ಕತೆಗಾರ ಶಿವ ಅವರಿಗೆ ಮೂಗಿಗೆ ಪೆಟ್ಟಾಗಿದ್ದರಿಂದ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಸಂದರ್ಭದಲ್ಲಿ ಅವರು ಕಂಡ ಅಥವಾ ಕೇಳಿದ ದೆವ್ವದ ಕತೆಯನ್ನು ಕತೆಯರೂಪ ಕೊಟ್ಟು ಓದುಗರಲ್ಲಿ ಕುತೂಹಲ ಮೂಡಿಸಿದ್ದಾರೆ, ತಪ್ಪದೆ ಮುಂದೆ ಓದಿ…
“ಮಸಾಣ್ದಲ್ಲಿ ದಯ್ಯಗಳು ಇದ್ದವೋ ಇಲ್ವೋ, ಆದ್ರೆ ಆಸ್ಪಿಟಲ್ ಲಿ ಇದ್ದೇ ಇರ್ತವ ಕಣಿ ಸಾಮಿ” ಇದು ನಾನು ಮೂಗಿನ ಶಸ್ತ್ರ ಚಿಕಿತ್ಸೆಗೆಂದು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಗ ನನ್ನ ಪಕ್ಕದ ಬೆಡ್ ನಲ್ಲಿ ಇದ್ದ ಇಬ್ಬರು ಮಾತಾಡಿಕೊಳ್ಳುತ್ತಿರುವುದು ನನ್ನ ಕಿವಿಗೆ ಬಿತ್ತು.
ಮೈಸೂರಿನ ಯಾವುದೋ ಪಕ್ಕದ ಹಳ್ಳಿಯಿಂದ ಬಂದಿದ್ದ ಸುಬ್ಬಯ್ಯ ಸುಮಾರು 60 ವಯಸ್ಸಿನ ವ್ಯಕ್ತಿ ಗಂಟಲು ಸಮಸ್ಯೆಗೆ ಆಪರೇಷನ್ ಗಾಗಿ ಅಲ್ಲಿ ಅಡ್ಮಿಟ್ ಆಗಿದ್ದ. ಆತನ ಜೊತೆ ಮಾತಾಡುತ್ತಿದ್ದ ಮತ್ತೊಬ್ಬನ ಹೆಸರು ಮಹೇಶ್, ವಯಸ್ಸು ಸುಮಾರು 40 ಇರಬಹುದು. ಅಲ್ಲೇ ಮೈಸೂರಿನ ಯಾವುದೋ ಏರಿಯಾದವನು. ಕಡಕೊಳದಲ್ಲಿರುವ ಟಿವಿಎಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವುದಾಗಿಯೂ, ಡ್ಯುಟಿಯಿಂದ ಬರುವಾಗ ಬೈಕ್ ಆಕ್ಸಿಡೆಂಟ್ ನಿಂದ ಆತನ ಮೂಗಿಗೆ ಪೆಟ್ಟಾಗಿ, ಈಗ ಆಪರೇಷನ್ ಗಾಗಿ ತಾನು ಅಲ್ಲಿ ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದ.
ಬ್ಯಾಂಕ್ ನಲ್ಲಿ ಸ್ವಲ್ಪ ಪೆನ್ನು ಕೇಳಿದರೆ ಕೊಡಲು ಹಿಂಜರಿಯುವ ಜನ ಒಂದು ಕಡೆ ಆದರೆ, ಈ ಆಸ್ಪತ್ರೆಗಳಲ್ಲಿ ಎಲ್ಲಿಂದಲೋ ಬಂದವರು, ಯಾವ ಯಾವ ಜಾತಿಯವರೋ, ಅನುಕೂಲ ಅನಾನುಕೂಲಗಳ ನಡುವೆ ಎಲ್ಲರೂ ಒಂದೇ ಆಗಿಬಿಡುತ್ತಾರೆ. ಆಗ ಅಲ್ಲಿ ಎಲ್ಲರೂ ಪರಿಚಯದವರೇ. ವಿಚಾರ ವಿನಿಮಯ, ಊಟ ತಿಂಡಿಯ ವಿನಿಮಯಗಳು ನಡೆಯುತ್ತಿರುತ್ತವೆ.
ನಾಳೆ ಬೆಳಗ್ಗೆ ನನಗೆ ಆಪರೇಷನ್ ಇದ್ದುದರಿಂದ ಹಿಂದಿನ ದಿನವೇ ಮಧ್ಯಾಹ್ನ ಬಂದು ಅಡ್ಮಿಟ್ ಆಗಿದ್ದೆ. ಜೊತೆಗೆ ಅಮ್ಮ ಬಂದಿದ್ದರು.
ಸಂಜೆ ಹೊತ್ತಿಗಾಗಲೇ ಆ ಇಬ್ಬರ ಮಾತುಕತೆ ಶುರುವಾಗಿತ್ತು. ಹಿಂದಿನ ರಾತ್ರಿ ಮಲಗಿರುವಾಗ ಯಾವುದೋ ಮಗು ಅಳುವ ಶಬ್ದ ಕೇಳಿಸಿತು ಎಂಬುದಾಗಿಯೂ, ಈ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳನ್ನ ರಾತ್ರಿಯಲ್ಲಿ ತಂಗಲು ಬಿಡುವುದಿಲ್ಲವಲ್ಲ ಆದರೂ ಆ ಶಬ್ದ ಹೇಗೆ ಬಂತು ಎಂಬುದಾಗಿಯೂ ಮಹೇಶ್ ಸುಬ್ಬಯ್ಯನಿಗೆ ಹೇಳುತ್ತಿದ್ದ.

ಫೋಟೋ ಕೃಪೆ : google
ಅದಕ್ಕೆ ಸುಬ್ಬಯ್ಯ, “ಮಸಾಣ್ದಲ್ಲಿ ದಯ್ಯಗಳು ಇದ್ದವೋ ಇಲ್ವೋ, ಆದ್ರೆ ಆಸ್ಪಿಟಲ್ ಲಿ ಇದ್ದೇ ಇರ್ತವ ಕಣಿ ಸಾಮಿ”, ನಂಗೂ ಒಂದ್ಸಲ ಅನ್ಭವ ಆಗದೆ. ಎಂಟತ್ತೊರ್ಷದ್ ಹಿಂದೆ ನಮ್ ಮನೆವ್ಳ್ನ ಉಸಾರಿಲ್ದೆ ಕೆಆರ್ ಆಸ್ಪೆಟಲ್ಲಿ ಅಡ್ಮಿಟ್ ಮಾಡಿದ್ದೆ. ಮಧ್ಯರಾತ್ರಿಲಿ ನಾನೊಬ್ನೆ ಉಚ್ಚೆ ಉಯ್ಯಕೆ ಹೋದಾಗ ಯಾರೋ ಹಿಂದೆ ಬಂದಂಗೆ ಆಯ್ತು, ನಾನು ಯಾರೋ ನನ್ನಂತವ್ರೆ ಇರ್ಬೇಕು ಅನ್ಕಂಡು ಸುಮ್ನೆ ಆದೆ, ಸಲ್ಪ ಹೊತ್ಗೆ ಟಾಯ್ಲೆಟ್ ಬಾಗ್ಲು ಬಡ್ಕಳಕೆ ಸುರು ಆಯ್ತು ಸಾಮಿ. ಆಗ್ಲೇ ನಂಗೆ ಗೊತ್ತಾಯ್ತು. ಅಲ್ಲಿ ಓಡಕೆ ಸುರು ಮಾಡಿದ್ದು, ನನ್ ಹೆಂಡ್ತಿ ಮಲ್ಗಿದ್ ಬೆಡ್ಗಂಟ ಬರತಂಕನೂ ಹಿಂದುಕ್ ತಿರ್ಗಿ ನೋಡ್ಲಿಲ್ಲ, ಎಂದು ತನ್ನ ಹಿಂದೆ ನಡೆದಿದ್ದ ಸಂಗತಿಯನ್ನ ಮಹೇಶ್ ಗೆ ಹೇಳಿದ. ಇದನ್ನ ಕೇಳಿ ಮಹೇಶ್ ನ ಮುಖದಲ್ಲಿ ಸ್ವಲ್ಪ ಭಯದ ವಾತಾವರಣ ಕಂಡಿತು.
ನಂಗೆ ದೆವ್ವಗಳ ಬಗ್ಗೆ ನಂಬಿಕೆ ಇರ್ಲಿಲ್ಲ ಸುಬ್ಬಯ್ಯ ಅವ್ರೇ. ಅನುಭವ ಆದಾಗ್ಲೇ ನೋಡಿ ಗೊತ್ತಾಗೋದು. ಒಂದ್ಸಲ ನಾನು ಫ್ಯಾಕ್ಟರಿಯಿಂದ ಕೆಲ್ಸ ಮುಗ್ಸಿ ಬರುವಾಗ ಫ್ಯಾಕ್ಟರಿಯಿಂದ ಮೈಸೂರು-ಊಟಿ ರಸ್ತೆಗೆ ಕನೆಕ್ಟ್ ಆಗುವ ರೋಡಲ್ಲಿ ಬರ್ತಾ ಇರುವಾಗ ಇದ್ದಕ್ಕಿಂದಂಗೆ ನನ್ ಬೈಕ್ ಆಫ್ ಆಗೋಯ್ತು. ಎಷ್ಟು ಟ್ರೈ ಮಾಡಿದ್ರೂ ಮತ್ತೆ ಸ್ಟಾರ್ಟ್ ಆಗ್ಲೇ ಇಲ್ಲ. ಫೋನ್ ಟಾರ್ಚ್ ಆನ್ ಮಾಡ್ಕೊಂಡು ಪೆಟ್ರೋಲ್ ಇಲ್ವೇನೋ ಅಂತ ಟ್ಯಾಂಕ್ ಮುಚ್ಚಳ ಓಪನ್ ಮಾಡಿ ನೋಡಿದ್ರೆ ಅರ್ಧ ಟ್ಯಾಂಕ್ ಪೆಟ್ರೋಲ್ ಇತ್ತು. ಇನ್ಯಾಕ್ ಸ್ಟಾರ್ಟ್ ಆಗ್ತಿಲ್ಲ ಅಂತ ತಲೆ ಕೆಟ್ಟೋಗಿ ಕಾರ್ಬೋರೇಟರ್ ಪೈಪ್ ಬಿಚ್ಚಿ ನೋಡಿದೆ, ಸರಿಯಾಗೇ ಇತ್ತು. ಮತ್ತೆ ಹಾಕಿ ಸ್ಟಾರ್ಟ್ ಮಾಡಿದ್ರೆ ಆಗ್ತಾನೇ ಇಲ್ಲ.
ಅಲ್ಲಿತಂಕ ಬೈಕ್ ಬಗ್ಗೆನೇ ಯೋಚನೆಯಲ್ಲಿ ಇದ್ದ ನಂಗೆ, ಎಲ್ಲಾ ಸರಿ ಇದ್ರೂ ಬೈಕ್ ನಿಂತೋಗಿದ್ದು ನೋಡಿ ನನ್ನ ಜೊತೆ ಕೆಲ್ಸ ಮಾಡೋರು ‘ಈ ರೋಡಲ್ಲಿ ದೆವ್ವದ ಕಾಟ ಇದೆ, ಎಷ್ಟೋ ಜನ್ರಿಗೆ ಇದೇ ತರ ಅನುಭವ ಆಗಿದೆ, ಕೆಲವರ ಮೇಲೆ ಕಲ್ಲು ಬಿದ್ದಿದೆ, ಇನ್ನೂ ಕೆಲವರು ಪ್ರತ್ಯಕ್ಷವಾಗಿ ಇಲ್ಲಿ ದೆವ್ವವನ್ನ ನೋಡಿದ್ದಾರೆ’ ಎಂದು ಹೇಳಿದ್ದು ನೆನಪಿಗೆ ಬಂದು ಒಂದುಕ್ಷಣ ಮೈ ಜುಮ್ ಅಂತು, ಬೆವರೋಕೆ ಶುರುವಾಯ್ತು. ಬಗ್ಗಿ ಕಾರ್ಬೋರೇಟರ್ ಪ್ಲಗ್ ಟೈಟ್ ಮಾಡುತ್ತಿದ್ದ ನನ್ನ ಹಿಂದೆ ಯಾರೋ ನಡೆದುಕೊಂಡು ಹೋದಂಗೆ ಅನುಭವ ಆಯ್ತು. ಸುತ್ತ ಮೊಬೈಲ್ ಟಾರ್ಚ್ ಬಿಟ್ಟು ನೋಡಿದ್ರೆ ಯಾರೂ ಇಲ್ಲ. ಭಯ ಇನ್ನೂ ಹೆಚ್ಚಾಯ್ತು. ಬೆವರಿಗೆ ಬಟ್ಟೆ ಫುಲ್ ನೆನೆದೋಗಿತ್ತು.
ಭೂಮಿ ಮೇಲೆ ಇರೋಬರೋ ದೇವ್ರುಗಳ್ನೆಲ್ಲಾ ನೆನುಸ್ಕೊಂಡು ಆ ಭಯದಲ್ಲೇ ಬೈಕ್ ತಳ್ಳೋಕೆ ಶುರುಮಾಡ್ದೆ. ಯಾರೋ ಹಿಂದೆ ಹಿಂದೆನೇ ಬರೋತರ ಅನುಭವವಾಗುತ್ತಿತ್ತು. ಬೈಕ್ ತಳ್ಳುತ್ತಾ ಒಂದೊಂದು ಹೆಜ್ಜೆ ಮುಂದೆ ಇಟ್ಟಾಗಲೂ ಯಾರೋ ನನ್ನನ್ನೇ ಇಂಬಾಲಿಸಿದಂತೆ, ನನ್ನತ್ತಲೇ ನೋಡುತ್ತಿರುವಂತೆ, ನನ್ನ ಸ್ಥಿತಿ ನೋಡಿ ನಗುತ್ತಿರುವಂತೆ ಭಾಸವಾಗುತ್ತಿತ್ತು.
ಸ್ವಲ್ಪ ದೂರ ಸಾಗಿದ ನಂತರ ನನ್ನ ಬಲ ಭುಜವನ್ನು ತಾಕಿಸಿಕೊಂಡಂತೆ ಏನೋ ಚಂಗನೆ ನೆಗೆದು ರಸ್ತೆಯ ಪಕ್ಕದಲ್ಲಿ ಆ ರಾತ್ರಿಯಲ್ಲಿ ಭಯಂಕರವಾಗಿ ಕಾಣಿಸುತ್ತಿದ್ದ ಮರದ ಹಿಂದೆ ಹೋಗಿ ಅವಿತು ನನ್ನತ್ತಲೇ ದೃಷ್ಟಿಹಾಯಿಸಿತು. ಮೊದಲಿಗೆ ಅದು ಯಾವುದೋ ಪಕ್ಷಿಯೋ ಮೊಲವೋ ಇರಬಹುದೆಂದು ಊಹಿಸಿದ ನನಗೆ, ಅದು ಪ್ರಾಣಿ-ಪಕ್ಷಿಗಳ ನೋಟವಲ್ಲ ಎಂಬುದು ಚೆನ್ನಾಗಿ ಅರಿವಿಗೆ ಬಂತು. ಆಶ್ಚರ್ಯವೆಂದರೆ ಜೋರಾಗಿ ಕೂಗಿಕೊಂಡರೂ ಆ ಶಬ್ದ ನನ್ನ ಗಂಟಲಿನಿಂದ ಆಚೆ ಬರುತ್ತಿರಲಿಲ್ಲ. ಈ ತರದ ಅನುಭವ ನನ್ನ ಕನಸಿನಲ್ಲಿ ಕೆಲವು ಬಾರಿ ಆಗಿದ್ದುಂಟು. ಆದರೆ ಅದೇ ಮೊದಲ ಬಾರಿಗೆ ಆ ಸ್ಥಿತಿಯನ್ನ ನೈಜವಾಗಿ ಅನುಭವಿಸುವ ದುರ್ವಿಧಿ ನನಗೆ ಒದಗಿ ಬಂದಿತ್ತು.
ಮರದ ಹಿಂದಿದ್ದ ಕಣ್ಣುಗಳ ಮೇಲೆ ನನ್ನ ಸಂಪೂರ್ಣ ದೃಷ್ಟಿ ಇತ್ತು, ಹಿಂದೆಯಿಂದ ಯಾರೋ ನಾ ಹಿಡಿದಿದ್ದ ಬೈಕ್ ಅನ್ನು ನನ್ನಿಂದ ಬಲಗಡೆಗೆ ಎಳೆಯುತ್ತಿರುವುದು ನನ್ನ ಕೈಗಳಿಗೆ ಅನುಭವವಾಯಿತೇ ಹೊರತು ನನ್ನ ಕಣ್ಣುಗಳಿಗೆ ಏನೂ ಕಾಣಿಸುತ್ತಿರಲಿಲ್ಲ, ಅದರ ವಿರುದ್ಧವಾಗಿ ಬೈಕ್ ನ ನನ್ನತ್ತ ಎಳೆದುಕೊಳ್ಳುವ ಬಲವಾಗಲಿ, ಧೈರ್ಯವಾಗಲೀ ನನಗೆ ಇರಲಿಲ್ಲ. ದೂರದಲ್ಲಿ ಯಾವುದೋ ಪಕ್ಷಿಯ ಚೀರಾಟ ಶುರುವಾಗಿತ್ತು, ಬರಬರುತ್ತಾ ಅದು ಬೆಕ್ಕು ಅಳುವ ಶಬ್ದದಂತೆ ಕೇಳಿಸತೊಡಗಿತು. ನಾನು ಇವತ್ತು ಯಾವ ಕಡೆ ಮಗ್ಗುಲಲ್ಲಿ ಎದ್ದೆನೋ ಎಂದು ನನ್ನನ್ನೇ ಮನಸ್ಸಿನಲ್ಲಿ ಶಪಿಸಿಕೊಳ್ಳುತ್ತಾ ಎಲ್ಲಾ ದೇವರ ನಾಮಗಳನ್ನ ಜಪ ಮಾಡಲು ಶುರುಮಾಡಿದೆ.
ಅಳುವ ಶಬ್ದ ಜೋರಾಯಿತು. ಈಗ ಅದು ಬೆಕ್ಕಿನ ಅಳುವ ಶಬ್ದವಲ್ಲ. ಯಾವುದೋ ಹೆಂಗಸಿನ ದನಿ. ಏನೇನೋ ಹೇಳಿಕೊಂಡು ಅಳುತ್ತಿರುವಂತೆಯೂ, ಗೋಳಾಡುತ್ತಿರುವಂತೆಯೂ ಇತ್ತು. ಅಷ್ಟು ಸ್ಪಷ್ಟವಾಗಿರಲಿಲ್ಲ. ಹೆಚ್ಚುಕಡಿಮೆ ನನ್ನ ಗೋಳಾಟವೂ ಹಾಗೇ ಇತ್ತು, ಕೂಗಿಕೊಂಡರೂ ಬಾಯಿಂದ ಶಬ್ದ ಹೊರಡುತ್ತಿರಲಿಲ್ಲ, ಕೈಕಾಲುಗಳಲ್ಲಿದ್ದ ಬಲವೆಲ್ಲಾ ಅಡಗಿ ಹೋಗಿತ್ತು, ಕಣ್ಣುಗಳಲ್ಲಿ ನೀರು ತುಂಬಿ ಪದೇ ಪದೇ ಮಂಜಾಗುತ್ತಿದ್ದವು, ಎಷ್ಟೇ ಬಲಕೊಟ್ಟು ತಳ್ಳಿದರೂ ಬೈಕ್ ಒಂದಿಂಚೂ ಮುಂದೆ ಜಗ್ಗುತ್ತಿರಲಿಲ್ಲ. ಕಾಲುಗಳಲ್ಲಿ ನಡುಕ.
ಮರದ ಹಿಂದಿನಿಂದ ನನ್ನತ್ತಲೇ ದೃಷ್ಟಿಸುತ್ತಿದ್ದ ಕಣ್ಣುಗಳು, ಬೈಕ್ ಅನ್ನು ಬಲವಾಗಿ ಹಿಡಿದಿಟ್ಟುಕೊಂಡಿದ್ದ ಕಾಣದ ಕೈಗಳು, ದೂರದಲ್ಲಿ ಗೋಳಾಡುತ್ತಿರುವ ಹೆಂಗಸಿನ ಶಬ್ದ. ಆ ಶಬ್ದ ನನ್ನತ್ತಲೇ ಸಮೀಪವಾಗುತ್ತಿರುವುದ ಗಮನಿಸಿ ನನ್ನಲ್ಲಿ ಮತ್ತಷ್ಟು ನಡುಕ ಶುರುವಾಯಿತು. ಹೀಗೆ ನನ್ನ ಕಾಡುತ್ತಿರುವ ಈ ಎರಡು ದೆವ್ವಗಳ ಲೀಡರ್ ಬರುತ್ತಿರಬಹುದು. ಅದೂ ಬಂದರೆ ನನ್ನ ಗತಿ ಏನಾಗಬಹುದು ಎಂಬುದನ್ನ ನೆನೆಸಿಕೊಳ್ಳುತ್ತಾ ಮನಸ್ಸು ಇನ್ನಷ್ಟು ಖಿನ್ನತೆಗೆ ಒಳಗಾಯಿತು.
ಅರ್ಧ ಕಿಲೋಮೀಟರ್ ಅಷ್ಟು ಬೈಕ್ ತಳ್ಳಿದ್ದೆ ಅಷ್ಟೇ. ಅಷ್ಟರಲ್ಲಿ ಸಡನ್ನಾಗಿ ಸಧ್ಯ ದೇವ್ರು ಬಂದಂಗೆ ಯಾವುದೋ ಒಂದು ಲಗ್ಗೇಜ್ ಆಟೋ ನನ್ನತ್ತ ಬರುತ್ತಿರುವುದು ಕಾಣಿಸಿತು. ಕೈ ಕಾಲುಗಳಿಂದ ಬಂದಿಸಿದ್ದ ಕೋಳಗಳು ಕಳಚಿಕೊಂಡಂತೆ ಭಾಸವಾಯಿತು. ಮುಂದೆ ಚಲಿಸದಂತೆ ಬೈಕ್ ಹಿಡಿದು ನಿಲ್ಲಿಸಿಕೊಂಡಿದ್ದ ಕಾಣದ ಕೈಗಳು ಬೈಕ್ ಬಿಟ್ಟು ದೂರ ಸರಿದಿದ್ದವು. ಆಪತ್ಕಾಲದಲ್ಲಿ ಆಪ್ತರಕ್ಷಕನಂತೆ ಆಸರೆಯಾಗಿ ಬಂದ ಆತನಿಗೆ ದೂರದಿಂದಲೇ ಕೈ ಮುಗಿಯುತ್ತಾ ಗಾಡಿ ನಿಲ್ಲಿಸುವಂತೆ ಸನ್ನೆ ಮಾಡಿದೆ. ಆತನಿಗೆ ನಡೆದ ಎಲ್ಲಾ ವಿಚಾರವನ್ನ ತಿಳಿಸಿ ನಾನು ಅಲ್ಲಿಂದ ಹೋಗಲು ಸಹಾಯ ಮಾಡುವಂತೆ ಬೇಡಿಕೊಂಡೆ. ಆತನ ಸಹಾಯದಿಂದ ಆಟೋದಲ್ಲಿ ಬೈಕ್ ಎತ್ತಿ ಹಾಕಿಕೊಂಡು ಹೇಗೋ ಮೈಸೂರು ತಲುಪಿದೆ. ಆತ ಬರ್ಲಿಲ್ಲ ಅಂದಿದ್ರೆ ಇದನ್ನ ನಿಮ್ಗೆ ಹೇಳೋಕೆ ಇವಾಗ ನಾನು ಇರ್ತಾನೇ ಇರ್ಲಿಲ್ಲ.” ಎಂದು ಮಹೇಶ್ ತುಂಬಾ ಹತಾಷೆಯ ಮುಖದಲ್ಲಿ ನಿಟ್ಟುಸಿರು ಬಿಡುತ್ತಾ ಸುಬ್ಬಯ್ಯನಿಗೆ ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡ.
ಇವರಿಬ್ಬರ ಮಾತುಕತೆಗಳನ್ನ ಕೇಳುತ್ತಾ ನನ್ನ ಬೆಡ್ ಪಕ್ಕದಲ್ಲಿ ಕಬ್ಬಿಣದ ಸ್ಟೂಲ್ ಮೇಲೆ ಕುಳಿತಿದ್ದ ನನ್ನ ಅಮ್ಮನ ಕಡೆ ನಾನು ನೋಡಿದೆ. ಅವರೂ ನನ್ನ ಕಡೆ ನೋಡಿದರು. ಒಬ್ಬರೇ ಮಲಗೋಕೆ ಹೆದರಿಕೊಳ್ಳುವ, ಆಸ್ಪತ್ರೆಯಲ್ಲಿ ಮಲಗೋಕೆ ಭಯವಾಗುತ್ತೆ ಅಂತ ಮನೆಯಲ್ಲಿ ಮೊದಲೇ ಚಕಾರವೆತ್ತಿದ್ದ ನನ್ನಮ್ಮನಿಗೆ ಈ ಇಬ್ಬರ ಮಾತುಗಳನ್ನ ಕೇಳಿ ಮತ್ತಷ್ಟು ಭಯ ಶುರುವಾದದ್ದು ಅವರು ನನ್ನ ಕಡೆ ನೋಡಿದಾಗಲೇ ನನ್ನ ಅರಿವಿಗೆ ಬಂತು. ಆದರೆ ಆಸ್ಪತ್ರೆಯಲ್ಲಿ ಮಲಗದೇ ವಿಧಿ ಇಲ್ಲ, ಅವರಿಬ್ಬರಿಗೆ ಆ ವಿಚಾರವಾಗಿ ಮಾತು ನಿಲ್ಲಿಸಲು ಹೇಳಲೂ ನನಗೆ ಅಧಿಕಾರವಿರಲಿಲ್ಲ.
ಅಮ್ಮನನ್ನು ಮತ್ತೊಮ್ಮೆ ನೋಡಿ ಹಾಗೇನು ಇಲ್ಲ ಬಿಡು, ಅವ್ರು ಹೇಳ್ತಾ ಇರೋದೆಲ್ಲಾ ಸುಳ್ಳು ಎಂಬಂತೆ ನನ್ನ ಮುಖ ಚಹರೆ ಬದಲಿಸಿ ಮುಗುಳ್ನಕ್ಕು ಓದಲೆಂದು ಕೈಯಲ್ಲಿ ಹಿಡಿದಿದ್ದ ಶಾಲಿನಿ ಹೂಲಿ ಪ್ರದೀಪ್ ರವರ “ಪದ್ದಣ ಮನೋರಮೆ” ಪುಸ್ತಕದ ಕಡೆ ಗಮನಹರಿಸಿದೆ.
- ಶಿವ