‘ನಂಟಿಲ್ಲದ ಅಂಟಿಗೇಕೋ ಮನಸೋಲುತಿಹುದು… ಸದ್ದಿಲ್ಲದ ಬಂಧಕೇಕೋ ಮನಜಾರುತಿಹುದು’…ರಶ್ಮಿಪ್ರಸಾದ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಮುಂದೆ ಓದಿ…
ಹಾಡುಹಗಲೇ ಕಾರ್ಗತ್ತಲು ಕವಿದ ಹಾಗೆ..
ಕಂಡ ಕನಸುಗಳೇ ಕಮರಿ ಹೋದ ಬಗೆ..
ನಿಂತ ನೆಲವೇ ಬಾಯ್ತೆರೆದು ಕುಸಿದ ಹಾಗೆ..
ಮನವೇಕೋ ವಿಹ್ವಲದ ಗೂಡಾದ ಬಗೆ..
ಸಾಸಿರಸಾಧಕನ ದಿವ್ಯರೂಪವಿಂದು ಅಸ್ತಂಗತ
ಅಮಿತ ಜೀವನಗಳಿಂದು ಅಕ್ಷರಶಃ ಅನಾಥ
ಬದುಕಿನ ಭರವಸೆಗಳೇ ಶೂನ್ಯದಿಂದಾವೃತ
ನಂಬಿನಡೆದ ನಡಿಗೆಗಳೇ ಇಂದು ಕುಸಿತ.!
ನಂಟಿಲ್ಲದ ಅಂಟಿಗೇಕೋ ಮನಸೋಲುತಿಹುದು
ಸದ್ದಿಲ್ಲದ ಬಂಧಕೇಕೋ ಮನಜಾರುತಿಹುದು
ಲಕ್ಷ – ಕೋಟ್ಯಂತರ ಕಣ್ಣಾಲಿಗಳೂ ಬಿಕ್ಕುತಿಹುದು
ಸಹಸ್ತ್ರ ಸುಮನ ಭಾವಗಳೂ ಕುಸಿಯುತಿಹುದು
ಅಯ್ಯೋ..! ವಿಧಿಯೇ ನೀನದೆಷ್ಟು ಕ್ರೂರಿ
ಈ ಸಾವು ನಿಜಕ್ಕೂ ನ್ಯಾಯವಲ್ಲದ ಪರಿ
ಬದುಕಿನ ಹಾಯ್ದೋಣಿಯೇ ಮೊಗಚಿದಂತೆ
ಹರಿಗೋಲೆಂಬ ಕೊಂಡಿಯೇ ಕಳಚಿದಂತೆ
ಜೀವ – ಜೀವನಗಳ ವಿಶ್ವಾಸವೇ ಛಿದ್ರವಾದಂತೆ
ಬೆಚ್ಚಿ- ಬೆದರಿದ ಆಂತರ್ಯಗಳೇ ಆರ್ದ್ರಗೊಂಡಂತೆ
ಒಮ್ಮೆಲೇ ಬರಡಾಯ್ತು ಕೋಟಿ ಭಾವಗಳ ಮಡಿಲು.!
ಒಮ್ಮೆಲೇ ಬತ್ತಿಹೋಯ್ತು ಕೋಟಿ ಮನಗಳ ಒಡಲು.!!
- ರಶ್ಮಿಪ್ರಸಾದ್ (ರಾಶಿ)
