ಲಾಪಿಲ್ಲಿಯಾಗಿದ್ದ ಪದಗಳು ಈ ಎಲ್ಲವನ್ನೂ ಮತ್ತೆ ಕೈಗೆತ್ತಿಕೊಳ್ಳುತ್ತೇನೆ. ಅವಳೇ ಕವಿತೆಯಾದಂತೆ, ಕವಿತೆಯೇ ಅವಳಾದಂತೆ, ನಾನು ಬರೆದಂತೆ, ಸ್ಥಾಯಿ-ಸಂಚಾರಿ ಭಾವ ಸಂಹಿತೆಗೆ ದೇಣಿಗೆ ಈ ಕವಿತೆ. ಬದುಕು-ಬರಹ ಅವಳದೇ ಔದಾರ್ಯವಂತೆ. ಮತ್ತೀಗ ಕವಿತೆಯಾಗಿ ನಿಮ್ಮ ಮಡಿಲಿಗೆ ಬಿದ್ದಂತೆ. ಹರಸಿ ಹಾರೈಸಿ ಎನ್ನುವಂತೆ…

ಅವನು ನಿಜಕ್ಕೂ ಕವಿಯಲ್ಲ
ಅವಳ ಮೇಲೆ ಬರೆದ
ಸಾವಿರದ ಕವಿತೆಗಳಲ್ಲಿ
ಒಂದನ್ನು ಇಂದಿಗೂ
ಎಲ್ಲಿಯೂ ಓದಲೇ ಇಲ್ಲ
ಫಲಿಸದ ಪದಗಳ ಶಾಪ
ನಿರಕ್ಷರತೆಯ ನೆಪ
ನುಡಿ ಸೋತ ಅವನೊಲವಿನಂತೆ
ಅಪ್ರಕಟಿತ ಅಸಂಗತ
ಹಾಗಾಗಿ ಅವನು
ಕವಿ ಎನಿಸಲೇ ಇಲ್ಲ

*****

ಅವನು ನಿಜಕ್ಕೂ ಕವಿಯಲ್ಲ
ನನಸಿಗೆ ಸಿಗದ ಅವಳ
ಕನಸಿನಲ್ಲಿ ಕಲ್ಪಿಸಿ
ಹಾಳೆಗಳು ಸವೆದು
ಕಲಮು ಕಳೆದು
ಶಾಯಿ ಸಿಗದೇ
ಹೋದ ಸಮಯಕೆ
ಭಾವಗಳು ಅಭಾವದಲಿ
ಅಳಿಯುವ ಭಯದಲಿ
ಮೆದುವಾದ ಮನಸಿನ ಪುಟಗಳಲಿ
ಕಾಲವು ಅಳಿಸದಂತೆ
ಚೂಪುಗಲ್ಲಿನಲ್ಲಿ ಸಿಕ್ಕ ಸಿಕ್ಕಲ್ಲೆಲ್ಲಾ
ಅಡ್ಡಾದಿಡ್ಡಿಯಾಗಿ ಗೀಚಿ
ಒಸರುವ ರಕ್ತವನೇ ರಾಚಿ
ಯಾರಿಗೂ ಕಾಣದಂತೆ
ಕಾಪಿಟ್ಟ ಅವನು
ಕವಿ ಎನಿಸಲೇ ಇಲ್ಲ

*****

ಅವನು ನಿಜಕ್ಕೂ ಕವಿಯಲ್ಲ
ಎಂದೋ ಕಣ್ಣಿನಲ್ಲಿ ಮೂಡಿ
ಹೃದಯದಲಿ ಅಚ್ಚಾಗಿದ್ದ
ಎಂದೂ ಮಾಸದ
ಅಸಲಿಗೆ ಶೀರ್ಷಿಕೆಯೆ ಇರದ
ಸಪ್ತವರ್ಣದ ಅವಳ
ಅಪ್ರಕಟಿತ ಚಿತ್ರ ಕಾವ್ಯವನ್ನಷ್ಟೆ
ಭಾವಿಸಿದಂತೆ ಜಿದ್ದಿಗೆ
ಬಿದ್ದು ಕೊನೆಯವರೆಗೂ
ವಾಸ್ತವವನೇ ಕಡೆಗಣಿಸಿ
ಕಲ್ಪನೆಯಲ್ಲೇ ಜೀವಿಸಿದ
ಹಾಗಾಗಿ ಅವನು
ಕವಿ ಎನಿಸಲೇ ಇಲ್ಲ

*****

ಅವನು ನಿಜಕ್ಕೂ ಕವಿಯಲ್ಲ
ಅವಳ ನೆನಪುಗಳಿಗೆ
ಪದೇ ಪದೇ ಧಾವಿಸಿ
ಉಸಿರಾಡಿದಾಗಲೊಮ್ಮೆ ಮರೆಯದೆ
ಅವಳನೆ ಧ್ಯಾನಿಸಿ
ಒಲಿಯದ ಅವಳ
ಪದ ಪ್ರಾಸಗಳಲ್ಲಿ ನಲಿಸುವ
ಗೋಜಲಿನ ಗೋಳು ಬೇಡವೆಂಬಂತೆ
ಬರೆಯದಂತೆ ಸುಮ್ಮನೆ ಬದುಕಿದ
ಹಾಗಾಗಿ ಅವನು
ಕವಿ ಎನಿಸಲೇ ಇಲ್ಲ

*****

ಅವನು ನಿಜಕ್ಕೂ ಕವಿಯಲ್ಲ
ಎದೆಯೊಳಗಿನ ಏಕತಾರಿ
ಅವಳು ನುಡಿಸುವ ಪರಿಗೆ
ಕವಿತೆಯ ಅವಳಾಗಿ
ಅವಳೇ ಕವಿತೆಯಾಗಿ
ಅವನೊಳಗೆ ಆವಿರ್ಭವಿಸಿದಂತೆ
ಒಮ್ಮೆ ಪ್ರೇಮಿಯಾಗಿ
ಮತ್ತೊಮ್ಮೆ ಹುಚ್ಚನಾಗಿ
ಜಗದ ಕಣ್ಣಿಗೆ ಕಾಣುತ್ತಿದ್ದ
ಹಾಗಾಗಿ ಅವನು
ಕವಿ ಎನಿಸಲೇ ಇಲ್ಲ


  • ರಾಜ್ ಆಚಾರ್ಯ – 

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading